ಚೆನ್ನೈ: ತ್ರಿಪಕ್ಷೀಯ ಮಾತುಕತೆಯನ್ನು ಒಪ್ಪಿಕೊಂಡ ನಂತರ ಮುಷ್ಕರ ಅಂತ್ಯಗೊಳಿಸಿ, ನಾಳೆಯಿಂದ ಕೆಲಸಕ್ಕೆ ಮರಳಲು ಸ್ಯಾಮ್ಸಂಗ್ ಕಾರ್ಮಿಕರು ನಿರ್ಧರಿಸಿದ್ದಾರೆ.
ಕಾಂಚೀಪುರಂ ಜಿಲ್ಲೆಯ ಶ್ರೀಪರಂಬದೂರಿನಲ್ಲಿರುವ ಸ್ಯಾಮ್ಸಂಗ್ ನ 1500ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಸ್ಯಾಮ್ಸಂಗ್ ಕಂಪನಿಯ ತೀವ್ರ ಕಾರ್ಮಿಕ ಶೋಷಣೆಯ ವಿರುದ್ಧ ಮತ್ತು ಟ್ರೇಡ್ ಯೂನಿಯನ್ ರಚನೆಯ ಹಕ್ಕು ಸೇರಿದಂತೆ 14 ಬೇಡಿಕೆಗಳಿಗಾಗಿ ಸೆಪ್ಟೆಂಬರ್ 9 ರಿಂದ ನಿರಂತರ ಮುಷ್ಕರದಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಮಿಕರು ತೊಡಗಿದ್ದರು. ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ಬ್ಯಾನರ್ ಅಡಿಯಲ್ಲಿ ಹೊಸದಾಗಿ ರಚಿಸಲಾದ ಸ್ಯಾಮ್ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್ (ಎಸ್ಐಡಬ್ಲ್ಯೂಯು) ಕಾರ್ಮಿಕರ ನೇತೃತ್ವ ವಹಿಸಿದೆ.
ಸೆಪ್ಟೆಂಬರ್ 20ರಂದು ಸ್ಯಾಮ್ ಸಂಗ್ ಆಡಳಿತ ಮಂಡಳಿಯು ಮುಷ್ಕರ ನಿರತ ಕಾರ್ಮಿಕರಿಗೆ ವೇತನ ಕಡಿತ ಮತ್ತು ಕೆಸಲದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿತು. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕಾರ್ಮಿಕರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿತು. ಕಾರ್ಮಿಕರನ್ನು ಮತ್ತು ಅವರ ಕುಟುಂಬದವರನ್ನು ಬೆದರಿಸಿ, ಸಿಐಟಿಯು ಸಂಘಟನೆಯಿಂದ ದೂರ ಸರಿಯುವಂತೆ ಮಾಡಲು ಕಂಪನಿಯ ಸುತ್ತಮುತ್ತಲ ಪ್ರದೇಶದಲ್ಲಿರುವ ಪಂಚಾಯತಿ ಮುಖಂಡರನ್ನು ಬಳಸಿಕೊಂಡಿತ್ತು.
ಇದನ್ನೂ ಓದಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ಇಂದು ರಾಜೀನಾಮೆ
ಸ್ಯಾಮ್ ಸಂಗ್ ಸಂಸ್ಥೆಯು ಕಾರ್ಮಿಕರ ಕೆಲವು ಬೇಡಿಕೆಗಳಿಗೆ ಒಪ್ಪಿಕೊಂಡಿತಾದರೂ, ‘ಸ್ಯಾಮ್ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್’ ಗೆ ಮಾನ್ಯತೆ ನೀಡಲು ಕಂಪನಿ ಒಪ್ಪಲಿಲ್ಲ. ಇದನ್ನು ಪ್ರಶ್ನಿಸಿ ಕಾರ್ಮಿಕರು ಸೆಪ್ಟೆಂಬರ್ 30ರಂದು ಚೆನ್ನೈ ಕೋರ್ಟ್ ಮೊರೆ ಹೋಗಿದ್ದಾರೆ. ನಂತರವೂ, ಕಾರ್ಮಿಕರು ಹೋರಾಟ ನಡೆಸುತ್ತಿದ್ದ ಸ್ಥಳಕ್ಕೆ ಅಕ್ಟೋಬರ್ 9ರಂದು ರಾತ್ರಿ ಬಂದ ಪೊಲೀಸರು ಸಿಐಟಿಯು ಮುಖಂಡರೂ ಸೇರಿದಂತೆ ಹಲವು ಕಾರ್ಮಿಕ ಮುಖಂಡರನ್ನು ಬಂದಿಸಿ ಕರೆದೊಯ್ದಿದ್ದರು.
ಪೊಲೀಸರ ಈ ಕ್ರಮ ಅಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಉದ್ವಿಘ್ನ ಸ್ಥಿತಿ ಉಂಟುಮಾಡಿತ್ತು. ಸಿಐಟಿಯು ಅಕ್ಟೋಬರ್ 21 ರಂದು ಉತ್ತರ ಕೈಗಾರಿಕಾ ಪ್ರದೇಶದಾದ್ಯಂತ ಒಂದು ದಿನದ ಒಗ್ಗಟ್ಟಿನ ಮುಷ್ಕರವನ್ನು ಆಯೋಜಿಸುವುದಾಗಿ ಘೋಷಿಸಿತ್ತು. ಕಾರ್ಮಿಕರ ಹೋರಾಟಕ್ಕೆ ಸಿಪಿಎಂ ಮತ್ತು ಸಿಪಿಐ ಪಕ್ಷಗಳ ಬೆಂಬಲವಿದೆ. ಇದರಿಂದಾಗಿ, ಎಡಪಕ್ಷಗಳ ಬೆಂಬಲ ಪಡೆದಿರುವ ಡಿಎಂಕೆ ಸರ್ಕಾರದ ಮೇಲೆ ತೀವ್ರ ಒತ್ತಡ ಉಂಟಾಯಿತು.
ಕಾರ್ಮಿಕರ ಪ್ರತಿಭಟನೆಗೆ ಸಿಪಿಎಂ, ಸಿಪಿಐ ಅಲ್ಲದೆ ವಿಸಿಕೆ, ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದವು. ತಮಿಳುನಾಡು ಮುಖ್ಯಮಂತ್ರಿಯವರ ಆದೇಶದ ಮೇರೆಗೆ ಸಚಿವರಾದ ಟಿ.ಎಂ.ಅನ್ಬರಸನ್, ಸಿ.ವಿ.ಗಣೇಶನ್ ಮತ್ತು ಟಿ.ಆರ್.ಬಿ.ರಾಜಾ ಅವರು ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರೂ ಯಾವುದೇ ಒಪ್ಪಂದಕ್ಕೆ ಬಂದಿರಲಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಅಕ್ಟೋಬರ್ 15 ರಂದು ಚೆನ್ನೈ ಪ್ರಧಾನ ಕಚೇರಿಯಲ್ಲಿ ನಡೆದ ತ್ರಿಪಕ್ಷೀಯ ರಾಜಿ ಮಾತುಕತೆಯ ಸಲಹೆ (ಒಪ್ಪಂದ) ಮೇರೆಗೆ ಆಡಳಿತ ಮಂಡಳಿ ಮತ್ತು ಒಕ್ಕೂಟದಿಂದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಬಗ್ಗೆ ಚರ್ಚಿಸಲು ಸ್ಯಾಮ್ಸಂಗ್ ಇಂಡಿಯಾ ಲೇಬರ್ ಯೂನಿಯನ್ ಕೌನ್ಸಿಲ್ ಸಭೆ ಇಂದು (ಅಕ್ಟೋಬರ್ 16) ನಡೆಯಿತು.
ಸಭೆಯಲ್ಲಿ ತ್ರಿಪಕ್ಷೀಯ ಮಾತುಕತೆಯ ಶಿಫಾರಸುಗಳನ್ನು ಕಾರ್ಮಿಕರ ಮುಂದೆ ಇಡಲಾಯಿತು. ಚರ್ಚೆಯ ಆಧಾರದ ಮೇಲೆ ಸಲಹೆ (ಒಪ್ಪಂದ)ಯನ್ನು ಅಂಗೀಕರಿಸಲಾಯಿತು ಮತ್ತು ಇಂದು ಮುಷ್ಕರವನ್ನು ಕೊನೆಗೊಳಿಸಿ ನಾಳೆಯಿಂದ (ಅಕ್ಟೋಬರ್ 17) ಕೆಲಸಕ್ಕೆ ಮರಳಲು ಸರ್ವಾನುಮತದಿಂದ ನಿರ್ಧರಿಸಲಾಯಿತು.
ಇದನ್ನೂ ನೋಡಿ: ಬೆಂಗಳೂರು ಮಳೆ: ಮಾನ್ಯತಾ ಟೆಕ್ ಪಾರ್ಕ್ ರಸ್ತೆ ಜಲಾವೃತ Janashakthi Media