ಸಾಮಾಜಿಕ ಭದ್ರತೆ ವಂತಿಗೆ ಆಧಾರಿತವಾಗಿರಬಾರದು

ಸಂಘಟಿತ ವಲಯದಲ್ಲಿ ಕಾರ್ಮಿಕರು ಮತ್ತು ಉದ್ಯಮಿಗಳ ವಂತಿಗೆಯ ಮೂಲಕ ನಡೆಯುವ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳಿವೆ. ಇದೇ ಮಾದರಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೂ ವಂತಿಗೆ ಆಧರಿಸಿದ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳನ್ನು ಇಂದು ಸರ್ಕಾರ ಜಾರಿಗೊಳಿಸುತ್ತಿದೆ. ಇಲ್ಲಿದೆ, ನಿಜವಾದ ಸಾಮಾಜಿಕ ಭದ್ರತೆ ಸಮಸ್ಯೆ. ಅಟಲ್ ಪಿಂಚಿಣಿ ಯೋಜನೆ ಇದಕ್ಕೆ ಒಂದು ಅಪ್ಪಟ ನಿದಶನ.

ಹಳೆಯದಕ್ಕೂ ಮತ್ತು ಸಾಮಾಜಿಕ ಭದ್ರತೆ ಕೋಡ್ಸ್‌ನಲ್ಲಿನ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳಿಗೂ ಮೂಲಭೂತ ಭಿನ್ನತೆಯೇನಿಲ್ಲ. ವಾಸ್ತವವಾಗಿ ಕೋಡ್ಸ್‌ನಲ್ಲಿ ಸಾಮಾಜಿಕ ಭದ್ರತೆಯನ್ನು ಅತ್ಯಂತ ಸಡಿಲಗೊಳಿಸಲಾಗಿದೆ ಮತ್ತು ಸರ್ಕಾರಕ್ಕೆ ಅನುಕೂಲವಾಗುವಂತೆ, ದುಡಿಯುವ ವರ್ಗಕ್ಕೆ ಅನ್ಯಾಯವಾಗುವಂತಿದೆ. ಇಲ್ಲಿರುವ ಕಾರ್ಯಕ್ರಮಗಳಲ್ಲಿ ಬಹಳಷ್ಟು ಕಾರ್ಮಿಕರ ವಂತಿಗೆ ಪ್ರಣೀತವಾಗಿವೆ.

ಅಭಿವೃದ್ಧಿ ಕುರಿತ ಚರ್ಚೆಗಳಲ್ಲಿ ‘ಸಾಮಾಜಿಕ’ ಎನ್ನುವುದನ್ನು ಆರ್ಥಿಕತೆಗೆ ವಿರುದ್ಧವಾದುದು ಎಂಬ ಭಾವನೆ ಸರ್ಕಾರದಲ್ಲಿ ಮತ್ತು ಸ್ವಲ್ಪಮಟ್ಟಿಗೆ ತಜ್ಞರ ವಲಯದಲ್ಲಿಯೂ ಇದೆ.(ಇದರ ಬಗ್ಗೆ ಹೆಚ್ಚಿನ ವಿವರಗಳಿಗೆ ಜೀನ್ ಡ್ರೀಜ್ ಅವರ ‘ಸೆನ್ಸ್ ಅಂಡ್‌ ಸೊಲಿಡಾರಿಟಿ’, ಈ.ಎಫ್. ಶುಮಾಕರ್ ಅವರ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಕೃತಿಗಳನ್ನು ನೋಡಿ). ಸಾಮಾಜಿಕ ಎಂಬುದು ಆರ್ಥಿಕತೆಯನ್ನು ಒಳಗೊಂಡಿರುತ್ತದೆ. ಈ ಮಾತು ಆರ್ಥಿಕತೆಗೆ ಅನ್ವಯ ಮಾಡಿ ಹೇಳಲು ಸಾಧ್ಯವಿಲ್ಲ. ಲಾಗಾಯ್ತಿನಿಂದ ಸಾಮಾಜಿಕ ಎನ್ನುವುದನ್ನು ಒಂದು ರೀತಿಯ ಭಾವನಾತ್ಮಕ ಸಂಗತಿಯೆಂದೂ, ಅದರ ಸೂಚಿಗಳನ್ನು ಪರಿಮಾಣಾತ್ಮಕವಾಗಿ ಮಾಪನ ಮಾಡಲು ಬರುವುದಿಲ್ಲವೆಂದೂ(ಅಂದರೆ ಅದಕ್ಕೆ ಖಚಿತತೆ ಎಂಬುದು ಇರುವುದಿಲ್ಲ ಎಂಬ ಅರ್ಥದಲ್ಲಿ), ಸಾಮಾಜಿಕ ಸಂಗತಿಗಳಿಗೆ ಆದ್ಯತೆ ನೀಡಿದರೆ ಅಭಿವೃದ್ಧಿ, ಬಂಡವಾಳ ಹೂಡಿಕೆ ಕುಂಠಿತಗೊಳ್ಳುತ್ತದೆ ಎಂದೂ, ಅದರ ಮೇಲಿನ ಹೂಡಿಕೆ ಅನುತ್ದಾದಕವೆಂದೂ ಭಾವಿಸಲಾಗಿದೆ. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೌಷ್ಟಿಕತೆ, ಸಾಮಾಜಿಕ ಭದ್ರತೆ, ಅಂಗನವಾಡಿ ಮುಂತಾದವುಗಳನ್ನು ಸಾಮಾಜಿಕ ಸಂಗತಿಗಳೆಂದು ಗುರುತಿಸುವ ಕ್ರಮವಿದೆ. ಇತ್ತೀಚಿಗಿನವರೆಗೆ ಇವುಗಳನ್ನು ಕುರಿತ ಚರ್ಚೆಗಳಿಗೆ ಅಭಿವೃದ್ಧಿ ಸಿದ್ಧಾಂತಗಳಲ್ಲಿ, ಅಭಿವೃದ್ಧಿ ನೀತಿಗಳಲ್ಲಿ ಮತ್ತು ಅಭಿವೃದ್ಧಿ ಪಠ್ಯಗಳಲ್ಲಿ ಸ್ಥಾನವೇ ಇರಲಿಲ್ಲ. ಈ ಬಗೆಯ ಚಿಂತನೆಯಿಂದ ಮತ್ತು ಅಭಿವೃದ್ಧಿ ನಿರ್ವಹಣೆಯಿಂದ ಆರ್ಥಿಕತೆಗೆ ನಷ್ಟವುಂಟಾಗುತ್ತದೆ. ಕೋವಿಡ್-೧೯ ದುರಂತದ ಸಂದರ್ಭದಲ್ಲಿ ಉಂಟಾಗುತ್ತಿರುವ ಹಾನಿ-ಹಾಹಾಕಾರಗಳ ಹಿನ್ನೆಲೆಯಲ್ಲಿ ಸಾಮಾಜಿಕ ಅಭಿವೃದ್ಧಿಯ ಮಹತ್ವವು ನಮ್ಮ ಅರಿವಿಗೆ ಬರುತ್ತಿದೆ.

ಸಾಮಾಜಿಕ ಭದ್ರತೆ

ಸಾಮಾಜಿಕ ಭದ್ರತೆಯನ್ನು ಸರ್ಕಾರದ ಸಂಪನ್ಮೂಲದ ಮೇಲಿನ ಹೊರೆ, ಇದು ಕಮ್ಯೂನಿಷ್ಟರ ಕಾರ್ಯಕ್ರಮ, ಕಾರ್ಮಿಕ ಸಂಘಟನೆಗಳ ಹುನ್ನಾರ, ಇದಕ್ಕೆ ಬಂಡವಾಳವನ್ನು ವಿನಿಯೋಗಿಸುವುದರಿಂದ ಹೂಡಿಕೆಗೆ ಹೊಡೆತ ಬೀಳುತ್ತದೆ, ದುಡಿಮೆಗಾರರು ಸೋಮಾರಿಗಳಾಗುತ್ತಾರೆ (ಅನ್ನಭಾಗ್ಯ ಯೋಜನೆಗೆ ಬಂದ ಅಸಮರ್ಥನೀಯ ಟೀಕೆ) ಎನ್ನುವ ವಾದಗಳಿವೆ. ಎಲ್ಲ ದೇಶಗಳಲ್ಲಿಯೂ ಸಾಮಾಜಿಕ ಭದ್ರತೆಯ ಬಗ್ಗೆ ಇಂತಹ ನಂಬಿಕೆಗಳಿವೆ. ಆದರೆ ಸಮಾಜದಲ್ಲಿನ ದುಡಿಯುವ ವರ್ಗದ ಹಿತಾಸಕ್ತಿಗಳನ್ನು ಸಂರಕ್ಷಿಸದಿದ್ದರೆ ಅವರ ದುಡಿಯುವ ಸಾಮರ್ಥ್ಯವು ಕುಸಿಯುತ್ತದೆ. ನಮ್ಮ ಸಮಾಜದ ಸಂದರ್ಭದಲ್ಲಿ ಒಟ್ಟು ದುಡಿಯುವ ವರ್ಗದಲ್ಲಿ ಶೇ.೧೦ ರಷ್ಟು ಮಾತ್ರ ಸಂಘಟಿತ ಅಧಿಕೃತ ಸಾಮಾಜಿಕ ಭದ್ರತೆಯ ರಕ್ಷಣೆ ಪಡೆಯುತ್ತಿದ್ದಾರೆ. ಉಳಿದ ಶೇ.೯೦ರಷ್ಟು ದುಡಿಯುವ ವರ್ಗವು ಸಾಮಾಜಿಕ ಅಭದ್ರತೆಯಲ್ಲಿ ಬದುಕು ದೂಡುತ್ತಿದೆ.

ದುಡಿಯುವ ವರ್ಗವು ಆರೋಗ್ಯ, ವೃತ್ತಿ ತರಬೇತಿ, ಮಕ್ಕಳ ಪೋಷಣೆ-ಶಿಕ್ಷಣ ಮುಂತಾದ ಜವಾಬ್ದಾರಿಯನ್ನು ಎದುರಿಸುತ್ತಿರುತ್ತಾರೆ. ಈ ಬಗೆಯ ಗಂಡಾಂತರಗಳು ಅವರ ದುಡಿಯುವ ಸಾಮರ್ಥ್ಯ ಮೇಲೆ ದುಷ್ಪರಿಣಾಮ ಬೀರುತ್ತವೆ. ದುಡಿಮೆಗಾರರ ದುಡಿಮೆ ಸಾಮರ್ಥ್ಯಕ್ಕೆ ಧಕ್ಕೆಯುಂಟಾದರೆ ಅವರು ತಮ್ಮ ವರಮಾನವನ್ನು ಅದಕ್ಕೆ ವಿನಿಯೋಗಿಸಬೇಕಾಗುತ್ತದೆ. ಈ ದುಡಿಮೆಗಾರರ ವರಮಾನ ನಷ್ಟವನ್ನು ಸಾಮಾಜಿಕ ಭದ್ರತೆಯ ಮೂಲಕ ಭರಿಸಬೇಕು. ಇದನ್ನು ದುಡಿಯುವ ವರ್ಗದ ವರಮಾನ ಉಳಿಸುವ ಕಾರ್ಯಕ್ರಮವಾಗಿ ಪರಿಭಾವಿಸಬೇಕು. ಇದರಿಂದ ದುಡಿಮೆಗಾರರ ಕಾಣಿಕೆಯು ಆರ್ಥಿಕತೆಗೆ ದೊರೆಯುತ್ತದೆ. ನಮ್ಮ ಸಮಾಜದ ಸಂದರ್ಭದಲ್ಲಿ ನೂರಾರು ಬಗೆಯ ಅಸಂಘಟಿತ ದುಡಿಮೆಗಳಿವೆ ಮತ್ತು ಅವುಗಳನ್ನು ಅವಲಂಬಿಸಿರುವ ಲಕ್ಷಾಂತರ ದುಡಿಮೆಗಾರರಿದ್ದಾರೆ. ಸ್ವಯಂ ಉದ್ಯೋಗಿಗಳಿದ್ದಾರೆ, ಬೀದಿಬದಿ ವ್ಯಾಪಾರಿಗಳಿದ್ದಾರೆ. ತಲೆಯ ಮೇಲೆ ಹೊತ್ತು, ತಳ್ಳುವ ಗಾಡಿಯ ಸಣ್ಣ ವ್ಯಾಪಾರಸ್ಥರಿದ್ದಾರೆ. ಅಂಗಡಿ-ಮುಂಗಟ್ಟುಗಳಲ್ಲಿ, ಕಟ್ಟಡ ನಿರ್ಮಾಣದಲ್ಲಿ ದುಡಿಮೆಯಲ್ಲಿ ನಿರತರಾದ ಮಹಿಳೆ-ಪುರುಷ ಕಾರ್ಮಿಕ ವರ್ಗವಿದೆ. ದಿನಗೂಲಿ ಕೆಲಸಗಾರರಿದ್ದಾರೆ. ಕೃಷಿಯಲ್ಲಿದ್ದಾರೆ, ನಗರಗಳಲ್ಲಿದ್ದಾರೆ, ಕಾರ್ಖಾನೆಗಳಲ್ಲಿದ್ದಾರೆ, ಸೇವಾ ವಲಯಗಳಲ್ಲಿದ್ದಾರೆ. ಇವರಾರಿಗೂ ಹಳೆ ಪದ್ದತಿಯಲ್ಲಾಗಲಿ ಅಥವಾ ಹೊಸ ಸೋಶಿಯಲ್ ಸೆಕ್ಯುರಿಟಿ ಕೋಡ್ಸ್‌ನಲ್ಲಾಗಲಿ ವ್ಯವಸ್ಥಿತವಾದ ಸಾಮಾಜಿಕ ಭದ್ರತೆಯಿಲ್ಲ.

ಇವರೆಲ್ಲರಿಗೂ ಸಾಮಾಜಿಕ ಭದ್ರತೆಯ ಹತ್ತಾರು ಕಾರ್ಯಕ್ರಮಗಳೆನೋ ಇವೆ. ಆದರೆ ಅವುಗಳ ವ್ಯಾಪ್ತಿ, ಅವುಗಳಿಗೆ ಅರ್ಹತೆ, ಅನುಕೂಲ ಪಡೆಯುವ ವಿಧಾನ ಮುಂತಾದ ಅನುಷ್ಠಾನ-ಸಂಬಂಧಿ ಸಮಸ್ಯೆಗಳಿವೆ. ಸಾಮಾಜಿಕ ಭದ್ರತೆಯನ್ನು ಸರ್ಕಾರವು ಚಾರಿಟಿ-ದಾನ/ದತ್ತಿ ಎಂದು ತಿಳಿದುಕೊಂಡಿದೆಯೇ ವಿನಾ ದುಡಿಮೆಗಾರರ ಹಕ್ಕು ಎಂದು ಭಾವಿಸಿಲ್ಲ. ಇದೊಂದು ಆರ್ಥಿಕ ಕಾರ್ಯಕ್ರಮ ಎಂದೂ ಭಾವಿಸಿಲ್ಲ. ಇದರ ಮೇಲಿನ ಬಂಡವಾಳ ಹೂಡಿಕೆಯು ಉತ್ಪಾದಕ ಹೂಡಿಕೆ ಎಂಬ ಭಾವನೆ ಸರ್ಕಾರ ಮಟ್ಟದಲ್ಲಿಲ್ಲ. ಸಂಘಟಿತ ವಲಯದಲ್ಲಿರುವ ಕಾರ್ಮಿಕರು ಮಾತ್ರ ಅಭಿವೃದ್ಧಿಗೆ ಕಾಣಿಕೆ ನೀಡುತ್ತಿದ್ದಾರೆ; ಅಸಂಘಟಿತ ವಲಯದವರು ಸಮಾಜ-ಸರ್ಕಾರಕ್ಕೆ ಭಾರ ಎಂಬ ಭಾವನೆ ವ್ಯಾಪಕವಾಗಿದೆ. ಆದರೆ ಅಭಿವೃದ್ಧಿಯ ಚಕ್ರ ಓಡುತ್ತಿರುವುದು ಅಸಂಘಟಿತ ವಲಯದ ದುಡಿಮೆಗಾರರಿಂದ ಎನ್ನುವ ಅರಿವು ಸರ್ಕಾರಕ್ಕಿಲ್ಲ – ಉಳ್ಳವರ ಸಮಾಜಕ್ಕೂ ಇಲ್ಲ. ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕ ಪದ್ಧತಿಯ ಹಿನ್ನೆಲೆಯಲ್ಲಿ ಇದನ್ನು ಅರ್ಥ ಮಾಡಿಕೊಳ್ಳಬೇಕು.

ನಮ್ಮ ಸಮಾಜದಲ್ಲಿ ಸಂಘಟಿತ ದುಡಿಮೆಗಾರರು ಮತ್ತು ಅಸಂಘಟಿತ ದುಡಿಮೆಗಾರರು ಎಂಬ ಎರಡು ವಲಯಗಳಿವೆ. ಸಂಘಟಿತ ವಲಯದ ಕಾರ್ಮಿಕರು ಒಂದಲ್ಲ ಒಂದು ವಿಧದ ಸಾಮಾಜಿಕ ಭದ್ರತೆಯ ಅನುಕೂಲಗಳನ್ನು ಅಷ್ಟೋಇಷ್ಟೋ ಪಡೆಯುತ್ತಿದ್ದಾರೆ. ಆದರೆ ಅಸಂಘಟಿತ ಎಂಬ ಬೃಹತ್ ವಲಯದಲ್ಲಿ ಎಲ್ಲರನ್ನು ಒಳಗೊಳ್ಳುವಂತಹ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳಿಲ್ಲ. ಕರ್ನಾಟಕದಲ್ಲಿ ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ವಿಕಲ ಚೇತನ ಪಿಂಚಣಿ ಮತ್ತು ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಪಿಂಚಣಿ ಮುಂತಾದ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಸುಮಾರು ೬೫ ಲಕ್ಷ ಜನರು ವೇತನ ಪಡೆಯುತ್ತಿದ್ದಾರೆ. ಈ ನಾಲ್ಕು ಯೋಜನೆಗಳಿಗೆ ೨೦೧೮-೧೯ರಲ್ಲಿ ನೀಡಿದ್ದ ಅನುದಾನ ರೂ. ೫೧೬೪.೨೭ ಕೋಟಿ. ಆದರೆ ೨೦೧೯-೨೦೨೦ರಲ್ಲಿ ನೀಡಿದ್ದ ಅನುದಾನ ರೂ. ೪೧೮೨.೨೫ ಕೋಟಿ(ಕರ್ನಾಟಕ ಆರ್ಥಿಕ ಸಮೀಕ್ಷೆ ೨೦೧೯-೨೦೨೦). ಇಲ್ಲಿನ ಕಡಿತ ರೂ. ೮೮೨.೦೨ ಕೋಟಿ. ಇದು ಏನನ್ನು ಸೂಚಿಸುತ್ತದೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ.

ಸಂಘಟಿತ ವಲಯದಲ್ಲಿ ಕಾರ್ಮಿಕರು ಮತ್ತು ಉದ್ಯಮಿಗಳ ವಂತಿಗೆಯ ಮೂಲಕ ನಡೆಯುವ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳಿವೆ. ಇದೇ ಮಾದರಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೂ ವಂತಿಗೆ ಆಧರಿಸಿದ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳನ್ನು ಇಂದು ಸರ್ಕಾರ ಜಾರಿಗೊಳಿಸುತ್ತಿದೆ. ಇಲ್ಲಿದೆ, ನಿಜವಾದ ಸಾಮಾಜಿಕ ಭದ್ರತೆ ಸಮಸ್ಯೆ. ಅಟಲ್ ಪಿಂಚಿಣಿ ಯೋಜನೆ ಇದಕ್ಕೊಂದು ಅಪ್ಪಟ ನಿದರ್ಶನ. ಇದು ಅಸಂಘಟಿತ ವಲಯದ ದುಡಿಮೆಗಾರರಿಗೆ ಅವರವರ ವಂತಿಗೆಯ ಆಧಾರದಲ್ಲಿ ೬೦ ವರ್ಷದ ನಂತರ ಪಿಂಚಣಿ ನೀಡಲಾಗುತ್ತದೆ. ಅಂದರೆ ದುಡಿಮೆಗಾರರ ವಂತಿಗೆಯ ಮೇಲೆ ಪಿಂಚಣಿ ನೀಡುವ  ಕಾರ್ಯಕ್ರಮ ಇದಾಗಿದೆ. ಅಸಂಘಟಿತ ವಲಯದಲ್ಲಿನ ದುಡಿಮೆಗಾರರಿಗೆ ನಿಶ್ಚಿತ ಕೂಲಿ ಇರುವುದಿಲ್ಲ. ಉದ್ಯೋಗ ಭದ್ರತೆಯಿರುವುದಿಲ್ಲ. ಈ ಕಾರ್ಯಕ್ರಮದಲ್ಲಿ ಕಾರ್ಮಿಕರು ಮಾಸಿಕವಾಗಿ ವಂತಿಗೆ ನೀಡಬೇಕು. ಒಂದು ವೇಳೆ ಕೆಲಸ ಹೋದರೆ, ಕೆಲಸದಿಂದ ತೆಗೆದು ಹಾಕಿದರೆ, ಕುಟುಂಬದಲ್ಲಿ ತೀವ್ರ ಆರೋಗ್ಯ ಸಮಸ್ಯೆಯುಂಟಾದರೆ ವಂತಿಗೆ ಕಟ್ಟುವುದು ಸಾಧ್ಯವಾಗುವುದಿಲ್ಲ. ಲಕ್ಷಾಂತರ ವಲಸೆ ಕಾರ್ಮಿಕರು ಕೋವಿಡ್ ದುರಂತದಲ್ಲಿ ಕೆಲಸ ಕಳೆದುಕೊಂಡರು. ಇವರು ವಂತಿಗೆ ಹೇಗೆ ಕಟ್ಟುವುದು? ಹೊಟ್ಟೆಗೆ ಕೂಳಿಲ್ಲದಿದ್ದಾಗ ವಂತಿಗೆ ನೀಡುವುದು ಹೇಗೆ? ಇದಕ್ಕೆ ಸಾಕ್ಷಿಯಾಗಿ ಕೋವಿಡ್ ಪೂರ್ವದಲ್ಲಿಯೇ ನಿರುದ್ಯೋಗವು ಕಳೆದ ೪೫ ವರ್ಷಗಳಲ್ಲಿಯೇ ಅತ್ಯಧಿಕ ಎಂದು ಸರ್ಕಾರದ ವರದಿಯೇ ಹೇಳಿತ್ತು. ಈಗ ಕೋವಿಡ್ ದುರಂತದಲ್ಲಿ ಇದು ಮತ್ತಷ್ಟು ಉಲ್ಬಣಗೊಂಡಿರಲು ಸಾಕು. ಇವರ ಸಂಖ್ಯೆ ೨೦-೩೦ ಕೋಟಿಯಾಗುತ್ತದೆ. ದೇಶದಲ್ಲಿನ ಒಟ್ಟು ಕಾರ್ಮಿಕರ ಅಂದಾಜು ಸಂಖ್ಯೆ ೪೫ ರಿಂದ ೫೦ ಕೋಟಿ. ಹೆರಿಗೆ ಭತ್ಯೆಯ ಅನುಕೂಲಗಳ ಬಗ್ಗೆ ಕಾರ್ಯಕ್ರಮವಿದೆ. ಆದರೆ ಮನೆವಾರ್ತೆ ದುಡಿಮೆಗಾರರನ್ನು ಸರಕಾರವು ಗುರುತಿಸೇ ಇಲ್ಲ.

ಕೋವಿಡ್ ದುರಂತದ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ದುಃಖ-ದುಮ್ಮಾನಗಳ ಬಗ್ಗೆ, ಸಾವು-ನೋವುಗಳ ಬಗ್ಗೆ ಕೇಂದ್ರದ ಬಳಿ ಮಾಹಿತಿಯೇ ಇಲ್ಲ ಎಂದು ರಾಜಾರೋಷವಾಗಿ ಹೇಳುತ್ತಿರುವಾಗ ಇನ್ನು ಇವರ ಉದ್ಯೋಗ ಭದ್ರತೆ, ವರಮಾನ ಭರವಸೆ, ಆರೋಗ್ಯ ಸೇವೆ, ಮಕ್ಕಳ ಶಿಕ್ಷಣಗಳ ಬಗ್ಗೆ ಅದು ಯೋಚಿಸುತ್ತಿಲ್ಲ ಎಂದು ಖಾರವಾಗಿ ಹೇಳಬೇಕಾಗಿದೆ.

ಸಾಮಾಜಿಕ ಭದ್ರತೆ ಕೋಡ್ಸ್

ಹಳೆಯ ಕಾರ್ಮಿಕ ಕಾನೂನುಗಳನ್ನು ಪಲ್ಲಟಗೊಳಿಸಿ ಲೇಬರ್ ಕೋಡ್ಸ್ ಜಾರಿಗೆ ತಂದಿದೆ. ಇದರಲ್ಲಿ ಒಂದು ಸಾಮಾಜಿಕ ಭದ್ರತೆ ಕೋಡ್ಸ್. ಹಳೆಯದಕ್ಕೂ ಮತ್ತು ಕೋಡ್ಸ್‌ನಲ್ಲಿನ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳಿಗೆ ಮೂಲಭೂತ ಭಿನ್ನತೆಯೇನಿಲ್ಲ. ವಾಸ್ತವವಾಗಿ ಕೋಡ್ಸ್‌ನಲ್ಲಿ ಸಾಮಾಜಿಕ ಭದ್ರತೆಯನ್ನು ಅತ್ಯಂತ ಸಡಿಲಗೊಳಿಸಲಾಗಿದೆ ಮತ್ತು ಸರ್ಕಾರಕ್ಕೆ ಅನುಕೂಲವಾಗುವಂತೆ, ದುಡಿಯುವ ವರ್ಗಕ್ಕೆ ಅನ್ಯಾಯವಾಗುವಂತಿದೆ. ನ್ಯಾಶನಲ್ ಲೇಬರ್ ಕಮಿಷನ್ ‘ಎಲ್ಲರನ್ನು ಒಳಗೊಳ್ಳುವಂತೆ’ ಸಾಮಾಜಿಕ ಭದ್ರತೆ ಕಾರ್ಯಕ್ರಮ ರೂಪಿಸಬೇಕು ಎಂದು ಶಿಫಾರಸ್ಸು ಮಾಡಿದೆ. ಆದರೆ ಕೋಡ್ಸ್‌ನಲ್ಲಿ ಇಂತಹ ಗುಣವಿಲ್ಲ. ಇಲ್ಲಿರುವ ಕಾರ್ಯಕ್ರಮಗಳಲ್ಲಿ ಬಹಳಷ್ಟು ಕಾರ್ಮಿಕರ ವಂತಿಗೆ ಪ್ರಣೀತವಾಗಿವೆ. ಹೇಳಿ-ಕೇಳಿ ಇದು ‘ಸಂಪೂರ್ಣ ಖಾಸಗೀಕರಣದ ಕಾಲ’, ‘ಕಾರ್ಪೋರೇಟ್ ವಲಯದ ವೈಭವೀಕರಣದ ಕಾಲ’. ‘ಬಂಡವಳಿಗರನ್ನು ಅನುಮಾನದಿಂದ ನೋಡಬಾರದು-ಅವಮಾನ ಮಾಡಬಾರದು’ ಎನ್ನುವ ಕಾಲ. “ವಿಶ್ವದಾದ್ಯಂತ ಹೋರಾಟದ ಮೂಲಕ ಗಳಿಸಿಕೊಂಡಿದ್ದ ‘ಎಂಟು ಗಂಟೆಗಳ ದುಡಿಮೆಯ ದಿನ’ದ ಕಾನೂನನ್ನು ಧ್ವಂಸ ಮಾಡಲಾಗುತ್ತಿದೆ. ಕಾರ್ಮಿಕ ವಿರೋಧವು ಕೇಂದ್ರದ ‘ನೀತಿ’ಯೇ ಆಗಿಬಿಟ್ಟಿದೆ. ಆದ್ದರಿಂದ ಸಾಮಾಜಿಕ ಭದ್ರತೆಯನ್ನು ಲೇಬರ್ ಕೋಡ್ಸ್, ಆರ್ಥಿಕ ಸ್ಥಿತಿಗತಿ, ದುಡಿಮೆಯ ಬಗ್ಗೆ ಸರ್ಕಾರದ ಧೋರಣೆಗಳ ಚೌಕಟ್ಟಿನಲ್ಲಿ ನೋಡಬೇಕು. ಇದನ್ನು ಪ್ರತ್ಯೇಕವಾಗಿ ನೋಡಲು ಬರುವುದಿಲ್ಲ.

ಮನರೇಗಾದಂತಹ ಕಾರ್ಯಕ್ರಮದ ಬಗ್ಗೆ ಇಂದಿನ ಸರ್ಕಾರಕ್ಕೆ ಸಹಾನುಭೂತಿಯಿಲ್ಲ. ಆದರೆ ಇಂದು ಬಡ ಕೂಲಿಕಾರರನ್ನು, ಕೋವಿಡ್ ದುರಂತದಲ್ಲಿನ ವಲಸೆ ಕಾರ್ಮಿಕರನ್ನು ಸಂರಕ್ಷಿಸಿದ್ದರೆ ಇದು ಮನರೇಗಾ ಕಾರ್ಯಕ್ರಮ. ಈ ಬಗೆಯ ಕಾರ್ಯಕ್ರಮವನ್ನು ನಗರ ಪ್ರದೇಶಗಳಲ್ಲಿಯೂ ಚಾಲೂ ಮಾಡುವಂತೆ ಅನೇಕ ಅಧ್ಯಯನಗಳು ಕಳೆದ ನಾಲ್ಕಾರು ವರ್ಷಗಳಿಂದ ಸಲಹೆ ಮಾಡುತ್ತಿವೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ೨೦೧೮-೧೯ರಲ್ಲಿನ ಅನುದಾನ ರೂ. ೬೧,೮೧೫ ಕೋಟಿಯಾದರೆ ೨೦೧೯-೨೦೨೦ರಲ್ಲಿನ ಬಜೆಟ್ಟಿನಲ್ಲಿ ನೀಡಿದ್ದು ಕೇವಲ ರೂ.೬೦,೦೦೦ ಕೋಟಿ. ಪರಿಷ್ಕೃತ ಬಜೆಟ್ ಅನುದಾನ ರೂ. ೭೧,೦೦೧ ಕೋಟಿ. ಆದರೆ ೨೦೨೦-೨೧ರಲ್ಲಿ ನೀಡಿರುವ ಅನುದಾನ ಕೇವಲ ರೂ. ೬೧,೫೦೦ ಕೋಟಿ(ಕೋವಿಡ್ ದುರಂತದಲ್ಲಿನ ವಿಶೇಷ ಪ್ಯಾಕೇಜಿನಲ್ಲಿ ಇದಕ್ಕೆ ಒಂದಷ್ಟು ಅನುದಾನ ಹೆಚ್ಚು ಬಿಡುಗಡೆ ಮಾಡಲಾಗಿದೆ ಎಂಬುದು ಬೇರೆ). ಸಾಮಾಜಿಕ ಭದ್ರತೆಯ ಬಗ್ಗೆ, ಬೆವರು, ಕಣ್ಣೀರು, ರಕ್ತ ಹರಿಸಿ ಹಗಲು-ರಾತ್ರಿಯೆನ್ನದೆ ದುಡಿಯುವ ವರ್ಗದ ಬಗ್ಗೆ ಸರ್ಕಾರಕ್ಕೆ ಎಷ್ಟು ಕಾಳಜಿಯಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇಂತಹ ದುಡಿಮೆಯ ನೀತಿಯ ಹಿನ್ನೆಲೆಯಲ್ಲಿ ಜಿಡಿಪಿಯು (ಕೋವಿಡ್ ಪೂರ್ವವನ್ನು ಗಮನದಲ್ಲಿಟ್ಟುಕೊಂಡು)ಕುಸಿಯದೆ ಇರಲು ಹೇಗೆ ಸಾಧ್ಯ? ಕೇಂದ್ರವು ಬಂಡವಳಿಗರ ಬಗ್ಗೆ, ಉದ್ದಿಮೆಗಾರರ ಬಗ್ಗೆ, ಕಾರ್ಪೋರೇಟ್ ವಲಯದ ಬಗ್ಗೆ ಕಾಳಜಿ ವಹಿಸಿದಷ್ಟು, ಮಾತನಾಡಿದಷ್ಟು ದುಡಿಯುವ ವರ್ಗದ ಬಗ್ಗೆ, ಕೂಲಿಕಾರರ ಬಗ್ಗೆ, ಬಡವರ ಬಗ್ಗೆ, ಉದ್ಯೋಗ ಭದ್ರತೆಯ ಬಗ್ಗೆ, ಕನಿಷ್ಟ ವರಮಾನ ಭರವಸೆ ಬಗ್ಗೆ ರವಷ್ಟೂ ಮಾತನಾಡುತ್ತಿಲ್ಲ. ದುಡಿಮೆಯನ್ನು ಅಸಹ್ಯ, ಮೈಲಿಗೆ ಎಂದು ಭಾವಿಸುವ ಪುರೋಹಿತಶಾಹಿ ಆಡಳಿತದಿಂದ ಸಾಮಾಜಿಕ ಭದ್ರತೆಯನ್ನು ಬಯಸುವುದು ಸಾಧ್ಯವಿಲ್ಲ.

 

 

 

 

 

 

 

Donate Janashakthi Media

Leave a Reply

Your email address will not be published. Required fields are marked *