ಕಳೆದ ಹಲವು ವರ್ಷಗಳಿಂದಲೂ ಮೈಸೂರು ಜಿಲ್ಲೆ ಮತ್ತು ನಗರದಲ್ಲಿ ಪಾತಕಿ ಕೃತ್ಯಗಳು ಹೆಚ್ಚಾಗುತ್ತಿವೆ
ನಾ ದಿವಾಕರ
ಮೈಸೂರು ನಗರವನ್ನು ಸಾಂಸ್ಕೃತಿಕ ನಗರಿ ಎಂದೇ ಕರೆಯಲಾಗುತ್ತದೆ. ಚಾರಿತ್ರಿಕವಾಗಿ ಮತ್ತು ಸಮಕಾಲೀನ ಸಂದರ್ಭದಲ್ಲೂ ಈ ನಗರ ತನ್ನ ಸಾಂಸ್ಕೃತಿಕ ಹಿರಿಮೆಯನ್ನು ಉಳಿಸಿಕೊಂಡಿದೆ. ಹಲವಾರು ಅಪಭ್ರಂಶ ಮತ್ತು ಸಾಮಾಜಿಕ-ಸಾಂಸ್ಕೃತಿಕ ಅಪಸವ್ಯಗಳ ಹೊರತಾಗಿಯೂ ಮೈಸೂರಿನ ಜನತೆ ತಮ್ಮ ಸಮನ್ವಯ ಮತ್ತು ಸೌಹಾರ್ದತೆಯ ನೆಲೆಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಮೈಸೂರು ಜಿಲ್ಲೆಯೂ ಸಹ ಬಹುತೇಕವಾಗಿ ಈ ಹಿರಿಮೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ನಿತ್ಯ ಬದುಕಿನ ಚಿತ್ರಣವನ್ನು ಗಮನಿಸಿದಾಗ ಇತ್ತೀಚಿನ ಹಲವು ವರ್ಷಗಳಲ್ಲಿ ಈ ಪ್ರದೇಶದಲ್ಲಿ ಅತ್ಯಾಚಾರ, ಕೊಲೆ, ದರೋಡೆ, ಅಸ್ಪೃಶ್ಯತೆ ಮುಂತಾದ ಪಾತಕಿ ಕೃತ್ಯಗಳು ಆಗಿಂದ್ದಾಗ್ಗೆ ತಲೆದೋರುತ್ತಲೇ ಇವೆ. ರಾಜಕೀಯವಾಗಿ ಒಂದು ʼ ಅಪರಾಧ ಮುಕ್ತ ಸಮಾಜ ʼ ನಿರ್ಮಾಣ ಮುಖ್ಯವಾಹಿನಿಯ ಯಾವುದೇ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಇಲ್ಲದಿರುವುದರಿಂದ, ಎಂತಹ ಅಮಾನುಷ ಅಪರಾಧವನ್ನೂ ಸಹಜ-ಸ್ವಾಭಾವಿಕ ಕಾನೂನು ಸುವ್ಯವಸ್ಥೆಯ ಒಂದು ಅಪಭ್ರಂಶದಂತೆ ಕಾಣುವ ಪ್ರವೃತ್ತಿಯನ್ನೂ ನಾವು ಬೆಳೆಸಿಕೊಂಡುಬಂದಿದ್ದೇವೆ.
ಆದರೆ ನಾಗರಿಕರ ದೃಷ್ಟಿಯಿಂದ ನೋಡಿದಾಗ, ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾರ್ವಜನಿಕ ನೆಮ್ಮದಿಯ ನೆಲೆಯಲ್ಲಿ ಮೈಸೂರು ಎಲ್ಲೋ ಎಡವುತ್ತಿದೆ ಎಂಬ ಭಾವನೆ ಪ್ರಾಮಾಣಿಕವಾಗಿಯೇ ಮೂಡುವಂತಿದೆ. ಜಾತಿ-ಧರ್ಮಗಳ ವೈಷಮ್ಯಗಳು, ಜಾತಿ ದ್ವೇಷದ ನೆಲೆಗಳು ಬೂದಿ ಮುಚ್ಚಿದ ಕೆಂಡದಂತೆ ನೆಲದಾಳದಲ್ಲಿ ಸುಡುತ್ತಿದ್ದರೂ, ಮೈಸೂರಿನ ನಾಗರಿಕರು ತಮ್ಮ ಸಂಯಮ, ಸಮನ್ವಯ ಮತ್ತು ಸೌಹಾರ್ದತೆಯ ಪರಂಪರೆಯನ್ನು ಉಳಿಸಿಕೊಂಡು ಸ್ವಸ್ಥ ಸಮಾಜವನ್ನು ಸಂರಕ್ಷಿಸಿಕೊಂಡುಬಂದಿದ್ದಾರೆ. ಆದರೂ ʼ ಸಾಂಸ್ಕೃತಿಕ ನಗರಿ ʼ ಎನ್ನುವುದನ್ನು ಕೇವಲ ಸಾಂಸ್ಕೃತಿಕ ಆಚರಣೆಗಳ ಮಟ್ಟದಲ್ಲೇ ಪರಿಭಾವಿಸುವುದರಿಂದ ಜನಸಾಮಾನ್ಯರ ನಿತ್ಯ ಬದುಕಿನ ಸಾಂಸ್ಕೃತಿಕ ವರ್ತನೆ, ಪ್ರವೃತ್ತಿ ಹಾಗೂ ಅಪಭ್ರಂಶಗಳನ್ನು ಕಡೆಗಣಿಸಿದಂತಾಗುತ್ತದೆ. ಸ್ವಸ್ಥ ಸಮಾಜ ಎಂದರೆ ಜನಸಾಮಾನ್ಯರ ನಿತ್ಯಬದುಕಿನ ಮೂಲ ಸಾಂಸ್ಕೃತಿಕ ನೆಲೆಗಳನ್ನು ಸಂರಕ್ಷಿಸುವ ಸಮಾಜವಾಗಿಯೇ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಮೈಸೂರು ನಗರ-ತಾಲ್ಲೂಕಿನ ಹಿರಿಮೆ ಮಸುಕಾಗುತ್ತಿರುವುದನ್ನು ಗಮನಿಸಬೇಕಿದೆ. ಕೊಲೆ, ಅತ್ಯಾಚಾರ, ದರೋಡೆ ಮುಂತಾದ ಪ್ರಕರಣಗಳು ಕಾನೂನು ದೃಷ್ಟಿಯಲ್ಲಿ ಸಾಮಾನ್ಯವಾಗಿ ನಡೆಯಬಹುದಾದ ವಿದ್ಯಮಾನಗಳಂತೆ ಕಂಡರೂ, ಈ ಪಾತಕಿ ಕೃತ್ಯಗಳ ಹಿಂದಿನ ಕಾರಣಗಳು, ಕೃತ್ಯಗಳು ನಡೆಯುವ ವಿಧಾನ, ಪಾತಕಿಗಳು ಅನುಸರಿಸುವ ಮಾರ್ಗಗಳು ಮತ್ತು ಇದನ್ನು ಉತ್ತೇಜಿಸುವ ವಾತಾವರಣ ಇವೆಲ್ಲವೂ ನಗರಪಾಲಿಕೆಯ-ಜನಪ್ರತಿನಿಧಿಗಳ-ಉಸ್ತುವಾರಿ ಸಚಿವರ ಮತ್ತು ರಾಜ್ಯ ಗೃಹ ಸಚಿವಾಲಯದ ಗಮನವನ್ನು ಸೆಳೆಯಲೇಬೇಕಿದೆ. ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಕಳೆದ ವರ್ಷ ಆಮ್ಲಜನಕದ ಕೊರತೆಯಿಂದ ಸಂಭವಿಸಿದ ಮೂವತ್ತಕ್ಕೂ ಹೆಚ್ಚು ಅಮಾಯಕರ ಸಾವುಗಳು, ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿಯಲ್ಲಿ ಬಿಳಿಕಲ್ಲು ಕ್ವಾರಿ ಕುಸಿತದಿಂದ ಸಂಭವಿಸಿದ ವಲಸೆ ಕಾರ್ಮಿಕರ ಸಾವು, ಈ ಘಟನೆಗಳನ್ನೂ ಸೇರಿದಂತೆ, ಪ್ರಜ್ಞಾವಂತ ಸಮಾಜದ ಶಾಂತಚಿತ್ತವನ್ನು ಕದಡುವಂತಹ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇವೆ. ಈ ಎರಡೂ ದುರಂತಗಳ ವಿಚಾರಣೆ/ತನಿಖೆ/ಶಿಕ್ಷೆ ಯಾವ ಕಾಲಕ್ಕೆ ತಾರ್ಕಿಕ ಅಂತ್ಯ ತಲುಪುವುದೋ ಎಂಬ ಗಹನವಾದ ಪ್ರಶ್ನೆಯೊಂದಿಗೇ ಇತ್ತೀಚೆಗೆ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳು ಮತ್ತು ಭೌತಿಕ ಅಪರಾಧಗಳತ್ತಲೂ ಗಮನಹರಿಸಬೇಕಿದೆ.
ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ನಡೆದ ಒಂದು ಕಗ್ಗೊಲೆ ಮೈಸೂರಿನ ನಾಗರಿಕರ ಪ್ರಜ್ಞೆಯನ್ನು ಕದಡಲೇಬೇಕಿದೆ. ನಿವೃತ್ತ ಗುಪ್ತಚರ ದಳದ ಅಧಿಕಾರಿ, ಮೈಸೂರಿನ ಟಿ ಕೆ ಬಡಾವಣೆಯ ನಿವಾಸಿ, 80 ವರ್ಷದ ವಯೋವೃದ್ಧ ಆರ್ ಎನ್ ಕುಲಕರ್ಣಿ ಅವರ ಕೊಲೆ ನಡೆದಿರುವ ಸ್ಥಳ, ಕೊಲೆಗಾರರು ಅನುಸರಿಸಿದ ಮಾದರಿ ಮತ್ತು ಬಳಸಿರುವ ತಂತ್ರಗಳು ಯಾವುದೇ ನಾಗರಿಕ ಸಮಾಜವನ್ನು ದೀರ್ಘ ನಿದ್ರೆಯಿಂದ ಎಚ್ಚರಿಸುವಂತಿದೆ. ಶ್ರೀಯುತ ಕುಲಕರ್ಣಿಯವರ ದೈನಂದಿನ ಚಟುವಟಿಕೆಗಳ ಬಗ್ಗೆ ನಿಗಾವಹಿಸಿದ್ದ ಆರೋಪಿಗಳು ಅವರು ವಾಯುವಿಹಾರಕ್ಕೆ ಬರುವ ಜಾಗವನ್ನೇ ಕೇಂದ್ರವಾಗಿರಿಸಿಕೊಂಡು, ಕಳೆದ ಶುಕ್ರವಾರ ಸಂಜೆ ಅವರ ಮೇಲೆ ವಾಹನ ಚಲಾಯಿಸುವ ಮೂಲಕ ಕೊಲೆ ಮಾಡಿರುವುದು, ಸಿನಿಮೀಯವಾಗಿ ಕಂಡರೂ ದುರಂತ ವಾಸ್ತವವಾಗಿದೆ. ಮಾನಸಗಂಗೋತ್ರಿಯ ಆವರಣದಲ್ಲಿ ನಡೆದಿರುವ ಈ ಕೊಲೆ ಮೈಸೂರಿನ ಹಿರಿಯ ನಾಗರಿಕರಲ್ಲೂ ಆತಂಕ ಮೂಡಿಸಿದೆ.
ಮೈಸೂರಿನ ಲಿಂಗಾಂಬುಧಿ ಕೆರೆ, ಕುಕ್ಕರಹಳ್ಳಿ ಕೆರೆ , ಮಾನಸಗಂಗೋತ್ರಿ ಆವರಣ, ಚಾಮುಂಡಿ ಬೆಟ್ಟದ ತಪ್ಪಲು ಮತ್ತು ಬೆಟ್ಟದ ಮೇಲಿನ ಅರಣ್ಯ ಪ್ರದೇಶ ಇವೆಲ್ಲವೂ ಜನದಟ್ಟಣೆಯಿಲ್ಲದ ಶಾಂತ ವಾತಾವರಣದ ಪ್ರದೇಶಗಳಾಗಿದ್ದು, ನಾಗರಿಕರಿಗೆ ನೆಮ್ಮದಿಯ ತಾಣಗಳೂ ಆಗಿವೆ. ವಾಯುವಿಹಾರಕ್ಕೆ ಹೋಗುವ ಹಿರಿಯ/ಕಿರಿಯ/ಮಧ್ಯವಯಸ್ಕ ನಾಗರಿಕರಿಗೆ ಈ ಪ್ರಶಾಂತ ಸ್ಥಳಗಳು ಮನಶ್ಶಾಂತಿಯನ್ನು ತರುವ ತಾಣಗಳಾಗಿವೆ. ನಿಸರ್ಗದೊಡನೆ ಸಂಭಾಷಿಸುತ್ತಾ ತಮ್ಮ ನಿತ್ಯ ಜೀವನದ ಜಂಜಾಟಗಳನ್ನು ಮರೆತು ತನ್ಮಯರಾಗುವ ನಾಗರಿಕರಿಗೆ ಇಂತಹ ತಾಣಗಳು ಶಾಂತಿ ಮತ್ತು ಪ್ರಶಾಂತತೆಯ ನೆಲೆಗಳಾಗುತ್ತವೆ. ಹಿರಿಯ ನಾಗರಿಕರಾದ ಶ್ರೀಯುತ ಕುಲಕರ್ಣಿ ಈ ಭರವಸೆಯೊಂದಿಗೇ ಮಾನಸಗಂಗೋತ್ರಿಯ ಆವರಣವನ್ನು ತಮ್ಮ ವಾಯುವಿಹಾರದ ತಾಣವಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಆದರೆ ಅವರ ಪಾಲಿಗೆ ಮಾನಸಗಂಗೋತ್ರಿ ಮರಣ ಗಂಗೋತ್ರಿಯಾಗಿ ಪರಿಣಮಿಸಿದೆ.
ಇಂತಹ ದುರದೃಷ್ಟಕರ ಬೆಳವಣಿಗೆಗಳಿಗೆ ಕಾನೂನು ಚೌಕಟ್ಟಿನಲ್ಲಿ ಕಾರಣಗಳನ್ನು ಹುಡುಕುತ್ತಾ ಹೋದರೆ ನಮ್ಮ ಮುಂದೆ ಬೃಹತ್ ಪಾತಕ ಲೋಕವೇ ತೆರೆದುಕೊಳ್ಳುತ್ತದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಚಾಮುಂಡಿಬೆಟ್ಟದ ತಪ್ಪಲಲ್ಲಿ ತನ್ನ ಗೆಳೆಯನೊಂದಿಗೆ ವಾಯುವಿಹಾರಕ್ಕೆಂದು ಹೊರಟಿದ್ದ ಮಹಿಳೆಯ ಮೇಲೆ ಐವರು ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದ ಘಟನೆ ಇನ್ನೂ ಹಸಿರಾಗಿಯೇ ಇದೆ. ಇದೇ ವರ್ಷದ ಫೆಬ್ರವರಿಯಲ್ಲಿ ಕೃಷ್ಣರಾಜ ಸಾಗರದ ಬಳಿ ಅಕ್ರಮ ಸಂಬಂಧದ ಸುತ್ತ ಕೌಟುಂಬಿಕ ವ್ಯಾಜ್ಯವೊಂದರಲ್ಲಿ ಓರ್ವ ಮಹಿಳೆ ಮತ್ತು ನಾಲ್ವರು ಮಕ್ಕಳನ್ನು ಹತ್ಯೆಗೈದ ಪ್ರಕರಣವೂ ಸಹ ಇನ್ನೂ ವಿಸ್ಮೃತಿಗೆ ಜಾರಿಲ್ಲ.
ಇತ್ತೀಚೆಗೆ ಮೈಸೂರಿನಲ್ಲೇ ನಡೆದ ಮತ್ತೊಂದು ಘಟನೆಯಲ್ಲಿ ಶಾಂತಿ ನಗರದ ಸದಾಖತ್ ಎಂಬ 24 ಹರೆಯದ ಯುವಕನ ಬರ್ಬರ ಹತ್ಯೆಯಾಗಿತ್ತು. ವ್ಯಕ್ತಿಗತ ವ್ಯಾಜ್ಯವೇ ಈ ಘಟನೆಗೆ ಕಾರಣವಾದರೂ, ಈ ಹತ್ಯೆಯ ಹಿಂದೆ ಏಳು ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಮೈಸೂರಿನವರ ಅದೃಷ್ಟ ಈ ಹತ್ಯೆಗೆ ಕೋಮು ಬಣ್ಣ ಲೇಪಿಸಲಾಗಿಲ್ಲ. ಆದರೆ ನಡುರಾತ್ರಿಯಲ್ಲಿ ಈ ಹತ್ಯೆ ನಡೆದಿರುವುದಂತೂ ದುರಂತ ಸತ್ಯ. ಕಳೆದ ವರ್ಷ ಆಗಸ್ಟ್ 23ರಂದು ಮೈಸೂರಿನ ವಿದ್ಯಾರಣ್ಯಪುರಂನಲ್ಲಲಿರುವ ಚಿನ್ನದಂಗಡಿ ಮಾಲೀಕ 23 ವರ್ಷದ ಚಂದ್ರಶೇಖರ್ ಎಂಬಾತನನ್ನು ಆತನ ಅಂಗಡಿಯಲ್ಲೇ ಹತ್ಯೆ ಮಾಡಲಾಗಿತ್ತು. ಹಾಡಹಗಲಲ್ಲೇ ಅಂಗಡಿಗೆ ನುಗ್ಗಿದ್ದ ಹಂತಕರು ಅಂಗಡಿಯಲ್ಲಿದ್ದ ಆಭರಣಗಳನ್ನು ಲೂಟಿ ಮಾಡಿ, ಚಂದ್ರಶೇಖರ್ ಅವರ ಹತ್ಯೆಗೈದು ಪರಾರಿಯಾಗಿದ್ದರು. ಇದೇ ಅಕ್ಟೋಬರ್‌ನಲ್ಲಿ ಮೈಸೂರಿನ ಹೊರವಲಯದ ಶ್ರೀನಗರ ಬಡಾವಣೆಯಲ್ಲಿ ಯುವಕನೊಬ್ಬ ತನ್ನ ತಂದೆ ಮತ್ತು ಆತನ ಪ್ರೇಯಸಿಯನ್ನು ಭೀಕರ ಹತ್ಯೆ ಮಾಡಿದ ಘಟನೆಗೂ ಮೈಸೂರು ಸಾಕ್ಷಿಯಾಗಿದೆ. ಈ ಎಲ್ಲ ಘಟನೆಗಳಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ.
ಆದರೆ ಇಲ್ಲಿ ಪ್ರಶ್ನೆ ಇರುವುದು ಅಪರಾಧ-ಶಿಕ್ಷೆ-ಕಾನೂನು ಪ್ರಕ್ರಿಯೆ ಅಲ್ಲ. ಇದನ್ನೂ ಮೀರಿದ ಒಂದು ಸಾಮಾಜಿಕ ಜವಾಬ್ದಾರಿಯ, ಸಾಂಸ್ಕೃತಿಕ ನೈತಿಕತೆಯ ಪ್ರಶ್ನೆ ನಮ್ಮನ್ನು ಬಾಧಿಸಬೇಕಿದೆ. ಸರ್ಕಾರ, ಗೃಹ ಸಚಿವಾಲಯ, ಪೊಲೀಸ್ ಇಲಾಖೆ ಮತ್ತು ಕಾನೂನು ಸುವ್ಯವಸ್ಥೆಯ ನಿರ್ವಹಣಾಧಿಕಾರಿಗಳ ಆಡಳಿತಾತ್ಮಕ ಹೊಣೆಗಾರಿಕೆಯ ಹೊರತಾಗಿ, ಸಮಾಜವೂ ಸಹ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ವ್ಯಕ್ತಿಗತ ಆಸ್ತಿ ವಿವಾದ ಅಥವಾ ವೈಷಮ್ಯಗಳೂ ಸಹ ಇಂತಹ ಅಮಾನುಷ ಕೊಲೆಯಲ್ಲಿ ಪರ್ಯವಸಾನ ಹೊಂದುವುದು ನಮ್ಮ ನಡುವಿನ ಸಾಮಾಜಿಕ ಕ್ಷೋಭೆ ಮತ್ತು ಸಂಯಮದ ಕೊರತೆಯ ಸಂಕೇತವಾಗಿಯೇ ಕಾಣುತ್ತದೆ. ಇತ್ತೀಚಿನ ಕುಲಕರ್ಣಿ ಹತ್ಯೆ ಪ್ರಕರಣದಲ್ಲಿ ಕೊಲೆ ಆರೋಪಿಗಳೆಂದು ಗುರುತಿಸಲಾಗಿರುವ ಇಬ್ಬರೂ ಸಹ 30ರ ಪ್ರಾಯದವರಾಗಿದ್ದು, ಯುವ ಪೀಳಿಗೆ ಬರುಬರುತ್ತಾ ಹೆಚ್ಚು ಹೆಚ್ಚು ಹಿಂಸಾತ್ಮಕವಾಗುತ್ತಿರುವುದರ ಸಂಕೇತವೂ ಆಗಿದೆ.
ಕಾನೂನು ಕ್ರಮ/ವಿಚಾರಣೆ/ಶಿಕ್ಷೆ ಇವುಗಳಿಂದಾಚೆಗೆ ಇಂತಹ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸುವುದೇ ಆದರೆ, ವಿಶಾಲ ಸಮಾಜದಲ್ಲಿ ಸಂಯಮಪೂರ್ಣ ಸಮನ್ವಯ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಬೆಳೆಸುವ ತುರ್ತು ನಿಚ್ಚಳವಾಗಿ ಕಾಣುತ್ತದೆ. ಜಾತಿ ದ್ವೇಷ, ಕೋಮು ದ್ವೇಷ, ಮತಾಂಧತೆ ಮತ್ತು ಸಂಪತ್ತು-ಸಿರಿವಂತಿಕೆಯ ವ್ಯಾಮೋಹ ಇವೆಲ್ಲವೂ ಮನುಷ್ಯನಲ್ಲಿ ಪಾಶವಿ ವರ್ತನೆಯನ್ನು ಹುಟ್ಟುಹಾಕುತ್ತದೆ. ಈ ಘಟನೆಗಳಿಗೆ ಕಾರಣರಾದವರಲ್ಲಿ ಕಾಣಬಹುದಾದ ಕ್ರೌರ್ಯ ಮತ್ತು ಅಮಾನುಷತೆಯನ್ನೇ, ಇಂತಹ ಅಮಾನವೀಯ ಘಟನೆಗಳಿಗೆ ಮೌನ ವಹಿಸುವ ಅಥವಾ ಸಮ್ಮತಿಸುವ ಅಥವಾ ತಮ್ಮ ಅನುಕೂಲಕ್ಕನುಗುಣವಾಗಿ ಬಳಸಿಕೊಳ್ಳುವ ಮನೋಧರ್ಮದಲ್ಲೂ ಕಾಣಬೇಕಾಗಿದೆ. ಯುವ ಪೀಳಿಗೆಯಲ್ಲಿ ಹಿಂಸಾತ್ಮಕ ಪ್ರವೃತ್ತಿ ಏಕೆ ಹೆಚ್ಚಾಗುತ್ತಿದೆ ಎಂಬ ಮನಶ್ಶಾಸ್ತ್ರೀಯ ಪ್ರಶ್ನೆ ನಮ್ಮನ್ನು ಗಾಢವಾಗಿ ಕಾಡಬೇಕಿದೆ.
ಸಾಂಸ್ಕೃತಿಕ ನಗರಿ ಎಂದು ಪ್ರಸಿದ್ಧಿ ಪಡೆದಿರುವ ಮೈಸೂರು ಸ್ವಚ್ಚ ನಗರಿ ಎಂಬ ಹಿರಿಮೆಗೂ ಪಾತ್ರವಾಗಿದೆ. ಆದರೆ ನಾವು ಮನುಜ ಸಂಸ್ಕೃತಿಗೆ ತದ್ವಿರುದ್ಧವಾದ ಅಮಾನುಷ ಘಟನೆಗಳಿಗೆ ಮೌನ ಸಾಕ್ಷಿಗಳಾಗಿ ಸುಮ್ಮನಾಗುತ್ತಿದ್ದೇವೆ. ಬಾಹ್ಯ ಸ್ವಚ್ಚತೆಗಾಗಿ ಪ್ರಶಸ್ತಿ ಪಡೆದಿರುವ ನಗರವು, ಆಂತರಿಕವಾಗಿ ಹಲವು ರೀತಿಯ ಮಾಲಿನ್ಯಗಳಿಂದ ಪೀಡಿತವಾಗುತ್ತಿದೆ. ಇತಿಹಾಸದ ಹೆಜ್ಜೆಗಳನ್ನು ಹೆಕ್ಕಿ ತೆಗೆದು, ವರ್ತಮಾನದ ವಾಸ್ತವತೆಯ ಚೌಕಟ್ಟಿನಲ್ಲಿಟ್ಟು, ಭವಿಷ್ಯದ ಕಾರ್ಯಸೂಚಿಗಳನ್ನು ರೂಪಿಸುವ ಒಂದು ವಿಕೃತ ಪರಂಪರೆಗೆ ಮೈಸೂರು ವೇದಿಕೆಯಾಗುತ್ತಿರುವುದೂ ಸತ್ಯ. ಈ ನಡುವೆಯೇ ಸಮಾಜದಲ್ಲಿ ಪಾತಕ ಕೃತ್ಯಗಳು ಹೆಚ್ಚಾಗುತ್ತಿವೆ. ಮೈಸೂರಿನ ಜನಪ್ರತಿನಿಧಿಗಳು ಮತ್ತು ಪೊಲೀಸ್ ವ್ಯವಸ್ಥೆಯೊಂದಿಗೇ ರಾಜ್ಯ ಸರ್ಕಾರವೂ ಸಹ ಈ ಬೆಳವಣಿಗೆಗಳಿಗೆ ತಮ್ಮ ನೈತಿಕ ಜವಾಬ್ದಾರಿಯನ್ನುಅರಿತು, ಸಮಾಜದಲ್ಲಿ ಬೇರೂರುತ್ತಿರುವ ಅಮಾನುಷತೆಯ ಬೇರುಗಳನ್ನು ಕಿತ್ತೊಗೆಯುವ ಮಾರ್ಗಗಳ ಕುರಿತು ಯೋಚಿಸಬೇಕಿದೆ. ಮೈಸೂರಿನ ನಾಗರಿಕರೂ, ಸಾರ್ವಜನಿಕ ಸಂಘ ಸಂಸ್ಥೆಗಳೂ ಸಹ ಈ ಪ್ರಯತ್ನದಲ್ಲಿ ದನಿಗೂಡಿಸಿ, ಮೈಸೂರಿನ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ಮುಂದಾಗಬೇಕಿದೆ.
ʻʻಅಪರಾಧಮುಕ್ತ ಸಮಾಜʼʼ ನಮ್ಮ ಗುರಿಯಾಗಬೇಕಿದೆ.