ಬೀದರ : ಲಾಕ್ ಡೌನ್ ಮಾಡಬಾರದು ಎಂದಾದರೆ ಜನರು ಅದಕ್ಕೆ ಸರಿಯಾದ ಸಹಕಾರ ನೀಡಬೇಕು, ಸಹಕಾರ ನೀಡದೆ ಹೋದರೆ ಲಾಕ್ಡೌನ್ ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೀದರ್ ನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ತಮ್ಮ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವಾದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು, ಜನಜಂಗುಳಿ ಸೇರಬಾರದು, ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಸ್ಯಾನಿಟೈಸ್ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ : ಏಪ್ರಿಲ್ 10 ರಿಂದ ಏ. 20 ರವರೆಗೆ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ
ಸರ್ಕಾರ ಪದೇ ಪದೇ ಜನರಿಗೆ ಕೊರೋನಾ ಬಗ್ಗೆ ಜಾಗೃತಿ ಅರಿವು ಮೂಡಿಸುತ್ತಿದೆ. ಕೊರೋನಾ ಅಧಿಕವಾಗಿರುವ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಮಾಡಲಾಗಿದೆ. ಅದಕ್ಕೆ ಜನರು ಸ್ಪಂದಿಸಬೇಕು, ಇಲ್ಲದಿದ್ದರೆ ಬಿಗಿಯಾದ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕಾಗುತ್ತದೆ. ಲಾಕ್ ಡೌನ್ ಅನಿವಾರ್ಯವಾಗಿ ಮಾಡಬೇಕಾಗುತ್ತದೆ, ಅದಕ್ಕೆ ಆಸ್ಪದ ಕೊಡಬೇಡಿ. ಕೊರೊನಾ ನಿಯಂತ್ರಣ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚರ್ಚೆ ನಡೆಸಲಾಗಿದೆ. ಹೆಚ್ಚು ಪ್ರಕರಣಗಳಿರುವ ಕಡೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಜನರು ಸಹ ಸರ್ಕಾರದ ಕ್ರಮಗಳಿಗೆ ಸಹಕರಿಸಬೇಕು ಎಂದು ಸಹ ಮನವಿ ಮಾಡಿಕೊಂಡರು.