ಸಾಹಿತ್ಯದ ಕೊಡುಕೊಳ್ಳುವಿಕೆಗೆ ವೇದಿಕೆಯಾಗುವ ಪುಸ್ತಕ ಮೇಳ

ನಲ್ಲತಂಬಿ

ಪ್ರತಿ ವರ್ಷ ಜನವರಿ ತಿಂಗಳಲ್ಲಿ ಸುಮಾರು ೧೬ ದಿನಗಳಿಗೆ ಚೆನ್ನೈ, ನಂದನಂ ವೈಎಂಸಿಎ ಆವರಣದಲ್ಲಿ ಪುಸ್ತಕ ಮೇಳ ನಡೆಯುತ್ತದೆ. ದಕ್ಷಿಣ ಭಾರತ ಪ್ರಕಾಶಕರ ಸಂಘ ತಮಿಳುನಾಡು ಸರಕಾರದ ನೆರವಿನಿಂದ ಇದನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ಸಲವೂ ಜನವರಿ ೬ ರಿಂದ ೨೨ ರವರೆಗೆ ಈ ಮೇಳ ನಡೆದಿದೆ. ಈ ವರ್ಷದ ವಿಶೇಷವೆಂದರೆ ಈ ಮೇಳದ ಜತೆ ಅಂತಾರಾಷ್ಟ್ರೀಯ ಪುಸ್ತಕ ಪ್ರದರ್ಶನ ಮತ್ತು ಪ್ರಕಾಶಕರ ಸಮ್ಮೇಳನವನ್ನು ತಮಿಳುನಾಡು ಪಠ್ಯ ಪುಸ್ತಕ ಮತ್ತು ಶಿಕ್ಷಣ ಸೇವಾ ನಿಗಮದ ಅಂಗವಾದ ತಮಿಳ್ ವಳರ್ಚ್ಚಿ ಕಳಗಂ ವತಿಯಿಂದ ನಡೆಸಲಾಯಿತು.

ಈ ೧೬ ದಿನಗಳ ಪುಸ್ತಕ ಮೇಳಕ್ಕೆ ಸುಮಾರು ೨೫ ಲಕ್ಷ ಜನ ವೀಕ್ಷಕರು ಬಂದಿದ್ದರು ಎಂದು ಅಂದಾಜಿಸಲಾಗಿದೆ. ಅಂದಾಜು ೨೦ ಕೋಟಿ ರೂಪಾಯಿಗಳಷ್ಟು ಪುಸ್ತಕ ಮಾರಟವಾಗಿದೆ ಎನ್ನಲಾಗಿದೆ. ಸುಮಾರು ೫೦೦ ಪ್ರಕಾಶಕರು ಭಾಗವಹಿಸಿದ್ದಾರೆ ಎಂದು ವರದಿಯಾಗಿದ್ದು, ಇದರಲ್ಲಿ ಶೇಕಡ ೯೦ ಭಾಗ ತಮಿಳು ಪ್ರಕಾಶಕರು, ಸಿಂಗಪೂರ್, ಮಲೇಷಿಯಾ, ಶ್ರೀಲಂಕಾ, ದುಬಾಯಿ ಮತ್ತು ಜಗತ್ತಿನ ಅನೇಕ ಭಾಗಗಳಿಂದ ಈ ಪುಸ್ತಕ ಮೇಳಕ್ಕೆ ಬಂದಿದ್ದಾರೆ.

ಪುಸ್ತಕ ವೀಕ್ಷಕರು ಅಗಾಧ ಪ್ರಮಾಣದಲ್ಲಿ ಪುಸ್ತಕಗಳನ್ನು ಕೊಂಡು ಹೋಗುವುದನ್ನು ಸಾಮಾನ್ಯವಾಗಿ ಕಾಣಬಹುದು. ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಯರ ಸಂಖ್ಯೆ ಹೆಚ್ಚಾಗಿದ್ದವು. ಎಲ್ಲ ಮಳಿಗೆಗಳಿಗೂ ಭೇಟಿ ನೀಡಿ, ಕೊಂಡುಕೊಳ್ಳಬೇಕಾದ ಪುಸ್ತಕಗಳ ಹೆಸರು, ಬೆಲೆ, ಮಳಿಗೆಯ ಸಂಖ್ಯೆಗಳನ್ನು ಪಟ್ಟಿಮಾಡಿಕೊಂಡು ಹೋಗುತ್ತಾರೆ.

ಮತ್ತೊಂದು ದಿನ ಬಂದು ಅವರ ಪಟ್ಟಿಯಲ್ಲಿರುವ ಪುಸ್ತಕಗಳನ್ನು ಖರೀದಿಸಿ ಹೋಗುತ್ತಾರೆ. ಹೊರ ಊರಿನಿಂದ ಬರುವವರ ಕೈಯಲ್ಲಿ ಮೊದಲೇ ಆ ರೀತಿಯ ಪಟ್ಟಿ ಇರುತ್ತದೆ. Impulsive buyer-ಗಳೂ ಸಹ ಹೆಚ್ಚಾಗಿಯೇ ಇರುತ್ತಾರೆ.

ಈ ವರ್ಷದ ಅಂತಾರಾಷ್ಟ್ರೀಯ ಪ್ರಕಾಶಕರ ಸಮ್ಮೇಳನದಲ್ಲಿ ಅನೇಕ ಲೇಖಕರ, ಪ್ರಕಾಶಕರ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ನಮ್ಮ ಕರ್ನಾಟಕದಿಂದ ವಿವೇಕ್ ಶಾನಭಾಗ್, ವಿ. ಎಸ್. ಶ್ರೀಧರ್ ಭಾಗವಹಿಸಿದ್ದರು.

ಅದಲ್ಲದೆ ವಿದೇಶದ ಮತ್ತು ಭಾರತದ ಅನೇಕ ಪ್ರಕಾಶಕರೊಂದಿಗೆ ತಮಿಳುನಾಡು ಸರಕಾರ MoU ಮಾಡಿಕೊಂಡು ಮುಖ್ಯಮಂತ್ರಿ ಸಹಿ ಹಾಕಿದ್ದಾರೆ. ಇದು ಮೊದಲ ಬಾರಿಯಾದುದರಿಂದ ಸಮಾರು ೧೫ ದೇಶಗಳ ಪ್ರಕಾಶಕರು ಬಂದಿದ್ದರು. ಮುಂದಿನ ವರ್ಷ ಈ ಸಂಖ್ಯೆ ಹೆಚ್ಚಾಗುತ್ತದೆ.

ನಲ್ಲತಂಬಿ

ವಿವರ: ೧. ತಮಿಳು ಭಾಷೆಯಿಂದ ಪ್ರಪಂಚದ ಅನೇಕ ಭಾಷೆಗಳಿಗೆ ೯೦ ಕೃತಿಗಳು. ೨. ತಮಿಳು ಭಾಷೆಯಿಂದ ಉಳಿದ ಭಾರತೀಯ ಭಾಷೆಗಳಿಗೆ ೬೦ ಕೃತಿಗಳು. ೩. ಜಗತ್ತಿನ ಅನೇಕ ಭಾಷೆಗಳಿಂದ ಮತ್ತು ಇತರ ಭಾರತೀಯ ಭಾಷೆಗಳಿಂದ ತಮಿಳಿಗೆ ೧೭೦ ಕೃತಿಗಳು. ೪. ತಮಿಳು ಭಾಷೆಯಲ್ಲದೆ ಇತರ ಭಾರತೀಯ ಭಾಷೆಗಳ ನಡುವೆ ೪೫ ಕೃತಿಗಳು. ಹೀಗೆ ಒಟ್ಟು ೩೬೫ ಕೃತಿಗಳು ಅನುವಾದಗೊಳ್ಳುವ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

ಇದರಲ್ಲಿ ನನ್ನ ಎರಡು ಕೃತಿಗಳು ಸೇರಿವೆ. ಒಂದು ಕೃತಿ ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆಗೂ, ಮತ್ತೊಂದು ಕೃತಿ ಇಂಗ್ಲೀಷ್ ಭಾಷೆಗೂ ಅನುವಾದಗೊಳ್ಳಲಿದೆ ಎಂಬುದು ಸಂತಸದ ಸಂಗತಿ.

ಈ ರೀತಿಯ ಸಾಹಿತ್ಯದ ಕೊಡುಕೊಳ್ಳುವಿಕೆ ನಡೆಯುವಾಗ ಅನೇಕ ಹೊಸ ಬರಹಗಾರರೂ ವಿಶೇಷವಾಗಿ ಅನುವಾದಕರೂ ಹುಟ್ಟಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ನಮ್ಮ ಕನ್ನಡದಿಂದ ಹೊರಗೆ ಹೋಗುವ ನಮ್ಮ ಕನ್ನಡದ ಒಳಗೆ ಬರುವ ಭಾರತದ, ಜಗತ್ತಿನ ಸಾಹಿತ್ಯ ಕೃತಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ. ನಮ್ಮ ಕರ್ನಾಟಕ ಸರಕಾರವೂ ಇಂತಹ ಯೋಜನೆಗಳ ಬಗ್ಗೆ ಆಲೋಚನೆ ಮಾಡಬೇಕಾದ ಅಗತ್ಯ ಇದೆ. ಕನ್ನಡ ಪ್ರಕಾಶಕರು ಸಹ ಇದರ ಬಗ್ಗೆ ಗಮನ ನೀಡಬೇಕಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *