ಚೈತ್ರಿಕಾ ಹರ್ಗಿ
ಅವರ ಮಕ್ಕಳು ಹಿಜಾಬ್ ಧರಿಸಬಾರದು ಎನ್ನುವವರು ತಮ್ಮ ಮಕ್ಕಳು ಕುಂಕುಮ ಧರಿಸದೆ, ಹೆಂಡತಿ ತಾಳಿ ಕುಂಕುಮ ಧರಿಸದೆ ಶಾಲೆಗೆ ಕಳುಹಿಸಲು ಸಿದ್ದರಾಗಿದ್ದಾರಾ?
ನಮ್ಮಲ್ಲನೇಕರಿಕೆ ಧಾರ್ಮಿಕ ಸಂಕೇತಗಳನ್ನು ಧರಿಸುವಂತಿಲ್ಲ ಎಂದರೆ, ಕುಂಕುಮ, ಬಳೆ, ವಿಭೂತಿ, ರುದ್ರಾಕ್ಷಿಯೂ ಇರುವುದಿಲ್ಲ ಅಲ್ಲವಾ ಎಂದು ಪ್ರಶ್ನೆ ಹಾಕಿದ ಕೂಡಲೇ ಕಣ್ಣು ಕೆಂಪಾಗುತ್ತವೆ. ಕೇಸರಿ ಶಾಲು ಹೊದ್ದವರೆ ಈ ಪ್ರಶ್ನೆಗಳಿಗೆ ಮೊದಲು ಸಿಟ್ಟಿಗೇಳುತ್ತಾರೆ.
ನಮ್ಮ ಸಂವಿಧಾನ ಜಾತ್ಯಾತೀತತೆಯನ್ನು ಹೇಳುವ ಜೊತೆಗೆ ಧಾರ್ಮಿಕ ಹಕ್ಕುಗಳನ್ನು ಹೇಳುತ್ತದೆ. ಈ ಎರಡನ್ನೂ ಇಟ್ಟುಕೊಂಡು ಮುಗಿಯದ ವಾದಗಳನ್ನು ಮಾಡಬಹುದು.
ಪುರುಷಾಧಿಪತ್ಯ, ಧರ್ಮರಾಜಕಾರಣ, ವೈಯಕ್ತಿಕ ಆಯ್ಕೆ ಇವುಗಳ ಮೇಲೆ ಪುಂಖಾನುಪುಂಖವಾಗಿ ಚರ್ಚಿಸಬಹುದು. ಹಿಜಾಬ್ ಅನ್ನು ಬಹುಸಂಖ್ಯಾತರು ಸಮಸ್ಯೆಯಾಗಿಸಿದ ಆರಂಭಿಕ ಹಂತದಲ್ಲಿ ಇವೆಲ್ಲಾ ಇಟ್ಟುಕೊಂಡು ಚರ್ಚೆ ಮಾಡಿದ್ದಾಗಿದೆ. ಇದು ಪುರುಷ ಪ್ರಧಾನ ಸಮಾಜದ ಹೇರಿಕೆ ಹೌದು ಹಾಗೆ ವೈಯಕ್ತಿಕ ಆಯ್ಕೆ ಎಂಬುದರ ಮೇಲೆ ಸಾಕಷ್ಟು ಮಾತನಾಡಿರುವೆ. ಆದರ ಹಾಗೆ ಮಾತನಾಡುವ ಹಂತ ಮೀರಿದ ಸಮಸ್ಯೆಯನ್ನು ಕೊನೆಗೆ ಈಗ ಕೋರ್ಟ್ ಏನು ಹೇಳುತ್ತದೆಯೊ ಅದಕ್ಕೆ ತಲೆ ಬಾಗಬೇಕು.
ತೀರ್ಪು ಬಂದ ಮೇಲೂ ಹಿಜಾಬ್ ಮೇಲಿನ ಅನೈತಿಕ ಪೋಲಿಸ್ ಗಿರಿ ನಿಲ್ಲುತ್ತದೆಯೆ ? ಕೆಲವು ಆಹಾರ ಮಾನ್ಯವಾಗಿದ್ದಾಗಲೂ ಅದನ್ನು ತಿಂದಿದ್ದಕ್ಕೆ ಈ ಸಮಾಜದ ಕ್ರೂರಿಗಳು ಅವರನ್ನು ಕೊಂದಿಲ್ಲವೆ ?
ಆ ಕಾರಣದಿಂದ ಮನುಷ್ಯರಾಗಿ ಕೇವಲ ಮನುಷ್ಯರಾಗಿ ಹಿಜಾಬ್ ಅನ್ನು ನೋಡುವುದಾದರೆ.
- ನನಗೂ ಹಿಜಾಬ್ ಪುರುಷ ಪ್ರಧಾನ ವ್ಯವಸ್ಥೆಯ ತಲೆಬಟ್ಟೆ ಎನಿಸಿದ್ದರಿಂದ ಹಾಗೆ ನನ್ನ ಕಾಳಜಿ ಪುರುಷರ ಹಿಡಿತದಿಂದ ಅವರು ಹೊರಬರಬೇಕು ಎಂಬುದೆ ಆಗಿರುವುದರಿಂದ ಹಾಗೆ ತನ್ನ ಸಮಾಜವನ್ನು ಪ್ರಶ್ನಿಸಲು ಹೆಣ್ಣಿಗೆ ಮೊದಲು ಶಿಕ್ಷಣ ಬೇಕು.
- ಇಲ್ಲಿ ಹಿಜಾಬ್ ಅನೇಕರಿಗೆ ವೈಯಕ್ತಿಕ ಆಯ್ಕೆ ಇಷ್ಟ ಆದಂತೆ ಕುಂಕುಮ ಬಳೆ ತಾಳೆ ಕೂಡ ನಿಮ್ಮ ಮತ್ತು ನಮ್ಮ ಮನೆಗಳ ಹೆಣ್ಣುಮಕ್ಕಳಿಗೆ ಇಷ್ಟ. ಅವರಿಗೆ ಅದು ಹೇರಿಕೆಯಲ್ಲದೆ ಇಷ್ಟ ಆಗಿದ್ದರೆ ಧರಿಸುವುದರಲ್ಲಿ ಯಾವ ತೊಂದರೆಯು ಇಲ್ಲ. ಇವುಗಳಿಂದ ಯಾವುದೆ ಸಾಮಾಜಿಕ ಹಾನಿಯಾಗಲಿ ಅಶ್ಲೀಲತೆಯಾಗಲಿ ಅಲ್ಲ. ಆದ್ದರಿಂದ ಅವರ ಇಷ್ಟಕ್ಕೆ ಬದುಕಲು ಬಿಡಿ.
- ಶಿಕ್ಷಣಕ್ಕಿಂತ ಧರ್ಮ ಮುಖ್ಯ ಎಂದು ಹೆಣ್ಣುಮಕ್ಕಳು ಹೇಳಿದ್ದಾರೆ ಎಂದರೆ ಇದು ಸಹ ಪುರುಷಾಧಿಪತ್ಯದ ಬಂದೂಕಿನಿಂದ ಹೊಡೆಯಲಾದ ಗುಂಡುಗಳೆ. ನಿಜವಾಗಿಯೂ ನಿಮಗೆ ಆ ಹೆಣ್ಣುಮಕ್ಕಳು ಧರ್ಮ ಮುಖ್ಯವೊ ಶಿಕ್ಷಣ ಮುಖ್ಯವೊ ಎಂದು ತಿಳಿಸಬೇಕು ಎಂದಿದ್ದರೆ ಶಿಕ್ಷಣ ಕಲಿಯಲು ಬಿಡಿ.
- ಎಲ್ಲಾ ಸಮುದಾಯದಲ್ಲೂ ಮತಾಂಧರು ಮೂರ್ಖರು ಇದ್ದಾರೆ. ಅವರ ಹೇಳಿಕೆಗಳನ್ನು ನಿಮ್ಮ ಯಾವ ಸಮರ್ಥನೆಗೂ ಬಳಸದೆ ಮನುಷ್ಯತ್ವದಿಂದ ಮಾತ್ರ ಹಿಜಾಬ್ ಕುರಿತು ಆಲೋಚಿಸೋಣ.