ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಂತೆಯೇ ಮತ್ತೊಂದು ಪರೀಕ್ಷಾ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ಬಂಧಿತ ಸೌಮ್ಯಾ ಹಾಗೂ ನಾಗರಾಜ್ ಸೇರಿ ಹಲವು ಮಂದಿಯ ವಿಚಾರಣೆ ಪೂರ್ಣಗೊಂಡಿದೆ.
ಪ್ರಕರಣದ ಸಂಬಂಧ ಅತಿಥಿ ಉಪನ್ಯಾಸಕ ಶಿವಕುಮಾರ್ ಸೇರಿ ಹಲವರನ್ನು ವಿಚಾರಣೆ ಮಾಡಲಾಗಿದೆ.
ಭೂಗೋಳಶಾಸ್ತ್ರ ವಿಷಯದಲ್ಲಿ ಪಿಹೆಚ್‌ಡಿ ಪೂರ್ಣಗೊಳಿಸಿರುವ ಸೌಮ್ಯಾ ಅವರಿಗೆ ಅಕ್ರಮವಾಗಿ ಪ್ರೊ. ನಾಗರಾಜ್ ಪ್ರಶ್ನೆ ಪತ್ರಿಕೆ ನೀಡಿದ್ದರು. ಈ ಪ್ರಶ್ನೆ ಪತ್ರಿಕೆಯನ್ನು ಸೌಮ್ಯಾ, ಭೂಗೋಳ ಶಾಸ್ತ್ರದಲ್ಲಿ ಪಿಹೆಚ್‌ಡಿ ಪೂರ್ಣಗೊಳಿಸಿರುವ ತನ್ನ ಸ್ನೇಹಿತೆ ಅತಿಥಿ ಉಪನ್ಯಾಸಕಿಯೊಂದಿಗೆ ಹಂಚಿಕೊಂಡಿದ್ದಾರೆ. ಇದು ಮುಂದುವರಿದು ಮತ್ತೊಬ್ಬ ಪಿಎಚ್.ಡಿ ಪೂರ್ಣಗೊಳಿಸಿರುವ ಅಭ್ಯರ್ಥಿಗೆ ದೊರಕಿತ್ತು.
ಇದೀಗ ಪ್ರಕರಣದ ಸಂಬಂಧ ವಿಚಾರಣೆಗೊಳಪಟ್ಟಿದ್ದ ಶಿವಕುಮಾರ್ ಕೂಡ ಭೂಗೋಳಶಾಸ್ತ್ರ ವಿಷಯದಲ್ಲಿ ಪಿಹೆಚ್‌ಡಿ ಪೂರ್ಣಗೊಳಿಸಿ ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭೂಗೋಳಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಹುತೇಕರು ಪಿಹೆಚ್‌ಡಿ ಅಭ್ಯರ್ಥಿಗಳೇ ಆಗಿದ್ದಾರೆ. ಅವರಲ್ಲಿನ ಕೆಲವು ಪರೀಕ್ಷಾರ್ಥಿಗಳು ಪ್ರಶ್ನೆ ಪತ್ರಿಕೆ ಲಾಭ ಪಡೆದಿದ್ದಾರೆ.
45 ನಿಮಿಷದಲ್ಲೇ ಪರೀಕ್ಷೆ ಮುಗಿಸಿದ್ದ ಸೌಮ್ಯಾ
ಮಾರ್ಚ್ 14ರಂದು 3 ಗಂಟೆ ಅವಧಿಯ ಭೂಗೋಳಶಾಸ್ತ್ರ ಪರೀಕ್ಷೆಯನ್ನು ಸೌಮ್ಯಾ, ಕೇವಲ 45 ನಿಮಿಷಗಳಲ್ಲಿ ಬರೆದಿದ್ದಳು. ಬಳಿಕ ಪರೀಕ್ಷಾ ಕೇಂದ್ರ ಮೇಲ್ವಿಚಾರಕರ ಜತೆ ಹರಟೆ ಹೊಡೆಯುತ್ತಿದ್ದಳು ಎಂದು ಅದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿರುವ ಪರೀಕ್ಷಾರ್ಥಿಗಳು ತಿಳಿಸಿದ್ದಾರೆ.