ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಯ ದೈಹಿಕ ತರಗತಿಗಳು ಇನ್ನೂ ಪ್ರಾರಂಬವಾಗಿಲ್ಲ. ಸದ್ಯ ಎರಡನೇ ಅಲೆಯ ತೀವ್ರತೆ ಕಡಿಮೆಯಾಗಿರುವ ಕಾರಣದಿಂದ ರಾಜ್ಯದಲ್ಲಿ ಲಾಕ್ಡೌನ್ ಕೂಡ ಹಂತ ಹಂತವಾಗಿ ಸಡಿಲಿಕೆಗೊಳ್ಳುತ್ತಿದೆ. ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆ ಕೂಡ ಯಶಸ್ವಿಯಾಗಿ ನಡೆದಿದೆ. ಇನ್ನೂ ಶಾಲೆಗಳು ಆರಂಭ ಯಾವಾಗ ಎಂಬ ಪ್ರಶ್ನೆಗೆ ಸರಕಾರದಿಂದ ಇನ್ನೂ ಸ್ಪಷ್ಟ ನಿರ್ಧಾರ ಬಂದಿಲ್ಲ. ಹೀಗಿರುವಾಗ ಖಾಸಗಿ ಶಾಲೆಗಳ ಒಕ್ಕೂಟವು ಸರಕಾರದ ನಿರ್ಧಾರಕ್ಕಿಂತ ಮುಂಚಿತವಾಗಿ ಆಗಸ್ಟ್ 2 ರಿಂದ ಖಾಸಗಿ ಶಾಲೆಗಳನ್ನು ಆರಂಭಿಸುವುದಾಗಿ ಎಚ್ಚರಿಕೆ ನೀಡಿವೆ.
ಇದನ್ನು ಓದಿ: ಹಂತಹಂತವಾಗಿ ಶಾಲೆಗಳನ್ನು ಆರಂಭಿಸಲು ತಜ್ಞರ ಸಮಿತಿ ಶಿಫಾರಸ್ಸು
ಶಾಲೆಗಳ ಆರಂಭಕ್ಕೆ ಐಸಿಎಂಆರ್, ಡಾ.ದೇವಿಶೆಟ್ಟಿ ವರದಿ ಹಾಗೂ ಟಾಸ್ಕ್ ಫೋರ್ಸ್ ಸಭೆ ಕೂಡ ಹಸಿರು ನಿಶಾನೆ ತೋರಿದೆ. ಈಗಾಗಲೇ ಶೇಕಡ 80 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ ಜುಲೈ 30 ರ ಒಳಗೆ ಶಾಲೆ ಆರಂಭ ಮಾಡಬೇಕು. ಇಲ್ಲವಾದಲ್ಲಿ ನಾವೇ ಶಾಲೆ ಆರಂಭಿಸುವುದಕ್ಕೆ ಮುಂದಾಗುತ್ತೇವೆ ಎಂದು ರುಪ್ಸಾ (ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ) ಅಧ್ಯಕ್ಷ ಹಾಲನೂರು ಲೇಪಾಕ್ಷಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಸರಕಾರ ಏನೇನು ಸಿದ್ದತೆಗಳಿಗೆ ಮುಂದಾಗಿಲ್ಲ. ಗುಜರಾತ್, ತೆಲಂಗಾಣ, ಆಂಧ್ರ, ಒರಿಸ್ಸಾ ಹಾಗೂ ಬೇರೆ ರಾಜ್ಯಗಳಲ್ಲಿ ಶಾಲೆ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ನಾವು ಶಾಲೆಗಳ ಆರಂಭಿಸುವ ಬಗ್ಗೆ ನಿರ್ಧಾರಕ್ಕೆ ಬರಲಾಗಿದೆ ಎಂದು ರುಪ್ಸಾ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಾಳಿ ರೂಪದಲ್ಲಿ ಶಾಲೆ ಆರಂಭಕ್ಕೆ ಖಾಸಗಿ ಶಾಲೆಗಳ ಒತ್ತಾಯ
ಕೋವಿಡ್ ನಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಮತ್ತೆ ಶಾಲೆಗಳನ್ನು ಪುನಾರಂಭಿಸುವಂತೆ ಸರಕಾರಕ್ಕೆ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಒತ್ತಾಯಿಸಿದೆ. ಸಂಘಟನೆಯ ರಾಜ್ಯಾಧ್ಯಕ್ಷ ಹಾಲನೂರು ಎಸ್.ಲೇಪಾಕ್ಷಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ಶೇಕಡಾ 80ರಷ್ಟು ಶಾಲೆಗಳು ಮತ್ತು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ನಾಳೆಯಿಂದ ಆನ್ಲೈನ್ ಮೂಲಕ ತರಗತಿಗಳು ಶುರುವಾಗುತ್ತಿದೆ. ಇದು ಒಳ್ಳೆಯ ವಿಚಾರ. ಆದರೆ ಶಾಲೆ ಆರಂಭದ ಬಗ್ಗೆ ಸರಕಾರ ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿ: ಶಾಲೆಗಳನ್ನು ಆರಂಭಿಸುವ ಬಗ್ಗೆ ಸೋಮವಾರ ನಿರ್ಧಾರ: ಸಚಿವ ಸುರೇಶ್ ಕುಮಾರ್
ವಿದ್ಯಾಗಮ ಅಥವಾ ಪಾಳಿ ರೂಪದಲ್ಲಿ ಶಾಲೆ ಆರಂಭಕ್ಕೆ ಒತ್ತಾಯಿಸಿದ ರುಪ್ಸಾ ಸಂಘಟನೆ, ಸರಕಾರಕ್ಕೆ ಒಂದು ವಾರದ ಗಡುವು ನೀಡಿದೆ. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ರುಪ್ಸಾ ಸಂಘಟನೆ ಪ್ರಮುಖ ಬೇಡಿಕೆ
2019-20 ಮತ್ತು 2020-21ನೇ ಸಾಲಿನ ಆರ್‌ಟಿಇ ಹಣ ಇನ್ನು ಬಿಡುಗಡೆ ಆಗಿಲ್ಲ. ಆದ್ದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ತುಂಬಾ ನೋವನ್ನು ಅನುಭವಿಸುತ್ತಿವೆ. ಹೀಗಾಗಿ ಕೂಡಲೇ ಆರ್‌ಟಿಇ ಹಣ ಬಿಡುಗಡೆ ಮಾಡಬೇಕು. ಖಾಸಗಿ ಶಾಲೆಗಳ ಶಿಕ್ಷಕರಿಗೂ ಘೋಷಿಸಿರುವ ಪ್ಯಾಕೇಜ್ ತಕ್ಷಣ ಶಿಕ್ಷಕರಿಗೆ ತಲುಪುವಂತೆ ಕ್ರಮವಹಿಸಬೇಕು.
2021-22 ಸಾಲಿನ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಉನ್ನತೀಕರಣ ವಿಷಯವು ತುಂಬಾ ನಿಧಾನಗತಿಯಲ್ಲಿ ಅನುಸರಿಸುತ್ತಿದೆ. ಇದರಿಂದ ಆರ್‌ಟಿಇ ಮಕ್ಕಳ ಮುಂದಿನ ತರಗತಿಗೆ ಅನ್ಯಾಯವಾಗುತ್ತಿದೆ. ಆರ್‌ಟಿಇ ಮಕ್ಕಳು ಬೀದಿ ಪಾಲಾಗುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ರುಪ್ಸಾ ಒತ್ತಾಯಿದೆ.