ಹಾವೇರಿ | ಸಾಹಿತಿ ಸತೀಶ ಕುಲಕರ್ಣಿಗೆ ಅಂಬಿಕಾತನಯದತ್ತ ಪ್ರಶಸ್ತಿ ಸನ್ಮಾನ

ಹಾವೇರಿ: ಮಂಗಳವಾರ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಧಾರವಾಡದ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ  ಸನ್ಮಾನಿಸಲಾಯಿತು.

ನಗರದ ಕನ್ನಡ ಸಾಹಿತ್ಯ ಪರಿಷತ್‌ ಸಾಹಿತ್ಯ ಭವನದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಘಟಕ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಸನ್ಮಾನಿಸಲಾಯಿತು.

ಶ್ರೀಪಾದ ಶೆಟ್ಟಿ ಮಾತನಾಡಿ, ‘ಬರೆದಂತೆ ಬದುಕಿದ, ಸಮಿಷ್ಟಿ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಸಾಹಿತಿ ಸತೀಶ ಕುಲಕರ್ಣಿ, ಐವತ್ತು ವರ್ಷಗಳ ಹಿಂದೆ ಕಪ್ಪು ನೆಲದ ಕೆಂಪು ಕಾವ್ಯದ ಮೂಲಕ ಪ್ರಸಿದ್ಧರಾದವರು. ಬೆಂಕಿಯನ್ನು ಬೆಳದಿಂಗಳಾಗಿಸುವ ಸಾಮರ್ಥ್ಯದ ಕವಿ’ ಎಂದರು.

ಇದನ್ನೂ ಓದಿ : ಬೆಳಗಾವಿ | ಅಸಂಘಟಿತ ಕಾರ್ಮಿಕರಿಗೆ ವಿಶೇಷ ಪಿಂಚಣಿ ಯೋಜನೆ ಜಾರಿಗೆ ಕ್ರಮ: ಜಿಲ್ಲಾಧಿಕಾರಿ

ಶಂಭು ಬಳಿಗಾರ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ಸತೀಶ ಈಗಲೂ ಅನೇಕರಿಗೆ ಮಾದರಿಯಾಗಿದ್ದಾರೆ’ ‘ಹಾವೇರಿ ನೆಲದ ಅಸ್ಮಿತೆಯಾಗಿರುವ ಸತೀಶ, ತಾವು ಮಾತ್ರ ಬೆಳೆಯದೇ ಮಹಾವೃಕ್ಷವಾಗಿ ಅನೇಕರನ್ನು ಬೆಳೆಸುತ್ತಿದ್ದಾರೆ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ‘ಈವರೆಗೆ ರಾಜ್ಯ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದ ಸತೀಶ ಅವರಿಗೆ ರಾಷ್ಟ್ರೀಯ ಪುರಸ್ಕಾರ ಲಭಿಸಿದ್ದು ವಿಶೇಷವಾಗಿದೆ’ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸತೀಶ ಕುಲಕರ್ಣಿ, ಬೇಂದ್ರೆ ಎಲ್ಲ ಕಾಲಕ್ಕೂ ನಿಲುಕದ ಕವಿ. ‘ದ.ರಾ.ಬೇಂದ್ರೆ ಮತ್ತು ಕುವೆಂಪು, ಕನ್ನಡ ನಾಡಿನ ಎರಡು ಕಣ್ಣುಗಳು. ಇವರ ಪ್ರಭಾವಲಯದಲ್ಲಿಯೇ ನಾವೆಲ್ಲ ಬೆಳೆದವರು. ಅವರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿ ನನಗೆ ಅಮೂಲ್ಯವಾದದ್ದು’ ಎಂದರು.

ವಿಜಯಕುಮಾರ ಮುದಕಣ್ಣನವರ, ವೈ.ಬಿ. ಆಲದಕಟ್ಟಿ, ಎಸ್.ಎನ್. ದೊಡ್ಡಗೌಡರ, ಗೀತಾ ಸುತ್ತಕೋಟಿ, ರೇಣುಕಾ ಗುಡಿಮನಿ, ಶಂಕರ ಸುತಾರ, ನೇತ್ರಾ ಅಂಗಡಿ, ಎನ್.ಬಿ. ಕಾಳೆ, ಈರಣ್ಣ ಬೆಳವಡಿ, ಎ.ಬಿ. ಗುಡ್ಡಳ್ಳಿ, ಮಾಲತೇಶ ಮರಿಗೂಳಪ್ಪನವರ, ಎಸ್.ಆರ್. ಹಿರೇಮಠ, ಪೃಥ್ವಿರಾಜ ಬೆಟಗೇರಿ, ಶಂಕರ ಬಡಿಗೇರ ಇದ್ದರು.

ಇದನ್ನೂ ನೋಡಿ: ಬೀದಿ ನಾಟಕ | ಒಂದನ್ನಾದರೂ ಒತ್ತಿ ಎರಡನ್ನಾದರೂ ಒತ್ತಿ’ Janashakthi Media

Donate Janashakthi Media