ಬೆಂಗಳೂರು : ಡಾ.ಚಂದ್ರಶೇಖರ ಕಂಬಾರ ಅವರ ಸಾಂಬಶಿವ ಪ್ರಹಸನ ನಾಟಕವನ್ನು ಅಸಹ್ಯಕರವಾಗಿ ತಿರುಚಿ ಪ್ರದರ್ಶನ ಮಾಡಲಾಗಿದೆ. ಈ ಸಂಬಂಧ ಮೈಸೂರು ಪೊಲೀಸ್ ಕಮೀಷನರ್ ಅವರಿಗೆ ಪತ್ರ ಬರೆಯಲಾಗಿದೆ.
ಈ ಕುರಿತು, ಡಾ.ಚಂದ್ರಶೇಖರ ಕಂಬಾರರವರು ದೂರು ನೀಡಿದ್ದಾರೆ. ಮೈಸೂರಿನ ರಂಗಾಯಣದಲ್ಲಿ ನನ್ನ ನಾಟಕ ಸಾಂಬಶಿವ ಪ್ರಹಸನವನ್ನು ಅಸಹ್ಯವಾಗಿ ತಿರುಚಿ ಪ್ರದರ್ಶಿಸಿರುವ ಬಗ್ಗೆ ನನಗೆ ತುಂಬಾ ವಿಷಾಧವಾಗಿದೆ.
ನನ್ನ ಅನುಮತಿ ಕೇಳದೇ ನಾಟಕವನ್ನು ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವುದು ವಿಷಾಧಕರ. ನನ್ನ ಯಾವುದೇ ನಾಟಕಗಳಲ್ಲಿ ವ್ಯಕ್ತಿಗತ ನಿಂದನೆ ಇರುವುದು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನೂ ಅನುಮತಿ ಇಲ್ಲದೇ ನಾಟಕವನ್ನು ಪ್ರದರ್ಶಿಸಿದ್ದಕ್ಕೆ, ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟವರಿಗೂ ಮತ್ತು ಇಲ್ಲದ ಸಾಹಿತ್ಯವನ್ನು ಸೇರಿಸಿದ್ದಕ್ಕೆ ನಿರ್ದೇಶಕರ ಮೇಲೂ ಹಾಗೂ ಈ ಅಹಿತಕರ ವಾತಾವರಣಕ್ಕೆ ಕಾರಣರಾದ ಎಲ್ಲರ ಮೇಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ನಾಟಕದಲ್ಲಿ ಏನಿದೆ? ನಾಟಕದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಅವಹೇಳನ ಮಾಡಲಾಗಿದೆ.
‘ಭಾಗ್ಯಗಳನ್ನು ನೀಡಿ ಸೋಮಾರಿ ಮಾಡುತ್ತಿದ್ದೀರಿ, ಬರೀ ನಿದ್ದೆ ಮಾಡುತ್ತಿದ್ದೀರಿ ಎಂದೆಲ್ಲ ಹೇಳಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ‘ಕೆ.ಡಿ.ಅಂಕಲ್’ ಎಂದು ಅವಮಾನಿಸಲಾಗಿದೆ.
ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ನಾಟಕವನ್ನು ಅಡ್ಡಂಡ ಕಾರ್ಯಪ್ಪ ಶಿಷ್ಯ ಕಾರ್ತಿಕ್ ಉಪಮನ್ಯು ನಿರ್ದೇಶನದಲ್ಲಿ ‘ನಾಗರತ್ನಮ್ಮ’ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳು ಪ್ರದರ್ಶಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯರವರು ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಭಾನುವಾರ ದೂರು ನೀಡಿದ್ದಾರೆ.
ಈಗಾಗಲೇ ಟಿಪ್ಪು ಕುರಿತು ಇತಿಹಾಸ ತಿರುಚುವ ಮೂಲಕ ವಿವಾದಕ್ಕೆ ಈಡಾಗಿರುವ ಮೈಸೂರು ರಂಗಾಯಣ ಪದೇ ಪದೇ ವಿವಾದಗಳನ್ನು ಸೃಷ್ಟಿಸುತ್ತಿದೆ. ಕೋಮುಗಲಭೆಗಳನ್ನು ಎವ್ವಿಸಲೆಂದೆ ನಾಟಕಗಳನ್ನು ಸೃಷ್ಟಿಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.