ಬೆಳಗಾವಿ: ಸಹರಾ ಇಂಡಿಯಾ ಕಂಪನಿಯಲ್ಲಿ ತೊಡಿಗಿಸಿದ ಹಣ ಮರಳಿಸುವಂತೆ ಆಗ್ರಹಿಸಿ ಸಹರಾ ಕಾರ್ಯಕರ್ತರು ಹಾಗೂ ಗ್ರಾಹಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಸಹರಾ ಕಾರ್ಯಕರ್ತರು ಸಹರಾ ಇಂಡಿಯಾ ಕಂಪನಿ ಪ್ರಾಂಚೈಸಿಯನ್ನು ಬೈಲಹೊಂಗಲದಲ್ಲಿಯೇ ಮುಂದುವರೆಸಬೇಕು. ಸಹರಾ ಇಂಡಿಯಾ ಕಂಪನಿಯಿಂದ ಹಣ ಮರಳಿ ಕೊಡಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿ: 6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಲು ಮುಂದಾದ ಕೇಂದ್ರ ಸರಕಾರ
ಈ ವೇಳೆ ನಿವೃತ್ತ ಸಾರಿಗೆ ಸಹಾಯಕ ನಿರ್ದೇಶಕ ಐ.ಬಿ.ಶೀಲವಂತರ ಮಾತನಾಡಿ ʻಸಹರಾ ಇಂಡಿಯಾದಲ್ಲಿ 2008 ರಿಂದ ಹಣವನ್ನು ತೊಡಗಿಸಿರುತ್ತೇವೆ. ಆದರೆ ಸಹರಾ ಇಂಡಿಯಾ ಕಂಪನಿಯವರು ಇಲ್ಲಿಯವರೆಗೆ ಹಣ ಸಂದಾಯ ಮಾಡಿರುವುದಿಲ್ಲ. 2017ಕ್ಕೆ ನಿಗಧಿತ ಅವಧಿ ಮುಗಿದು 4 ವರ್ಷಗಳೆದರೂ ಯಾವುದೇ ಹಣ ಇಲ್ಲಿಯವರೆಗೆ ನೀಡಿರುವುದಿಲ್ಲ. ಸದ್ಯದ ಕೊರೊನಾ ಸಾಂಕ್ರಾಮಿಕತೆ ಸಮಯದಲ್ಲಿ ಹಣಕಾಸಿ ತೊಂದರೆಗಳು ಎದುರಾಗಿರುವುದು ಹಾಗೂ ಕೆಲವರು ಇದರಲ್ಲಿ ಬಡವರು, ರೈತರು, ಕೂಲಿ ಕಾರ್ಮಿಕರು ಹಣ ತೊಡಗಿಸಿರುತ್ತಾರೆ. ಅಲ್ಲದೇ ಇದರಲ್ಲಿ ಹಣ ತೊಡಗಿಸಿದ ಎಷ್ಟೋ ಜನ ಮೃತರಾಗಿರುತ್ತಾರೆ. ಮೃತರಾದ ಜನರ ಹಣವೂ ಮೂರು-ನಾಲ್ಕು ವರ್ಷಗಳಿಂದ ಸಂದಾಯವಾಗಿರುವುದಿಲ್ಲ. ಈ ಕುರಿತು ಮ್ಯಾನೇಜರ್‌ಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗನೇ ಕ್ರಮ ಕೈಗೊಳ್ಳಲು ತಿಳಿಸಿದರೂ ಪ್ರಯೋಜನವಾಗಿಲ್ಲ. ಇಲ್ಲವಾದಲ್ಲಿ ತಮ್ಮ ಕಛೇರಿಯ ಮುಂದೆ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದರು.
ಮಹಾಂತೇಶ ಇಂಚಲಮಠ ಮಾತನಾಡಿ ಎಷ್ಟೋ ಗ್ರಾಹಕರು ಸಹರಾ ಇಂಡಿಯಾ ಕಂಪನಿಯಲ್ಲಿ ಹಣ ತೊಡಗಿಸಿದ್ದಾರೆ. ಆದರೆ ಬೈಲಹೊಂಗಲ ಪ್ರಾಂಚೈಸಿಯನ್ನು ಬೆಳಗಾವಿಗೆ ಸ್ಥಳಾಂತರಿಸುತ್ತಿರುವ ಮಾಹಿತಿಗಳು ತಿಳಿದು ಬಂದಿದೆ. ಒಂದು ವೇಳೆ ಇದನ್ನು ಸ್ಥಳಾಂತರಿಸಿದರೆ ಕಾರ್ಯಕರ್ತರಿಗೆ ಹಾಗೂ ಗ್ರಾಹಕರಿಗೆ ಬಹಳ ತೊಂದರೆಯಾಗುತ್ತದೆ. ಆದ್ದರಿಂದ ಈ ಪ್ರಾಂಚೈಸಿಯನ್ನು ಬೈಲಹೊಂಗಲದಲ್ಲಿಯೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಐ.ಎಂ.ಪೂಜೆರ, ಎಂ.ಕೆ.ಹಲಗತ್ತಿ, ಎಂ.ಜಿ.ಹೊಸಮಠ, ಆರ್.ಎಸ್.ಅಂಕಲಗಿ, ಮಾರೋತಿ ಶೆಲ್ಲಿಕೇರಿ, ಪರಶುರಾಮ ಪೂಜಾರ, ಎಂ.ಎಂ.ಕಾಳೆ, ಭೂಸೆಪ್ಪ ಭಜಂತ್ರಿ ಸೇರಿದಂತೆ ಹಲವು ಗ್ರಾಹಕರು ಪಾಲ್ಗೊಂಡಿದ್ದರು.