ಬೆಂಗಳೂರು: ಇತ್ತೀಚೆಗೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ʻಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕುʼ ಎಂದು ಹೇಳಿದ್ದಾರೆ. ಇದು ಅತ್ಯಂತ ಖಂಡನೀಯ ಸಂಗತಿಯಾಗಿದೆ ಎಂದು ಜಾಗೃತ ನಾಗರಿಕರು, ಕರ್ನಾಟಕ ತಿಳಿಸಿದೆ.
ಈ ಬಗ್ಗೆ ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ, ಜಾಗೃತ ನಾಗರಿಕರು, ಕರ್ನಾಟಕ – ಕಾನೂನು ವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನೂ ನಿಭಾಯಿಸಬೇಕಿದ್ದ ಸಚಿವರೊಬ್ಬರು ತಮ್ಮ ಕಾರ್ಯಕರ್ತರಿಗೆ ಈ ರೀತಿ ಹೊಡೆದು ಹಾಕಿ ಎಂದು ಪ್ರಚೋದಿಸುವಂತಹ ಹೇಳಿಕೆ ಕೊಡುವುದು ಆತಂಕಕಾರಿ ಸಂಗತಿಯಾಗಿದೆ ಮತ್ತು ಇದು ಶಿಕ್ಷಾರ್ಹ ಅಪರಾಧ ಎನಿಸಿಕೊಳ್ಳುತ್ತದೆ ಎಂದಿದ್ದಾರೆ.
ಇದನ್ನು ಓದಿ: ಕೋಮುವಾದ-ಜಾತಿವಾದ ಬೆಳೆಸುವ ಮತ್ತು ಜನತೆಯ ಮೇಲೆ ಅಪಾರ ಸಾಲದ ಹೊರೆ ಹೇರುವ ಜನವಿರೋಧಿ ಬಜೆಟ್: ಸಿಪಿಐ(ಎಂ)
ಇದುವರೆಗೂ ತನ್ನ ರಾಜಕೀಯ ವಿರೋಧಿಗಳನ್ನು, ತನ್ನ ಸಿದ್ಧಾಂತವನ್ನು ವಿರೋಧಿಸುವವರನ್ನು ದೇಶದ್ರೋಹಿ ಎಂದು ಕರೆಯುತ್ತಿದ್ದ ಬಿಜೆಪಿ ಪಕ್ಷಕ್ಕೆ ಅದರಿಂದ ರಾಜಕೀಯ ಲಾಭ ಬರುವುದಿಲ್ಲ ಎಂದು ಖಾತರಿಯಾದಂತಿದೆ. ಹೀಗಾಗಿ ಇವರ ವಿಕೃತಿ ಮುಂದುವರಿದು ‘ಕೊಚ್ಚಿ, ಕೊಲ್ಲಿ’ ಅಂತ ಪ್ರಚೋದಿಸುವ ಹಂತಕ್ಕೆ ತಲುಪಿದೆ. ಇದುವರೆಗೂ ಸಮಾಜದ ಪುಂಡು ಗುಂಪುಗಳು (ಫ್ರಿಂಜ್ ಗುಂಪು) ಮಾತನಾಡುವ ಇಂತಹ ದ್ವೇಷಪೂರಿತ ಮಾತುಗಳನ್ನು ಜನರಿಂದ ಆಯ್ಕೆಯಾದ ರಾಜಕಾರಣಿಗಳು ಮಾತನಾಡತೊಡಗಿರುವುದು ದುರಂತ ಎಂದು ಹೇಳಿದ್ದಾರೆ.
ಈ ಹಿಂದೆ ಸಂಘೀ ವಖ್ತಾರರು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದಿಸುವಂತಹ ಭಾಷಣಗಳನ್ನು ಮಾಡುತ್ತಿದ್ದರು. ಅದರ ಫಲವಾಗಿ ಸಮಾಜದಲ್ಲಿ ದ್ವೇಷದ ವಾತಾವರಣ ಬೆಳೆಯುತ್ತಿತ್ತು. ಇದು ನಂತರ ಗೋವಿಂದ ಪನ್ಸಾರೆ, ನರೇಂದ್ರ ಧಾಬೋಲ್ಕರ್, ಎಂ ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಅವರ ಹತ್ಯೆಗಳಲ್ಲಿ ಪರ್ಯಾವಸಾನವಾಯಿತು. ಈಗ ಅಶ್ವತ್ಥನಾರಾಯಣ ಅವರು ದ್ವೇಷ ಬಿತ್ತುವ ಮಾತನಾಡಿದ್ದಾರೆ. ಇದು ಮುಂದೆ ಯಾವ ಬಗೆಯ ದುಷ್ಪರಿಣಾಮಗಳನ್ನು ಬೀರಬಹುದು ಎಂದು ಜಾಗೃತ ನಾಗರಿಕರು, ಕರ್ನಾಟಕ ಆತಂಕ ವ್ಯಕ್ತಪಡಿಸಿದೆ.
ಸಚಿವ ಅಶ್ವತ್ಥನಾರಾಯಣ ಅವರ ಈ ಹೇಳಿಕೆ ಅವರ ದ್ವೇಷ ಬಿತ್ತಿ ಸಮಾಜದಲ್ಲಿ ಶಾಂತಿ ಕದಡುವ ಮನಃಸ್ಥಿತಿಯನ್ನು ತೋರಿಸುತ್ತದೆ ಮತ್ತು ಆಡಳಿತ ಪಕ್ಷದ ಮುಖಂಡರೊಬ್ಬರು ವಿರೋಧ ಪಕ್ಷದ ಮುಖಂಡರನ್ನು ಹೊಡೆದು ಕೊಲ್ಲಿ ಎಂದು ಹೇಳಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಸಾಧನೆಗಳಿಗೆ ಮೊದಲ ಸ್ಥಾನ ಎನ್ನುವ ಹೆಗ್ಗಳಿಕೆ ಗಳಿಸುವುದರ ಬದಲು ಅಪರಾಧಿಕರಣದಲ್ಲಿ ಮೊದಲು ಎನ್ನುವ ವಾಸ್ತವಕ್ಕೀಗ ಕರ್ನಾಟಕ ಸಾಕ್ಷಿಯಾಗಬೇಕಿದೆ ಮತ್ತು ಸ್ವತಃ ಅಶ್ವತ್ಥನಾರಾಯಣ ಅವರು ಈ ಕುರಿತು ಬಾಯಿ ಮಾತಿನ ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಸಿದ್ದರಾಮಯ್ಯ ವಿರುದ್ಧ ಸಚಿವರ ಪ್ರಚೋದನಕಾರಿ ಹೇಳಿಕೆ; ಸದನದಲ್ಲಿ ಗದ್ದಲ-ಕೋಲಾಹ
ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವರನ್ನು ಒಳಗೊಂಡಂತೆ ಇತರ ಬಿಜೆಪಿ ಮುಖಂಡರು ತಮ್ಮ ಪಕ್ಷದ ಸಚಿವರ ಈ ‘ಹೊಡೆದು ಕೊಲ್ಲಿ’ ಹೇಳಿಕೆಯನ್ನು ಖಂಡಿಸದೆ ಮೌನವಾಗಿರುವುದು ಸಹ ಖಂಡನೀಯ. ಇದು ನಮ್ಮ ಕರ್ನಾಟಕ ರಾಜ್ಯ ಮುಂದಿನ ದಿನಗಳಲ್ಲಿ ಸಾಗುವ ದಿಕ್ಕನ್ನು ತೋರಿಸುತ್ತದೆ ಎಂದು ಜಾಗೃತ ನಾಗರಿಕರು, ಕರ್ನಾಟಕದ ಸದಸ್ಯರು ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆ ‘ಟಿಪ್ಪು ವರ್ಸಸ್ ಸಾವರ್ಕರ್’ ಎಂದು ಘೋಷಿಸಿದ ಬಿಜೆಪಿ ಮುಖಂಡರಿಂದ ಮತ್ತಿನ್ನೇನು ನಿರೀಕ್ಷಿಸಲು ಸಾಧ್ಯ? ಅಭಿವೃದ್ಧಿ, ಪ್ರಗತಿ ಆಧಾರದಲ್ಲಿ ಮಾತನಾಡಲು ಇವರಿಗೆ ನೈತಿಕತೆ ಇಲ್ಲ ಎನ್ನುವುದು ಇದರಿಂದ ಸಾಬೀತಾಗುತ್ತದೆ. ವಿರೋಧ ಪಕ್ಷದ ನಾಯಕ, ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೇ ಇಂತಹ ಪರಿಸ್ಥಿತಿಯಿದೆ ಎಂದರೆ ಜನಸಾಮಾನ್ಯರ ಪಾಡೇನು? ಈ ಮೂಲಕ ಯಾವ ಸಂದೇಶ ತಲುಪಿಸುತ್ತಿದ್ದಾರೆ? ಎಂದು ಪ್ರಶ್ನಿಸಲಾಗಿದೆ.
ಇದು ಧರೆ ಹತ್ತಿ ಉರಿದಡೆ ಎನ್ನುವಂತಹ ದಿನಗಳಲ್ಲಿ ನಾವು ಬದುಕುತ್ತಿದ್ದೇವೆ. ಸುಪ್ರೀಂ ಕೋರ್ಟ್ ಕೂಡಾ ದ್ವೇಷ ಭಾಷಣದ ವಿರುದ್ಧ ಮಾತಾಡಿದ್ದು ಅದನ್ನು ನಿಯಂತ್ರಿಸುವ ಜವಾಬ್ದಾರಿ ತಮ್ಮಂತಹ ಸಾಂವಿಧಾನಿಕ ಹೊಣೆ ಹೊತ್ತವರದು ಎಂದು ಹೇಳಿದೆ.
ಇದನ್ನು ಓದಿ: ಸದನದ ಕಲಾಪ ನುಂಗಿದ ಅಮಿತ್ ಶಾ, ಮತ್ತೆ ಉ.ಕ ನಿರ್ಲಕ್ಷ್ಯ , ಅದೇ ಭಾಷಣ! ಅದೇ ಭರವಸೆ!! ಮತ್ತದೆ ನಿರಾಸೆ!!!
ಈ ಕೂಡಲೇ ಸಚಿವ ಅಶ್ವತ್ಥನಾರಾಯಣ ವಿರುದ್ಧ ಕೇಸ್ ದಾಖಲಿಸಬೇಕು, ಅವರ ಹೇಳಿಕೆ ಕುರಿತು ವಿಚಾರಣೆ ನಡೆಯಬೇಕು ಹಾಗೂ ಅವರು ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಇಲ್ಲವೇ ತಾವು ಪಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಜಾಗೃತ ನಾಗರಿಕರು, ಕರ್ನಾಟಕ ಪರವಾಗಿ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಡಾ.ಎಸ್.ಜಿ.ಸಿದ್ದರಾಮಯ್ಯ, ಡಾ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್, ವಿಮಲಾ.ಕೆ.ಎಸ್., ಬಿ.ಶ್ರೀಪಾದ ಭಟ್, ಡಾ.ಮೀನಾಕ್ಷಿ ಬಾಳಿ, ಕೆ.ನೀಲಾ, ಟಿ.ಸುರೇಂದ್ರ ರಾವ್, ಡಾ.ವಸುಂಧರಾ ಭೂಪತಿ, ರುದ್ರಪ್ಪ ಹುನಗವಾಡಿ, ಎನ್.ಆರ್.ವಿಶುಕುಮಾರ್, ಡಾ.ನಿರಂಜನಾರಾಧ್ಯ. ವಿ.ಪಿ., ಯೋಗಾನಂದ, ವಾಸುದೇವ ಉಚ್ಚಿಲ, ಡಾ.ಎನ್.ಗಾಯತ್ರಿ, ಡಾ.ಲೀಲಾ ಸಂಪಿಗೆ, ಕಾ.ತ.ಚಿಕ್ಕಣ್ಣ, ಮತ್ತೂ ಇತರರು ಒಪ್ಪಿಗೆ ಸೂಚಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ