ಬೆಂಗಳೂರು : ರಾಜ್ಯ ಸರಕಾರದ 2021-2022ರ ಸಾಲಿನ ಆಯವ್ಯಯದಲ್ಲಿ ಸಾಂಸ್ಕೃತಿಕ ವಲಯಕ್ಕೆ ಅನುದಾನ ಬಿಡುಗಡೆಯಲ್ಲಿ ಕಳೆದ ಬಾರಿಗಿಂತ ತುಂಬಾ ಕಡಿಮೆಯಾಗಿದೆ ಎಂಬ ಅಸಮಧಾನ ಎದ್ದಿದೆ.
ಜಾತಿ ಮತ್ತು ಸಮುದಾಯ ಆಧಾರಿತ ನಿಗಮಗಳಿಕೆ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿರುವ ರಾಜ್ಯ ಸರಕಾರ ಸಾಂಸ್ಕೃತಿಕ ವಲಯಕ್ಕಾಗಿಯೇ ಕೆಲಸ ಮಾಡುವ ಪ್ರಾಧಿಕಾರ ಮತ್ತು ಅಕಾಡೆಮಿಗಳಲ್ಲಿ ಕಾರ್ಯಚಟುವಟಿಕೆಗಳಿಗೆ ಬಿಡುಗಡೆ ಮಾಡಿರುವ ಅನುದಾನ ಏನೇನು ಸಾಲದು ಎಂದು ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಡಿಸಿದ 2021-2022ರ ಸಾಲಿನ ಆಯವ್ಯಯದಲ್ಲಿ ವಲಯವಾರು ಹಣ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಇಲಾಖಾ ವಾರು ನಿರ್ಧಿಷ್ಟವಾಗಿ ಆಯವ್ಯಯ ಮಂಡಿಸಲಾಗುತ್ತಿತ್ತು. ಈ ಬಾರಿ ಅವೆಲ್ಲವನ್ನು ಅದಲು ಬದಲು ಮಾಡಿ ಕಾರ್ಯನಿರ್ವಹಿಸುವ ಇಲಾಖೆಗಳಿಗೆ ಎಷ್ಟು ಪ್ರಮಾಣದ ಹಣ ವಿನಿಯೋಗವಾಗಿದೆ ಎಂಬ ಲೆಕ್ಕಾಚಾರ ಇನ್ನು ಗಣಿಕೆ ಹಂತದಲ್ಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆವಾರು ಕಾರ್ಯನಿರ್ವಹಿಸುವ ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೆ ಬಿಡುಗಡೆಗೊಳಿಸಿರುವ ಅನುದಾನ ತುಂಬಾ ಕಡಿಮೆಯಾಗಿದೆ.
ಕಳೆದ ಬಾರಿ ಆಯವ್ಯಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರೂ.259 ಕೋಟಿ ಹಣ ಬಿಡುಗಡೆಯಾಗಿತ್ತು. ಕೋವಿಡ್-19ರ ಕಾರಣದಿಂದ ರೂ. 192 ಕೋಟಿ ಮಾತ್ರ ಸರಕಾರ ಬಿಡುಗಡೆಗೊಳಿಸಿತು. ಕಳೆದ ಬಾರಿಗಿಂತ ಇನ್ನೂ ರೂ.50 ಕೋಟಿ ಕಡಿತಗೊಂಡು ರೂ.152 ಕೋಟಿ ಮಾತ್ರ ಒಟ್ಟಾರೆಯಾಗಿರುವ ಮಾಹಿತಿ ಲಭ್ಯವಾಗುತ್ತಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳೆದ ಬಾರಿ ರೂ.5 ಕೋಟಿ ಮಂಜೂರಾಗಿತ್ತು. ಆದರೆ ರೂ.1.25 ಕೋಟಿ ಮಾತ್ರ ಬಿಗುಡೆಯಾಗಿದೆ.
ಈ ವರ್ಷ ʻಕನ್ನಡ ಕಾಯಕ ವರ್ಷʼ ಆದರೆ ಸರಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ ರೂ.2 ಕೋಟಿ ಮಾತ್ರ ಬಿಡುಗಡೆಗೊಳಿಸಿದೆ. ಈ ಬಗ್ಗೆ ಅಕಾಡೆಮಿ ಅಧ್ಯಕ್ಷರಾದ ಟಿ.ಎಸ್.ನಾಗಭರಣ ಅವರು ʻʻಹೊರ ರಾಜ್ಯ, ಗಡಿಭಾಗದ ವಿದ್ಯಾರ್ಥಿಗಳಿಗೆ ಸೇರಿದಂತೆ ಕನ್ನಡ ಮಕ್ಕಳಿಗೆ ಪ್ರೋತ್ಸಾಹಧನ ನೀಡಲು ತಕ್ಷಣಕ್ಕೆ ರೂ.8 ಕೋಟಿ ಬೇಕು. ಅನುದಾನ ಲಭ್ಯವಿಲ್ಲದೆ ಈ ಕಾರ್ಯಕ್ರಮವನ್ನೇ ಸ್ಥಗಿತಗೊಳಿಸಬೇಕಾದ ಸ್ಥಿತಿಯಿದೆ. ರೂ. 40 ಲಕ್ಷ ಸಂಬಳಕ್ಕೇ ಬೇಕು, ರೂ. 20 ಲಕ್ಷ ಕೊಟ್ಟರೆ ಸಂಬಳ ಕೊಡುವುದು ಬೇಡವೇ? ʻಕನ್ನಡ ಕಾಯಕʼ ವರ್ಷವೆಂದು ಘೋಷಿಸಿ ಸರಕಾರ ರೂ. 10 ಕೋಟಿಗೆ ಆದೇಶ ಮಾಡಿದರೂ, ತಾಂತ್ರಿಕ ನೆಪ ಹೇಳಿ ಆರ್ಥಿಕ ಇಲಾಖೆ ಅಡ್ಡಗಾಲಿಟ್ಟಿದೆ. ಕನ್ನಡ ಕಾಯಕ ವರ್ಷದ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಚಟುವಟಿಕೆ ಆಧಾರಿತ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ಇತ್ತು. ಅನುದಾನವೇ ಕೊಡದಿದ್ದರೆ ಹೇಗೆ?ʼʼ ಎಂದು ಹೇಳಿದ್ದಾರೆ.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 2019-2020ರಲ್ಲಿ ರೂ.50 ಕೋಟಿ ನೀಡಲಾಗಿತ್ತು. ಅದನ್ನು ಕಳೆದ ಸಾಲಿನಲ್ಲಿ ರೂ.25 ಕೋಟಿಗೆ ಇಳಿಸಲಾಗಿತ್ತು. ಈ ಬಾರಿ ಕಟ್ಟಡಗಳ ಕಾಮಗಾರಿಗೆಂದು ರೂ.5 ಕೋಟಿ ಮಾತ್ರ ನೀಡಲಾಗಿದೆ. 2019-2020ರಲ್ಲಿ ಸರಕಾರಿ ಆದೇಶ ಹೊರಡಿಸಿರುವ ಕಾಮಗಾರಿಯೂ ಸೇರಿ ಮುಂದುವರಿದ ಕಾಮಗಾರಿಗಳಿಗೆ ರೂ.39 ಕೋಟಿ ಬೇಕಾಗಿದೆ. 2020-2021ನೇ ಸಾಲಿನಲ್ಲಿ ಅನುದಾನ ಕೊರತೆಯಿಂದಾಗಿ ಯಾವುದೇ ಹೊಸ ಯೋಜನೆಯನ್ನು ಪ್ರಾಧಿಕಾರ ಕೈಗೊಂಡಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.
ಆಯವ್ಯಯದಲ್ಲಿ ಅನುದಾನ ಹಂಚಿಕೆ (ರೂ. ಕೋಟಿಗಳಲ್ಲಿ)
- ಕಾರ್ಯಕ್ರಮ 2020-2021 2021-2022
- ಕಲೆ, ಸಂಸ್ಕೃತಿ ಪ್ರೋತ್ಸಾಹ 2.50 2.00
- ಸಂಘ, ಸಂಸ್ಥೆಗಳು 4.39 3.66
- ಪರಿಶಿಷ್ಟ ಜಾತಿ ವಿಶೇಷ ಘಟಕ (ಎಸ್‌ಸಿಎಸ್‌ಪಿ) 15.00 10.00
- ಪರಿಶಿಷ್ಟ ವರ್ಗದ ವಿಶೇಷ ಘಟಕ (ಟಿಎಸ್‌ಪಿ) 5.00 3.00
- ವೃತ್ತಿ ನಾಟಕ ಕಂಪನಿಗಳು 2.00 1.50
- ರಾಜ್ಯ, ರಾಷ್ಟ್ರೀಯ ಉತ್ಸವ 9.00 7.00
- ವಿವಿಧ 16 ಅಕಾಡೆಮಿಗಳು 8.00 7.00