ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಟಿ ಸಾಯಿ ಪಲ್ಲವಿ ನೀಡಿದ ಹೇಳಿಕೆಯನ್ನೇ ಹಲವು ಮಂದಿ ವಿವಿಧ ರೀತಿಯಲ್ಲಿ ಅರ್ಥೈಸಿಕೊಂಡು ನಾನಾ ಆರೋಪಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ನೀವು ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಸಾಯಿ ಪಲ್ಲವಿ ಅವರ ಸಾವಿರಾರು ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ.
ಸಂದರ್ಶನದಲ್ಲಿ ಸಾಯಿ ಪಲ್ಲವಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕಾಶ್ಮೀರಿ ಪಂಡಿತರನ್ನು ಹೇಗೆ ಸಾಯಿಸಲಾಯಿತು ಎಂದು ತೋರಿಸಲಾಗಿದೆ. ಹಾಗೆ ಹಸು ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಎಂದು ಆತನನ್ನು ಹತ್ಯೆ ಮಾಡಲಾಗಿದೆ. ವ್ಯಕ್ತಿಯನ್ನು ಹತ್ಯೆ ಮಾಡಿ ಜೈ ಶ್ರೀರಾಮ್ ಎಂದು ಘೋಷಣೆ ಹಾಕಿದ್ದಾರೆ. ಕಾಶ್ಮೀರ ಘಟನೆಗೂ ಈ ಘಟನೆಗೂ ವ್ಯತ್ಯಾಸವೇನಿದೆ?’ ಎಂದು ಹೇಳಿಕೆ ನೀಡಿದ್ದರು.
ಇದನ್ನು ಓದಿ: ಕಾಶ್ಮೀರಿ ಪಂಡಿತರು-ಗೋ ಸಾಗಣೆಕಾರರ ಹತ್ಯೆ ಎರಡೂ ಒಂದೇ: ನಟಿ ಸಾಯಿ ಪಲ್ಲವಿ
ಈಗ ಮತ್ತೆ, ಸಾಯಿ ಪಲ್ಲವಿ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಪಪಡಿಸಿದ್ದಾರೆ. ಈ ವಿಡಿಯೋಗೆ ಸಾವಿರಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಟನೆ ಮೂಲಕ ಗಮನ ಸೆಳೆದ ಸಾಯಿ ಪಲ್ಲವಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಕೇವಲ ಒಂದು ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಸಾಯಿ ಪಲ್ಲವಿಯನ್ನು ಅಭಿಮಾನಿಗಳ ದೊಡ್ಡ ಬಳಗ ಬಿಟ್ಟು ಕೊಡುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ನಟಿಯ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ, ಅವರು ಕ್ಷಮೆ ಕೇಳುವ ಅವಶ್ಯಕತೆಯೇ ಇಲ್ಲ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ‘ಏನೇ ಆದ್ರೂ ನಾವು ಸಾಯಿ ಪಲ್ಲವಿ ಫ್ಯಾನ್ಸ್’ ಎಂದು ಅನೇಕರು ಬೆಂಬಲ ಸೂಚಿಸಿದ್ದಾರೆ.
ಸಾಯಿ ಪಲ್ಲವಿ ಹಂಚಿಕೊಂಡಿರುವ ಸ್ಪಷ್ಟನೆಯ ವಿಡಿಯೋ ಕೆಲವೇ ಗಂಟೆಗಳಲ್ಲಿ 12 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಕೆಲವರು ಸಾಯಿ ಪಲ್ಲವಿ ಮಾತಿಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಕೂಡ.
ಸಾಯಿ ಪಲ್ಲವಿ ಹೇಳಿದ್ದೇನು?
‘ಹಿಂಸೆ ತಪ್ಪು. ಯಾವುದೇ ಧರ್ಮದ ಹೆಸರಲ್ಲಿ ಹಿಂಸೆ ಮಾಡುವುದು ಪಾಪ. ಗುಂಪು ಹಲ್ಲೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದರು. ನಿಜಕ್ಕೂ ಅದು ಬೇಸರದ ವಿಚಾರ. ಬೇರೆಯವರ ಜೀವವನ್ನು ತೆಗೆದುಕೊಳ್ಳುವ ಹಕ್ಕು ನಮಗೆ ಇಲ್ಲ. ನಾನು ಎಂಬಿಬಿಎಸ್ ಪದವೀಧರೆಯಾಗಿ ಎಲ್ಲರ ಜೀವವೂ ಮುಖ್ಯ ಎಂದು ನಂಬಿದ್ದೇನೆ. ಎಲ್ಲಾ ಭಾರತೀಯರು ಸಹೋದರರಿದ್ದಂತೆ ಎಂದು ಹೇಳುತ್ತಾ ಬೆಳೆದವರು ನಾವು. ನನ್ನ ಮನಸ್ಸಲ್ಲಿ ಅದು ಆಳವಾಗಿ ಕೂತಿದೆ. ನಾನು ಮಾತನಾಡುವಾಗ ತಟಸ್ಥವಾಗಿ ಮಾತನಾಡುತ್ತೇನೆ. ನಾನು ಮಾತನಾಡಿದ್ದನ್ನು ಬೇರೆಯ ರೀತಿ ಅರ್ಥೈಸಿದ್ದು ನಿಜಕ್ಕೂ ಬೇಸರ ತರಿಸುವಂತಹದ್ದು. ಪೂರ್ತಿ ಸಂದರ್ಶನ ನೋಡದೆ ಕೆಲವರು ಮಾತನಾಡಿದ್ದು ಬೇಸರದ ವಿಚಾರ. ನನ್ನ ಪರವಾಗಿ ನಿಂತವರಿಗೆ ಧನ್ಯವಾದ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.