ಸಹಯಾನ ಸಾಹಿತ್ಯೋತ್ಸವ 2022-23 ಡಿಸೆಂಬರ್ 25ರಂದು ನಡೆಯಿದೆ. ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿ ಡಾ. ವಿನಯಾ ಒಕ್ಕುಂದ ಅವರು ಆಯ್ಕೆಯಾಗಿದ್ದಾರೆ. ಇವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ನಾಡುಮಾಸ್ಕೇರಿಯಲ್ಲಿ. ಈಗ ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಯಾರಿಕೆ, ನೂರುಗೋರಿಯ ದೀಪ, ಹಸಬಿ ಇವು ಕವನ ಸಂಕಲನಗಳಾದರೆ, ಊರ ಒಳಗಣ ಬಯಲು, ಉರಿ, ಅವರ ಕಥಾ ಸಂಕಲನಗಳು. ಉಡಿಯಕ್ಕಿ, ಅನುದಿನದ ದಂದುಗ ಅಂಕಣ ಬರಹ ಕೃತಿಯಾಗಿದೆ. ಮುಕ್ತಾಯಕ್ಕ ಮತ್ತು ಸತ್ಯಕ್ಕ, ಇಹದ ತಳಹದಿಯಲ್ಲಿ ದಿಟದ ದರ್ಶನ ಎನ್ನುವ ವಿಮರ್ಶಾ ಕೃತಿಗಳು ಅವರದಾಗಿವೆ. ಇವು ಅನೇಕ ವಿಶ್ವವಿದ್ಯಾಲಯಗಳಿಗೆ ಪಠ್ಯವೂ ಆಗಿವೆ.
ಇದನ್ನು ಓದಿ: ಸಹಯಾನ ಸಾಹಿತ್ಯೋತ್ಸವ-2021-22
ಪುತಿನ ಕಾವ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ರತ್ನಮ್ಮ ಹೆಗ್ಗಡೆ ದತ್ತಿ ಪ್ರಶಸ್ತಿ, ಸಾರಂಗ ಮಠ ದತ್ತಿ ಪ್ರಶಸ್ತಿ, ಎಚ್.ವಿ. ಸಾವಿತ್ರಮ್ಮ ದತ್ತಿ ಪ್ರಶಸ್ತಿ, ಚಂದ ಪುಸ್ತಕ ಬಹುಮಾನ, ಶೈನಾ ಕಾವ್ಯ ಪ್ರಶಸ್ತಿ, ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ, ಡಾ. ವೃಷಭೇಂದ್ರ ಸ್ವಾಮಿ ದಂಪತಿಗಳ ಸ್ಮೃತಿ ಸಾಹಿತ್ಯ ದಂಪತಿ ಪ್ರಶಸ್ತಿ, ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ವಿನಯಾ ಒಕ್ಕುಂದ ಅವರು ಪಡೆದಿದ್ದಾರೆ.
“ಕವಿತೆ ಬರೆಯುವುದೆಂದರೆ ಮನದ ಮಾತುಗಳನ್ನು ಅದರೆಲ್ಲ ರಕ್ತ ಮಾಂಸ, ವಾಸನೆ, ಒಜ್ಜೆಗಳೊಂದಿಗೆ ಕಾದಿಡುವುದು. ಕವಿತೆ ಮನಸ್ಸಿಗೆ ಮಡಿಲಿದ್ದಂತೆ. ಕವಿತೆ ಜಾಡಮಾಲಿಯ ಹಾಗೆ ನನ್ನ ದೇಹದ ಗೂಡನ್ನು ಶುಚಿಗೊಳಿಸುತ್ತ ಬೆಳಕಿಗೆ ಒಡ್ಡಿದೆ” ಎನ್ನುವ ವಿನಯಾ ಒಕ್ಕುಂದ ಅವರ ಭಾಷೆ, ಬರವಣಿಗೆ, ವೃತ್ತಿ ಪ್ರವೃತ್ತಿ ಎಲ್ಲವನ್ನೂ ಅಂತರಂಗದ ಕೊಳೆ ಜಾಡಿಸಿ ಪ್ರೀತಿಯ ಬದುಕು ಕಟ್ಟುವ ಕಾಯಕಕ್ಕೆ ಒಡ್ಡಿದವರು.
ಒಂದಲ್ಲಾ ಒಂದು ದಿನ
ಈ ನೆಲದ ತುಂಬ ಹೆಣ್ಣುಗಳು
ಮೆರವಣಿಗೆ ಹೊರಡುತ್ತಾರೆ
ದೇಹದ ಗುಂಟ ಹರಿದ
ನೆತ್ತರಿನ ಚರಿತೆ ತೊಳೆಯಲು
ಹೊಸ ನದಿಯ ಹುಡುಕಿ ನಡೆಯುತ್ತಾರೆ’ ಎಂದು ಹೇಳುತ್ತಾ ಮಹಿಳಾ ನಡೆಗೆ ಹೊಸ ಭಾಷ್ಯ ಬರೆದವರು ಡಾ. ವಿನಯಾ ಒಕ್ಕುಂದ. ತನ್ನನ್ನು ತಾನೇ ಒಳಗೊಳಗೇ ಅನುಭವಿಸುತ್ತಾ ತಾನು ಬದುಕುತ್ತಿರುವ ಸಮಾಜದ ಆಗುಹೋಗುಗಳಿಗೂ ಮಿಡಿಯುತ್ತಾ ಭಾವಪೂರ್ಣವಾಗಿ ಬರೆಯುವವರು ವಿನಯಾ. ಸಾಮಾಜಿಕ ಅಸಮಾನತೆಗಳಿಗೆ, ಧರ್ಮ ರಾಜಕಾರಣದ ಅನಾಹುತ ರಕ್ತಪಾತಗಳಿಗೆ, ಒಳಗೊಳಗೇ ಬಿರುಕು ಬಿಡುತ್ತಿರುವ ಮಾನವೀಯ ಸಂಬಂಧಗಳಿಗೆ, ಸಾಮರಸ್ಯ ಎಂದೋ ಕಂಡ ಕನಸೇನೋ ಎನ್ನುವ ಭ್ರಮೆ ಹುಟ್ಟಿಸುತ್ತಿರುವ ಭಾರತದ ಪ್ರಕ್ಷುಬ್ಧ ಸ್ಥಿತಿಗೆ ಕೂಡ ಅಷ್ಟೇ ಭಾವತೀವ್ರವಾಗಿ ಮತ್ತು ಅಷ್ಟೇ ಹದವಾಗಿ ಚುರುಕು ಮುಟ್ಟಿಸುವ ಡಾ. ವಿನಯಾ ಇಂದು ನಾಡಿನ ಪ್ರಮುಖ ಕವಯಿತ್ರಿ. ಕತೆಗಾರ್ತಿಯೂ, ಅಂಕಣಗಾರ್ತಿಯೂ, ವಿಮರ್ಶಕಿಯೂ ಆಗಿದ್ದಾರೆ.
ಇದನ್ನು ಓದಿ: ಚರಿತ್ರೆಯಲ್ಲಿ ಮರೆತವರ ಮರೆಯದ ಸಹಾಯಾನದ ಒಡನಾಡಿ ಶಾಂತಾರಾಮ ಮಾಸ್ತರ್
ಕೆಂಪಾನುಕೆಂಪು ಕಮಲಗಳಿದ್ದ ನನ್ನ ಬಾಲ್ಯದ ಕೊಳವ
ಅಲ್ಲಿ ಹುಗಿಯಲಾಗಿದೆ
ರಥದ ಗಾಲಿಗಳ ಅಚ್ಚು ಹೊತ್ತ ಧರ್ಮದ ಪುರವ ಬೆಳೆಸಲಾಗಿದೆ.
ಆ ಕಮಲ ನನ್ನದು
ಅದು ನನ್ನವ್ವನ ಹೆಸರು
ಎಂದು ರಾಜಕೀಯ ಬದಲಾವಣೆಯ ಬಿಸಿಗಾಳಿಗೆ ತತ್ತರಿಸುವ, ಸಾಣೆಯೊಡ್ಡುವ, ಈ ಸಮಾಜದ ಎಚ್ಚೆತ್ತ ಸಾಕ್ಷಿ ಪ್ರಜ್ಞೆ ಡಾ. ವಿನಯಾ, ಡಿಸೆಂಬರ್ 25ರಂದು ನಡೆಯಲಿರುವ “ಬಿಡುಗಡೆಯ ಹಾದಿಗಳು-ಹೊಸತಲೆಮಾರು” ಹನ್ನೆರಡನೆಯ ಸಹಯಾನ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ಎಂದು ಸಹಯಾನ ಟ್ರಸ್ಟ್ ತಿಳಿಸಿದೆ.
ಬಿಡುಗಡೆಯ ಹಾದಿಗಳು: ಹೊಸ ತಲೆಮಾರು
ಸಹಯಾನ ಸಾಹಿತ್ಯೋತ್ಸವದಲ್ಲಿ ಬಿಡುಗಡೆಯ ಬಿಕ್ಕಟ್ಟುಗಳು ಎಂಬ ವೈಚಾರಿಕ ಗೋಷ್ಟಿಯಲ್ಲಿ ಮಹಿಳೆ, ದಲಿತ, ಲಿಂಗಾಂತರಿ ಸಮುದಾಯದ ಕುರಿತು ವಿಶೇಷ ಚರ್ಚೆಗಳು, ಕವಿ ಸಮಯ, ಚಿತ್ರ ಪ್ರದರ್ಶನ, ರಂಗ ಪ್ರಯೋಗ ಹಾಗೂ ಸಮಾರೋಪ ಸಭೆ ನಡೆಯಲಿದ್ದು ನಾಡಿನ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಾಹಿತ್ಯಾಸಕ್ತರು, ಸಹಯಾನದ ಒಡನಾಡಿಗಳು ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಹಯಾನ ಟ್ರಸ್ಟ್ ಕೋರಿದೆ.
ಇದನ್ನು ಓದಿ: ಪ್ರಜಾಸತ್ತಾತ್ಮಕ ಸಂಸ್ಕೃತಿ ಕಟ್ಟುವ ಬಗೆ ತೋರಿಸಿದ ವಿಠ್ಠಲ: ಚೆನ್ನಿ
ಡಿಸೆಂಬರ್ 25ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಸಾಹಿತ್ಯೋತ್ಸವದ ಉದ್ಘಾಟನೆಯನ್ನು ಡಾ. ಕೇಶವ ಶರ್ಮ ಮಾಡಲಿದ್ದಾರೆ. ಉದಯ ಗಾಂವ್ಕರ್ ಅತಿಥಿಗಳಾಗಿ, ವಿಷ್ಣುನಾಯ್ಕ, ಶಾಂತಾರಾಮ ನಾಯಕ ಉಪಸ್ಥಿತಿತರಿರುವರು. ಕಾರ್ಯಕ್ರಮದ ಪ್ರಸ್ತಾವನೆ : ಡಾ. ಶ್ರೀಪಾದ ಭಟ್, ನಿರ್ವಹಣೆ: ಮಾಧವಿ ಭಂಡಾರಿ ನಡೆಸಿಕೊಡಲಿದ್ದಾರೆ.
ಬೆಳಿಗ್ಗೆ 11:30ರಿಂದ 1:30ರವರೆಗೆ ಬಿಡುಗಡೆಯ ಬಿಕ್ಕಟ್ಟುಗಳು : ಹೊಸ ತಲೆಮಾರು ವಿಚಾರಗೋಷ್ಠಿ ನಡೆಯಲಿದೆ.
ಮಹಿಳೆ: ಡಾ.ಸಬಿತಾ ಬನ್ನಾಡಿ
ದಲಿತ: ಡಾ. ಮಲ್ಲಿಕಾರ್ಜುನ ಮೇಟಿ
ಲಿಂಗಾಂತರಿ ಸಮುದಾಯ: ಚಾಂದಿನಿ
ನಿರ್ವಹಣೆ: ಕಿರಣ ಭಟ್
ಮಧ್ಯಾಹ್ನ 3:00 ರಿಂದ 5:00ರವರೆಗೆ ಕವಿಗೋಷ್ಠಿ: ಬಿಡುಗಡೆಯ ಹಾಡುಗಳು ನಡೆಯಲಿದೆ. ಡಾ.ರಂಗನಾಥ್ ಕುಂಟನಕುಂಟೆ ಅವರು ಆಶಯ ನುಡಿಗಳನ್ನು ಆಡಲಿದ್ದಾರೆ. ಕವಿ ಸಮಯದಲ್ಲಿ, ರೇಣುಕಾ ರಮಾನಂದ, ಶ್ರೀದೇವಿ ಕೆರೆಮನೆ, ಮಾನಸಾ ಹೆಗಡೆ, ಶ್ರೀಧರ ಶೇಟ್, ಭವ್ಯಾ ಹಳೆಯೂರು, ಮಹಂತೇಶ ಪಾಟೀಲ್, ಅಕ್ಷತಾ ಕೃಷ್ಣಮೂರ್ತಿ, ಮುಸ್ತಾಫ್ ಕೆ.ಎಚ್., ರೇಣುಕಾ ಹೆಳವರ, ಸಚಿನ್ ಅಂಕೋಲಾ, ಸುಧಾ ಭಂಡಾರಿ, ಕಾವ್ಯಾ ಮನ್ಮನೆ, ಫಾತಿಮಾ ರಲಿಯಾ ಭಾಗವಹಿಸಲಿದ್ದಾರೆ. ಶ್ರೀನಿವಾಸ ನಾಯ್ಕ ನಿರ್ವಹಣೆ ಮಾಡಲಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಸಮಾರೋಪ: ಸಮಯ 5:00 ರಿಂದ 6:00ರವರೆಗೆ ನಡೆಲಿದೆ. ಡಾ. ಕೆ.ಪ್ರಕಾಶ್ ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಡಾ. ವಿನಯಾ ಒಕ್ಕುಂದ ಅಧ್ಯಕ್ಷರ ನುಡಿಗಳನ್ನು ಆಡಲಿದ್ದಾರೆ. ನಿರ್ವಹಣೆ: ಯಮುನಾ ಗಾಂವ್ಕರ್ ಅವರು.
ಚಿತ್ರ ಪ್ರದರ್ಶನ : ನಭಾ ಒಕ್ಕುಂದ
ಸಮಯ 6:30 ರಿಂದ 7:45ರವರೆಗೆ ದಿವಂಗತ ಜಿ.ಎಸ್. ಭಟ್ (ಧಾರೇಶ್ವರ ಮಾಸ್ತರರು) ನೆನಪಿನ ರಂಗಪ್ರಯೋಗ: ಆನಂದ ಭಾವಿನಿ ಪ್ರದರ್ಶನಗೊಳ್ಳಲಿದೆ. ಅಭಿನಯ : ಸಿರಿವಾನಳ್ಳಿ. ಮರಾಠಿ ಮೂಲ: ಶಿವರಾಮ ರೇಗೇ. ಕನ್ನಡಕ್ಕೆ: ಗಿರಿಜಾ ಶಾಸ್ತ್ರಿ. ರಂಗರೂಪ : ಸುಧಾ ಆಡುಕಳ. ವಿನ್ಯಾಸ, ನಿರ್ದೇಶನ: ಡಾ. ಶ್ರೀಪಾದ ಭಟ್.
ಸಹಯಾನ ಸಾಹಿತ್ಯೋತ್ಸವಕ್ಕೆ ಸ್ವಾಗತ ಬಯಸುವರು: ಗೌರವಾಧ್ಯಕ್ಷರು : ಡಾ. ಬರಗೂರು ರಾಮಚಂದ್ರಪ್ಪ. ಶಾಂತಾರಾಮ ನಾಯಕ ಹಿಚ್ಕಡ, ಅಧ್ಯಕ್ಷರು: ವಿಷ್ಣು ನಾಯ್ಕ. ಕಾರ್ಯಾಧ್ಯಕ್ಷರು : ಡಾ. ಶ್ರೀಪಾದ ಭಟ್, ಕಾರ್ಯದರ್ಶಿ: ಮಾಧವಿ ಭಂಡಾರಿ ಕೆರೆಕೋಣ. ಖಜಾಂಚಿ: ಯಮುನಾ ಗಾಂವ್ಕರ್. ಸಹಕಾರ: ಚಿಂತನ ಉತ್ತರಕನ್ನಡ. ಸಮುದಾಯ ಕರ್ನಾಟಕ. ಯಕ್ಷ ಕಿರೀಟ. ಚಿಗುರುಗಳು.