ಸಫ್ದರ್ ಹಾಶ್ಮಿಯ ಸಾವು – ಬದುಕಿನ ಹಲ್ಲಾಬೋಲ್ ಪುಸ್ತಕ ಕನ್ನಡಕ್ಕೆ

ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕಿನ ಕುರಿತಾದ ” ಹಲ್ಲಾಬೋಲ್ ಪುಸ್ತಕವು ಅಕ್ಟೋಬರ್ 30 ರಂದು ಸಂಜೆ  5 ಗಂಟೆಗೆ ಬಿಡುಗಡೆಯಾಗುತ್ತಿದೆ. ಸುಧನ್ವ ದೇಶಪಾಂಡೆಯವರ ಮೂಲಕೃತಿಯನ್ನು  ಕನ್ನಡಕ್ಕೆ ಎಂ.ಜಿ.ವೆಂಕಟೇಶ್ ಅನುವಾದಿಸಿದ್ದಾರೆ. ಕ್ರೀಯಾ ಮಾಧ್ಯಮ ಪುಸ್ತಕವನ್ನು ಹೊರತರುತ್ತಿದೆ.


 ಪುಸ್ತಕದ ವಿವರ

ಶೀರ್ಷಿಕೆ : ಹಲ್ಲಾಬೋಲ್ – ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕು ಮೂಲ :ಸುಧನ್ವ ದೇಶಪಾಂಡೆ ಅನುವಾದ ಎಂ.ಜಿ.ವೆಂಕಟೇಶ್ ಪ್ರಕಾಶನ : ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:280 ಬೆಲೆ ರೂ.200 ಪ್ರಕಟಣಾ ವರ್ಷ:2020

ಹಲ್ಲಾ ಬೋಲ್ ಕೃತಿಯನ್ನು ಖ್ಯಾತ ಚಲನಚಿತ್ರ ನಟ ನಸೀರುದ್ದೀನ್ ಶಾ ಬಿಡುಗಡೆ ಮಾಡಲಿದ್ದಾರೆ.  ಕೃತಿಯ ಮೂಲ ಲೇಖಕ ಸುಧನ್ವ ದೇಶಪಾಂಡೆ, ಸಿನಿಮಾ ನಟ ಅಚ್ಯತ್ ಕುಮಾರ್, ಅನುವಾದಕ ಎಂ.ಜಿ.ವೆಂಕಟೇಶ್, ಮುಖ್ಯ ಅತಿಥಿಗಳಾಗಿ ಭಾಗಿವಹಿಸುತ್ತಿದ್ದಾರೆ. ಕಲಾವಿದರಾದ ಗಿರಿಜಾ ಪಿ ಸಿದ್ದಿ, ಮಲಯ ಶ್ರೀಹಶ್ಮಿ ಪುಸ್ತಕದ ಆಯ್ದ ಭಾಗವನ್ನು ಓದಲಿದ್ದಾರೆ. ಬೋಳವಾರು ಮಹಮ್ಮದ್ ಕುಂಞ ಸಮಾರೋಪದ ಮಾತುಗಳನ್ನು ಆಡಲಿದ್ದಾರೆ.

ಪುಸ್ತಕದೊಳಗೆ ಏನಿದೆ?

ಪೋಸ್ಟ್ ಮಾರ್ಟ್‍ಂ ವರದಿ ಸಹ, ನಾವು ಎತ್ತಿಕೊಂಡು ಆಸ್ಪತ್ರೆಗೆ ಹೋದಾಗ ಅವನ ಕಿವಿ, ಮೂಗು ಮತ್ತು ಗಂಟಲಿನಿಂದ ರಕ್ತ ಸ್ರಾವವಾಗುತ್ತಿದ್ದದ್ದನ್ನು ಗುರುತಿಸಿತ್ತು. ವರದಿಯಲ್ಲಿ ಮೆದುಳು ಚಿಪ್ಪು ಮತ್ತು ಹಣೆಗೆ ಆಳವಾದ ಸೀಳು ಗಾಯದ ಬಗ್ಗೆ ವಿವರಣೆಯಿತ್ತು. ಅವನ ತಲೆಗೆ ಕನಿಷ್ಟ ಇಪ್ಪತ್ತು ಬಾರಿಯಾದರೂ ಕಬ್ಬಿಣ ರಾಡಿನಿಂದ ಹೊಡೆದಿರಬಹುದು ಎಂದು ಅದರಲ್ಲಿ ಬರೆದಿತ್ತು.

೧೯೮೦ರ ದಶಕದ ಮಧ್ಯಾವಧಿ. ಕೋಮು ಸೌಹಾರ್ದತಾ ಸಮಿತಿ

ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಅಕ್ಟೋಬರ್ ೩೧, ೧೯೮೪ರಂದು ತಮ್ಮ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದರು. ಆ ನಂತರ ಸಿಖ್ ವಿರೋಧಿ ಹತ್ಯಾಕಾಂಡ ಪ್ರಾರಂಭವಾಗಿ ಸುಮಾರು ಮೂರು ಸಾವಿರ ಜೀವಗಳನ್ನು ಬಲಿತೆಗೆದುಕೊಳ್ಳುವುದು ಅಲ್ಲದೇ ನಮ್ಮ ಸಮಾಜ, ಹಿಂದೂ-ಸಿಖ್ ಬಾಂಧವ್ಯ, ದೆಹಲಿ ನಗರದ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಬಹಳ ಕಾಲದಿಂದ ಇದ್ದ ನಂಬಿಕೆಗಳು ನುಚ್ಚುನೂರಾದವು. ಈ ಮಾರಣ ಹೋಮಕ್ಕೆ ತತ್ತರಿಸಿದ ಸಾವಿರಾರು ಸಿಖ್ಖರು ನಗರದ ತಮ್ಮ ಪ್ರೀತಿಯ ಬಂಧುಗಳನ್ನು, ಮನೆ, ವ್ಯವಹಾರಗಳನ್ನು ಕಳೆದುಕೊಂಡು ನಗರದ ವಿವಿಧ ಕಡೆಗಳಲ್ಲಿ ರಚಿಸಲಾದ ಕ್ಯಾಂಪ್‌ಗಳಿಗೆ ಹೋಗಬೇಕಾಯಿತು. ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ಸಿನಲ್ಲಿ ಮೊದಲು ಶಾಂತಿ ಮೆರವಣಿಗೆ ನಡೆದಾಗ ಉರಿದಿದ್ದ ಕೆಂಡ ಹೊಗೆಯಾಡುತ್ತಲೇ ಇತ್ತು. ಗಾಯ ಹಸಿಯಾಗಿಯೇ ಇತ್ತು. ಶಾಂತಿ ಮೆರವಣಿಗೆ ಕ್ಯಾಂಪಸ್‌ನ ಎಲ್ಲ ಕಾಲೇಜುಗಳನ್ನು ಮತ್ತು ಮುಖ್ಯ ವಿಭಾಗಗಳನ್ನು ಮುಟ್ಟುತ್ತಲೇ ಸಾಗಿತು. ಶಾಲಾ ಕಾಲೇಜಿನಲ್ಲಿ ಮೆರವಣಿಗೆ ಕೊನೆಗೊಂಡು ಸಾರ್ವಜನಿಕ ಸಭೆ ನಡೆಯಿತು. ಕೆಲವು ಭಾಷಣಕಾರರು ಸಭೆಯನ್ನು ಉದ್ದೇಶಿಸಿ ಮಾತನಾಡುವವರಿದ್ದು ಆ ವೇಳೆಗೆ ಅತಿಥೇಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಸೇರಿದ್ದರು.

ಅವರಲ್ಲಿ ಬಹುತೇಕರು ಯುವಜನರು. ಅವರು ಕೋಪಗೊಂಡಿದ್ದು ಪ್ರತಿಕಾರಕ್ಕಾಗಿ ಕುದಿಯುತ್ತಿದ್ದರು. ಅವರ ಕಣ್ಣುಗಳು ನೋವಿನಿಂದ ಉರಿಯುತ್ತಿದ್ದು, ದ್ವೇಷ ಮತ್ತು ದುಃಖಭರಿತವಾಗಿದ್ದವು. ಪ್ರತೀಕಾರದ ವಾತಾವರಣವಿತ್ತು.

ಭಾಷಣಗಳ ಮೊದಲು ‘ಪರ್ಚಮ್’ ಗುಂಪಿನಿಂದ ಹಾಡುಗಳ ಕಾರ್ಯಕ್ರಮವಿತ್ತು. ಹಾಡುವುದು ಅಸಾಧ್ಯವಾಗಿತ್ತು. ಅವರ ಬಹಳಷ್ಟು ಕೋಪ ಅಲ್ಲಿ ಬಹುಸಂಖ್ಯೆಯಲ್ಲಿ ನೆರೆದಿದ್ದ ಪೋಲಿಸರ ವಿರುದ್ಧವಿತ್ತು. ವಿದ್ಯಾರ್ಥಿಗಳು ಉದ್ರಿಕ್ತರಾಗಿದ್ದರು. ಹಿಂದಿನ ದಿನಗಳಲ್ಲಿ ನಡೆದ ಆಸ್ತಿಹಾನಿಯಲ್ಲಿ ರಕ್ತ ಹರಿಯುತ್ತಿದ್ದಾಗ ದುಷ್ಕೃತ್ಯದಲ್ಲಿ ಪೊಲೀಸರು ಶಾಮೀಲಾಗಿದ್ದರು. ಒಂದು ಅಪಾಯಕಾರಿ ಸನ್ನಿವೇಶ ಪ್ರಾರಂಭವಾಗುತ್ತಿತ್ತು. ಶಾಂತಿ ಮೆರವಣಿಗೆ ಸಂಘಟಕರಿಗೆ ಮುಂದಿನ ಆಗುಹೋಗುಗಳ ಬಗ್ಗೆ ಆತಂಕವಿತ್ತು.

ಸಫ್ದರ್ ‘ಪರ್ಚಮ್’ನ ಅತ್ಯಂತ ಕಿರಿಯ ಸದಸ್ಯಳಾದ, ತೆಳ್ಳಗಿನ ಪದವಿಪೂರ್ವ ವಿದ್ಯಾರ್ಥಿನಿ ಸುಮಂಗಲಾ ದಾಮೋದರನ್  (ಇಎಂಎಸ್ ಅವರ ಮೊಮ್ಮಗಳು) ಕಡೆಗೆ ತಿರುಗಿದನು. ಅವನು ಮೈಕ್ ಕೈಗೆತ್ತಿಕೊಂಡು ‘ಜಾನೆವಾಲೇ ಸಿಪಾಯಿ’ ಹಾಡನ್ನು ಹಾಡಲು ಹೇಳಿದ. ೧೯೪೦ರಲ್ಲಿ ಈ ಯುದ್ಧ ವಿರೋಧಿ-ಗೀತೆಯನ್ನು ರಚಿಸಿದ್ದು ಹೈದರಾಬಾದ್‌ನ ಕಮ್ಯೂನಿಸ್ಟ್ ಕವಿ ಮಕ್ದೂಮ್ ಮೋಹಿಯುದ್ದೀನ್. ಅದನ್ನು ಸಲೀಲ್ ಚೌಧರಿ ೧೯೬೦ರಲ್ಲಿ ’ಉಸ್ನೇ ಕಹಾ ಥಾ’ ಚಿತ್ರಕ್ಕೆ ಅಳವಡಿಸಿ ಸಂಗೀತ ನೀಡಿದ್ದರು. ಅಲ್ಲಿವರೆಗೆ ‘ಪರ್ಚಮ್’ ಯಾವಾಗಲೂ ಗುಂಪು ಗಾಯನ ಮಾಡುತ್ತಿದ್ದರು. ತಂಡದಿಂದ ಒಬ್ಬರೇ ಹಾಡಿದ ಮೊದಲ ಗೀತೆ ಇದಾಗಿತ್ತು. ಅದನ್ನು ಅವರು ಹಿಂದೆ ಎಂದೂ ಹಾಡಿರಲಿಲ್ಲ. ಯುವ ಗಾಯಕಿ ತಬ್ಬಲಿಯಂತೆ ಭಯಭೀತಳಾಗಿದ್ದಳು.

‘ಹಾಡು, ಹೆದರಬೇಡ ಹಾಡು’

ಸಫ್ದರ್ ಉತ್ತೇಜಿಸಿದನು. ಸುಮಂಗಲ ಹಿಂಜರಿಯುತ್ತಿದ್ದಳು. ಸಫ್ದರ್ ಅವಳ ಹಿಂದೆಯೇ ಇದ್ದ. ಅವಳು ಮತ್ತೆ ಹಾಡಲು ಪ್ರಾರಂಭಿಸಿದಳು. ಅವಳ ಮಧುರ ಧ್ವನಿ ಇದ್ದಕ್ಕಿದಂತೆ ಶಕ್ತಿಶಾಲಿಯಾಯಿತು. ಅವಳ ಅಂತರಂಗದ ಆಳದಿಂದ ಹೊರಟ ಆ ಪೂರ್ಣಧ್ವನಿ ಅವಳ ಸಣ್ಣ ಆಕಾರವನ್ನು ಮುಚ್ಚಿತ್ತು. ಅದು ಅಲ್ಲಿದ್ದ ಎಲ್ಲರನ್ನೂ ತಲುಪಿ ಶಾಂತವಾಗಿಸಿತು. ಹಾಡು ಮುಂದುವರೆದಂತೆ ಯುವಕ ಯುವತಿಯರು ಸ್ತಂಭಿತರಾಗಿದ್ದರು. ಸಿಪಾಯಿ ಯುದ್ಧಕ್ಕೆ ಹೊರಡುವಾಗ ಅವನ ದುಃಖಿತ ಹೆಂಡತಿ ಮತ್ತು ಹಸಿದ ಮಕ್ಕಳ ಕುರಿತಾದ ಹಾಡು, ಸುಡುತ್ತಿದ್ದ ಹೆಣಗಳ ವಾಸನೆ – ಎಲ್ಲಾ ಕಡೆಯಿಂದ ಎದ್ದು ಬದುಕೇ ಅಳುತ್ತಿರುವಂತೆ ಭಾಸವಾಗುತ್ತಿತ್ತು.

ಪ್ರೇಕ್ಷಕರಲ್ಲಿ ಯಾರೋ ಒಬ್ಬರು ಅಳತೊಡಗಿದರು. ಮುಂದಿನ ಕೆಲವು ನಿಮಿಷಗಳಲ್ಲಿ ಸುಮಾರು ಜನ ಅಳುತ್ತಿದ್ದರು. ಅಳದಿದ್ದವರೂ ಉಕ್ಕಿಬರುತ್ತಿದ್ದ ಭಾವನೆಯನ್ನು ತಡೆಯಲು ಯತ್ನಿಸುತ್ತಿದ್ದರು. ಅಲ್ಲಿ ಒದ್ದೆಯಾಗದಿದ್ದ ಕಣ್ಣುಗಳೇ ಇರಲಿಲ್ಲ. ಸಂಪೂರ್ಣವಾಗಿ ಕಾರ್ಯಾಚರಣೆಗಾಗಿ ಸಿದ್ಧರಾಗಿದ್ದ ಪೋಲಿಸರು, ಅಲ್ಲಿ ಬದಲಾದ ಮನಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತರಾದರು.

ಅಸಾಧ್ಯವೆನಿಸಿದ್ದು ನಡೆದಿತ್ತು. ೧೯೪೦ರಲ್ಲಿ ಮುಸ್ಲಿಂ ಹೆಸರಿನ ಹೈದರಾಬಾದಿ ಕಮ್ಯುನಿಸ್ಟ್ ಕವಿಯಿಂದ ರಚಿತವಾದ ಒಂದು ಹಾಡು, ೧೯೬೦ರ ಒಂದು ಚಲನಚಿತ್ರಕ್ಕೆ ಒಬ್ಬ ಬಂಗಾಳಿ ಅಳವಡಿಸಿದ್ದ, ಪದವಿಪೂರ್ವ ತರಗತಿಯ ಹಿಂದು ಹೆಸರಿನ ಮಲೆಯಾಳಿ ಯುವತಿ ಹಾಡಿದ ಹಾಡು, ಹತ್ಯಾಕಾಂಡದಿಂದ ಕುದಿಯುತ್ತಿದ್ದ ಕೋಪೋದ್ರಿಕ್ತರಾಗಿದ್ದ ನೂರಾರು ಸಿಖ್ ಯುವಕರಲ್ಲಿ ಬದಲಾವಣೆ ತಂದಿತ್ತು. ಇಲ್ಲಿ ಹೋಲಿಸಬಹುದಾದ್ದು, ಹೊಂದಿಕೆಯಾಗಬಹುದಾದ್ದು ಏನೂ ಇಲ್ಲ. ಆದರೂ ಈ ಹಾಡು, ಭಾವಪೂರ್ಣ ಮತ್ತು ಮನಕಲಕುವ ಹಾಡು-ನೊಂದವರ ಎರಡು ಗುಂಪುಗಳನ್ನು, ಪೀಳಿಗೆಗಳು, ಭೂಗೋಳ ಮತ್ತು ಹಿಂಸಾಚಾರದ ಎಲ್ಲೆಗಳನ್ನೂ ಮೀರಿ ಜೋಡಿಸಿತ್ತು.

 

 

Donate Janashakthi Media

Leave a Reply

Your email address will not be published. Required fields are marked *