ಬ್ರ್ಯಾಂಡ್‌ ಬೆಂಗಳೂರು ಬೇಡ, ಸುರಕ್ಷಿತವಾದ ರೆಗ್ಯುಲರ್‌ ಬೆಂಗಳೂರು ನೀಡಿದರೆ ಸಾಕು: ಕಾಂಗ್ರೆಸ್‌ ಸರ್ಕಾರ ವಿರುದ್ದ ಆರ್‌.ಅಶೋಕ ಆಕ್ರೋಶ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ನಮಗೆ ಬ್ರ್ಯಾಂಡ್‌ ಬೆಂಗಳೂರು ನೀಡುವುದು ಬೇಡ, ಸುರಕ್ಷಿತವಾದ ರೆಗ್ಯುಲರ್‌ ಬೆಂಗಳೂರು ನೀಡಿದರೆ ಸಾಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿಕೆ ನೀಡಿದ್ದಾರೆ.

ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಅವರು, ಸಂತ್ರಸ್ತರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ʼ ಸರ್ಕಾರ ಬೆಂಗಳೂರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕಾಂಗ್ರೆಸ್‌ ಸರ್ಕಾರ ಬಂದ ನಂತರ ಬ್ರ್ಯಾಂಡ್‌ ಬೆಂಗಳೂರು ಎಂಬ ಹೆಸರು ಹುಟ್ಟುಹಾಕಿದ್ದಾರೆ. ಆದರೆ ನಗರದಲ್ಲಿ ದಿನಕ್ಕೊಂದು ಅವಘಡ ಸಂಭವಿಸುತ್ತಿದೆ. ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿತವಾಗಿದ್ದು, ಎಂಟು ಅಮಾಯಕರು ಮೃತರಾಗಿದ್ದಾರೆ. ಇಲ್ಲಿನ 20 ಅಡಿ ರಸ್ತೆಗೆ ಹೆಚ್ಚೆಂದರೆ 3 ಮಹಡಿ ನಿರ್ಮಿಸಬಹುದು. ಆದರೆ 7 ಮಹಡಿ ನಿರ್ಮಿಸಲು ಹೊರಟಿದ್ದರಿಂದ ಅವಘಡ ನಡೆದಿದೆ. ಬಿಬಿಎಂಪಿ ಅಧಿಕಾರಿಗಳು ಇದನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ ಎಲ್ಲವೂ ಸರಿ ಇರುತ್ತಿತ್ತುʼ ಎಂದರು.

ಇದನ್ನು ಓದಿ : ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟ ಇಬ್ಬರು ರೈತರು

ಕಾಂಗ್ರೆಸ್‌ ಸರ್ಕಾರ ಇಂತಹ ಯಾವುದೇ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೆಲ ತಿಂಗಳ ಹಿಂದೆ ವಿದ್ಯುತ್‌ ತಂತಿ ತಗುಲಿ ತಾಯಿ ಮತ್ತು ಮಗು ಮೃತಪಟ್ಟಾಗ ಅದಕ್ಕೆ ಇಲಿ ಕಾರಣ ಎಂದು ಹೇಳಿದ್ದರು. ಮಳೆ ನೀರಿನಲ್ಲಿ ಮಗು ಕೊಚ್ಚಿಕೊಂಡು ಹೋಗಿರುವುದು, ಮರ ಬೀಳುವುದರಿಂದ ಅನಾಹುತ ಮೊದಲಾದವು ಬ್ರ್ಯಾಂಡ್‌ ಬೆಂಗಳೂರಿನ ಮಹಿಮೆಯಿಂದ ಆಗುತ್ತಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರುವ ರಸ್ತೆಯ ಎರಡೂ ಬದಿ ಕಸ ರಾಶಿಯಾಗಿ ಬಿದ್ದಿದೆ. ಅಂದರೆ ಉಪಮುಖ್ಯಮಂತ್ರಿಯಾಗಲೀ, ಮುಖ್ಯಮಂತ್ರಿಯಾಗಲಿ, ಇಲ್ಲಿ ಯಾರಿಗೂ ಬೆಲೆ ಇಲ್ಲ. ಒಂದು ವಾರದಿಂದ ಸರಿಯಾಗಿ ಕಸ ವಿಲೇವಾರಿ ಮಾಡಿಲ್ಲ. ವಿದ್ಯುತ್‌ ಕಂಬಗಳಿಂದ ಇನ್ನೆಷ್ಟು ಜನ ಸಾಯುತ್ತಾರೆಂದು ಗೊತ್ತಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದರು.

ಪೌರಕಾರ್ಮಿಕರ ಮನೆಗಳಿಗೂ ನೀರು ನುಗ್ಗಿದೆ. ಜನರು ಮನೆಗಳಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ರಾಜಧಾನಿ ಬೆಂಗಳೂರನ್ನು ರಾಜ್ಯ ಸರ್ಕಾರ ಸಂಪೂರ್ಣ ಕಡೆಗಣಿಸಿದೆ. ಸರ್ಕಾರ ಗಾಢ ನಿದ್ದೆಯಲ್ಲಿದ್ದು, ಮೃತಪಟ್ಟವರ ಕುಟುಂಬದ ಶಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ನಿರ್ಮಾಣದ ವಿಚಾರದಲ್ಲಿ ಸರ್ಕಾರ ಮಾರ್ಗಸೂಚಿ ರೂಪಿಸಬೇಕು. ಕಟ್ಟಡಗಳ ಬಗ್ಗೆ ಸದಾ ನಿಗಾ ಇರಿಸುವ ಕೆಲಸ ಮಾಡಬೇಕು. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ, ಪ್ರತಿ ಮಳೆಗಾಲಕ್ಕೆ ಮುನ್ನ ಸಭೆ ನಡೆಸಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸಲಾಗಿತ್ತು. ಜೊತೆಗೆ ಹಣ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಸರ್ಕಾರ ಸಭೆ ನಡೆಸಿಲ್ಲ, ಪರಿಹಾರ ಕಾರ್ಯಾಚರಣೆಗೆ, ರಾಜಕಾಲುವೆ ಹೂಳು ತೆಗೆಯಲು ಹಣ ಬಿಡುಗಡೆ ಮಾಡಿಲ್ಲ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಜನರು ಅಧಿಕಾರ ಕೊಟ್ಟಾಗ ಕೆಲಸ ಮಾಡಬೇಕೆ ಹೊರತು, ಹಿಂದಿನವರು ಏನು ಮಾಡಿದ್ದಾರೆ ಎಂದು ಮಾತಾಡಬಾರದು. ಕಾಂಗ್ರೆಸ್‌ನವರು ಮೊದಲು ಕೆಲಸ ಮಾಡಲಿ. ಆಪಾದನೆ ಮಾಡಿಕೊಂಡು ಇದ್ದರೆ, ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ಇದನ್ನು ನೋಡಿ : ಬೆಂಗಳೂರು | ಭಾರಿ ಮಳೆ; ಸಂಚಾರ ಅಸ್ತವ್ಯಸ್ತ – ಇಬ್ಬರು ಮಕ್ಕಳ ಸಾವು Janashakthi Media

Donate Janashakthi Media

Leave a Reply

Your email address will not be published. Required fields are marked *