ಬೆಂಗಳೂರು: ಭಾರತದ ಮಹಾನ್ ಮಾರ್ಕ್ಸ್‌ವಾದಿ ಚಿಂತಕರು ಮತ್ತು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಶಿವದಾಸ್ ಅವರ ಜನ್ಮಶತಮಾನೋತ್ಸವ ಅಂಗವಾಗಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಭೆಯನ್ನು ಏರ್ಪಡಿಸಲಾಗಿತ್ತು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)-ಎಸ್‌ಯುಸಿಐ(ಸಿ) ಪಕ್ಷದ ಕೇಂದ್ರ ಪಾಲಿಟ್ ಬ್ಯೂರೋ ಸದಸ್ಯ ಕೆ ರಾಧಾಕೃಷ್ಣ ಅವರು ಶಿವದಾಸ್ ಘೋಷ್ ಚಿಂತನೆಗಳ ಬಗ್ಗೆ ವಿವರವಾಗಿ ಮಾತನಾಡಿ “ಯಾಕೆ ಅವರು ಮಹಾನ್ ಚಿಂತಕರು. ಮನುಷ್ಯನಲ್ಲಿ ವೈಯಕ್ತಿಕ ಮತ್ತು ಸಾಮಾಜಿಕ ಹಿತಾಸಕ್ತಿಯ ಅಂಶಗಳಿರುತ್ತವೆ. ಯಾರಿಗೆ ಅವರವರ ಕಾಲದ ಸಾಮಾಜಿಕ ಹಿತವೇ ಸರ್ವಸ್ವವಾಗಿರುತ್ತದೆಯೋ ಅವರು ಮಹಾನರು. ಅವರ ವಿಚಾರ ಮತ್ತು ಆಚಾರಗಳು ಒಂದೇ ಆಗಿರುತ್ತದೆ. ಸಾಮಾನ್ಯ ವ್ಯಕ್ತಿಗಳಿಗೂ ಮಹಾನ್ ವ್ಯಕ್ತಿಗಳಿಗೂ ಇರುವ ಅಂತರ ಇದು”ಎಂದು ವಿಶ್ಲೇಷಿಸಿದರು.
ಮುಂದುವರಿದು ಮಾತನಾಡಿದ ಅವರು, “ದೇಶದಲ್ಲಿ ಇಂದು ಆರ್‌ಎಸ್‌ಎಸ್ ಬೆಳೆಯಲು ಜಾಗತಿಕ ಕಮ್ಯುನಿಸ್ಟ್ ಚಳುವಳಿಗಾದ ಹಿನ್ನಡೆಯೇ ಮುಖ್ಯಕಾರಣ. ಜೊತೆಗೆ 1974ರ ದಶಕದ ಜನ ಹೋರಾಟದಲ್ಲಿ ಜಯಪ್ರಕಾಶ್ ನಾರಾಯಣ್ ಸಂಘ ಪರಿವಾರವನ್ನು ಸೇರಿಸಿಕೊಂಡಿದ್ದೇ ಕಾರಣ ಎಂದು ವಾದಿಸಲಾಗುತ್ತಿದೆ. ಆದರೆ ಇದು ಸುಳ್ಳು. ಬದಲಿಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನಸಂಘ ಮತ್ತಿತರ ಪಕ್ಷಗಳು ಜನರ ಸರ್ಕಾರ ವಿರೋಧಿ ಆಕ್ರೋಶವನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳಲು ಹೋರಾಟದಲ್ಲಿ ಪಾಲ್ಗೊಂಡಿತು. ಅಂದು, ಪರ್ಯಾಯವಿಲ್ಲದ ಜನತೆ ಜನಸಂಘ, ಆರ್‌ಎಸ್‌ಎಸ್ ಕಡೆ ನೋಡಬೇಕಾಯಿತು” ಎಂದರು.
ಎಸ್‌ಯುಸಿಐ(ಸಿ) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ ಉಮಾ ಮಾತನಾಡಿ” ನಮ್ಮ ಪಕ್ಷ ಸಂಘಟಿಸುತ್ತಿರುವ ನೂರಾರು ಹೋರಾಟಗಳ ಹಿಂದಿನ ಸೈದ್ಧಾಂತಿಕ, ಸಾಂಸ್ಕೃತಿಕ-ನೈತಿಕ ಬಲ ಕಾಮ್ರೇಡ್ ಶಿವದಾಸ್ ಘೋಷ್. ಆಗಸ್ಟ್ 15ರ ಸ್ವಾತಂತ್ರ‍್ಯದ ಮೂಲಕ ದೇಶದ ಬಂಡವಾಳಶಾಹಿಗಳಿಗೆ ರಾಜಕೀಯ ಅಧಿಕಾರ ದೊರಕಿದೆ ಎಂಬುದನ್ನು ಅವರು ಗುರುತಿಸಿದರು. ದೇಶದ ರೈತರು, ಕಾರ್ಮಿಕರು, ಮಹಿಳೆಯರು ಮೊದಲಾದ ಶೋಷಿತರು ನಿಜವಾದ ಸ್ವಾತಂತ್ರ‍್ಯ ಪಡೆಯಲಿಲ್ಲ. ಅದಕ್ಕಾಗಿ, ಶಿವದಾಸ್ ಘೋಷರು, ಆಗಸ್ಟ್ 15ನ್ನು ಜನತೆಯ ವಿಮುಕ್ತಿಯ ಪ್ರತಿಜ್ಞಾ ದಿನವೆಂದು ಆಚರಿಸಲು ಕರೆ ನೀಡಿದರು. ಸಾರ್ವಜನಿಕ ಉದ್ದಿಮೆಗಳೇ ಸಮಾಜವಾದ ಅಲ್ಲ. ನಮ್ಮ ದೇಶದಲ್ಲಿ ದುಡಿಯುವ ಜನರಿಗೆ ಸಮಾಜವಾದದ ಬಗ್ಗೆ ಇದ್ದ ಆಕರ್ಷಣೆಯನ್ನು ದಿಕ್ಕು ತಪ್ಪಿಸುವುದಕ್ಕಾಗಿ ತಂದ ಬಂಡವಾಳಶಾಹಿ ಮಿಶ್ರ ಆರ್ಥಿಕತೆಯನ್ನೇ ಸಮಾಜವಾದಿ ವ್ಯವಸ್ಥೆ ಎಂಬ ಗೊಂದಲಕ್ಕೆ ಸೂಕ್ತ ಉತ್ತರ ನೀಡಿದವರು ಘೋಷ್. ಇಂದು ನಮ್ಮ ದೇಶದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದಾಗ ಈ ವಿಶ್ಲೇಷಣೆಯ ವಾಸ್ತವತೆ ಅರ್ಥವಾಗುತ್ತದೆʼʼ ಎಂದರು.
ಸ್ವಾತಂತ್ರ‍್ಯ ಹೋರಾಟಕ್ಕೆ ಬೆನ್ನು ಹಾಕಿದ, ರಾಷ್ಟ್ರ ಧ್ವಜವನ್ನೇ ಒಪ್ಪಿಕೊಳ್ಳದ ಸಂಘ ಪರಿವಾರ ಇವತ್ತು ಮನೆಮನೆಯಲ್ಲಿ ತಿರಂಗಾ ಎಂಬ ಘೋಷಣೆ ಮಾಡುತ್ತಿರುವುದು ಆಷಾಢಭೂತಿತನ. ಪ್ರಜಾಪ್ರಭುತ್ವದ ಎಲ್ಲ ಅಂಗಗಳೂ ಇಂದು ಬಂಡವಾಳಶಾಹಿಗಳ ಕೈಗೊಂಬೆಗಳಾಗಿವೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಅವರು, ಆಗಸ್ಟ್ 5, 2022ರಿಂದ ಆಗಸ್ಟ್ 5, 2023ರ ವರೆಗೆ ಮಹಾನ್ ಮಾರ್ಕ್ಸ್‌ವಾದಿ ಚಿಂತಕರಾದ ಶಿವದಾಸ್ ಘೋಷರ ಜನ್ಮ ಶತಮಾನೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಅವರ ಚಿಂತನೆಗಳು ಇವತ್ತು ದೇಶದ ದುಡಿಯುವ ಮತ್ತು ಶೋಷಿತ ಜನರನ್ನು ಮುಟ್ಟಬೇಕಾಗಿದೆ. ಸ್ವಾತಂತ್ರ‍್ಯ ಹೋರಾಟದಲ್ಲಿ ಕ್ರಾಂತಿಕಾರಿ ಪಂಥದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ಇಪ್ಪತ್ತರ ಹರೆಯದಲ್ಲೇ ಈ ದೇಶದಲ್ಲಿ ಒಂದು ನೈಜ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಲು ಬೇಕಾದ ಪ್ರಯತ್ನ ಆರಂಭಿಸಿದರು.
ಸಭೆಯ ಆರಂಭದಲ್ಲಿ ಶಿವದಾಸ್ ಘೋಷ್ ಅವರ, ‘ಆಗಸ್ಟ್ 15ರ ಸ್ವಾತಂತ್ರ‍್ಯ ಮತ್ತು ಜನತೆಯ ವಿಮುಕ್ತಿ’, ‘ಚೀನಾದ ಸಾಂಸ್ಕೃತಿಕ ಕ್ರಾಂತಿ’, ‘ಭಾರತದ ಸಾಂಸ್ಕೃತಿಕ ಚಳುವಳಿ ಮತ್ತು ನಮ್ಮ ಕರ್ತವ್ಯಗಳು’ ಎಂಬ ಮೂರು ಕೃತಿಗಳ ಕನ್ನಡ ಅವತರಣಿಕೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ.ರಾಧಾಕೃಷ್ಣ ಅವರು ಬಿಡುಗಡೆ ಮಾಡಿದರು. ರಾಜ್ಯದ ಬಹುತೇಕ ಜಿಲ್ಲೆಗಳಿಂದ ಆಗಮಿಸಿದ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ಸಲ್ಲಿಸಿದರು.
ವೇದಿಕೆಯಲ್ಲಿ ಎಸ್‌ಯುಸಿಐ(ಸಿ) ಪಕ್ಷದ ರಾಜ್ಯ ನಾಯಕರಾದ ಎಚ್ ವಿ ದಿವಾಕರ್, ಎಂಎನ್ ಶ್ರೀರಾಂ, ಕೆ.ಸೋಮಶೇಖರ್, ಎಂ.ಶಶಿಧರ್, ಬಾ.ಸುನೀತ್ ಕುಮಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.