ಸಾಲ ಕೊಡದಿದ್ದಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಬ್ಯಾಂಕಿಗೆ ಬೆಂಕಿ ಹಚ್ಚಿದ

ಹಾವೇರಿ: ಬ್ಯಾಂಕಿನಿಂದ ಸಾಲ ಸಿಗುತ್ತಿಲ್ಲವೆಂದು ಬೇಸರಗೊಂಡ ವ್ಯಕ್ತಿಯೊಬ್ಬ ಕೆನರಾ ಬ್ಯಾಂಕ್ ಶಾಖೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ನಡೆದಿದೆ.

ರಟ್ಟಿಹಳ್ಳಿ ನಿವಾಸಿ ವಸೀಮ್ ಮುಲ್ಲಾ(33) ಬ್ಯಾಂಕಿಗೆ ಬೆಂಕಿಯಿಟ್ಟ ಆರೋಪಿ. ಬೆಂಕಿ ಕೆನ್ನಾಲಿಗೆಗೆ ಬ್ಯಾಂಕಿನ ಬಹುತೇಕ ಭಾಗ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ಮೌಲ್ಯದ ಪೀಠೋಪಕರಣ, ಕಂಪ್ಯೂಟರ್‌, ಪ್ರಿಂಟರ್‌, ನೋಟು ಎಣಿಸುವ ಯಂತ್ರ, ಕಾಗದ ಪತ್ರಗಳು ಸುಟ್ಟು ಹೋಗಿವೆ. ಭದ್ರತಾ ಕೊಠಡಿಯಲ್ಲಿದ್ದ ನೋಟುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಹಿಡಿದ ಗ್ರಾಮಸ್ಥರು ಅವನನ್ನು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬ್ಯಾಂಕಿನಲ್ಲಿದ್ದ ಕಾಗದ ಪತ್ರಗಳು, ಕಂಪ್ಯೂಟರ್ ಸುಟ್ಟು ಹೋಗಿವೆ ಎಂಬ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಕಾಗಿನೆಲೆ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದರು.

ಬ್ಯಾಂಕ್ ಮ್ಯಾನೇಜರ್ ತನಗೆ ಸಾಲ ನೀಡಲು ನಿರಾಕರಿಸಿದ್ದರು. ಇದರಿಂದ ಬೇಸತ್ತು ಶನಿವಾರ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಬೈಕ್‌ನಲ್ಲಿ ಪೆಟ್ರೋಲ್‌ ಸಮೇತ ಬ್ಯಾಂಕ್‌ ಬಳಿ ಬಂದಿದ್ದಾನೆ. ಗ್ರಾಮ ಪಂಚಾಯಿತಿ ಕಟ್ಟಡದ ಮೇಲಂತಸ್ತಿನಲ್ಲಿದ್ದ ಬ್ಯಾಂಕ್‌ ಕಟ್ಟಡದ ಹಿಂಬದಿಯ ಕಿಟಕಿ ಗಾಜು ಒಡೆದು ಒಳಗಡೆ ಹೋಗಿ, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ.

Donate Janashakthi Media

Leave a Reply

Your email address will not be published. Required fields are marked *