“ಕಮಲ” ಆಕೃತಿ ಹೋಲುತ್ತಿದೆ ಕಟ್ಟಡದ ವಿನ್ಯಾಸ
ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ಎಂದಾದರೂ ವಿಮಾನದಲ್ಲಿ ತೆರಳುವಾಗ ಕಟ್ಟಡದ ವಿನ್ಯಾಸ ಕಂಡು ಬಿಜೆಪಿ ಪಕ್ಷದ ಚಿನ್ಹೆಯಂತಿದೆಯಲ್ಲಾ ಎಂದು ಆಚ್ಚರಿ ಮೂಡುವುದು ನಿಜ. ವಿಮಾನ ನಿಲ್ದಾಣದ ಕುರಿತು “ದಿ ನ್ಯೂ ಇಂಡಿಯನ್ ಎಕ್ಸಪ್ರಸ್” ವರದಿ ಮಾಡಿದ್ದು ಆಘಾತಕಾರಿ ವಿಚಾರಗಳನ್ನು ಹೊರ ಹಾಕಿದೆ.
ನಿನ್ನೆಯಷ್ಟೇ ಸೋಗಾನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪರಿಶೀಲನೆ ನಡೆಸಿದ್ದು, ಇದೇ ವೇಳೆ ವಿಮಾನ ನಿಲ್ದಾಣ ಕಟ್ಟಡ ವಿನ್ಯಾಸವನ್ನು ಅನಾವಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಅನಾವರಣಗೊಳಿಸಿದ ಕಟ್ಟಡದ ವಿನ್ಯಾಸವು ಕಮಲದ ಆಕೃತಿಯಲ್ಲಿರುವುದು ಕಂಡು ಬಂದಿದೆ. ಹೀಗಾಗಿ ವಿಮಾನ ನಿಲ್ದಾಣಕ್ಕೂ ಕೇಸರಿ ಸ್ಪರ್ಶವನ್ನು ನೀಡಲಾಗಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಲೆ ಅವರು ಶಿವಮೊಗ್ಗ ಜಿಲ್ಲೆಯವರಾಗಿರುವುದು, ಜಿಲ್ಲೆ ಪ್ರಮುಖ ರಾಜಕೀಯ ಬಲವನ್ನು ಹೊಂದಿರುವುದು ವಿಮಾನ ನಿಲ್ದಾಣದ ವಿನ್ಯಾಸದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪ ಅವರು ಶಿಕಾರಿಪುರದಿಂದ ಬಂದವರಾಗಿದ್ದು, ಹೊಸಬಲೆಯವರು ಸೊರಬ ಮೂಲದವರಾಗಿದ್ದಾರೆ. ಇನ್ನು ಸಂತೋಷ್ ಅವರು ಆರ್‌ಎಸ್‌ಎಸ್ ಸಿದ್ಧಾಂತವನ್ನು ಉತ್ತೇಜಿಸುವ ಮೂಲಕ ಜಿಲ್ಲೆಯಲ್ಲಿ ದೀರ್ಘಕಾಲ ಕೆಲಸ ಮಾಡಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನಸಭೆ ಮಾಜಿ ಸ್ಪೀಕರ್ ಡಿಹೆಚ್ ಶಂಕರಮೂರ್ತಿಯವರೂ ಇದೇ ಜಿಲ್ಲೆಯವರೇ ಆಗಿದ್ದಾರೆ. ಹಾಗಾಗಿ ಇದನ್ನೆಲ್ಲ ಬಳಸಿ ಬಿಜೆಪಿ ಚಿಹ್ನೆಯಂತೆ ವಿನ್ಯಾಸ ಮಾಡಲಾಗಿದೆ.
#Saffron touch? Proposed #Shivamogga #airport terminal resembles #lotus https://t.co/t9oSMaqkVk via @NewIndianXpress @XpressBengaluru @santwana99
— Marx Tejaswi (@_marxtejaswi) June 13, 2021
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ಜೂನ್ ಒಳಗಾಗಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದೆ. ಕಟ್ಟಡವನ್ನು ರೂ.384 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.