ಲಕ್ನೋ: “ಬಿಜೆಪಿ ಆಡಳಿತದಲ್ಲಿ ವಿದ್ಯುತ್ ಬಿಲ್ ಮತ್ತು ಸ್ಮಾರ್ಟ್ ಮೀಟರ್ ಲೂಟಿಯಿಂದಾಗಿ ರಾಜ್ಯದ ಸಾಮಾನ್ಯ ಜನರು ತತ್ತರಿಸುತ್ತಿದ್ದಾರೆ. ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಕುಟುಂಬಕ್ಕೆ ₹19 ಕೋಟಿ 19 ಲಕ್ಷ ವಿದ್ಯುತ್ ಬಿಲ್ ಪಾವತಿಸುವಂತೆ ವಿದ್ಯುಚ್ಛಕ್ತಿ ಇಲಾಖೆ ನೋಟಿಸ್ ನೀಡಿದೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ವಿದ್ಯುತ್ ಬಿಲ್‌ಗಳ ಮೂಲಕ ಲೂಟಿ ಹೊಡೆಯುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದಾಗ ಈ ವಿದ್ಯುತ್ ಬಿಲ್ ಲೂಟಿ ಕೊನೆಯಾಗುತ್ತದೆ ಎಂದಿದ್ದಾರೆ.
ಇದನ್ನು ಓದಿ: ನನ್ನನ್ನು ಕಂಡರೆ ಯೋಗಿ ಸರ್ಕಾರಕ್ಕೆ ಭಯವೇಕೆ: ಪ್ರಿಯಾಂಕಾ ಗಾಂಧಿ ಪ್ರಶ್ನೆ
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ಮುಂದುವರಿಸಿದರು. ಉತ್ತರ ಪ್ರದೇಶದಲ್ಲಿ ರೈತರು ಎದುರಿಸುತ್ತಿರುವ ರಸಗೊಬ್ಬರ ಸಮಸ್ಯೆ ಬಗ್ಗೆ ಉಲ್ಲೇಖಿಸಿ ಒಂದೆಡೆ ಬುಂದೇಲ್‌ಖಂಡ್‌ನಲ್ಲಿ ರೈತರು ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಸಾಯುತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ ಲಖೀಂಪುರ್ ಖೇರಿ ಘಟನೆಗೆ ಕಾರಣರಾದ ಆಶಿಶ್ ಮಿಶ್ರಾ ತಂದೆ ಆಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರತಿಜ್ಞಾ ಯಾತ್ರೆ ನಡೆಸುತ್ತಿದೆ. ಅಕ್ಟೋಬರ್ 23ರಂದು ಆರಂಭವಾಗಿರುವ ಪ್ರತಿಜ್ಞಾ ಯಾತ್ರೆಯು ನವೆಂಬರ್ 1ರವರೆಗೂ ರಾಜ್ಯದ ನಡೆಯಲಿದೆ. ಬಾರಾಬಂಕಿಯಿಂದ ಬುಂದೇಲ್‌ಖಂಡ್, ಸಹರಾನ್‌ಪುರದಿಂದ ಮಥುರಾ ಮತ್ತು ವಾರಣಾಸಿಯಿಂದ ರಾಯ್ ಬರೇಲಿವರೆಗೆ ಯಾತ್ರೆ ನಡೆಯುತ್ತಿದೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿಯಿರುವಾಗಲೇ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಕೆಲವು ಪ್ರಮುಖ ಘೋಷಣೆಯನ್ನು ಮಾಡಿದೆ.
ಇದನ್ನು ಓದಿ: ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರ ಕುಟುಂಭವನ್ನು ಭೇಟಿ ಮಾಡಿದ ರಾಹುಲ್, ಪ್ರಿಯಾಂಕಾ
ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ.40ರಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವುದಾಗಿ ಹೇಳಿದೆ. “ದೇಶದ ರಾಜಕೀಯದಲ್ಲಿ ಮಹಿಳೆಯರು ಪೂರ್ಣ ಪ್ರಮಾಣದ ಪಾಲುದಾರರಾಗಬೇಕೆಂದು ನಾವು ಬಯಸುತ್ತೇವೆʼʼ ಎಂದು ಪ್ರಿಯಾಂಕಾ ಗಾಂಧಿ ಈ ಹಿಂದೆ ತಿಳಿಸಿದ್ದರು.
ಮಹಿಳೆಯರಿಗೆ ಆದ್ಯತೆ ನೀಡುವುದರ ಜೊತೆಗೆ ರೈತರು, ನಿರುದ್ಯೋಗಿಗಳು ಹಾಗೂ ವಿದ್ಯಾರ್ಥಿನಿಯರಿಗೂ ಪ್ರಿಯಾಂಕಾ ಗಾಂಧಿ ವಾದ್ರಾ ಬಂಪರ್ ಆಫರ್ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ರೈತರ ಕೃಷಿ ಸಾಲ ಮನ್ನಾ ಮಾಡಲಾಗುವುದು, 20 ಲಕ್ಷ ನಿರುದ್ಯೋಗಿಗಳಿಗೆ ಸರ್ಕಾರಿ ಉದ್ಯೋಗ ನೀಡುವುದು, ಸಾಂಕ್ರಾಮಿಕ ಸಮಯದಲ್ಲಿನ ವಿದ್ಯುತ್ ಬಿಲ್ ಮನ್ನಾ ಮಾಡುವುದು ಮತ್ತು ಕೋವಿಡ್ -19 ಸಂತ್ರಸ್ತರಿಗೆ ರೂ 25,000 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಘೋಷಿಸಿದ್ದಾರೆ.