ಸಂವಿಧಾನ ದಿನದಂದು ತನ್ನ ಅಧಿಕಾರಿ ವೃತ್ತಿಗೆ ರಾಜೀನಾಮೆ ನೀಡಿದ ಸುಹೇಲ್ ಅವರ ಬರಹ…….
ಮೈಸೂರು ಜಿಲ್ಲೆಯಲ್ಲಿರೋ ಹುಣಸೂರು ತಾಲೂಕಿನ ಸಾಮಾಜಿಕ ನ್ಯಾಯದ ಹರಿಕಾರರಾದ ದೇವರಾಜ್ ಅರಸುರವರ ಊರಿನ ಪಕ್ಕದಲ್ಲೇ ಇರೋ ಮರೂರು ಅನ್ನೋ ಪುಟ್ಟ ಗ್ರಾಮದವನು ನಾನು,ಅಪ್ಪಟ ಕೃಷಿಕ ಕೂಡು ಕುಟುಂಬದಲ್ಲಿ ಹುಟ್ಟಿದ ನಾನು ಆಡಿ ಬೆಳೆದಿದ್ದು ದಲಿತರ ಬೀದಿಯಲ್ಲಿ,ನಾಯಕರ ಓಣಿಯಲ್ಲಿ,ಗೌಡ-ಲಿಂಗಾಯತರ ಹಟ್ಟಿಗಳಲ್ಲಿ.ದಲಿತರ ಮನೆಯ ಹಿಟ್ಟು-ರೊಟ್ಟಿ,ನಾಯಕರ ಮನೆಯ ಮೀನು ಸಾರು,ಲಿಂಗಾಯತರ ಮನೆಯ ಒಬ್ಬಿಟ್ಟು-ತೊಂಬಿಟ್ಟು-ಉಪ್ಪಿಟ್ಟು ತಿಂದು ಊರವರೆಲ್ಲರ ಉಪ್ಪು ಕಾರದ ಉಪಕಾರ,ಗೌಡರ ಮನೆಯ ದುಡ್ಡು ಕಾಸಿನ ಸಹಕಾರ,ಬ್ರಾಹ್ಮಣ ಗುರುಗಳ ವಿದ್ಯಾದಾನ,ಬಾ ಮಗನೇ ಟೀ ಕಾಸು ಕೊಡ್ತೀನಿ ಕುಡಿ ಬಪ್ಪ ಅಂತ ಕರೆಯೋ ಊರ ತಾಯಂದಿರ ಪ್ರೀತಿ ಮಮಕಾರದ ತೀರಿಸಲಾಗದ ಋಣದೊಂದಿಗೆ. ಸಕಲ
ನನ್ನ ಶೈಕ್ಷಣಿಕ ಕಲಿಕೆಯಲ್ಲಿ ಒಬ್ಬ ರಾಜ್ಯಶಾಸ್ತ್ರದ ವಿದ್ಯಾರ್ಥಿಯಾಗಿ ನಾನು ಓದಿಕೊಂಡು ಬಂದಿದ್ದ ಜನತಾ ಪರಮಾಧಿಕಾರವಿರುವ ಪ್ರಜಾಪ್ರಭುತ್ವದ ವ್ಯಾಖ್ಯಾನ,ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು,ಸ್ವಾತಂತ್ರ್ಯ,ಸಮಾನತೆ,ನ್ಯಾಯ ಒದಗಿಸುವ ಸಂವಿಧಾನದ ಆಶಯಕ್ಕೆ ಧಕ್ಕೆಯಾಗುತ್ತಿರುವುದು ಕಣ್ಣಿಗೆ ರಾಚಲು ಪ್ರಾರಂಭವಾದ ದಿನದಿಂದಲೇ ನನ್ನೊಳಗೊಂದು ಅಂತರ್ಯುದ್ಧ ಶುರುವಾಗಿತ್ತು.
ಕೇವಲ ಎಪ್ಪತ್ತೈದು ವರ್ಷಗಳ ಹಿಂದೆ ಜಾರಿಗೆ ಬಂದ ಪ್ರಜಾಪ್ರಭುತ್ವದ ಪರಿಕಲ್ಪನೆ ಫ಼್ಯಾಸಿಸ್ಟ್ ಶಕ್ತಿಗಳ ಕೈಗೆ ಸಿಲುಕಿ,ಸಾಂವಿಧಾನಿಕ ಸಂಸ್ಥೆಗಳು ನಾಮಕಾವಾಸ್ಥೆ ಎನ್ನುವ ದುರಿತ ಕಾಲದಲ್ಲಿ ನಾವಿದ್ದೇವಲ್ಲ ಎನ್ನುವ ಪ್ರಜ್ಞೆ ಪದೇ ಪದೇ ಮಾನಸಿಕ ಸಂಘರ್ಷವನ್ನು ಉಂಟು ಮಾಡುತ್ತಲೆ ಇತ್ತು.
ರಾಷ್ಟ್ರಿಯ ಸಂಪತ್ತುಗಳು ಉದ್ಯಮಿಗಳ ಪಾಲಾಗುತ್ತಿರುವುದು,ಹುಸಿ ರಾಷ್ಟ್ರೀಯತೆಯ ಹೆಸರಿನಲ್ಲಿ ವಾಸ್ತವಿಕ ಪ್ರಾದೇಶಿಕತೆಯನ್ನು ಕಡೆಗಣಿಸುತ್ತ ಒಕ್ಕೂಟ ವ್ಯವಸ್ಥೆಯನ್ನು ಬಲಹೀನಗೊಳಿಸುತ್ತಿರುವುದು, ನಾಗರೀಕರ ಕನಿಷ್ಟ ಮೂಲಭೂತ ಹಕ್ಕುಗಳಿಗು ಧಕ್ಕೆ -ಕುತ್ತು ಬಂದು ಕೂತಿರುವ ಹೊತ್ತಿನಲ್ಲಿ ರಾಜಕೀಯ ದರ್ಪ,ದೌರ್ಜನ್ಯಗಳ ನಡುವೆ ಜನ ರಕ್ಷಣೆಯ ಅಧಿಕಾರವಿದ್ದುಯಿಲ್ಲದಂತೆ ಕೂತಿರಲು ಮನಸ್ಸು ಸುತಾರಾಂ ಒಪ್ಪಲಿಲ್ಲ. ಸಕಲ
ಇದನ್ನೂ ಓದಿ : ಸಕಲ ಸಂವಿಧಾನದ ಉಳಿವಿಗಾಗಿ ರಾಜೀನಾಮೆ ನೀಡಿದ ಪೊಲೀಸ್ ಅಧಿಕಾರಿ
ಪ್ರಜಾಪ್ರಭುತ್ವದ ಕಾವಲು ಕಾಯಬೇಕಿದ್ದ ಮಾಧ್ಯಮದ ವಿಫ಼ಲತೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ದುರ್ಬಲತೆಯ ಸಂಧಿಗ್ದತೆಯಲ್ಲಿ ವ್ಯಕ್ತಿಗತ ಧ್ವನಿ ಎತ್ತಬೇಕೆನಿಸಿತು.
ನಮ್ಮ ಉಸಿರಾಟಕ್ಕು ಹಕ್ಕು ಕೊಟ್ಟ ಸಂವಿಧಾನವನ್ನೆ ಕಿತ್ತೆಸೆಯುವ ಕಾರ್ಯ ಅತ್ಯಂತ ಭರದಿಂದ ಸಾಗುತ್ತಿರುವಾಗ ನನಗೆ ಸಕಲ ಸರ್ವಸ್ವವಾಗಿದ್ದ ಖಾಕಿಗೊಂದು ಕೊನೆಯ ಸಲಾಂ ಹೇಳಿ ಸಂವಿಧಾನವನ್ನು ಎದೆಗಾನಿಸಿಕೊಳ್ಳುವುದು ಈ ಹೊತ್ತಿನ ತುರ್ತು ಎಂದೆನಿಸಿತು.
ದಿನ ನಿತ್ಯ ಹತ್ತಾರು ಸರ್ಕಾರಿ ಪತ್ರ ಕಡತಗಳಿಗೆ ಅಸಂಖ್ಯ ಸಹಿಗಳನ್ನು ಮಾಡಿದ್ದೇನೆಯಾದರು ನನ್ನ ರಾಜಿನಾಮೆ ಪತ್ರದ ಕೊನೆಯ ಸಹಿ ಹಾಕುವಾಗ ಒಮ್ಮೆ ಕೈ ಕಾಲು ನಡುಗಿ,ದೇಹವೆಲ್ಲಾ ಕಂಪಿಸಿ,ಬಾಯೊಣಗಿ,ಒಂದು ಕ್ಷಣ ಕಣ್ಣುಗಳಿಗೆ ಕತ್ತಲೆ ಆವರಿಸಿಕೊಂಡಿತ್ತು.ಕೊನೆಯ ಬಾರಿ ಮೈಮೇಲಿಂದ ಖಾಕಿ ತೆಗೆವಾಗ ಮೈಗಂಟಿದ ಚರ್ಮವೇ ಸುಲಿದಂತಾಯಿತು. ಆದರೂ
ಇಂದು ನನ್ನ ಬಳಿ ಇದಕ್ಕಿಂತ ದೊಡ್ಡ ಹುದ್ದೆ ,ಸ್ಥಾನಮಾನ ಇರುತ್ತಿದ್ದರೂ ನಾನು ಇದೇ ನಿರ್ಧಾರವನ್ನು ಮಾಡುತ್ತಿದ್ದೆ. ಸಕಲ
ನಾನು ನನ್ನ ಊರಿನಲ್ಲಿ ಕಂಡಂತಹದ್ದೆ ಪ್ರೀತಿ,ವಾತ್ಸಲ್ಯ,ಗೌರವ,ಆದರಗಳನ್ನು ಕರ್ನಾಟಕದ ಬಹುದೊಡ್ಡ ಸರ್ಕಾರಿ ಕುಟುಂಬವಾಗಿರುವ ಪೊಲೀಸ್ ಇಲಾಖೆ ನನಗೆ ಕಳೆದ ಹದಿನಾರು ವರ್ಷಗಳಿಂದ ನೀಡಿದೆ.ನಾನು ದೈಹಿಕವಾಗಿ ಇಲಾಖೆಯೊಳಗೆ ಇಲ್ಲದಿದ್ದರೂ ಕೂಡ ಮಾನಸಿಕವಾಗಿ ನಿಮ್ಮೊಂದಿಗಿದ್ದೇನೆ.
ನನ್ನ ನಿರ್ಧಾರದಿಂದ ನನ್ನ ಹಿತೈಷಿಗಳಿಗಾಗಿರುವ ನೋವು ನನ್ನ ಗಮನಕ್ಕಿದೆ ಎಂದಿನಂತೆ ನಿಮ್ಮ ಪ್ರೀತಿ,ಸಹಕಾರದ ನಿರೀಕ್ಷೆಯಲ್ಲಿ ನಾನಿದ್ದೇನೆ. ನನ್ನ 16 ವರ್ಷಗಳ ಸೇವೆಯ ನಂತರವೂ ಮೈಮೇಲಿಂದ ನಾನು ‘ಶುದ್ಧ ಖಾಕಿ’ಯನ್ನೇ ಕಳಚಿದ್ದೇನೆ ಎಂಬ ಸಂತೃಪ್ತಿ ಜೊತೆಗೆ ಭಾರದ ಮನಸ್ಸಿನೊಂದಿಗೆ ಇಲಾಖೆಗೆ ವಿದಾಯ ಹೇಳುತ್ತಿದ್ದೇನೆ,ಧನ್ಯವಾದಗಳು ಕರ್ನಾಟಕ ರಾಜ್ಯ ಪೊಲೀಸ್.
ಈ ವಿಡಿಯೋ ನೋಡಿ : ಸಕಲ ಕರಾವಳಿ ನಾಡು ಇದೀಗ ಕಾರ್ಪೊರೇಟ್ ಬಿಳಿಯಾನೆಗಳ ಬಟ್ಟಲಾಗಿದೆ – ರಾಜಾರಾಂ ತಲ್ಲೂರು