ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸುಮಾರು ಎರಡು ತಿಂಗಳ ನಂತರ ಸೋಮವಾರ ಜನಜೀವನ ಬಹುತೇಕ ಸಹಜ ಸ್ಥಿತಿಗೆ ಬರುತ್ತಿದೆ. 54 ದಿನಗಳ ನಂತರ ಬೆಂಗಳೂರಿನಲ್ಲಿ ಮೆಟ್ರೊ ಮತ್ತು ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ
ಏಪ್ರಿಲ್ 27ರ ಬಳಿಕ ಬೆಂಗಳೂರು ನಗರ ಈ ಸಹಜ ಸ್ಥಿತಿಗೆ ಬಂದಿದೆ. ನಗರದಲ್ಲಿ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ಆರಂಭಗೊಂಡಿದ್ದು, ಎಂದಿನಂತೆ ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳು ಕಾರ್ಯಚರಿಸುತ್ತಿದೆ.
ಇಂದು 2000 ಬಿಎಂಟಿಸಿ ಬಸ್‌ಗಳು ಓಡಾಟ ನಡೆಸಲಿದೆ. ನಿನ್ನೆ ಬಿಡುಗಡೆಯಾದ ಲಾಕ್‌ಡೌನ್ ಸಡಿಲಿಕೆ ಅನುಸಾರ ಕೋವಿಡ್ ಹರಡುವಿಕೆ ಭಯದಲ್ಲಿ ಕೆಲವೊಂದು ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಿಲ್ಲ.
ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಬೇರೆ ಬಹುತೇಕ ಜಿಲ್ಲೆಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾಗಿದ್ದರೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬಸ್ ಗಳು ರಸ್ತೆಗಿಳಿದಿಲ್ಲ. ಬಸ್ ಗಳ ಸಂಖ್ಯೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಸಹ ಬಾರದಿರುವುದರಿಂದ ಸಂಚಾರಕ್ಕೆ ಬಸ್ ಇದೆ ಎಂದು ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕಾದು ಕಾದು ಕಂಗಾಲಾಗಿದ್ದಾರೆ.
ಬಸ್ ಗಳ ಸಂಖ್ಯೆ ವಿರಳವಾಗಿರುವುದರಿಂದ ಬಂದ ಬಸ್ ಗಳಲ್ಲಿ ಹತ್ತಲು ಜನರ ನೂಕುನುಗ್ಗಲು ರಾಜ್ಯದ ಬಹುತೇಕ ಕಡೆಗಳಲ್ಲಿ ಕಂಡು ಬರುತ್ತಿದೆ. ಬಹುತೇಕ ಕಡೆ ಬಸ್ ಗಳ ಸಂಚಾರ ಸಾಕಷ್ಟು ಇಲ್ಲದಿರುವುದರಿಂದ ಆಸ್ಪತ್ರೆಗೆ, ಕಚೇರಿಗಳಿಗೆ,ಅಗತ್ಯ ಕೆಲಸಗಳಿಗೆ ಹೋಗುತ್ತಿರುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.