ದಮನಿತರ ಎಚ್ಚರದ ಪ್ರಜ್ಞೆ: ಸಾಮಾಜಿಕ ಪರಿವರ್ತನೆಯ ಹರಿಕಾರ ಶಾಹು ಮಹಾರಾಜರು

ಸುಭಾಸ ಮಾದರ, ಶಿಗ್ಗಾಂವಿ (ಹಾವೇರಿ)

ಕೊಲ್ಲಾಪುರ ರಾಜ್ಯದಲ್ಲಿ ಎಲ್ಲ ಜನವರ್ಗಗಳಿಗೂ ಸಮಾನ ಶೈಕ್ಷಣಿಕ ಅವಕಾಶ ಸಿಗುವಂತೆ ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ ಅತಿ ಹಿಂದುಳಿದ ವರ್ಗಗಳಲ್ಲಿ ಈ ಸುಧಾರಣಾ ಪ್ರಯತ್ನಗಳು ಯಶ ಕಾಣಲಿಲ್ಲವೆಂದು ವಿಷಾದದಿಂದಲೇ ಹೇಳಬೇಕಿದೆ. ನಾವು ಸೂಕ್ಷ್ಮವಾಗಿ ಅವಲೋಕಿಸಿ ನಿರ್ಧಾರ ತೆಗೆದುಕೊಂಡಿರುವಂತೆ ಆ ಜನಸಮುದಾಯಗಳಲ್ಲೂ ಸುಧಾರಣೆ ಕಂಡುಬರಬೇಕೆಂದರೆ ಉನ್ನತ ಶಿಕ್ಷಣ ಪಡೆದ ಹಿಂದುಳಿದ ವರ್ಗದವರಿಗೆ ಸೂಕ್ತ ಉದ್ಯೋಗಾವಕಾಶ ನೀಡಬೇಕಿದೆ. ಎಂದೇ ಮಹಾರಾಜರು ಸೂಕ್ಷ್ಮವಾಗಿ ಅವಲೋಕಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ನಮ್ಮ ರಾಜ್ಯದ ಹಿಂದುಳಿದ ವರ್ಗಗಳು ಶಿಕ್ಷಣ ಪಡೆಯಬೇಕು ಹಾಗೂ ಪಡೆದವರಿಗೆ ನೌಕರಿಗಳಲ್ಲಿ ಹೆಚ್ಚು ಭಾಗವನ್ನು ಮೀಸಲಿಡಬೇಕು.

ಈ ಆದೇಶ ಬಂದ ದಿನಾಂಕದಿಂದ 50% ಖಾಲಿಯಾದ ಸರ್ಕಾರಿ ಹುದ್ದೆಗಳಿಗೆ ಹಿಂದುಳಿದ ವರ್ಗದ ವಿದ್ಯಾವಂತರನ್ನೇ ನೇಮಿಸಬೇಕು. ಹಿಂದುಳಿದ ವರ್ಗದ ಜನರ ಪ್ರಾತಿನಿಧ್ಯ 50% ಗಿಂತ ಕಡಿಮೆ ಇರುವ ಎಲ್ಲ ಕಚೇರಿಗಳಲ್ಲಿ ಮುಂದಿನ ನೇಮಕಾತಿಗಳನ್ನು ಹಿಂದುಳಿದ ವರ್ಗಗಳಿಗೆ ಕೊಡಬೇಕು. ಹಿಂದುಳಿದ ವರ್ಗಗಳೆಂದರೆ ಬ್ರಾಹ್ಮಣರು, ಪ್ರಭುಗಳು, ಶೇಣ್ವಿಗಳು, ಪಾರ್ಸಿಗಳು ಮತ್ತಿತರೆ ಮುಂದುವರೆದ ಸಮುದಾಯಗಳು ಹೊರತುಪಡಿಸಿ ಎಂದು ಪರಿಗಣಿಸಬೇಕು.

ಶಾಹು ಮಹಾರಾಜ್ (1902 ಜುಲೈ 06 ರಂದು ಮೀಸಲಾತಿ ಕುರಿತಾಗಿ ಹೊರಡಿಸಿದ ಆದೇಶ)

ದೇಶದಲ್ಲಿ ಪುರೋಹಿತಶಾಹಿ ವ್ಯವಸ್ಥೆ ಹಿಡಿತದಿಂದ ಮೇಲ್ವರ್ಗದವರ ವಿರೋಧವನ್ನು ಲೆಕ್ಕಿಸಿದೇ ದಲಿತರು, ಹಿಂದುಳಿದವರು ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೀಸಲಾತಿಯನ್ನು ಕಲ್ಪಿಸಿದ ಛತ್ರಪತಿ ಶಾಹು ಮಹಾರಾಜರ ಸಾಧನೆಯನ್ನು ನಾವೆಲ್ಲ ಸ್ಮರಿಸಬೇಕಿದೆ. ಶಿಕ್ಷಣದ ಮಹತ್ವವನ್ನು ಅಂದೇ ಅರಿತ ಶಾಹು ತಮ್ಮ ಜೀವನದುದ್ದಕ್ಕೂ ಶಿಕ್ಷಣ ಕ್ಷೇತ್ರಕ್ಕೆ ಸೇರಿದಂತೆ ಆರ್ಥಿಕ, ಸಾಮಾಜಿಕ, ಸಮಾನತೆ ಸಹಬಾಳ್ವೆಗಾಗಿ ಯೋಜನೆಗಳನ್ನು ರೂಪಿಸಿದ ಮಹಾ ಮಾನವತಾವಾದಿ ಶಾಹು ಮಾಹಾರಾಜ್.

ಪ್ರಸ್ತುತ ದಿನಗಳಲ್ಲಿ ದೇಶದ ಜನತೆ ಸಂಘರ್ಷದ ಬದುಕನ್ನು ನಡೆಸುವಂತಾಗಿದೆ. ಪ್ರಭುತ್ವದ ಪ್ರಾಯೋಜಿವಾದ ಧರ್ಮ ಸಂಘರ್ಷ ನಡೆಯುತ್ತಿದೆ. ಕೋಮುವಾದದ ಅಪಾಯದ ಕುರಿತು ನೂರಾರು ವರ್ಷಗಳ ಹಿಂದೆಯೇ ಶಾಹು ಮಹಾರಾಜರು ಮೀಸಲಾತಿ ಕುರಿತಾಗಿ ಹೊರಡಿಸಿದ ಆದೇಶದಲ್ಲಿ ತಮ್ಮ ಮಾತುಗಳನ್ನ ಹೇಳಿದ್ದಾರೆ.

ಶಿವಾಜಿ ವಂಶಸ್ಥರಾದ ಬೋಸಲೆ ರಾಜ ಮನೆತನ ಕೊಲ್ಹಾಪುರವನ್ನು ಆಳುತ್ತಿದ್ದ ಅವಧಿ ಅದು. ಕೊಲ್ಹಾಪುರದ ರಾಜ ನಾಲ್ಮಡಿ ಶಿವಾಜಿ ತೀರಿಕೊಂಡಾಗ ಅವರಿಗೆ ಮಕ್ಕಳಿಲ್ಲದ ಕಾರಣ ಕಾಗಲ್ ಪ್ರದೇಶದ ಮುಖ್ಯಸ್ಥರಾಗಿದ್ದ ಜೈಸಿಂಗ್‌ರಾವ್ ಘಾಟ್ಗೆ ಮತ್ತು ರಾಧಾಬಾಯಿ ಅವರ ಮಗ ೧೦ ವರ್ಷದ ಯಶವಂತರಾವ್ ಘಾಟ್ಗೆಯನ್ನು ದತ್ತು ಪಡೆದು ಕೊಲ್ಹಾಪುರದ ರಾಜನಾಗಿ ಪಟ್ಟಕ್ಕೇರಿಸುತ್ತಾರೆ ಮುಂದೆ ಅವರೆ ಛತ್ರಪತಿ ಶಾಹು ಮಹಾರಾಜರಾಗಿ ತುಳಿತಕ್ಕೊಳಗಾದ ಸಮುದಾಯದ ಬೆನ್ನೆಲುಬಾಗಿ ನಿಲ್ಲುತ್ತಾರೆ.

ಯಶವಂತರಾವ್ ಘಾಟ್ಗೆ(ಶಾಹು) ಹುಟ್ಟಿದ್ದು ೨೬ ಜೂನ್ ೧೮೭೪ರಲ್ಲಿ. ೦೨ ಏಪ್ರಿಲ್ ೧೮೯೪ರಲ್ಲಿ ಪಟ್ಟಕ್ಕೇರಿದ ಶಾಹು ಮಹಾರಾಜರು ೧೯೨೨ ರವರೆಗೂ ೨೮ ವರ್ಷಗಳ ಕಾಲ ಆಡಳಿತ ನಡೆಸಿದರು. ತನ್ನ ಪ್ರಜೆಗಳ ಒಳಿತಿಗಾಗಿ, ಉನ್ನತಿಗಾಗಿ ಅನೇಕ ಕ್ರಮಗಳನ್ನು ಕೈಗೊಂಡರು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಮಾಡಿದ ಕೆಲಸವೆಂದರೆ ಅಸ್ಪೃಶ್ಯತಾ ನಿವಾರಣೆಯ ಕೆಲಸ.

ಅದು ಪುರೋಹಿತಶಾಹಿಗಳ ಕಾಲ, ಚಾತುರ್ವರ್ಣ ಪದ್ದತಿಗಳು ಶ್ರೇಣೆಕೃತ ಜಾತಿ ವ್ಯವಸ್ಥೆಗಳು ತಾಂಡವವಾಡುತ್ತಿದ್ದಂತಹ ಕಾಲ, ಪುರೋಹಿತಶಾಹಿಗಳು ಬಹುಜನರನ್ನು ಮೂಡನಂಬಿಕೆಗಳಿಗೆ ತಳ್ಳಲ್ಪಟ್ಟಂತಹ ಕಾಲ, ಬಹುಜನರನ್ನು ಬ್ರಾಹ್ಮಣರ ಸೇವಕರಾಗಿ, ಗುಲಾಮರನ್ನಾಗಿ ಮಾಡಿಕೊಂಡಿದ್ದಂತಹ ಕಾಲ, ಅಸ್ಪೃಶ್ಯರಿಗೆ ಯಾವುದೇ ಹಕ್ಕುಗಳಿಲ್ಲದೆ ಎರಡನೇಯ ದರ್ಜೆಯ ಪ್ರಜೆಗಳಿಗಿಂತ ಕೀಳಾಗಿ ಬದುಕಬೇಕಿತ್ತು. ಊರ ಹೊರಗಡೆ, ವಾಸಯೋಗ್ಯವಲ್ಲದ ವಾತಾವರಣದ ನಡುವೆ ಜೀವನ ಸವೆಸುವುದು. ಊರೊಳಗೆ ಬರುವಂತಿರಲಿಲ್ಲ, ದೇವರ ಪೂಜಿಸುವಂತಿರಲಿಲ್ಲ, ಬಾಯಾರಿ ಸತ್ತರೂ ಎಲ್ಲರೂ ಬಳಸುವ ಕೆರೆ, ಬಾವಿ ನೀರನ್ನು ಮುಟ್ಟುವಂತಿರಲಿಲ್ಲ. ನಿಗಧಿತ ಅವಧಿಯೊಳಗೆ ಊರೊಳಗೆ ಬಂದು ಹೋಗುವುದು ಕಡ್ಡಾಯವಾಗಿತ್ತು. ದಲಿತರು ಮೇಲ್ಜಾತಿಯವರನ್ನ ಮುಟ್ಟುವುದಿರಲಿ, ಅವರು ಕೂಡಾ ಇವರ ಮೈಗೆ ಮೈ ತಾಗದಂತೆ ಎಚ್ಚರ ವಹಿಸಬೇಕಿತ್ತು. ಒಂದುವೇಳೆ ಹಾಗೆನಾದರೂ ತಾಗಿಬಿಟ್ಟರೆ ಅದನ್ನೆ ಮಹಾಪಾಪವೆಂದು ಪರಿಗಣಿಸಲ್ಪಡುತ್ತಿತ್ತು. ಪೇಶ್ವೆ-ಬ್ರಿಟಿಷರ ಕಾಲದಲ್ಲಿ ಅಪರಾಧಕ್ಕೆ ಶಿಕ್ಷೆ ಕೊಡುವಾಗ ಅಪರಾಧಿಯ ಜಾತಿಯನ್ನು ಪರಿಗಣಿಸಲಾಗುತ್ತಿತ್ತು. ತಳ ಸಮುದಾಯದ ಅಪರಾಧಿಗೆ ಕಠೀಣ ಶಿಕ್ಷೆ ವಿಧಿಸುವುದು.

ವರ್ಣಾಶ್ರಮದ ಧರ್ಮವನ್ನು ಜಾರಿಗೆ ತಂದು ಕಾನೂನುಬದ್ಧವಲ್ಲದ ವ್ಯವಸ್ಥೆಯನ್ನು ಕಾನೂನುಬದ್ಧ ಮಾಡಿದ್ದು ಪೇಶ್ವೆಗಳು ನಿಯಮಗಳನ್ನಾಗಿಸಿದರು. ಸತ್ತ ಪ್ರಾಣಿಯನ್ನು ಎತ್ತಿ ಶುದ್ಧೀಕರಣ ಮಾಡಬೇಕಿತ್ತು. ಅತೀ ಕಡಿಮೆ ಸಂಬಳಕ್ಕೆ ೪೩ ಕ್ಕಿಂತ ಹೆಚ್ಚು ಕೆಲಸವನ್ನು ಮಹಾರರು (ಮಹಾರಾಷ್ಟ್ರದಲ್ಲಿ ಕೀಳು ಜಾತಿಯವರು) ಮಾಡಬೇಕಿತ್ತು. ಅಸ್ಪೃಶ್ಯರ ಸ್ಥಿತಿ ಹೀಗಿದ್ದಾಗ ಶಾಹು ಮಹಾರಾಜ್‌ ಪಟ್ಟಕ್ಕೆ ಬಂದ ಸಂದರ್ಭದಲ್ಲಿ ರಾಜ್ಯದ ಬಹುತೇಕ ಅಧಿಕಾರಿಗಳು ಮೇಲ್ಜಾತಿಯವರಾಗಿದ್ದರು, ಹಿಂದುಳಿದ ವರ್ಗ ಶಿಕ್ಷಣದಿಂದ ದೂರವಿತ್ತು ಇದರಿಂದಾಗ ಅಧಿಕಾರದ ನೌಕರಿಗಳಿಂದಲೂ ದೂರವಿದ್ದರು, ಶಾಹು ಅಧಿಕಾರ ವಹಿಸಿಕೊಂಡ ದಿನದಿಂದ ಸಮಾಜವನ್ನು ಸರಿ ದಾರಿಗೆ ತರುವ ಪ್ರಯತ್ನ ಹಾಗೂ ಎಲ್ಲ ಸಮುದಾಯದ ಜನರನ್ನು ಉತ್ತಮವಾದ ಬದುಕನ್ನು ಸಮಾನ ನೆಲೆಯಲ್ಲಿ ಬದುಕಲು ಸಾಧ್ಯವಾಗುವಂತಹ ಪ್ರಯತ್ನಗಳನ್ನು ಶುರು  ಮಾಡಿದ್ದರು.

ಶಿಕ್ಷಣ-ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿ

ಒಂದು ಬಹುದೊಡ್ಡ ಸಮುದಾಯ ಅಶಿಕ್ಷಿತರಾಗಿ, ಬಡತನದಲ್ಲಿ ಉಳಿಯುವುದು ದೇಶದ ಪ್ರಗತಿಗೆ ಮಾರಕವೆಂಬ ಸತ್ಯ ಶಾಹುಗೆ ಗೊತ್ತಿತ್ತು. ಆಡಳಿತದಲ್ಲಿ ಶೇ.೫೦ ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಮೀಸಲಾತಿ ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುತ್ತಾರೆಂಬ  ಕಾರಣಕ್ಕೆ ೧೮೯೬ ರಿಂದ ೧೯೧೨ರ ಅವಧಿಯಲ್ಲಿ ೨೭ ಶಾಲೆಗಳನ್ನು ತೆರೆದರು, ೨೦ ವಸತಿ ನಿಲಯಗಳನ್ನು ತೆರೆದರು, ವಸತಿ ನಿಲಯಗಳಿಗೆ ಮಾಸಿಕ ೨೫ ರೂಪಾಯಿ ಅನುದಾನ ನಿಗದಿಗೊಳಿಸಿದರು. ಅಬ್ರಾಹ್ಮಣರಿಗೆ ವೇದ ಕಲಿಸುವ ಪಾಠ ಶಾಲೆ ತೆರೆದರು, ಜತೆಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಮೊದಲ ಬಾರಿಗೆ ಜಾರಿಗೆ ತಂದರು. ಪ್ರಾಥಮಿಕ ಶಿಕ್ಷಣ ಉಚಿತ ಹಾಗೂ ಕಡ್ಡಾಯಗೊಳಿಸಿದರು. ಸಂಪೂರ್ಣ ಶುಲ್ಕ ವಿನಾಯಿತಿ, ಇದಕ್ಕಾಗಿ ರಾಜ್ಯದ ಸಿರಿವಂತರ ಮೇಲೆ ಶಿಕ್ಷಣ ಸುಂಕ ವಿಧಿಸಿ ‘ಶಿಕ್ಷಣ ಕರ’ ವಸೂಲಿ ಮಾಡಿಸಿದರು.

ಅಲ್ಲದೆ ೭ನೇ ತರಗತಿ ಉತ್ತೀರ್ಣರಾದ ದಲಿತರನ್ನು ತಹಶೀಲ್ದಾರರನ್ನಾಗಿ ಮಾಡಿದರು. ಸುಗಂಧ ಎಣ್ಣೆ ತಯಾರಿಸುವ ಉದ್ಯಮ, ಶಾಹುಪುರಿ ಬೆಲ್ಲದ ಮಾರುಕಟ್ಟೆ ಇಂದಿಗೂ ಕೂಡಾ ದೇಶದ ಅತಿ ದೊಡ್ಡ ಬೆಲ್ಲದ ಮಾರುಕಟ್ಟೆ ಕೊಲ್ಹಾಪುರದ ಶಾಹು ಮಾರುಕಟ್ಟೆ.

ಎಲ್ಲರಿಗೂ ಉಚಿತ ಶಿಕ್ಷಣ ಒದಗಿಸಿ, ಉದ್ಯೋಗಾವಕಾಶ ಕಲ್ಪಿಸುವ ಅನೇಕ ಪ್ರಯತ್ನಗಳು, ಕೃಷಿಗೆ ಪೂರಕವಾಗುವಂತೆ ಸಾರ್ವತ್ರಿಕ ನೀರಾವರಿ ಯೋಜನೆ, ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್ ಸ್ಥಾಪನೆ, ಕೃಷಿ ಸಂಸ್ಥೆ, ಶಾಲೆಗಳು, ಸಹಕಾರ ಸಂಘಗಳ ಸ್ಥಾಪನೆ, ನೇಕಾರರಿಗಾಗಿ ಅಸೋಸಿಯೇಷನ್, ವಿಕ್ಟೋರಿಯಾ ಕುಷ್ಠರೋಗ ಚಿಕಿತ್ಸಾ ಕೇಂದ್ರ ತೆರೆದರು.  ಇವರ ಶಿಕ್ಷಣ ಸೇವೆಯನ್ನು ಗಮನಿಸಿದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವು ೧೯೦೨ರ ಜೂನ್ ೧೦ರಂದು ಇವರಿಗೆ ಎಲ್.ಎಲ್.ಡಿ ಪದವಿ ನೀಡಿ ಗೌರವಿಸಿದೆ.

ಜಾತಿಯಿಂದ ಅಪಮಾನ ಎದುರಿಸಿದ್ದ ಶಾಹು

೧೯೦೧ ರಲ್ಲಿ ಅರಮನೆಯ ಪುರೋಹಿತ ಅಪ್ಪಸಾಹೇಬ ರಾಜೋಪಾದ್ಯಾಯ ಪೂಜೆ ಮಾಡುವಾಗ ವೇದೋಕ್ತ ಮಾಡುವುದಿಲ್ಲ ಎಂದು ಗಮನಿಸಿ ಏಕೆಂದು ಶಾಹು ಪ್ರಶ್ನಿಸಿದರು. ರಾಜ ಕ್ಷತ್ರಿಯನಲ್ಲ, ಶೂದ್ರನಾಗಿರುವುದರಿಂದ ಹಾಗೆ ಮಾಡಲು ಬರುವುದಿಲ್ಲವೆಂದು ಅವರು ಉತ್ತರಿಸಿದರು, ಪದೇ ಪದೇ ಇಂತಹದ್ದೆ ಘಟನೆಗಳು ಮರುಕಳಿಸಿದಾಗ, ಎಚ್ಚರಿಕೆಗಳ ಹೊರತಾಗಿಯೂ ರಾಜೋಪಾದ್ಯಾಯ ಅದನ್ನು ನಿರಾಕರಿಸಿದಾಗ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು. ಅವರಿಗೆ ಕೊಡುತ್ತಿದ್ದ ೩೦ ಸಾವಿರ ಭತ್ಯೆ ನಿಲ್ಲಿಸಲಾಯಿತು. ಕೊಲ್ಹಾಪುರದ ಬಹುತೇಕ ಬ್ರಾಹ್ಮಣರು ರಾಜೋಪಾದ್ಯಾಯರ ಪರವಾಗಿ ನಿಂತರು. ಈ ಸಂಬಂಧ ಕೊಲ್ಹಾಪುರದ ಬ್ರಾಹ್ಮಣರು ಕೋರ್ಟಿಗೂ ಸಹ ಹೋದರು ಆದರೆ ಈ ಪ್ರಕರಣ ೧೯೦೫ ರಲ್ಲಿ ಖುಲಾಸೆಗೊಂಡಿತು. ಮಹಾರಾಜರಿಗೂ ಕೂಡ ಜಾತಿ ಅಪಮಾನ ತಪ್ಪಿದ್ದಲ್ಲ ಎಂಬುದು ಹಾಗೂ ಧರ್ಮದೊಳಗಿರುವ ಲೋಪದೋಷಗಳು ಜನತೆಗೆ ತಿಳಿಸಲು ಇಂತಹ ಘಟನೆಗಳು ನೆರವಾದವು.

ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿ, ಸಹಪಂಕ್ತಿ ಭೋಜನ, ಅಂತರ್ಜಾತಿ ವಿವಾಹ ಮಾಡುವುದರ ಜೊತೆಗೆ, ಜಾತಿ ಆಧಾರಿತ ಉದ್ಯೋಗ ನಾಶ ಮಾಡುವ ಮೂಲಕ ಜಾತೀಯತೆ ಹಾಗೂ ಅಸ್ಪೃಶ್ಯತೆ ಎರಡರ ವಿರುದ್ಧವೂ ಹೋರಾಡಿದರು.

ಧರ್ಮದ ಕುರಿತು ಶಾಹು

ಧರ್ಮ ಎಂದರೇನು? ದೇವರ ಬಳಿಗೆ ಹೋಗುವ ಮಾರ್ಗ. ವಿವಿಧ ದೇಶಗಳಲ್ಲಿ, ವಿವಿಧ ಹೆಸರಿನಲ್ಲಿ ಹುಟ್ಟಿಕೊಂಡ ಎಲ್ಲ ಧರ್ಮಗಳ ಉದ್ದೇಶವೂ ಒಂದೇ ಆಗಿದೆ. ನಗರ ತಲುಪಲು ಹಲವು ರಸ್ತೆಗಳಿವೆ. ಬೇರೆ ಬೇರೆ ರಸ್ತೆಯಿಂದ ನಗರಕ್ಕೆ ತಲುಪುವವರನ್ನು ದ್ವೇಷಿಸಲಾಗುತ್ತದಯೇ? ಇಂದು ಯಾವುದೇ ಧರ್ಮ ಆಚರಿಸಿ ಮನುಷ್ಯ ದೇವರ ಬಳಿ ಹೋದ ಪ್ರತ್ಯಕ್ಷ ಉದಾಹರಣೆ ಇಲ್ಲ. ಅಂಥ ಮಾರ್ಗದರ್ಶಕ ದೊರಕುವವರೆಗೆ ನಮ್ಮದಷ್ಟೇ ಒಳ್ಳೆಯದು ಎಂಬ ಟೊಳ್ಳು ಅಭಿಮಾನ ಬೆಳೆಸಿಕೊಳ್ಳುವುದು ಯಾರಿಗೂ ಒಳ್ಳೆಯದಲ್ಲ. ದೇಶಬಂಧುವಿನ ಸೇವೆ ಕೈಗೊಳ್ಳುವುದು, ಮನುಷ್ಯರಲ್ಲಿ ದೇವರನ್ನು ಕಾಣುವುದೇ ಈಗ ನಿಜವಾದ ಧರ್ಮ.

ಅಸ್ಪೃಷ್ಯತಾ ವಿರೋಧಿ ಮತ್ತು ಜನಪರ ಕಾರ್ಯಕ್ರಮಗಳು

  • ನಳ ಕುಡಿಯುವ ನೀರಿನ ಕೆರೆ-ಬಾವಿ, ಕೊಳ, ನದಿ, ಧರ್ಮಶಾಲೆ, ಆಸ್ಪತ್ರೆ, ಶಾಲೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯತೆ ಆಚರಿಸಬಾರದು ಎಂದು ಆದೇಶಿಸಲಾಯಿತು.
  • ಸೋನತಳಿಯಲ್ಲಿ ಉಚಿತ ವಸತಿ ಹಾಗೂ ಸ್ಟೇಷನ್ ಬಂಗ್ಲೋ ತೆರೆಯಲಾಯಿತು.
  • ಸರ್ಕಾರಿ ವಕೀಲರಾಗಿ ಅಸ್ಪೃಶ್ಯ ಸಮುದಾಯದ ವ್ಯಕ್ತಿಗಳನ್ನು ನೇಮಿಸಿಕೊಳ್ಳಲಾಯಿತು.
  • ೧೯೨೦ ಮೇ ೩ರಂದು ಬಲವಂತದ ಕೆಲಸ ಹಾಗೂ ಜೀತ ಪದ್ಧತಿಯನ್ನು ನಿಷೇಧಿಸಿ ಆದೇಶ ಹೊರಡಿಸಲಾಯಿತು.
  • ಅಸ್ಪೃಶ್ಯರ ಶಾಲೆಗಳನ್ನು ಮುಚ್ಚಿಸಿ ಅಸ್ಪೃಶ್ಯ ಶಾಲೆಯ ಮಕ್ಕಳು ಉಳಿದ ಸರ್ಕಾರಿ ಶಾಲೆಯಲ್ಲಿ ಸೇರಿಸಬೇಕೆಂದು ಆದೇಶಿಸಿಲಾಯಿತು. ಇದರಿಂದ ಎಲ್ಲ ಧರ್ಮ ಜಾತಿಯ ವಿದ್ಯಾರ್ಥಿಗಳು ಒಂದೆಡೆ ಕುಳಿತು ಕಲಿಯುವುದನ್ನು ಕಡ್ಡಾಯ ಮಾಡಿದರು.
  • ೧೯೧೯ ರಲ್ಲಿ ಅಸ್ಪ್ರಶ್ಯತಾ ಆಚರಣೆ ವಿರುದ್ದ ಕಾನೂನು ಜಾರಿ ಮಾಡಿದರು.
  • ಶಾಹು ಸತ್ಯಶೋಧಕ ಸಮಾಜವನ್ನು ಪ್ರಾರಂಭ ಮಾಡಿ ಸಾಮಾಜಿಕ ಪರಿವರ್ತನಾ ಚಳುವಳಿಗೆ ನಾಂದಿ ಹಾಡಿದರು.
  • ೧೯೧೮ರಲ್ಲಿ ಮಹರ್ ವತನ್ ಪದ್ದತಿಯನ್ನು ನಿಷೇಧಿಸಿ, ಅಸ್ಪ್ರಶ್ಯರಿಗೆ ವಂಶಾವಳಿಯಾಗಿ ಬಂದಿದ್ದ ಜೀತ ಪದ್ದತಿಯನ್ನು ನಿಷೇಧಿಸಲಾಯಿತು.
  • ೧೯೧೯ರ ಜುಲೈ ೧೨ ರಂದು ಅಂತರಜಾತಿ ವಿವಾಹ ಕಾಯ್ದೆಯನ್ನು ಜಾರಿಗೆ ತಂದರು. ೧೦೨೦ ಜುಲೈ ೧೭ ರಂದು ದೇವದಾಸಿ ಪದ್ದತಿ ನಿರ್ಮೂಲನಾ ಕಾನೂನು ಜಾರಿಗೆ ತಂದರು.
  • ೧೯೨೦ರ ಮೇ ೩೦ ರಂದು ನಾಗಪುರದಲ್ಲಿ ಡಿಪ್ರೆಸ್ಡ್ ಕಾಸ್ಟ್ ಅಧಿವೇಶನವನ್ನು ನಡೆಸಿದರು.
  • ಭೂ ಹೀನರಿಗೆ ಉಚಿತವಾಗಿ ಭೂಮಿಯನ್ನು ಹಂಚಲಾಯಿತು.
  • ಸಹಕಾರಿ ಮಾರುಕಟ್ಟೆ ಪದ್ದತಿಯನ್ನು ಮೊದಲಬಾರಿ ತಮ್ಮ ಪ್ರಾಂತ್ಯದಲ್ಲಿ ಜಾರಿಗೆ ತಂದರು.
  • ೧೯೧೭ರಲ್ಲಿ ವಿಧವಾ ಪುನರ್‌ವಿವಾಹ ಕಾನೂನು ಜಾರಿಗೊಳಿಸಿದರು. ಅಂತರ್‌ಜಾತಿ ವಿವಾಹ ಕಾಯ್ದೆ ಜಾರಿ, ಬಾಲ್ಯ ವಿವಾಹ ನಿಷೇಧಿಸಿದರು.
  • ಕೌಟುಂಬಿಕ ದೌರ್ಜನ್ಯವನ್ನು ಶಿಕ್ಷಾರ್ಹಗೊಳಿಸಿ ವಿಚ್ಛೇದನ ಪಡೆಯುವುದನ್ನೂ ಕೂಡಾ ೧೯೨೦ರ ಕಾಯ್ದೆಯಲ್ಲಿ ನೀಡಿದರು.
  • ದೇವದಾಸಿ ಪದ್ದತಿ ರದ್ದುಗೊಳಿಸಿದರು.
  • ವಿಕ್ಟೋರಿಯಾ ಕುಷ್ಠರೋಗ ಚಿಕಿತ್ಸಾ ಕೇಂದ್ರ ಆರಂಭ.
  • ೧೯೧೮ರಲ್ಲಿ ಶೂದ್ರರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು “ಮೂಕ ನಾಯಕ್” ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ.

ಶೋಷಿತ ಸಮುದಾಯದ ನಾಯಕರೊಡನೆ ನಿರಂತರ ಸಂಪರ್ಕದಲ್ಲಿದ್ದ ಶಾಹು ಮಹರಾಜರು ಡಾ.ಬಿ.ಆರ್ ಅಂಬೇಡ್ಕರ್ ತರಬೇಕೆಂದಿದ್ದ ಮೂಕನಾಯಕ ಪತ್ರಿಕೆಗೆ ೨೫೦೦ ರೂಪಾಯಿ ಸಹಾಯ ಘೋಷಿಸಿ ಮುಂದೆ ಅನೇಕ ಸಂದರ್ಭದಲ್ಲಿ ಮೂಕನಾಯಕ ಪತ್ರಿಕೆಯ ಬೆನ್ನೆಲುಬಾಗಿ ನಿಂತಿದ್ದರು,  ಡಾ.ಬಿ.ಆರ್.ಅಂಬೇಡ್ಕರ್ ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಧನ ಸಹಾಯವನ್ನು ಮಾಡಿದವರು.

ತಮಿಳುನಾಡಿನ ಬ್ರಾಹ್ಮಣೇತರ ಚಳುವಳಿಗಳ ಬಗ್ಗೆ ಅಪಾರ ಒಲವಿದ್ದ ಶಾಹು ಮಹಾರಾಜರು ಸತ್ಯಶೋಧಕ ಸಮಾಜದ ಸಭೆಗಳಿಗೆ ಜಸ್ಟೀಸ್ ಪಾರ್ಟಿಯ ನೇತಾರರಾಗಿದ್ದ ಡಾ.ಟಿ.ಎಂ.ನಾಯರ್, ಸರ್.ಪಿ.ಟಿ.ಚೆಟ್ಟಿಯಾರ್, ರಾಮಸ್ವಾಮಿ ಮೊದಲಿಯಾರ್ ಮುಂತಾದವರನ್ನು ಆಹ್ವಾನಿಸುತ್ತಿದ್ದರು.

ವೈಚಾರಿಕತೆಯ ಭದ್ರ ಬುನಾದಿಯನ್ನು ಸಾಮಾಜಿಕ ಪರಿವರ್ತನ ಚಳವಳಿಯ ಸಂದರ್ಭದಲ್ಲಿ ರಾಜಪ್ರಭುತ್ವದಲ್ಲಿ ಕೊಲ್ಹಾಪೂರ ಸಂಸ್ಥಾನದ ಶಾಹೂ ಮಹಾರಾಜರು ಹಾಕಿದ್ದ, ಜ್ಯೋತಿ ಬಾ ಫುಲೆಯವರ ಸತ್ಯಶೋಧಕ ಸಮಾಜ ಚಳುವಳಿಯನ್ನು ಮುಂದುವರೆಸಿದ್ದ, ಭಾರತದಲ್ಲಿ ಫುಲೆಯವರ ಸಶಕ್ತ ಉತ್ತರಾಧಿಕಾರಿ. ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗದವರಿಗೆ ಶಿಕ್ಷಣದೊಂದಿಗೆ, ಅಧಿಕಾರದಲ್ಲಿ ಸಮಪಾಲು ಮತ್ತು ಸಾಮಾಜಿಕ ಸ್ಥಾನಮಾನ ದೊರಕಿಸಿ ಕೊಟ್ಟವರು, ಸಮಾಜದ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದ ಶಾಹು ಮಹಾರಾಜರು, ಹೃದಯ ಸಂಬಂಧಿ ಹಾಗೂ ಸಕ್ಕರೆ ಕಾಯಿಲೆಯಿಂದಾಗಿ ೦೬ ಮೇ ೧೯೨೨ ರಲ್ಲಿ ನಿಧನರಾದರು.

ಶಾಹು ಮಹಾರಾಜ್‌ರು ನಮ್ಮನ್ನಗಲಿ ನೂರು ವರ್ಷವಾದರೂ ಶಾಹು ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ.

Donate Janashakthi Media

Leave a Reply

Your email address will not be published. Required fields are marked *