ಸಾಮಾಜಿಕ ಅಸ್ಪೃಶ್ಯತೆಗಿಂತಲೂ ಧಾರ್ಮಿಕ ಅಸ್ಪೃಶ್ಯತೆ ಬಹುದೊಡ್ಡ ಅಪಾಯಕಾರಿ

ಎನ್ ಚಿನ್ನಸ್ವಾಮಿ ಸೋಸಲೆ

ಅಂದು ನನ್ನ ಜನರಿಗೆ ಅಂಧಕಾರದ ಸಾಮಾಜಿಕ ಹಿನ್ನೆಲೆಯ ಅಸ್ಪೃಶ್ಯತೆಯ ಬಿಡಿಸಲಾಗದ ಬಹುದೊಡ್ಡ ಸಂಕೋಲೆ…. ಇಂದು… ಒಂದಷ್ಟು ಜ್ಞಾನದ ನಡುವೆ ಧಾರ್ಮಿಕ ಅಂಧಕಾರದಿಂದ ಎಂದೆಂದಿಗೂ ಬಿಡಿಸಲಾರದ ಅಸ್ಪೃಶ್ಯತೆ.

ಸಾಮಾಜಿಕ ಹಿನ್ನೆಲೆ ಅಸ್ಪೃಶ್ಯತೆಯನ್ನು ಸಂವಿಧಾನದ ಮೂಲಕ ಕಾನೂನಾತ್ಮಕವಾಗಿ ಒಂದಷ್ಟು ಬಿಡಿಸಬಹುದು. ಇದಕ್ಕೆ ಇಂದಿನ ಸಮಕಾಲ ಸಂದರ್ಭವೇ ಒಂದಷ್ಟು ಸಾಕ್ಷಿಯಾಗಿದೆ. ಆದರೆ ಮನಸ್ಸಿನಲ್ಲಿರುವ ಧಾರ್ಮಿಕ ಅಸ್ಪೃಶ್ಯತೆಯನ್ನು ಮಾತ್ರ ಎಂದೆಂದಿಗೂ ಬಿಡಿಸಲಾಗುತ್ತಿಲ್ಲ. ಅಂದಕಾರದಿಂದ ಇದು ಸಂವಿಧಾನವನ್ನು ಮೀರಿ ಗಟ್ಟಿಯಾಗುತ್ತಲೇ ಇದೆ. ಈ ಬೆಳವಣಿಗೆ ಸಾಮಾಜಿಕ ಅಸ್ಪೃಶ್ಯಕಿಂತಲೂ ತುಂಬಾ ಅಪಾಯಕಾರಿ. ಸಾಮಾಜಿಕ ಅಸ್ಪೃಶ್ಯತೆ ಎಂಬುದು ಸ್ಪೃಶ್ಯರ ಮನೆ ಹಾಗೂ ಮನದಲ್ಲಿ ಉದುಗಿದ್ದರೆ –   ಧಾರ್ಮಿಕ ಅಸ್ಪೃಶ್ಯತೆ ಎಂಬುದು ದಲಿತರ ಸ್ಪೃಶ್ಯರ ನಿರ್ದೇಶನದಂತೆ ದಲಿತರ ಮನ ಹಾಗೂ ಮನೆಯಲ್ಲಿ ಶಾಶ್ವತವಾಗಿ ಮನೆ ಮಾಡಿದೆ. ಧಾರ್ಮಿಕ ಅಸ್ಪೃಶ್ಯತೆಯ ಪಾಲಕರು ಹಾಗೂ ರಕ್ಷಕರು ಸ್ಪೃಶ್ಯರ ನಿರ್ದೇಶನದಂತೆ ತಲೆಬಾಗಿ ಸಂರಕ್ಷಿಸುತ್ತಿರುವವರು ಮಾತ್ರ ಅಸ್ಪೃಶ್ಯತೆ ಆಗಿರುವುದು ದುರಂತ. ಎರಡು ಆ ಸಂವಿಧಾನಾತ್ಮಕ  ಅನಿಷ್ಟಗಳ ನಡುವೆ ನಮ್ಮ ಭಾರತ ಸಿಲುಕಿ ನಲುಗುತ್ತಿದೆ.

ನನ್ನ ಜನ ಶ್ರಮ ಜೀವಿಗಳು – ಯಾರಿಗೂ ಎಂದೋ ಅನ್ಯಾಯ ಎಸಗದೆ ದುಡಿದು ತಮ್ಮ ಅನ್ನವನ್ನು ತಿಂದು ಬಲಿಷ್ಠವಾಗಿ ರಾಷ್ಟ್ರ ಕಟ್ಟಿದವರು. ಇಂದಿಗೂ ಕಟ್ಟುತ್ತಿರುವವರು

ಆದರೆ

ಏನು ಮಾಡುವುದು…???

ನನ್ನ ಜನ ರಾಜ ಪ್ರಭುತ್ವಗಳ ಕಾಲದಲ್ಲಿ ರಾಜಪ್ರಭುತ್ವವನ್ನೇ ನಿಯಂತ್ರಣ ಮಾಡುತ್ತಿದ್ದ, ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆಯನ್ನು ಕಟ್ಟು – ನಿಟ್ಟಾಗಿ ಪಾಲಿಸುತ್ತಿದ್ದವರ ಕೊಳಕು ಮನಸ್ಸಿನ ಅಸಾಮಾಜಿಕ ಹಿನ್ನೆಲೆಯಿಂದ ಅಸ್ಪೃಶ್ಯರಾಗಿದ್ದರು… ಅದಕ್ಕೆ ಅಜ್ಞಾನ – ಅಂಧಕಾರದ ಕಾರಣವಿತ್ತು. ಇವರಿಗೆ ಶಿಕ್ಷಣ – ಸಂಘಟನೆ –  ಹೋರಾಟದ ಭಾವನೆ ಇರಲಿಲ್ಲ. ಇವು ಇಲ್ಲದ ಕಾರಣಕ್ಕಾಗಿ ಅಂಬೇಡ್ಕರ್ ಅವರ ಪೂರ್ವದಲ್ಲಿಯೇ ಸಮ ಸಮಾಜವನ್ನು ನಿರ್ಮಾಣ ಮಾಡಲು ಹಂಬಲಿಸಿದ  ಬುದ್ಧ ಬಸವರು ಸಹ ಇವರ ಪಾಲಿಗೆ ದೊರಕಿರಲಿಲ್ಲ. ಈ ಕಾರಣದಿಂದಾಗಿ ಈ ಅಮಾನವೀಯ ಸಂದರ್ಭವನ್ನು ಮಾತು ಬಂದರೂ ಮೂಕನಾಗಿದ್ದ ಮೂಗನ ಸೇಡಿನ ಹಾಗೆ ಇಂದು ನಾವು ಇತಿಹಾಸದ ಪುಟಗಳನ್ನು ತಿರುವಿ ಹಾಕಿ ಸಹಿಸಿಕೊಳ್ಳಬಹುದು.

ಆದರೆ

ರಾಜ ಪ್ರಭುತ್ವದ ಕಾಲದಿಂದಲೂ ಇಂದಿನ ಪ್ರಜಾಪ್ರಭುತ್ವ ಭಾರತದಲ್ಲಿ ಸಾಮಾಜಿಕ ಅಸ್ಪೃಶ್ಯತೆ ಯನ್ನು ಕಾಲಕಾಲಕ್ಕೂ ಗಟ್ಟಿಗೊಳಿಸಿಕೊಳ್ಳಲು ಧಾರ್ಮಿಕ ಅಂಧಕಾರದ ಮೌಢ್ಯವನ್ನು ನನ್ನ ಜನರಲ್ಲಿ ಉದುಗಿಸುತ್ತಿರುವುದು ಬಹುದೊಡ್ಡ ದುರಂತ. ಅಂದು ಮಾತು ಬಂದರೂ ಮೂಕರಾಗಿದ್ದರು.

ಅಂದರೆ ಅಂದು ನಾವು ಶ್ರೇಷ್ಠರೆಂದು ಸ್ವಘೋಷಿಸಿಕೊಂಡವರ ಧಾರ್ಮಿಕ ಹಾಗೂ ಸಾಮಾಜಿಕ ಸ್ವಾರ್ಥ ಸಾಧನೆಗಾಗಿ ಗಟ್ಟಿಯಾಗಿ ಎಳೆದ ಅಸಮಾನತೆ ಎಂಬ  ಸಂಕೋಲೆಗಳು ಬಹುದೊಡ್ಡ ಶ್ರಮಿಕ ವರ್ಗವನ್ನು ಶಾಶ್ವತವಾಗಿ ಮೂಕರನ್ನಾಗಿಸಿದ್ದವು. ಇಂದು ಬೃಹತ್ ಲಿಖಿತ ಸಂವಿಧಾನ ಎಂಬ ಮಾತು ಕಲಿಸುವ, 2000 ವರ್ಷಗಳಿಂದ ಸಾಮಾಜಿಕ ಹಾಗೂ ಧಾರ್ಮಿಕ ಅಜ್ಞಾನದ ಸಂಕೋಲೆಯಿಂದ ಶಾಶ್ವತವಾಗಿ ಬಂದಿತರಾಗಿದ್ದವರನ್ನು ಬಿಡುಗಡೆಗೊಳಿಸುವ ಸಾಧನ ನಮ್ಮ ಮುಂದೆ ಇದ್ದರೂ ಸಹ ಧಾರ್ಮಿಕ ಸಂಕೋಲೆಯಲ್ಲಿ ಸಿಲುಕಿ ಮಾತು ಕಲಿತಿದ್ದರು ಅಥವಾ ಪ್ರಜಾಪ್ರಭುತ್ವ ಮಾತನ್ನು ಕಲಿಸಿದ್ದರೂ ಸಹ  ಮೂಕರಲ್ಲಿ – ಮೂಕರಾಗಿ ಹೊಸ ಬದುಕನ್ನು ಕಾಣಬೇಕಾದ ನನ್ನ ಜನ ಶತಶತಮಾನಗಳಷ್ಟು ಹಿಂದಕ್ಕೆ ಹೋಗುತ್ತಿರುವುದು ನಮ್ಮ ನಡುವಿನ ಬಹುದೊಡ್ಡ ಸಾಂಸ್ಕೃತಿಕ ದುರಂತ. ಇದು ಅಸಂವಿಧಾನಾತ್ಮಕ ನಡೆ.

ಈ ಧಾರ್ಮಿಕ ಹಿನ್ನೆಲೆಯ ಆಚರಣೆಯಲ್ಲಿ ಬಹುದೊಡ್ಡ ಜನ ವರ್ಗದ  ಮೂಕತನ – ಈ ಹಿನ್ನಲೆಯ ಅಸ್ಪೃಶ್ಯತೆ…. ಸ್ವಾತಂತ್ರ್ಯ ಪೂರ್ವದ ಅಸ್ಪೃಶ್ಯತೆಗಿಂತಲೂ ಅಪಾಯಕಾರಿಯಾದದ್ದು ಎಂಬುವುದನ್ನು ಗಂಭೀರವಾಗಿ ಅರಿಯಬೇಕಾಗಿದೆ. ಅಂದು ಅದು ತಲೆತಗ್ಗಿಸಿ – ದೇಹತಗ್ಗಿಸಿ – ಪ್ರತಿಭಟಿಸದೆ – ಚಾಚು ತಪ್ಪದೇ ಪಾಲಿಸಬೇಕಾದ ಅಸ್ಪೃಶ್ಯತೆ ಆಗಿತ್ತು.

ಇದಕ್ಕೆ ಒಂದು ಕರಾಳ ಚರಿತ್ರೆ ಇದೆ. ಆ ಕರಾಳ ಚರಿತ್ರೆಯ ಹಿನ್ನೆಲೆಯಲ್ಲಿ ಇದನ್ನು ಒಂದಷ್ಟು ಸಹಿಸಿಕೊಳ್ಳಲು ಸಾಧ್ಯವಾಗದಿದ್ದರೂ – ನನ್ನ ದೇಶ, ನನ್ನ ನಾಡು, ನನ್ನ ನುಡಿ, ನನ್ನ ಹಾಗೂ ನನ್ನ ಪೂರ್ವಿಕರ ನೆಲ ಎನ್ನುವ ಸ್ವಾಭಿಮಾನದ ಸಂಕೇತದಿಂದಲಾದರೂ ಈ ರಾಷ್ಟ್ರದ ಮೂಲ ನಿವಾಸಿಗಳು ಸಹಿಸಿಕೊಂಡಿದ್ದರು. ಇಂದಿಗೂ ಈ ಘೋರ – ಅಮಾನವೀಯ – ಆಸಂವಿಧಾನಾತ್ಮಕ ಪದ್ಧತಿಯನ್ನು ಸಹಿಸಿಕೊಳ್ಳುತ್ತಿರುವುದು ಈ ಅರ್ಥದಲ್ಲಿಯೇ ಎಂಬುದನ್ನು ಮರೆಯಬಾರದು. ಆದರೆ ಇಂತಹ ಭಾವನಾತ್ಮಕವಾದ ಅಂಶಗಳು ಹೊರಚೆಲ್ಲಿ ಸಂವಿಧಾನಾತ್ಮಕವಾಗಿ ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಬಹುದೊಡ್ಡ ಶಕ್ತಿಯ ಹಿನ್ನೆಲೆಯಲ್ಲಿ  ಪ್ರತಿಭಟನೆಗೆ ಮುಂದಾದರೆ ಈ ಭಾರತ ಭೂಮಿಯಲ್ಲಿ ಸಾಂಸ್ಕೃತಿಕ ಹಿನ್ನೆಲೆಯ ನೆಲ ಮೂಲ ಸಂಸ್ಕೃತಿಯ ಬೆವರಿನ ಜನಾಂಗ ವರ್ಗ ಮುಂಚೂಣಿಗೆ ಬರುವುದರಲ್ಲಿ ಎರಡು ಮಾತಿಲ್ಲ, ಇದಾಗಬೇಕಾಗಿದೆ. ಇದಕ್ಕಾಗಿ ಮೊನ್ನೆ ಡಿಸೆಂಬರ್ 6ನೇ ತಾರೀಕು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66ನೇ ಪರಿದಿಬ್ಬಣ ದಿನದಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ದಲಿತ ಸಾಂಸ್ಕೃತಿಕ ಪ್ರತಿರೋಧ ಬೃಹತ್ ಕಾರ್ಯಕ್ರಮದ ಉದ್ದೇಶವೂ  ಆಗಿತ್ತು.

ಆದರೆ

ಶತಶತಮಾನಗಳಿಂದ ಮೂಕರಾಗಿದ್ದವನಿಗೆ ಮಾತು ಬರಿಸಿದ ಸಂದರ್ಭದಲ್ಲಿ – ತಲೆ ಎತ್ತಿ – ಎದೆ ಉಬ್ಬಿಸಿ  ಮಾತಾಡಬೇಕಾದ ಸಂದರ್ಭದಲ್ಲಿ ಮಾತು ಬಂದರೂ ಧಾರ್ಮಿಕ ಹಿನ್ನೆಲೆಯಿಂದ ಮೂಕರಾಗಿ ಜೀವಿಸುತ್ತಿರುವ ನನ್ನ ಜನರ ಅಜ್ಞಾನದ ಅಂಧಕಾರದ ಧಾರ್ಮಿಕ ಹಿನ್ನೆಲೆಯ  ಮನದ ಅಸ್ಪೃಶ್ಯತೆ ಹೆಚ್ಚು ಅಪಾಯಕಾರಿ ಯಾದದ್ದು. ಈ ಅಮಾನವೀಯ ಅಸ್ಪೃಶ್ಯತೆ ಇರುವುದು ಮನುಷ್ಯನ ದೇಹದಲಲ್ಲ. ಬದಲಿಗೆ ಪಾರಂಪರಿಕವಾಗಿ ವಂಶದಿಂದ ವಂಶಕ್ಕೆ ಬಳುವಳಿಯಾಗಿ ಬಂದಿರುವ ಅವರ ಮೆದುಳಿನಲ್ಲಿ ಎಂಬುದು ವಿಶೇಷ. ಇದು ಅತಿಹೆಚ್ಚು ಅಪಾಯಕಾರಿ ಆದದ್ದು. ಇದನ್ನು ಮಾತ್ರ ಎಂದೆಂದಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಅಸ್ಪೃಶ್ಯತಿಯಲ್ಲಿ ನಾನು ಮೇಲೆ ಹೇಳಿದಂತೆ ನಾನು – ನನ್ನದು – ನಾವು ಶ್ರೇಷ್ಠ ನೀನು ಕನಿಷ್ಠ – ನಾನು ಸ್ಫೃಶ್ಯ ನೀನು ಅಸ್ಪೃಶ್ಯ – ನಾನು ಊರಿನವ ನೀನು ಕೇರಿಯವ – ನನ್ನ ದೇವರು ಶ್ರೇಷ್ಠ ನಿನ್ನ ದೇವರು ಕನಿಷ್ಠ – ನೀನು ದೇವರಿಗಾಗಿ ಬೆತ್ತಲೆ ಸೇವೆ ದೇವದಾಸಿ ಗೆಜ್ಜೆ ಕಟ್ಟುವ ಪದ್ಧತಿಗಳನ್ನು ಮಾಡಬೇಕು ನಾನು ಇದೆಲ್ಲವನ್ನು ಅನುಭವಿಸ ಬೇಕು ಎಂಬ ಧಾರ್ಮಿಕ ಬಹುದೊಡ್ಡ ಅಂತರದ ಅಸ್ಪೃಶ್ಯತೆ   ಅವರದು –  ಅವರಿಗಾಗಿ – ಅವರಿಗೋಸ್ಕರ ಎನ್ನುವ ಉಳ್ಳವರ ಸ್ವಹಿತಾಶಕ್ತಿಯ ಪ್ರಬಲ ಅಂಶಗಳೇ ಇವೆ. ಇವರ ಅಜ್ಞಾನದ ಪ್ರತಿಷ್ಠೆಯ ಮುಂದೆ ಬಹುದೊಡ್ಡ ಶ್ರಮಿಕ ವರ್ಗ ತಮ್ಮ ಶ್ರಮದ ಮೂಲಕ ಭಾರತವನ್ನು ಕಟ್ಟುವ ಕಾರ್ಯಕ್ಕೆ ಕೈಜೋಡಿಸಿ ಜ್ಞಾನವಂತರಾಗಿ – ಭಾರತದ ಮಕ್ಕಳಾದರೂ ಸಹ ಸಾಮಾಜಿಕ ಹಾಗೂ ಧಾರ್ಮಿಕ ಅಸ್ಪೃಶ್ಯತೆಯ ಸಂಕೋಲಿಯಿಂದಾಗಿ ಭಾರತಮಾತೆಯ ಒಡಲಾಳದ ಮಕ್ಕಳಾದರೂ, ಆರ್ಯರ ಆಗಮನ ನಂತರ ಮಲತಾಯಿಯ ಮಕ್ಕಳಾಗಿ – ಆ ಮಲತಾಯಿಯ ಅನೇಕ ಸಾಮಾಜಿಕ ಹಾಗೂ ಧಾರ್ಮಿಕ  ಸಂಕೋಲೆಗಳಿಗೆ ಬಲಿಯಾಗಿ ಅನಾಥರನ್ನಾಗಿಸಲಾಯಿತು. ನನ್ನವ್ವನ ಸ್ಥಾನದಲ್ಲಿದ್ದ ಬೌದ್ಧ ಧರ್ಮದಲ್ಲಿ ನಾನು ಸಮೃದ್ಧವಾಗಿ ಸುಖವಾಗಿ ತಲೆಯೆತ್ತಿ ಜೀವಿಸುತ್ತಿದ್ದೆ. ಅದನ್ನು ಸಾಯಿಸಿ ನಂತರ ಭಾರತಕ್ಕೆ ಮಲತಾಯಿಯಾಗಿ ಬಂದ ವೈದಿಕ ಧರ್ಮ ನಮ್ಮನ್ನು ಸಾಲುಸಾಲು ಸಾಂಸ್ಕೃತಿಕ ಸಂಕೋಲೆಗಳಲ್ಲಿ ಸಿಲುಕಿಸಿ  ಅಸ್ಪೃಶ್ಯನಾಗಿಸಿತು. ವಿಜಾರ್ಥದಲ್ಲಿ ಇಂದು ನನ್ನವ್ವನನ್ನು ಸಾಯಿಸಿ ಇನ್ನು ಮುಂದೆ ಇವರೇ ನಿಮ್ಮವ್ವ ಅಂತ ಹೇಳಿದವರು ಕಣ್ಮುಂದೆ ಇದ್ದರೂ ಅದನ್ನು ಪ್ರಬಲವಾಗಿ ಪ್ರತಿಭಟಿಸದೆ ಒಪ್ಪಿಕೊಂಡು ತಾಯಿ ಇಲ್ಲದ ತಬ್ಬಲಿಗಳಾಗಿ ಜೀವಿಸುತ್ತಿರುವುದು ನಮ್ಮ ನಡುವಿನ ಬಹುದೊಡ್ಡ ವಾಸ್ತವದ ದುರಂತ. ಈ ಭಾರತದ ನೆಲದಲ್ಲಿ ತನ್ನ ತಾಯಿಯ ಕೊಲೆಯನ್ನು ಮೊದಲು ಪ್ರಬಲವಾಗಿ ಪ್ರತಿಭಟಿಸಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಕೊನೆಗೂ ತಮ್ಮ ಪ್ರತಿಭಟನೆ ಮೂಲಕ ಹುಡುಕಾಟ ನಡೆಸಿ ತನ್ನವ್ವಗಳನ್ನು ಕಂಡುಕೊಂಡು ಅವ್ವನ ಮಡಿಲ ಸೇರಿದವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಅವ್ವನವರೇ ನಮ್ಮೆಲ್ಲರ ಅವ್ವಳೂ ಆಗಿರುವುದರಿಂದ  ಆದರಿಂದ ನಾವು ಎಂದು ನಮ್ಮ ಪ್ರೀತಿಯ – ಮಮತೆಯ – ಹೃದಯಅಂತರಾಳದ ಸಮಸಂಸ್ಕೃತಿ ಪ್ರತಿಪಾದನೆಯ ನಮ್ಮವ್ವಳ ಮಡಿಲ ಸೇರುವುದು…?

ಸಾಂಸ್ಕೃತಿಕವಾಗಿ ತಬ್ಬಲಿಗಳಾಗಿ ಮಾಡಿದ್ದು ಸಾಮಾಜಿಕ ಹಿನ್ನೆಲೆಯ ಅಸ್ಪೃಶ್ಯತೆಯ ಪಾಲು ಒಂದಷ್ಟು ಅಲ್ಪವಾದರೆ – ಧಾರ್ಮಿಕ ಹಿನ್ನೆಲೆಯ ಪಾಲು ಬಹುದೊಡ್ಡದು. ಇದಕ್ಕೆ ನಿದರ್ಶನವೆಂದರೆ ಸಾಮಾಜಿಕವಾಗಿ ನಾವೆಷ್ಟೇ ಅಭಿವೃದ್ಧಿ ಹೊಂದಿದವನಾಗಿದ್ದರೂ ಸಹ ಧಾರ್ಮಿಕವಾಗಿ ಇನ್ನೂ ನಾವು ಪಾರಂಪರಿಕ – ಪ್ರಾಚೀನ ಕಾಲದಲ್ಲಿ ಇರುವುದೇ – ಇರುತ್ತಿರುವುದೇ  ಸಾಕ್ಷಿಯಾಗಿದೆ.

ಏಕೆಂದರೆ

ಭಾರತ ದೇಶದಲ್ಲಿ ಶತಶತಮಾನಗಳಿಂದ ಸಾಮಾಜಿಕ ಸಂಕೋಲೆಗಳಿಂದ ಅಸ್ಪೃಶ್ಯರಾಗಿದ್ದ ಬಹುದೊಡ್ಡ ಶ್ರಮಿಕ ಜನ ವರ್ಗ ಬಾಬಾ ಸಾಹೇಬರು ನೀಡಿದ ಸಂವಿಧಾನದ ಆಧಾರದ ಮೇಲೆ ಶಿಕ್ಷಣ ಪಡೆದು, ಒಂದಷ್ಟು ಆರ್ಥಿಕವಾಗಿ – ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿರುವುದಕ್ಕೆ – ಅಭಿವೃದ್ಧಿ ಹೊಂದುತ್ತಿರುವುದಕ್ಕೆ ನಮ್ಮ ಕಣ್ಮುಂದೆ ಅನೇಕ ನಿದರ್ಶನಗಳಿವೆ.

ಆದರೆ

ಧಾರ್ಮಿಕ ಅಂಧಕಾರದಲ್ಲಿ ಮಾತ್ರ ಇನ್ನೂ ಪ್ರಾಚೀನ ಕಾಲದಲ್ಲಿನ  ಪಾರಂಪರಿಕ ಅನಿಕಿತ ಸಂವಿಧಾನವೇ ತನ್ನ ಪ್ರಭಾವವನ್ನು ಬೀರುತ್ತಿರುವುದಕ್ಕೆ ಜ್ವಲಂತ ನಿದರ್ಶನಗಳಿವೆ… ಈ ಹಂತದಲ್ಲಿಯೂ ಇನ್ನೂ ಸಹ ಅಂಬೇಡ್ಕರ್ ಅವರ ಲಿಖಿತ ಸಂವಿಧಾನ ಯಾವ ಪ್ರಭಾವವನ್ನು ಬೀರಲು ಸಾಧ್ಯವಾಗುತ್ತಿಲ್ಲ. ಈ ಧಾರ್ಮಿಕ ಸಂವಿಧಾನ ಇರುವುದು ಜನರ ಮನಸ್ಸಿನಲ್ಲಿ. 2000 ವರ್ಷಗಳಿಂದ ತುಂಬಿರುವ ಈ ಅನಿಷ್ಟ ಧಾರ್ಮಿಕ ಸಂವಿಧಾನವನ್ನು 75 ವರ್ಷದ ಬೃಹತ್ ಸಮ ಸಂಸ್ಕೃತಿಯ ಲಿಖಿತ ಸಂವಿಧಾನ ಸೋಲುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಎಷ್ಟೋ ಕಠಿಣ ಸಂದರ್ಭದಲ್ಲಿ ಇದು ರಾಜಿ ಮಾಡಿಕೊಂಡಿರುವುದಕ್ಕೂ ನಿದರ್ಶನಗಳಿವೆ.

ಧಾರ್ಮಿಕ ಅಂಧಕಾರವೇ ಸಾಮಾಜಿಕ ಅಸ್ಪೃಶ್ಯತೆಗೆ ಮೂಲ ಕಾರಣ ಎಂಬುದನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ಪಷ್ಟವಾಗಿ ಹೇಳಿದರು. ಆದರೆ  ದಲಿತರ ಅಥವಾ ಅಸ್ಪೃಶ್ಯರ ಧಾರ್ಮಿಕ ಅಂಧಕಾರದಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರು ಬಿಡಿಸಲಾರದ ಸಂಕೋಲೆಯಲ್ಲಿ ಸಿಲುಕಿಕೊಂಡಿರುವುದರಿಂದ, ಇಂತಹ ಅಜ್ಞಾನದ ಸಂಕೋಲೆಯಲ್ಲಿ  ಸಿಲುಕಿಸಿರುವ ಅಪ್ರಗ್ನವಾದ ಜೀವನದಲ್ಲಿಯೇ ಪ್ರಬುದ್ಧ ಕನಸಿನ ಸಂವಿಧಾನವನ್ನು ಅಪ್ಪಿಕೊಳ್ಳಲು – ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥವರ ಪಾಲಿಗೆ ಭಾರತದ ಸಂವಿಧಾನ ಕುರುಡ ಆನೆಯನ್ನು ಮುಟ್ಟಿ ತನ್ನ ಕಲ್ಪನೆಗೆ ಸಂಬಂಧಿಸಿದಂತೆ ಆನೆಯ ಭಾಗಗಳನ್ನು ವರ್ಣಿಸಿದ ಮಾದರಿಯೇ ಆಗಿದೆ. ಏಕೆಂದರೆ ಭಾರತ ಸಂವಿಧಾನ ಅಜ್ಞಾನದ ಸಂವಿಧಾನವಲ್ಲ ಇದು ಪ್ರಬುದ್ಧ ಭಾರತದ ಮಾದರಿಯ ಸಂವಿಧಾನ.

ಭಾರತ ದೇಶದಲ್ಲಿ ಸಾಮಾಜಿಕ ಹಿನ್ನೆಲೆಯ ಅಸ್ಪೃಶ್ಯತೆಯಿಂದ ಭಾರತದ ಮಣ್ಣಿನ ಮೂಲ ನಿವಾಸಿಗಳ ಮೇಲಾದ ಹಾಗೂ ನಿರಂತರವಾಗಿ ಆಗುತ್ತಿರುವ  ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಸಹಿಸಿಕೊಂಡರು… ಇಂತಹ ಸಹಿಸಿಕೊಳ್ಳುವಿಕೆಗೆ ನನ್ನ ದೇಶ – ನನ್ನ ರಾಷ್ಟ್ರ ಎಂಬುವ ಬಹುದೊಡ್ಡ ವಿಶಾಲ ಮನಸ್ಸಿನ  ವಾಸ್ತವತೆಯ ಭಾವನಾತ್ಮಕ ಅರಿವಿತ್ತು. ಇವರೇ, ಈ ನೆಲದ ನಿಜವಾದ ರಾಷ್ಟ್ರ ಪ್ರೇಮಿಗಳು ಹಾಗೂ ರಾಷ್ಟ್ರೀಯವಾದಿಗಳು ಆದರೆ, ಧಾರ್ಮಿಕ ಅಂಧಕಾರದಲ್ಲಿ ಅಸ್ಪೃಶ್ಯತೆಯನು ಜಾರಿಗೆ ತಂದು ಅದಕ್ಕೂ ಯಾವ ಕ್ಷಣದಲ್ಲಿಯೂ ಕಿಂಚಿತ್ತು ಲೋಪವಾಗದಂತೆ ಸಂರಕ್ಷಣೆ ಮಾಡಿಕೊಳ್ಳುತ್ತಿರುವ – ಕಾಲಕಾಲಕ್ಕೂ ವಿವಿಧ ವ್ಯಾಘ್ರರೂಪಗಳನ್ನು ಪಡೆದು ತನ್ನ ಕದಂಬ ಬಾಹುಗಳ ಮೂಲಕ   ತನ್ನ ಅನೀತಿ – ಅತತ್ವ – ಹಾಗೂ
ಆಸಂವಿಧಾನಾತ್ಮಕ ಸಿದ್ಧಾಂತವನ್ನು ಯಥಾವತ್ತಾಗಿ ಪಾಲಿಸುವಂತೆ ಮಾಡುತ್ತಿರುವವರು ಇಂದು ಸುಸಂಸ್ಕೃತರು – ಸಂಸ್ಕೃತಿಂತರೂ – ಪಾರಂಪರಿಕ ಶಿಕ್ಷಣವಂತರು ಮುಂದುವರೆದು ರಾಷ್ಟ್ರೀಯವಾದಿಗಳು ಎಂದು ಕರೆಸಿಕೊಳ್ಳುತ್ತಿರುವುದು ನಮ್ಮ ನಡುವಿನ ಬಹುದೊಡ್ಡ ಸಾಂಸ್ಕೃತಿಕ ಐತಿಹಾಸಿಕ ದುರಂತ.

ನಿಜವಾದ ರಾಷ್ಟ್ರೀಯವಾದಿಗಳು – ಸುಸಂಸ್ಕೃತರು  ದುಡಿದು ತಿನ್ನುವವರೇ ಹೊರತು, ದುಡಿಸಿಕೊಂಡು ತಿನ್ನುವವರಲ್ಲ ಎಂಬುದನ್ನು ಮನಗಾಡಬೇಕಾಗಿದೆ. ಮುಂದುವರೆದು ಹೇಳುವುದಾದರೆ ದೇವಾಲಯ ಕಟ್ಟಿದವನು ಸಬರ್ಟ್ರನ್ ಜನವರ್ಗ – ತಳ ಸಮುದಾಯ – ಅಂತ್ಯಜ ಎನಿಸಿಕೊಂಡರೆ – ದೇವಾಲಯನು ಕಟ್ಟಿಸಿಕೊಂಡು ಆ ಗರ್ಭಗುಡಿ ಒಳಗೆ ಸ್ಥಾನ ಪಡೆದವರು – ಸಾಮಾಜಿಕ ಹಾಗೂ ಧಾರ್ಮಿಕ ಅಸ್ಪೃಶ್ಯತೆಯನ್ನು ಜಾರಿಗೆ ತಂದವರು ಇಂದು ತಮಗೆ ತಾವೇ ರಾಷ್ಟ್ರೀಯತೆಯನ್ನು ಪ್ರತಿಪಾದನೆ ಮಾಡುವವರು ಎನಿಸಿಕೊಂಡರು. ಇಲ್ಲಿ ಕಾಡುವ ಪ್ರಶ್ನೆ ಎಂದರೆ ರಾಷ್ಟ್ರೀಯತೆ ಎಂದರೆ ಏನು ಎಂಬುದು. ಹಾಗೂ ರಾಷ್ಟ್ರೀಯವಾದಿ ಎಂದರೆ ಯಾರು ಎಂಬುದು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಜ್ಞಾನದ ಮೂಲಕ ಮೈಗೂಡಿಸಿಕೊಂಡಿರುವ ಪ್ರತಿಯೊಬ್ಬರಿಗೂ ಇಂತಹ ಪ್ರಶ್ನೆ ಮೂಡದೆ ಇರದು.  ಈ ಹಿನ್ನಲೆಯಲ್ಲಿ ನೀವೇ ಹೇಳಿ ದುಡಿದು ತಿನ್ನುವವರು ನಿಜವಾದ ರಾಷ್ಟ್ರೀಯವಾದಿಗಳೋ ಅಥವಾ ಸಬರ್ಟ್ರನ್ ಜನವರ್ಗವೂ ಅಥವಾ ದುಡಿಸಿ ತಿನ್ನುವವರು – ದುಡಿಸಿ ತಿನ್ನುವುದಕೋಸ್ಕರ ಧಾರ್ಮಿಕ ಹಿನ್ನೆಲೆಯಿಂದ ಸಾಮಾಜಿಕ ಹಾಗು ಧಾರ್ಮಿಕ ಅಸ್ಪೃಶ್ಯತೆಯನ್ನು ಜಾರಿಗೆ ತಂದವರು  ರಾಷ್ಟ್ರೀಯವಾದಿಗಳೂ ಅಥವಾ ಅವರು ನಿಜವಾದ ಸಬರ್ಟ್ರನ್ ವರ್ಗವೋ ಎಂಬುವುದನ್ನ ನನ್ನ ಪ್ರಕಾರ ಈ ರಾಷ್ಟ್ರದಲ್ಲಿ ಅಸ್ಪೃಶ್ಯತೆಯ ನಡುವೆಯೂ – ಅನೇಕ ಧಾರ್ಮಿಕ ಸಂಕೋಲೆಗಳ ನಡುವೆಯೂ ತನಗೆ ಎಷ್ಟೇ ಅನ್ಯಾಯ ಕಷ್ಟ ಬಂದರೂ ಸಹ ದೇಶಕ್ಕಾಗಿ ಕಿಂಚಿತ್ತೂ ಕೇಡ ಬಯಸದೆ ಈ ದೇಶಕ್ಕಾಗಿ ದುಡಿದು ಕಟ್ಟುತ್ತಿರುವವರೇ ನಿಜವಾದ ರಾಷ್ಟ್ರೀಯವಾದಿಗಳು. ಇವರೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದುದ್ದಕ್ಕೂ ಗುರುತಿಸಿದ – ಪ್ರತಿಪಾದಿಸಿದ ಹಾಗೂ  ಬಯಸಿದ – ನಿಜವಾದ ರಾಷ್ಟ್ರೀಯವಾದತ್ವವಾಗಿತ್ತು.

ಒಂದು ಮಾತನ್ನು ಇಲ್ಲಿ ಹೇಳಲೇಬೇಕು…. ಸಾಮಾಜಿಕ ಪರಿವರ್ತನೆಗಾಗಿ ಹಗಲಿಗಳು ದುಡಿದವರು ಇಲ್ಲಿ ರಾಷ್ಟ್ರೀಯವಾದಿಗಳು ಎಂದು ಕರೆಸಿಕೊಳ್ಳಲೇ ಇಲ್ಲ. ಉದಾಹರಣೆಗೆ: (ಬುದ್ಧ – ಬಸವ – ಕನಕ – ಪೆರಿಯಾರ್ –  ನಾಲ್ವಡಿ ಕೃಷ್ಣರಾಜ ಒಡೆಯರ್ – ಸಾವು ಮಹಾರಾಜ್ – ನಾರಾಯಣ ಗುರು – ಅಯೋತಿದಾಸ್ – ಅಯ್ಯನ್ ಕಾಳಿ – ಅಂಬೇಡ್ಕರ್ ಇತ್ಯಾದಿ ಇತ್ಯಾದಿ. ಹೀಗೆ ಬಹುದೊಡ್ಡ ಸಾಮಾಜಿಕ ಪರಿವರ್ತನಾಕಾರರು) ಆದರೆ ಧಾರ್ಮಿಕ ಹಿನ್ನೆಲೆಯಿಂದ ರಾಷ್ಟ್ರವನ್ನು ನೋಡಲು ಮುಂದಾದಂತಹ ವ್ಯಕ್ತಿಗಳು ರಾಷ್ಟ್ರೀಯವಾದಿಗಳು ಎಂದು ಕರೆಸಿಕೊಂಡರು. ಉದಾಹರಣೆಗೆ: (ಶಂಕರ – ರಾಮಾನುಜ – ಮಾಧ್ವ – ರಾಮಕೃಷ್ಣ ಪರಮಹಂಸ – ಸ್ವಾಮಿ ವಿವೇಕಾನಂದ –  ದಯಾನಂದ ಸರಸ್ವತಿ ಇತ್ಯಾದಿ ಇತ್ಯಾದಿ).

 

ಭಾರತ ಮಣ್ಣಿನ ಮೂಲ ನಿವಾಸಿಗಳಾದ ತನ್ನ ಜನರ ಅಭ್ಯುದಯಕ್ಕಾಗಿ ಶ್ರಮಿಸಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಸರ್ವರಿಗೂ ಸಮಪಾಲು – ಸರ್ವರಿಗೂ ಸಮ ಬಾಳು ಎಂಬ ಸಮ ಸಂಸ್ಕೃತಿಯ ಸಿದ್ಧಾಂತವನ್ನು ತನ್ನ ಒಡಲಾಳದಲ್ಲಿ ಇಟ್ಟುಕೊಂಡು ಮಾತನಾಡುತ್ತಿರುವ ಬೃಹತ್ ಲಿಖಿತ ಸಂವಿಧಾನವನ್ನು ನೀಡಿದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಇದನ್ನು ಸಂಪೂರ್ಣವಾಗಿ ಖಂಡಿಸಿದ್ದು. ಈ ರಾಷ್ಟ್ರದ ಶ್ರಮ ಹಾಗೂ ಸಮ ಸಂಸ್ಕೃತಿಯ ಜನರಿಗಾಗಿ ನೂತನ ಬೆಳಕಿನ ಸಂವಿಧಾನವನ್ನು ತಮ್ಮ ತನುಮನಗಳನ್ನು, ತನ್ನ ರಾಷ್ಟ್ರ – ತನ್ನ ಜನರಿಗಾಗಿ ಸಮರ್ಪಣೆ ಮಾಡಿ ರೂಪಿಸಿದ್ದು… ಇಂತಹ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರು ಮನನ ಮಾಡಿಕೊಂಡು ತಮ್ಮ ಉಜ್ವಲ ಶ್ರಮ ಸಂಸ್ಕೃತಿಯ – ದೇಶವನ್ನು ಬಲಿಷ್ಠವಾಗಿ ಕಟ್ಟಿದ ಇತಿಹಾಸವನ್ನು ಮರೆಯದೆ ಮನಗಳನ್ನು ಉತ್ಕನನ ಮಾಡಿ – ಇತಿಹಾಸ ಸೃಷ್ಟಿಸಬೇಕೆಂದು ಹೇಳಿದರು. ಈ ಕಾರ್ಯಸಾಧನೆಗಾಗಿಯೇ ಅವರು ಹೇಳಿದ ಮಾತು ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬುವುದು. ಆದರೆ ಏನು ಮಾಡುವುದು…. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾರಿಗಾಗಿ – ಯಾರಿಗೋಸ್ಕರ ಇಷ್ಟೆಲ್ಲ ಕಷ್ಟ ಪಟ್ಟು ಸಂವಿಧಾನವನ್ನು ಬರೆದರೂ ಅವರಿಗೆ ಇನ್ನೂ ಸಹ ಸಂವಿಧಾನವನ್ನು ಓದಲು – ತಿಳಿದುಕೊಳ್ಳಲು – ಅದರ ಆಶಯದಂತೆ ಭಾರತದ ಭೂಮಿಯಲ್ಲಿ ತನ್ನ ಬದುಕನ್ನು ಉಜ್ವಲಗೊಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ…. (ಶಿಕ್ಷಣ – ಸಂಘಟನೆ – ಹೋರಾಟದ ಕೊರತೆ ಹಾಗೂ ತಮ್ಮ ಕುತಂತ್ರದ ಮೂಲಕವೇ ಈ ರಾಷ್ಟ್ರದಲ್ಲಿ ಭದ್ರ ಬೀರುಬಿಟ್ಟಿರುವ ತಮಗೆ ತಾವೇ ಸ್ಪೃಶ್ಯ ವರ್ಗದವರು ಎಂದು ಹೇಳಿಕೊಳ್ಳುವವರ ಒಡೆದಾಳುವ ನೀತಿಗೆ ಬಲಿಯಾಗುತ್ತಿರುವುದು ಪ್ರಮುಖವಾದ ಕಾರಣ.)

ಆದರೆ

ಯಾರ ವಿರುದ್ಧ ಈ ಸಂವಿಧಾನವನ್ನು ರಚನೆ ಮಾಡಿದರು ಅವರಿಗೆ ಸಂವಿಧಾನ ಗೊತ್ತು – ಅದರ ಆಶಯವು ಗೊತ್ತು – ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ರೀತಿಯೂ ಚೆನ್ನಾಗಿ ಗೊತ್ತು. ಅವರಿಗೆ ಬದಲಾವಣೆ ಮಾಡುವ ಶಕ್ತಿಯು ಗೊತ್ತು.

ಪ್ರಜಾಪ್ರಭುತ್ವ ಭಾರತದಲ್ಲಿ ನನ್ನ ಪರ ಸಂವಿಧಾನವನ್ನು – ನನ್ನ ವಿರೋಧಿಗಳ ಕೈಗೆ ಉದಾರವಾಗಿ – ವಿಶಾಲ ಮನಸ್ಸಿನ ಅಜ್ಞಾನದ ಕೊಂಪೆಯಲ್ಲಿ ಧಾರೆಯರೆದು  ಧಾರ್ಮಿಕ ಅಂಧಕಾರದ ಮಾಲೆಗಳನ್ನು ಕೊರಳಿಗೆ ಧರಿಸಿಕೊಂಡು ನೋಡಿ ಸಂತೋಷಪಡುತ್ತಿರುವ ಜನ ವರ್ಗ ನಮ್ಮದಲ್ಲವೇ…. ಇದಾಗಬಾರದು. ಇದೆ ನಿಜವಾದ ಆಸಂವಿಧಾನಾತ್ಮಕ ನಡೆ. ಡಿಸೆಂಬರ್ 10 ಮಾನವ ಹಕ್ಕುಗಳ ಉಲ್ಲಂಘನೆಯ ದಿನಾಚರಣೆ ಎಂದು ವಿಶ್ವದಾದ್ಯಂತ ಆಚರಣೆ ಮಾಡುತ್ತಾರೆ. ಆದರೆ ಭಾರತದಲ್ಲಿ ಶತಶತಮಾನಗಳಿಂದಲೂ ನಡೆದಿರುವುದು –  ನಡೆಯುವುದು – ದಿನನಿತ್ಯ ನಡೆಯುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆಯೇ ಎಂಬುದನ್ನು ನೀವು ಮರೆಯಬಾರದು. ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ನೂರಾರು ಬಗೆ ಇರಬಹುದು, ಆದರೆ ಅಸ್ಪೃಶ್ಯತೆ ಆಚರಣೆಯಂತಹ ಅಮಾನವೀಯ – ಮಾನವರ ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಪ್ರಪಂಚದ ಮುಂದೆ ಭಾರತವು ತಲೆತಗ್ಗಿಸುವಂತೆ ಮಾಡಿದೆ. ಕುಡಿಯುವ ನೀರಿಗಾಗಿ ಅಂದಿನಿಂದ ಇಂದಿನವರೆಗೂ ದಿನಂಪ್ರತಿ  ಬೃಹತ್ ಹೋರಾಟ ಮಾಡುತ್ತಿರುವ ದೇಶವೆಂದರೆ ಭಾರತ ತಾನೇ. ಇಲ್ಲಿ ಕುಡಿಯುವ ನೀರಿಗಿರಲಿ — ಬದುಕಲು ಉಸಿರಾಡುವ ಉಸಿರಿಗೂ, ಇವರ ದೇಹದ ಮೇಲೆ ಬೀಸುವ ಗಾಳಿಗೂ ಹಾಗೂ ಸೂರ್ಯನ ಬಿಸಿಲಿಗೆ ಬೀಳುವ ಇವರ ನೆರಳಿಗೂ ಅಸ್ಪೃಶ್ಯತೆ ಇದೆ. ಇದು ನಮ್ಮ ಭವ್ಯ ಸಂಸ್ಕೃತಿಯ ಭಾರತ. ಇಷ್ಟಾದರೂ ಈ ನೆಲದ ಮೇಲೆ ನನಗೆ ತುಂಬಾ ಪ್ರೀತಿ ಗೌರವ ಹಾಗೂ ಅಭಿಮಾನ ಏಕೆಂದರೆ ಇದು ನನ್ನ ತವರು. ನನ್ನ ಬುದ್ಧನ ನಾಡು – ನನ್ನ ಪ್ರೀತಿಯ ಭೀಮರ ಬೀಡು.

ಶತಶತಮಾನಗಳಿಂದ ನಮ್ಮನ್ನು – ನಮ್ಮ ಶ್ರಮವನ್ನು ಹೊಡೆದಾಳಿಕೊಂಡು – ಯಾವುದೇ ಶ್ರಮವಿಲ್ಲದೆ ಸಮಾಜ ಶ್ರೇಣಿಕೃತ ವ್ಯವಸ್ಥೆಗೆ ದೇವರನ್ನು ಬಂಡವಾಳವನ್ನಾಗಿಸಿಕೊಂಡು ಆರ್ಥಿಕವಾಗಿ ದುರ್ಬಲರಾಗಿದ್ದರೂ ಸಹ ಸಾಮಾಜಿಕ ಹಾಗೂ ಧಾರ್ಮಿಕವಾಗಿ ಬೃಹತ್ ಪ್ರಮಾಣದ ಸ್ಪೃಶ್ಯ ಬದುಕನ್ನು ರೂಪಿಸಿಕೊಂಡು, ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ತಮಗೆ ತಾವೇ  ಶ್ರೇಷ್ಟರೆಂದು ಕರೆಸಿಕೊಂಡವರು, ತಮ್ಮ ಅನುಕೂಲಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ತಕ್ಕಂತೆ  ನವರಂಗಿ ಬಣ್ಣಗಳನ್ನು ಪ್ರದರ್ಶಿಸುವ ಅಲಿಖಿತ ಸಂವಿಧಾನದ ಅನೀತಿಗಳ ಮೋಸಕ್ಕೆ ಬೆಲೆಕೊಟ್ಟು ಆಧುನಿಕ ಅಸ್ಪೃಶ್ಯತೆಯ ಸಂಕೋಲೆಯಲ್ಲಿ ಸಿಲುಕಿರುವುದನ್ನು ದಿನನಿತ್ಯ ಕಂಡಾಗ ಭಾರತ ಶಕ್ತಿಯುತವಾಗಿದ್ದರೂ ಸಹ ತಾನು ಹಡೆದ  ಮಕ್ಕಳಿಗೆ ಹಾಲನ್ನು ಕುಡಿಸದಷ್ಟು ಅಪೌಷ್ಟಿಕಳಾಗಿದ್ದಾಳೆ ಎಂಬ ಮೂಲಭೂತ ಪ್ರಶ್ನೆ, ಹುಟ್ಟದಿರದು. ಭಾರತ ದೇಶದ ಬಹುದೊಡ್ಡ ಅಸ್ಪೃಶ್ಯ ಸಮಾಜ ಈವರೆಗೂ ತನ್ನ ಹಡದವ್ವ ಭಾರತಮಾತೆಯ ಮೊಲೆಯಲ್ಲಿ ಸಮೃದ್ಧವಾದ ಹಾಲಿದ್ದರೂ ಸಹ ಶತಶತಮಾನಗಳಿಂದಲೂ ಕುಡಿದದ್ದು ಮಾತ್ರ ಅಳಿದುಳಿದ – ಅಂದರೆ ಎಲ್ಲರೂ ಕುಡಿದು ನಂತರ ಬಿಟ್ಟ ಒಂದಷ್ಟು ತೊಟ್ಟಿಕುವ ಹಾಲನ್ನೇ…

ನನ್ನ ಭಾರತಮಾತೆಯ ಒಡಲಾಳದ ಮೊಲೆಯಿಂದ ತೊಟ್ಟಿಕ್ಕುವ ಹಾಲನ್ನು ಗಂಟಲು ತುಂಬುವಷ್ಟು ಕುಡಿಯದಿದ್ದರೂ ನೆಕ್ಕಿಯೇ ಇಷ್ಟು ಸಮೃದ್ಧವಾಗಿ – ಸ್ವಾಭಿಮಾನಿಗಳಾಗಿ ಸದೃಢ ಭಾರತದ ಪ್ರಜೆಗಳಾಗಿ ಇರಬೇಕಾದರೆ , ಇನ್ನು 2000ಕ್ಕೂ ಹೆಚ್ಚು ವರ್ಷಗಳಿಂದ ನಮ್ಮ ಪಾಲಿನ ಹಾಲನ್ನು, ಧಾರ್ಮಿಕ ಹಾಗೂ ಸಾಮಾಜಿಕ ಸಂಕೋಲಗಳಿಂದ ತಮ್ಮದಾಗಿಸಿಕೊಂಡು ಹೊಟ್ಟೆ ತುಂಬ ಕುಡಿದು ತೆಗೆದವರ ರೀತಿಯಲ್ಲಿಯೇ – ನನ್ನ ಪಾಲಿನ ಹಾಲನ್ನು  ಸಮಾನಾಗಿ ಕುಡಿದಿದ್ದರೇ ಭಾರತದ ಇತಿಹಾಸದ ಗರ್ಭದಲ್ಲಿ ಅದರ ಸಾಂಸ್ಕೃತಿಕ ಚಿತ್ರಣವೇ  ಪ್ರಪಂಚದ ಭೂಪಟದಲ್ಲಿ ಬದಲಾಗುತ್ತಿತ್ತು.

ಅಂದರೆ

ಎರಡು ಸಾವಿರ ವರ್ಷಗಳಿಂದಲೂ ಭಾರತದ ಪ್ರತಿಯೊಬ್ಬ ಪ್ರಜೆಗಳಿಗೂ ಶಿಕ್ಷಣವನ್ನು  ಸಮನಾಗಿ ಒದಗಿಸಿದ್ದೇ ಆಗಿದ್ದರೆ ಪ್ರಪಂಚದ ಬಹುದೊಡ್ಡ ನೊಬೆಲ್ ಪ್ರಶಸ್ತಿ ವಿಜೇತರಲ್ಲಿ ಭಾರತದ ಪಾಲೇ ಸಿಂಹ ಪಾಲು ಆಗುತ್ತಿತ್ತು. ಆದರೆ ಏನು ಮಾಡುವುದು ಶಿಕ್ಷಣವನ್ನು ಏಕಸ್ವಾಮ್ಯವಾಗಿಸಿಕೊಂಡಿದ್ದವರಿಗೆ ನೋಬೆಲ್ ಜ್ಞಾನವಿರಲಿಲ್ಲ. ನೋಬಲ್ ಜ್ಞಾನ ಇರುವವರಿಗೆ ಶಿಕ್ಷಣವೇ ದೊರಕಲಿಲ್ಲ. ಇದು ಭಾರತ – ಭಾರತಾಂಬೆಯ ಒಡಲಾಳದ ಇತಿಹಾಸ. ಭಾರತದ ಕೊರಳು ಮಾತನಾಡಿಯೇ ಇಷ್ಟೊಂದು ಖ್ಯಾತಿಪಡೆದಿರುವುದಾದರೆ. ಇಲ್ಲಿನ ವರನಾಳದ ಕರುಳು ಮಾತನಾಡಿದ್ದರೆ ಇನ್ನೆಷ್ಟು ಪ್ರಖ್ಯಾತಿಯನ್ನು ಪ್ರಪಂಚದ ಭೂಪಟದಲ್ಲಿ ಭಾರತ ಪಡೆಯಬಹುದಾಗಿತ್ತು ಎಂಬುದನ್ನು ನೀವೇ ಗ್ರಹಿಸಿ. ಇದಕ್ಕೆ ಮೂಲಸಾಕ್ಷಿ ತನ್ನ ಕರುಳಿನಿಂದ ಭಾರತ ಮತ್ತು ಭಾರತೀಯರ  ಕುರಿತು ಮಾತನಾಡಿದ ವಿಶ್ವ ಜ್ಞಾನಿ ಎನಿಸಿಕೊಂಡ ಅಂಬೇಡ್ಕರ್ ರವರೇ ಸಾಕ್ಷಿ.

 

ಈ ಕಾರ್ಯಕ್ಕೆ ಉತ್ತಮ ನಿದರ್ಶನವೆಂದರೆ, ಮೂಲನಿವಾಸಿ ತನದ ಭಾರತವನ್ನು ನಾವು ಹೇಗೆ ಕಟ್ಟುತ್ತಿದ್ದೆವು ಎಂಬುವುದಕ್ಕೆ ಹನಿ ಹಾಲನ್ನೇ ಕುಡಿದರೂ ಸಹ  ಸಮೃದ್ಧ ಹಾಲನ್ನು ಕುಡಿದು ಜೀವಿಸಿದವರಿಗಿಂತಲೂ  ಹೆಚ್ಚಿನದಾಗಿ ಭಾರತವನ್ನು, ಭಾರತಾಂಬೆಯ ಮಗನಾಗಿ ತೋರಿಸಿಕೊಟ್ಟವರು ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು. ಅವರೊಬ್ಬರೇ ಈ ಭಾರತದ ಮಣ್ಣಿನ ಬಹುದೊಡ್ಡ ಸಾಧಕರು. ಅವರು ತೋರಿದ ದಾರಿಯಲ್ಲಿ ನಿಷ್ಠೆಯಿಂದ ಸಾಗುವುದೇ ನಮ್ಮ ಕರ್ತವ್ಯ… ಆದ್ದರಿಂದ ನಾವೇನೇ ಮಾಡಿದರು ಅದು ಸಾಧನೆ ಅಲ್ಲ… ಬದಲಿಗೆ  ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಹಿಸಿದ ಕರ್ತವ್ಯದ ಪಾಲನೆ. ನಾವ್ಯಾರೂ ಸಾಧಕರಾಗಲು ಸಾಧ್ಯವಿಲ್ಲ… ನಾವು ಅಂಬೇಡ್ಕರ್ ಅವರ ವಹಿಸಿದ ಕರ್ತವ್ಯ ಪಾಲಕರು ಎಂಬುದನ್ನು ಮರೆಯಬಾರದು.

ಭಾರತ ದೇಶವನ್ನು ಆಳ್ವಿಕೆ ಮಾಡುತ್ತಿದ್ದ ವಿದೇಶೀಯರಿಂದ  ಸ್ವಾತಂತ್ರ ಪಡೆಯಲು ದೇಶದ ಲಕ್ಷಾಂತರ ಜನರು ಮುಖಂಡತ್ವ ವಹಿಸಿಕೊಂಡು ಹೋರಾಡಿದರು – ಕೋಟ್ಯಂತರ ಜನರು ಮನೆ ಮಠ ತೊರೆದು – ಬೀದಿಗಿಳಿದು ಹೋರಾಡಿ – ಬಲಿದಾನವಾಗಿ – ದೇಶಕ್ಕಾಗಿ ಜೀವನವನ್ನು ತ್ಯಾಗ ಮಾಡಿ ಭಾರತಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರು….

ಇದು ಸತ್ಯ

ಆದರೆ

ಇದೆಲ್ಲವನ್ನು ಮೀರಿಸಿದ ಮಹತ್ ಕಾರ್ಯ ಹಾಗೂ ಸಾಧನೆ ಎಂದರೆ ಭಾರತೀಯರಿಂದಲೇ – 2000 ವರ್ಷಗಳಿಂದಲೂ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ವಾತಂತ್ರ್ಯವಿಲ್ಲದೆ ಅಸ್ಪೃಶ್ಯರಾಗಿದ್ದ ಭಾರತದ ಮೂಲ ನಿವಾಸಿಗಳಿಗೆ ಸ್ವಾತಂತ್ರವನ್ನು ಗಳಿಸಿಕೊಳ್ಳಲು ಹೋರಾಡಿದ ಏಕೈಕ ವ್ಯಕ್ತಿ ಎಂದರೆ ಅದು ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರೊಬ್ಬರು ಮಾತ್ರ. ಅಂಬೇಡ್ಕರ್ ಅವರ ಸಾಧನೆಯ ಮುಂದೆ ಭಾರತದ ಸ್ವಾತಂತ್ರ ಹೋರಾಟವು ಸಹ ತನ್ನ ಶಕ್ತಿಯನ್ನು ಕುಗ್ಗಿಸಿಕೊಳ್ಳುತ್ತದೆ. ಏಕೆಂದರೆ ಆ ಹೋರಾಟ ಆ ಕಾಲಕ್ಕೆ ಮಾತ್ರ ಮೀಸಲು – ಹಾಗೂ ಇತಿಹಾಸದ ಪುಟಗಳಲ್ಲಿ ಸೇರ್ಪಡೆಗೊಂಡಿತ್ತು.

ಆದರೆ

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟಾಕಿದ ಸಾಮಾಜಿಕ ಸ್ವಾತಂತ್ರ್ಯದ ಹೋರಾಟ ಭಾರತದ ಎರಡು ಸಾವಿರ ವರ್ಷಗಳ ಪ್ರಾಚೀನ ಚರಿತ್ರೆಯನ್ನು ಒಳಗೊಂಡಂತೆ  ಪ್ರಜಾಪ್ರಭುತ್ವದ 75 ವರ್ಷಗಳ ಸಂದರ್ಭದಲ್ಲಿಯೂ  ದಿನನಿತ್ಯ ನಡೆಯುತ್ತಿರುವುದು ಇದರ ಮಹತ್ವವನ್ನು ಸಾರುತ್ತದೆ. ವಿದೇಶೀಯರ ಆಳ್ವಿಕೆಯಿಂದ ಭಾರತವನ್ನು ಮುಕ್ತಗೊಳಿಸಲು ಹೋರಾಡಿದ ಸ್ವಾತಂತ್ರ್ಯ ಚಳುವಳಿಗೆ ಸಾವಿದೆ… ಆದರೆ ಭಾರತೀಯರಿಂದಲೇ ಭಾರತೀಯರಿಗೆ ಆಗುತ್ತಿರುವ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟದ ಸ್ವಾತಂತ್ರ್ಯ ಚಳುವಳಿಗೆ ಸಾವೇ ಇಲ್ಲ. ಈ ಅರ್ಥದಲ್ಲಿ ಹೇಳುವುದು ನಮಗೆ ವಿದೇಶಿಯರಿಂದ ಸ್ವಾತಂತ್ರ್ಯ ದೊರಕಿತು… ಆದರೆ ದೇಶಿಯರಿಂದ ದೇಶೀಯರಿಗೆ ಇನ್ನೂ ಸಹ ಸ್ವಾತಂತ್ರ್ಯ ದೊರಕಿಲ್ಲ ಎಂಬುದನ್ನು. ಈ ಸ್ವಾತಂತ್ರ್ಯ ಯಥೇಚ್ಛವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರೂಪಿಸಿದ ಸಮಸಂಸ್ಕೃತಿಯ ಸಂವಿಧಾನದಲ್ಲಿದೆ. ಅದನ್ನು ಪಡೆದುಕೊಳ್ಳುವ ಶಕ್ತಿವಂತರು ಮಾತ್ರ ಭಾರತೀಯರ ದಾಗಬೇಕಾಗಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅಂತವರು ಸಮ ಸಂಸ್ಕೃತಿಯ ಪ್ರತಿಪಾದನೆ ಮಾಡುವ ಸಂವಿಧಾನವನ್ನು  ರೂಪಿಸಿ ನಮ್ಮ ನಡುವೆ ಜೀವಂತವಾಗಿದ್ದಾರೆ. ಅವರು ದಿಟ್ಟತನದಿಂದ ಮಾತನಾಡಿದರು – ನಮ್ಮನ್ನು ಮಾತನಾಡಿಸಲು ಅನು ಮಾಡಿದರು. ಈ ಮಾದರಿಯಲ್ಲಿ ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲು, ಮಾತನಾಡಲು ರೂಪಿಸಿಕೊಟ್ಟ ಲಿಖಿತ  ಸಂವಿಧಾನಕ್ಕೆ ನನ್ನ ಜನ ತಮ್ಮ ಮನೆ ಹಾಗೂ ಮನವನ್ನು ಜ್ಞಾನಾರ್ಜನೆಯ ಮೂಲಕ (ಶಿಕ್ಷಣ) ತೆರೆದುಕೊಳ್ಳಬೇಕಾಗಿದೆ. ಇಂದು ನನ್ನ ಜನರ ಮೇಲೆ ದಿನನಿತ್ಯ ನಡೆಯುತ್ತಿರುವ ಸಾಮಾಜಿಕ ಅನಿಷ್ಟ ಸಂಕೋಲೆಗಳನ್ನು ಸಂವಿಧಾನಾತ್ಮಕವಾಗಿ ಬಗೆಹರಿಸಿಕೊಳ್ಳಲು ಸಂಘಟಿತರಾಗಬೇಕಾಗಿದೆ. (ಸಂಘಟನೆ). ಆ ಮೂಲಕ ಪ್ರಬಲವಾದ – ಎಚ್ಚರಿಸುವ ಕಾನೂನಾತ್ಮಕ ಚಳವಳಿ  (ಹೋರಾಟ) ಮಾಡಬೇಕಾಗಿದೆ. ಈ ಮೂರು ಅಂಶಗಳೇ ಬಾಬಾಸಾಹೇಬರು ಮೂಕರಾಗಿದ್ದವರಿಗೆ ಮಾತು ಬರಲು ಹೇಳಿಕೊಟ್ಟ ಪ್ರಬಲ ಸಂವಿಧಾನಾತ್ಮಕ  ಅಸ್ತ್ರಗಳು.

ಇದನ್ನು ಹೊರತುಪಡಿಸಿ ನಾವು ಧಾರ್ಮಿಕ ಹಿನ್ನೆಲೆಯ ಅಂಧಕಾರದಲ್ಲಿ ಹೊಟ್ಟೆಗೆ ಇಟ್ಟಿಲ್ಲ –  ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವ ಹಾಗೆ ದಿನನಿತ್ಯ ನಮ್ಮ ಸಮಾಜದಲ್ಲಿ ನನ್ನ ಜನರ ಮೇಲೆ ನಡೆಯುತ್ತಿರುವ ವಾಸ್ತವದ ಅಸ್ಪೃಶ್ಯತೆ ಹಾಗೂ ಅಮಾನವೀಯ ಆಚರಣೆಗಳ (ಹೊಟ್ಟೆಗೆ  ಹಿಟ್ಟಿಲ್ಲ) ನಡುವೆ – ಪುರಾಣದ ಅಯ್ಯಪ್ಪನ ಮಾಲೆ, ಹನುಮ ಮಾಲೆ, ದತ್ತ ಮಾಲೆ – ಆ ರಥೋತ್ಸವ – ಈ ದೀಪೋತ್ಸವ – ತೆಪ್ಪೋತ್ಸವ, ಗಳಂತ ಧಾರ್ಮಿಕ ಅಂಧಕಾರದ ಸಂಕೋಲೆಗಳ  ಮಾಲೆಗಳಿಗೆ ತಲೆ ಊಟಿ ನಿಂತಿರುವುದು ನಮ್ಮ ನಡುವಿನ ಬಹು ದೊಡ್ಡ ದುರಂತ. ಈ ದೇಶದ ನೆಲ ಸಂಸ್ಕೃತಿಯ ಬಹುದೊಡ್ಡ ಯುವ ಶಕ್ತಿ ನಮ್ಮ ಕೊರಳನ್ನು ಶಾಶ್ವತವಾಗಿ ಕತ್ತರಿಸುವ  ಅಜ್ಞಾನದ ಮುಂದೆ ತಲೆಬಾಗಿ –  ಶಿರ ಒಪ್ಪಿಸಿ ಅಜ್ಞಾನದ – ಅಂಧಕಾರದ ಬಣ್ಣ ಬಣ್ಣದ ನವರಂಗಿ ಅವತಾರದ ಮಾಲೆಗಳನ್ನು ಕೊರಳಿಗೆ ಹಾಕಿಕೊಂಡು (ಜುಟ್ಟಿಗೆ ಮಲ್ಲಿಗೆ) ಧಾರ್ಮಿಕ ಅಸ್ಪೃಶ್ಯತೆಯ ಸಂಕೋಲೆಯಲ್ಲಿ ತಮಗೆ ತಾವೇ ಅರಿವಿಲ್ಲದೆ ಸಿಲುಕಿಸಿಕೊಂಡಿರುವುದು ಬಹುದೊಡ್ಡ ದುರಂತ.

ಶತಮಾನಗಳಿಂದ ಸಾಮಾಜಿಕ – ಧಾರ್ಮಿಕ ಹಿನ್ನೆಲೆಯಲ್ಲಿ ಬಹುದೊಡ್ಡ ಕಂದಕವನ್ನು ಸೃಷ್ಟಿ ಮಾಡಿ ದೇಶದ ಬಹುದೊಡ್ಡ ಶ್ರಮಿಕ ವರ್ಗವನ್ನು ತಮಗೆ ಬೇಕಾದಂತೆ ಮಾನವನ ಜೀವನಕ್ಕೆ ಬೇಕಾದ ಪ್ರಮುಖ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು, ಹೀಗೆ ಕಸಿದುಕೊಂಡ ಬಹುದೊಡ್ಡ ಜನ ವರ್ಗದವರ ಮೂಲಭೂತ ಹಕ್ಕುಗಳನ್ನು ತಮ್ಮದಾಗಿಸಿಕೊಂಡು – ದೇವಾಲಯ – ಘಟಿಕಾಲೆಯ – ಅಗ್ರಹಾರಗಳು – ಅರಮನೆ – ಗುರು ಮನೆ – ಸಾಮ್ರಾಜ್ಯ ಹಾಗೂ ಮಹಲುಗಳನ್ನು ಕಟ್ಟಿಕೊಂಡು ಸಾಮಾಜಿಕವಾಗಿ ಶ್ರೇಷ್ಠತೆಯನ್ನು ಬಯಸಿದವರ ಮುಂದೆ ಸಂವಿಧಾನ ಭಾರತದ ಇದೆ ಪ್ರಭುದ್ಧ ಜನ ತಲೆಬಾಗುತ್ತಿರುವುದು ಅಸಂವಿಧಾನಾತ್ಮಕ ನಡೆಯೇ ಸರಿ. ಇದಾಗಬಾರದು.

ಇನ್ನೂ ಮುಂದುವರೆದು ʻಅಸ್ಪೃಶ್ಯತೆʼ ಸೃಷ್ಟಿಸಿದವರು ಸಂಖ್ಯೆಯಲ್ಲಿ ಅಲ್ಪರಾದರೂ ಸಹ – ಕುತಂತ್ರದಲ್ಲಿ ಬಹುದೊಡ್ಡ ಜನ ವರ್ಗವನ್ನೇ ತಮ್ಮ ಅಧೀನದಲ್ಲಿ ಇಟ್ಟುಕೊಂಡರು. ಸಾಮಾಜಿಕ ಹಿನ್ನೆಲೆಯ ಶ್ರೇಣಿಕೃತ  ವರ್ಗದವರು ತಲೆಯಿಂದ – ಕೈಯಿಂದ – ಹೊಟ್ಟೆಯಿಂದ – ಕಾಲಿನಿಂದ – ಅವೈಜ್ಞಾನಿಕವಾಗಿ ಜನ್ಮ ತಾಳಿದ್ದರು ಸಹ ಪುರಾಣದ ಮೂಲಕ ಮೆರೆದರು. ಆದರೆ ವಾಸ್ತವವಾಗಿ – ವೈಜ್ಞಾನಿಕವಾಗಿ ಯೋನಿಯಿಂದ ಜನ್ಮ ತಾಳಿದ ಈ ರಾಷ್ಟ್ರದ ಮೂಲ ನಿವಾಸಿಗಳು ಸತ್ಯವಂತರಾದರೂ ಸಹ ಪುರಾಣದ ಸುಳ್ಳಿನ ಮುಂದೆ ಅಸ್ಪೃಶ್ಯತೆಯ ಕೊಂಪಿಗೆ ಬಲಿಯಾದದ್ದು ಬಹುದೊಡ್ಡ ಸಾಂಸ್ಕೃತಿಕ ದುರಂತ. ಆದರೆ ಈ ಸಂಕೋಲೆಗೆ ಬೆವರಿನ ಸಂಕೇತವಿದೆ.

ಅಂದರೆ

ಇದು ಅನೇಕ ಸಾಮಾಜಿಕ  ಸಂಕೋಲೆಗೆ ಸಿಕ್ಕಿದ್ದರೂ ಸಹ ಯಾರಿಗೂ ತಲೆತಗ್ಗದೆ – ತಲೆಬಾಗದೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಜೀವಿಸುವ ಬದುಕು ಇವರದಾಗಿತ್ತು.

ಆದರೆ

ಇಂದು ತಲೆಯೆತ್ತಿ ನಡೆಯಬೇಕಾದ ಲಿಖಿತ ಸಂವಿಧಾನದ ಸಂದರ್ಭದಲ್ಲಿ ಧಾರ್ಮಿಕ ಹಿನ್ನೆಲೆಯಲ್ಲಿ ಸಿಲುಕಿಕೊಂಡಿರುವ ಈ ಅಸ್ಪೃಶ್ಯತೆ – ಶಿಕ್ಷಣಮಂತರಾಗಿ – ಪದವಿ ಪದವಿಗಳನ್ನು ಪಡೆದರೂ ಸಹ ತಲೆತಗ್ಗಿಸಿ ನಿಂತಿಕೊಂಡು ಅಸ್ಪೃಶ್ಯತೆಯನ್ನು ತಮಗೆ ತಾವೇ ತಮ್ಮ ಮನೆ ಹಾಗೂ ಮನದಲ್ಲಿ ಆಹ್ವಾನಿಸಿಕೊಂಡು ತಮಗೆ ತಾವೇ ಶ್ರೇಷ್ಠನೆಂದು ಕರೆದುಕೊಂಡವರ ಅಸಂವಿದಾನಾತ್ಮಕ ನೀತಿಯನ್ನೇ ಸಂವಿಧಾನಾತ್ಮಕ ನೀತಿ ಎಂದು ತಿಳಿದುಕೊಂಡು ಜೀವಿಸುತ್ತಿರುವ ಧಾರ್ಮಿಕ ಅಂಧಕಾರದ ದಲಿತರಲ್ಲಿಯೇ ದಲಿತರಿಗಾಗಿ ಆಚರಣೆ ಮಾಡುವ  ಅಸ್ಪೃಶ್ಯತೆ ಅತ್ಯಂತ ಹೆಚ್ಚು  ಅಪಾಯಕಾರಿ ಎಂಬುದನ್ನು ಬಹು ಸೂಕ್ಷ್ಮವಾಗಿ ಮನಗಾಣ  ಬೇಕಾಗಿದೆ.

ಈ ಧಾರ್ಮಿಕ ಅಸ್ಪೃಶ್ಯತೆಗೆ ಸ್ವಾಭಿಮಾನವಿಲ್ಲ. ಇದನ್ನು ಸ್ಪೃಶ್ಯರು ಆಚರಿಸುವ ಅವಶ್ಯಕತೆ ಇಲ್ಲ, ಬದಲಿಗೆ ಯಥೇಚ್ಛವಾಗಿ ಅಸ್ಪೃಶ್ಯರೇ ಪಾಲಿಸುತ್ತಾರೆ. ಹೀಗೆ ಪಾಲಿಸುವಂತೆ ಎರಡು ಸಾವಿರ ವರ್ಷಗಳಿಂದ ಅವರ ಮೆದುಳಿನಲ್ಲಿ ಶಾಶ್ವತವಾಗಿ ಧಾರ್ಮಿಕ ಹಿನ್ನೆಲೆಯ ಅಂಧಕಾರವನ್ನು  ನೆಲೆ ನಿಲ್ಲಿಸಲಾಗಿದೆ. ಇಂತಹ ಬಿಡಿಸಲಾರದ ಸಂಕೋಲೆಯಿಂದ ಹೊರಬಂದು ಬೃಹತ್ ಪ್ರಜಾಪ್ರಭುತ್ವದ ಜ್ಞಾನದ ಭಾರತದಲ್ಲಿ ಸತ್ಪ್ರಜೆಗಳಾಗಿ ಬದುಕಲಿ ಎಂಬುವುದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಂದಿನ ಹಾಗೂ ಬಹು ದೂರದ  ದೂರ ದೃಷ್ಟಿಯ  ಆಶಯ  ಆಗಿತ್ತು. ಅದು ನಮ್ಮೆಲ್ಲರ ಕನಸಿನ – ಕನಸಿನ  ಭಾರತದ ಆಶಯವು ಆಗಿದೆ. ಇದು ಸಾಧ್ಯವಾಗುತ್ತಿದೆಯೇ ಎಂಬ ಪ್ರಶ್ನೆ ಪ್ರತಿ ಹಂತದಲ್ಲಿಯೂ ಕಾಡುತ್ತಲೇ ಇದೆ.

ಬಂಧುಗಳೇ ದಯವಿಟ್ಟು ಅಂಧಕಾರವನ್ನು ಬಿಡಿ – ಯಾರು ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಬಹುದೊಡ್ಡ ಈ ಯುವಶಕ್ತಿಯನ್ನು ಬಳಸಿಕೊಳ್ಳುವ ಕುತಂತ್ರಗಳಿಗೆ ಬಲಿಯಾಗಬೇಡಿ. ಪ್ರಬುದ್ಧ ಭಾರತ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಾಸ್ತವ ಸಂವಿಧಾನದ ಅಡಿಯಲ್ಲಿ ನಿರ್ಮಾಣಗೊಳ್ಳಬೇಕಾಗಿದೆಯೇ ಹೊರತು,  ಅಂಧಕಾರದ – ಅಜ್ಞಾನದ – ಸ್ವಾರ್ಥ ಸಾಧನೆಯ – ಕೆಲವೇ ಕೆಲವರ ಧಾರ್ಮಿಕ ಅಂಧಕಾರದ ಸ್ವಾರ್ಥ ಸಾಧನೆಗಾಗಿ ನಿರ್ಮಾಣಗೊಳ್ಳಲು ಸಾಧ್ಯವಿಲ್ಲ. ಆದರೆ ಇದೇ ಆಗುತ್ತಿರುವುದು ಬಹುದೊಡ್ಡ ದುರಂತ.. ಇದಾಗಬಾರದು.

ಮುಂದುವರೆದು ಹೇಳುವುದಾದರೆ ಧಾರ್ಮಿಕ ಅಂಧಕಾರದಲ್ಲಿ ರಾಷ್ಟ್ರ ನಿರ್ಮಾಣ ಮಾಡಲು ಮುಂದಾದ ಪ್ರಪಂಚದ ಯಾವ ರಾಷ್ಟ್ರವೂ ಸಹ ಪ್ರಪಂಚದ ಭೂಪಟದಲ್ಲಿ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಲೇ ಇಲ್ಲ. ಇದು ಸಾಧ್ಯವೂ ಇಲ್ಲ ಎಂಬುದಕ್ಕೆ ಜ್ವಲಂತ ನಿದರ್ಶನಗಳಿವೆ.

ಈ ಕಾರಣಕ್ಕಾಗಿ ಧಾರ್ಮಿಕ ಹಗೆತನವನ್ನು ಬದಿಗೆಸರಿಸಿ ಅಭಿವೃದ್ಧಿಯ ತತ್ವ ಸಿದ್ಧಾಂತದಡಿಯಲ್ಲಿ – ಸಮ ಸಂಸ್ಕೃತಿಯ ಪ್ರತಿಪಾದನೆಯ ಮೂಲಕ – ಪ್ರಬುದ್ಧ –  ಪ್ರಭುತ್ವದ  ಭಾರತವನ್ನು  ನಿರ್ಮಾಣ ಮಾಡುವ ಗುರಿ ನಮ್ಮದಾಗಬೇಕಾಗಿದೆ. ಇಂತಹ ಉಜ್ವಲ ಗುರಿ ತಪ್ಪಿಸಲು ಅನೇಕ ಅಡ್ಡದಾರಿಗಳು -ಕಾಲ್ ಎಳೆಯುವ ದಾರಿಗಳು – ಕಾಲಿಗೆ ಚುಚ್ಚುವ  ದಾರಿಗಳು ಎಗ್ಗಿಲ್ಲದೆ  ಬರುತ್ತವೆ… ಮುಂದುವರೆದು ಒಂದಷ್ಟು ಸುಲಭ ದಾರಿಗಳು ಬಹುಬೇಗನೆ ನಮ್ಮ ಕೈ ಮತ್ತು ಕಾಲಿಗೆ ಸಿಕ್ಕಿ ಮೋಸವನ್ನು ಮಾಡುತ್ತವೆ. ಈ ಅಡ್ಡದಾರಿಗಳಿಂದ ನಮಗೆ, ನಮ್ಮ ಗುರಿಯನ್ನು ತಲುಪಿಸಲು ಸಾಧ್ಯವಾಗುವುದಿಲ್ಲ. ಒಂದ್ ಅರ್ಥದಲ್ಲಿ ಇವು ನಡು ಹೊಳೆಯಲ್ಲಿ ಕೈ ಬಿಡುವುದೇ ಆಗಿರುತ್ತದೆ. ಇದರ ಬದಲಿಗೆ ಇಂದು ಪ್ರಬುದ್ಧ ಭೀಮರ ಬೃಹತ್ ಲಿಖಿತ ಸಂವಿಧಾನದ ರಾಜಮಾರ್ಗದಲ್ಲಿ ರಾಜರಂತೆ ನಡೆದರೆ ಮಾತ್ರ ನಾವು ಯಾವುದೇ ಹಳ್ಳಗಳನ್ನು ದಾಟಿ ಸುಧೀರ್ಘವಾದ ನ್ಯಾಷನಲ್ ಹೈವೇಯನ್ನು ತಲುಪಬಹುದು. ಇಂತಹ ನ್ಯಾಷನಲ್ ಹೈವೇ ಭಾರತವನ್ನು ತಲುಪಿ ನಮ್ಮ ಗುರಿಯನ್ನು ಸಾಧಿಸಲು ಇರುವ  ಏಕೈಕ ರಾಜ ಮಾರ್ಗ ಎಂದರೆ ರಾಜಗೃಹದ ಅಧಿಪತಿ – ಭಾರತದ ಧೀಮಂತ ಬಾಬಾ ಸಾಹೇಬರು ನಿರ್ಮಿಸಿಕೊಟ್ಟ ಶಿಕ್ಷಣ ಸಂಘಟನೆ ಹೋರಾಟ ಅಂದರೆ ಪ್ರಬುದ್ಧತೆ  ಸ್ವಾಭಿಮಾನ  ಮೂಲನಿವಾಶತ್ವವನ್ನೇ ಪ್ರಬಲವಾಗಿ ಪ್ರತಿಪಾದನೆ ಮಾಡಿ ಕತ್ತಲಿಂದ ಬೆಳಕಿನೆಡೆಗೆ ಮುನ್ನಡೆಸಿದ ಬೃಹತ್ ಲಿಖಿತ ಸಂವಿಧಾನದ ಮಾರ್ಗ ಮಾತ್ರ.

ಮೇಲೆ ಉಲ್ಲೇಖಿಸಿದ ಮಾರ್ಗದಲ್ಲಿ ಮುನ್ನಡೆಯಲು ಶತಶತಮಾನಗಳಿಂದ ನಮ್ಮ ತಲೆಯಲ್ಲಿ ಹುದುಗಿರುವ ಅಜ್ಞಾನ – ಮತ್ತು ಅಂಧಕಾರವನ್ನು ಸಂಪೂರ್ಣವಾಗಿ ತೊಲಗಿಸಿದರೆ ಸಾಕು

ಆದರೆ

ಸಂವಿಧಾನದ ಮಾರ್ಗದಲ್ಲಿ ಮುನ್ನಡೆಯಲು ಜ್ಞಾನದ ಅವಶ್ಯಕತೆ ಇದ್ದೇ ಇರುತ್ತದೆ. ಅದೇ ಅಜ್ಞಾನದ ಅಥವಾ ಧಾರ್ಮಿಕ ರಸ್ತೆಯಲ್ಲಿ ನಡೆಯಲು ಅಜ್ಞಾನ ಒಂದಿದ್ದರೆ ಸಾಕು. ಇದಾಗಬಾರದು  ಜೈ ಭೀಮ್ ಎನ್ನುವ ಜ್ಞಾನ.

Donate Janashakthi Media

One thought on “ಸಾಮಾಜಿಕ ಅಸ್ಪೃಶ್ಯತೆಗಿಂತಲೂ ಧಾರ್ಮಿಕ ಅಸ್ಪೃಶ್ಯತೆ ಬಹುದೊಡ್ಡ ಅಪಾಯಕಾರಿ

Leave a Reply

Your email address will not be published. Required fields are marked *