ಹುಣಸೂರು: ಸಾಲ ವಸೂಲಿಗಾಗಿ ಖಾಸಗಿ ಬ್ಯಾಂಕ್ ಸಿಬ್ಬಂದಿಗಳು ರೈತರಿಗೆ ಧಮ್ಕಿ ಹಾಕುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಈ ನಡುವೆ ಬ್ಯಾಂಕ್ ಸಿಬ್ಬಂದಿಯೊಬ್ಬ ಮಹಿಳೆ ಸಾಲ ತೀರಿಸಲಿಲ್ಲವೆಂದು ದರ್ಪ ತೋರಿಸಿರುವ ಘಟನೆಯೊಂದು ನಡೆದಿದೆ.
ಹುಣಸೂರು ತಾಲ್ಲೂಕಿನ ಕೊಳಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಬ್ಯಾಂಕ್ ಸಿಬ್ಬಂದಿಯೊಬ್ಬ ರಸ್ತೆ ಮಧ್ಯದಲ್ಲಿ ನಿಲ್ಲಿಸಿಕೊಂಡು ಮಹಿಳೆಯನ್ನು ಸಾಲ ತೀರಿಸಬೇಕೆಂದು ತೀವ್ರ ಒತ್ತಡ ಹೇರಿದ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ.
ವಾರದ ಕಂತಿನ ನಿಯಮದಡಿ ಲತಾ ಎಂಬ ರೈತ ಮಹಿಳೆ ಖಾಸಗಿ ಬ್ಯಾಂಕ್ ನಲ್ಲಿ ರೂ.50 ಸಾವಿರ ಸಾಲ ಪಡೆದಿದ್ದಾರೆ. ವಾರಕ್ಕೆ 500 ರೂಪಾಯಿಯಂತೆ ಕಂತು ಪಾವತಿಸುವ ಸಾಲ ಪಡೆದಿರುವ ಮಹಿಳೆಯು ಕೆಲವು ಕಂತುಗಳನ್ನು ಕಟ್ಟಿರಲಿಲ್ಲ. ಹಾಗಾಗಿ ಬ್ಯಾಂಕ್ ಸಿಬ್ಬಂದಿ ನಡುರಸ್ತೆಯಲ್ಲಿ ಮಹಿಳೆಯನ್ನು ಅಡ್ಡಗಟ್ಟಿ ಸಾಲ ವಸೂಲಿಗೆ ನಿಂತಿದ್ದಾನೆ.
ಹುಣಸೂರಿನ ಐಡಿಎಫ್‌ಸಿ ಬ್ಯಾಂಕ್ ಸಿಬ್ಬಂದಿ ಸುರೇಶ್ ಎಂಬಾತನ ಗುಂಡಾ ವರ್ತನೆ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಲ ಕಟ್ಟಲು ಆಗೋದಿಲ್ಲ ಎಂದರೇ, ಕದ್ದು ಎಲ್ಲಿಗಾದ್ರು ಹೋಗಿ ಬಿಡು, ಇಲ್ಲ ಎಂದರೇ ಸತ್ತು ಹೋಗು ಸಾಲ ಆದ್ರು ಮನ್ನಾ ಆಗುತ್ತೆ. ನನಗೆ ಈಗ ಸಾಲದ ಕಂತು ಕಟ್ಟಲೇಬೇಕು ಎಂದು ತಾಕೀತು ಮಾಡಿದ್ದಾನೆ. ಈ ವೇಳೆ ಸ್ಥಳೀಯರೊಬ್ಬರು ಮಧ್ಯಪ್ರವೇಶಿಸಿ ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಮಹಿಳೆ ಸಾಲ ತಗೊಂಡು ಹಣ ಕಟ್ಟಿಲ್ಲ. ನಾನು ಮ್ಯಾನೇಜರ್ಗೆ ಹೇಳಿ ಹೇಳಿ ಸಾಕಾಗಿದೆ. ಸಾಲ ಹಣವನ್ನು ಬೀಸಾಡಲು ಹೇಳಿ ಆಯ್ದುಕೊಂಡು ಹೋಗ್ತೇನೆ ಎಂದು ದರ್ಪ ತೋರಿಸಿದ್ದಾನೆ.
ಮಹಿಳೆ ಸಾಲ ಹಿಂದಿರುಗಿಸಲು ಗಡುವು ಕೇಳಿದರೂ ಬ್ಯಾಂಕ್ ಸಿಬ್ಬಂದಿ ಒಪ್ಪಿಕೊಂಡಿಲ್ಲ. ಸ್ಥಳೀಯರೊಬ್ಬರು ಮಾನವೀಯತೆ ದೃಷ್ಟಿಯಿಂದ ಪ್ರಶ್ನಿಸಿದರೂ ಉಡಾಫೆಯಿಂದ ಉತ್ತರಿಸಿದ ಸಿಬ್ಬಂದಿ ಸಾಲದ ಕಂತಿಗಾಗಿ ಪಟ್ಟು ಹಿಡಿದಿದ್ದಾನೆ.
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಮಹಿಳೆ ಅಂಗಲಾಚಿ ಬೇಡಿದ್ರೂ, ಮಾನವೀಯತೆ ತೋರದ ಬ್ಯಾಂಕ್ ಸಿಬ್ಬಂದಿಯ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.