ಬೆಂಗಳೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಸಲ್ಲಿಸಿರುವ ’ಒಳ ಮೀಸಲಾತಿ ಕುರಿತ ವರದಿನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ನ್ಯಾಯಮೂರ್ತಿ ಸದಾಶಿವ ವರದಿ ಜಾರಿ ಹೋರಾಟ ಸಮಿತಿಯಿಂದ ʻಮಾದಿಗ ಚೈತನ್ಯ ರಥಯಾತ್ರೆʼ ಮೂಲಕ ನಗರದಲ್ಲಿ ಸಾವಿರಾರು ಜನರು ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದರು.
ಬೆಂಗಳೂರು ರೈಲ್ವೆ ನಿಲ್ದಾಣದಿಂದ ಆನಂದರಾವ್ ಮೇಲ್ಸೇತುವೆ ಮೂಲಕ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಮೆರವಣಿಗೆ ಹೊರಟ ಕಾರ್ಯಕರ್ಯರು ವರದಿಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನ ಮುನ್ನುಡಿಯಲ್ಲಿ ತಿಳಿಸಿರುವಂತೆ ಎಲ್ಲ ಜಾತಿ-ಜನಾಂಗ, ಧರ್ಮದವರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ಮತ್ತು ರಾಜಕೀಯವಾಗಿ ಸಮಾನವಾದ ನ್ಯಾಯ ಸಿಗಬೇಕೆಂದು ಹೇಳಿದ್ದಾರೆ. ಆದರೆ ಸಂವಿಧಾನ ಜಾರಿಯಾಗಿ ಹಲವು ದಶಕಗಳು ಕಳೆದರೂ ಸಹ ಮಾದಿಗರು ಮತ್ತು ಸಂಬಂಧಿಸಿದ ಜಾತಿಯವರಿಗೆ ಶಿಕ್ಷಣದಲ್ಲಿ, ಸರ್ಕಾರಿ ಉದ್ಯೋಗದಲ್ಲಿ, ಭೂಮಿ ಮತ್ತು ಸಂಪತ್ತಿನಲ್ಲಿ ಸಮಾನವಾದ ಅವಕಾಶ ಸಿಗದ ಪರಿಣಾಮ ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಆಗ್ರಹಿಸಿದರು.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾದಿಗ ಸಮಾಜದ ಮುಖಂಡರು ʻʻಸಂವಿಧಾನದ ಆಶಯಗಳು ಸಮರ್ಪಕವಾಗಿ ಜಾರಿಯಾಗಬೇಕಾದರೆ ಒಳ ಮೀಸಲಾತಿ ಕುರಿತು ಸದಾಶಿವ ಆಯೋಗ ನೀಡಿರುವ ವರದಿಯನ್ನು ಜಾರಿಗೊಳಿಸಬೇಕು. ಈಗಾಗಲೇ ತಮಿಳುನಾಡಿನಲ್ಲಿಯೂ ಒಳ ಮೀಸಲಾತಿ ಜಾರಿಗೊಳಿಸಲಾಗಿದೆ. ಕರ್ನಾಟಕದಲ್ಲಿ ಜಾರಿ ಮಾಡಬೇಕುʼʼ ಎಂದು ಸಭೆಯಲ್ಲಿ ಹೇಳಿದರು.
’ಮಾದಿಗ ಸಮಾಜವು ತುಳಿತಕ್ಕೆ ಒಳಗಾಗಿದ್ದು, ನಮ್ಮ ಹಕ್ಕನ್ನು ನಾವು ಕೇಳಲು ಬಂದಿದ್ದೇವೆ. ಆದರೆ ಸರಕಾರವು ವರದಿ ಜಾರಿಯ ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ಖಂಡಿಸಿದರು.
ಮಾದಿಗ ಸಮಾಜದ ಆರು ಜನ ಶಾಸಕರು ಆಯ್ಕೆಯಾಗಿ ಬಂದಿದ್ದರೂ ನಮಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ.
ಕರ್ನಾಟಕದಲ್ಲಿ 96.60 ಲಕ್ಷದಷ್ಟು ಸಮುದಾಯದ ಜನರು ಇದ್ದಾರೆ. ನ್ಯಾಯಮೂರ್ತಿ ಸದಾಶಿವ ಅವರ ಆಯೋಗವು ಸವಿಸ್ತಾರವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ತನ್ನ ವರದಿಯನ್ನು ಸಿದ್ಧಪಡಿಸಿತು. ಆಯೋಗದ ಆರು ವರ್ಷ ಐದು ತಿಂಗಳ ವಿವಿಧ ಭಾಗಗಳಲ್ಲಿ ಭೇಟಿ ನೀಡಿ ರಾಜ್ಯ ಸರಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಅಲ್ಲದೆ ಮಾದಿಗರು, ಹೊಲೆಯರು, ಭೋವಿ, ಲಂಬಾಣಿ ಸೇರಿದಂತೆ ವಿವಿಧ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಕ್ಕೆ ಮೀಸಲಾತಿಯು ಎಷ್ಟು ಪ್ರಮಾಣದಲ್ಲಿ ಇರಬೇಕೆಂದು ತಿಳಿಸಿದ್ದಾರೆ.
ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ ಸಾವಿರಾರು ಕಾರ್ಯಕರ್ತರು ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರಗಳಿಂದ ನೀತಿಗಳಿಂದಾಗಿ ಮಾದಿಗ ಸಮಾಜಕ್ಕೆ ಸಂಪೂರ್ಣವಾಗಿ ಅನ್ಯಾಯಕ್ಕೆ ಒಳಗಾಗಿದ್ದಾರೆ. ಮಾದಿಗ ಸಮುದಾಯಕ್ಕೆ ಸಿಗಬೇಕಾದ ಹಲವು ಸೌಲಭ್ಯಗಳು ಮತ್ತು ಉದ್ಯೋಗವಕಾಶಗಳು ಬೇರೆಯವರ ಪಾಲಾಗಿದ್ದು, ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ತಿಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಸದಾಶಿವ ಆಯೋಗ ಸಲ್ಲಿಸಿರುವ ವರದಿಯ ಜಾರಿಯ ಕುರಿತು ಉಪಸಮಿತಿ ರಚಿಸಲಾಗಿದೆ. ಸರಕಾರವು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಿದೆ. ಸದ್ಯಕ್ಕೆ ಧರಣಿಯನ್ನು ಕೈಬಿಡಬೇಕೆಂದು ಹೇಳಿದರು.
ವರದಿಯನ್ನು ಶೀಘ್ರದಲ್ಲಿ ಜಾರಿಗೊಳಿಸಿ ಇಲ್ಲವಾದಲ್ಲಿ ರಾಜ್ಯಾದ್ಯಂತ ಮತ್ತಷ್ಟು ದೊಡ್ಡ ಮಟ್ಟದ ಶಕ್ತಿ ಪ್ರದರ್ಶನ ನಡೆಸಬೇಕಾಗುತ್ತದೆ ಎಂದು ಸಚಿವರಿಗೆ ಆಗ್ರಹಿಸುತ್ತಾ, ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು ಧರಣಿಯನ್ನು ಅಂತ್ಯಗೊಳಿಸಿದರು.