ಗುರುರಾಜ ದೇಸಾಯಿ
ವಿಧಾನಸಭೆಯಲ್ಲಿ ಇಂದು ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣ ಕೋಲಾಹಲಕ್ಕೆ ಕಾರಣವಾಯಿತು. ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ನಿಯಮ 69ರಡಿ ಚರ್ಚೆ ವೇಳೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿನ ಸಮರಕ್ಕೆ ಕಾರಣವಾಯಿತು. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವೈಯಕ್ತಿಕ ಆರೋಪಗಳಿಗೂ ಕಾರಣವಾಯಿತು.
ಭ್ರಷ್ಟಾಚಾರ ಬಯಲಿಗೆ ಬರುತ್ತೆ ಎಂಬ ಕಾರಣಕ್ಕೆ ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆ ವಿಷಯ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಿಪಕ್ಷನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸ್ಪೀಕರ್ ಕಾಗೇರಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.
ಈ ವೇಳೆ ಲಂಚಕೊಟ್ಟು ಉದ್ಯೋಗ ಪಡೆಯಲು ನಮ್ಮಿಂದ ಸಾಧ್ಯವಿಲ್ಲ ಎಂದು ನಮ್ಮ ತಂದೆ – ತಾಯಿಗಳು ಅವರು ಬೆಳೆದಿರುವ ಅಕ್ಕಿ, ಉದ್ದು, ಹೆಸರು, ಕಡಲೆ, ಗೋದಿ, ರಾಗಿಯನ್ನು ಕಳುಹಿಸಿಕೊಟ್ಟಿದ್ದಾರೆ. ಎಲ್ಲವನ್ನೂ ಪ್ಯಾಕ್ ಮಾಡಿ ಸರ್ಕಾರಕ್ಕೆ ಹೋಗಿ ಕೊಡಿ ಎಂದು ಹೇಳಿದ್ದಾರೆ. ಹಾಗಾಗಿ ನಾನು ಬೆಳಿಗ್ಗೆಯೇ ಅಕ್ಕಿ, ಗೋದಿ, ರಾಗಿ, ಬೇಳೆ ಎಲ್ಲವನ್ನು ತಂದು ಇಲ್ಲಿಟ್ಟಿದ್ದೆ. ಈಗ ನೋಡಿದರೆ ಅದನ್ನೂ ಯಾರೋ ಎತ್ಕೊಂಡು ಹೋಗಿದ್ದಾರೆ. ರಾಜ್ಯದಲ್ಲಿರುವುದು ಕಡು ಭ್ರಷ್ಟ ಸರ್ಕಾರ. ಪಿಎಸ್‌ಐ ಹುದ್ದೆಗಾಗಿ ಕೋಟಿ ಕೋಟಿ ಹಣ ಲೂಟಿ ಮಾಡಿದೆ ಎಂದು ಸಿದ್ದರಾಮಾಯ್ಯ ಕೆಂಡ ಕಾರಿದರು.
ಇದಕ್ಕೆ ಎದ್ದುನಿಂತ ಸಿಎಂ ಬೊಮ್ಮಾಯಿ, ಆರ್‌ಡಿ ಪಾಟೀಲ್ ಸ್ಟೇಟ್‌ಮೆಂಟ್ ಕೊಡುವಾಗ, ನಾನು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ನಿಂದ ಗ್ರಾಪಂ ಸದಸ್ಯನಾಗಿ, ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಪರಿಚಿತರು ಎಂದು ಹೇಳಿಕೆ ಕೊಟ್ಟಿದ್ದಾರೆ ಎಂದರು.
ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, ಆರೋಪಪಟ್ಟಿಯನ್ನು ಸದನದಲ್ಲಿ ಮಂಡಿಸಿ. ಅವರ ಸ್ಟೇಟ್‌ಮೆಂಟ್ ಎಂದು ಬರೆದುಕೊಂಡು ಬಂದು ಹೇಳಿದರೆ ಸಾಲುವುದಿಲ್ಲ ಎಂದರು.
ಈ ಸಮಯದಲ್ಲಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಮಹಾಂತೇಶ್ ಪಾಟೀಲ್ ಕಾಂಗ್ರೆಸ್ ಬ್ಲಾಕ್ ಪ್ರೆಸಿಡೆಂಟ್ ಆಗಿದ್ದರು. ಆದರೆ ಆರ್‌ಡಿ ಪಾಟೀಲ್ ಕಾಂಗ್ರೆಸ್ ಪಕ್ಷದಲ್ಲಿರಲಿಲ್ಲ. ದಿವ್ಯಾ ಹಾಗರಿಯನ್ನು ದಿಶಾ ಸಮಿತಿ ಸೇರಿ ವಿವಿಧೆಡೆ ಶಿಫಾರಸು ಮಾಡಿದ್ದು ಬಿಜೆಪಿ ಎಂದು ಕೋಪಗೊಂಡರು.
ನಂತರ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಶಾಸಕ ಬಸವರಾಜ ದಡೇಸೂಗೂರು ಆಡಿಯೊ ಕುರಿತು ಪ್ರಸ್ತಾಪಿಸಿದ ಸಿದ್ದರಾಮಯ್ಯ, ನಿವೃತ್ತ ಪೊಲೀಸ್ ಕಾನ್ಸ್‌ಟೇಬಲ್ ಪರಸಪ್ಪ ಆಡಿಯೊದಲ್ಲಿ ಹೇಳಿದ್ದಾರೆ. ಕೆಲಸ ಕೊಡಿಸಲು 15 ಲಕ್ಷ ರೂ. ಪಡೆದಿದ್ದಾರೆ ಎಂದು ಹೇಳಿದ್ದಾರೆ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಸವರಾಜ ದಡೇಸೂಗೂರು, ಪರಸಪ್ಪನ ಮಗ ಫಿಸಿಕಲ್ಲೇ ಪಾಸಾಗಿಲ್ಲ ಎಂದ ಮೇಲೆ ನಾನು ಹಣ ಹೇಗೆ ಪಡೆಯಲಿ? ಇದು ಬರೀ ಆರೋಪ ಎಂದು ಹೇಳಿದರು. ಈ ಸಮಯದಲ್ಲಿ ಸಿಟ್ಟಿಗೆದ್ದ ದಡೇಸೂಗೂರು, ಸ್ಕ್ಯಾಮ್ ರಾಮಯ್ಯ ಎಂದು ಭಿತ್ತಿಪತ್ರ ಪ್ರದರ್ಶನ ಮಾಡಿದರು. ಕೆಲಸಕ್ಕೆ ಬಾರದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಪಕ್ಷ ನಾಯಕರ ಆರೋಪಕ್ಕೆ ಕೆಂಡಾಮಂಡಲರಾದ ಸಿಎಂ ಬೊಮ್ಮಾಯಿ ನಿಮ್ಮ ಸರ್ಕಾರದ ಅವಧಿಯಲ್ಲಿಯೂ ಸಾಲು ಸಾಲು ಹಗರಣಗಳು ನಡೆದಿದ್ದವು. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ವಿಷಯ ಗೊತಾಗುತ್ತಿದ್ದಂತೆ ಸಿಐಡಿ ತನಿಖೆಗೆ ಆದೇಶಿಸಿದ್ದೇವೆ. ತನಿಖೆ ನಡೆಯುತ್ತಿದೆ. ನಿಮ್ಮ ಸರ್ಕಾರದ ಅವಧಿಯಲ್ಲಿನ ಅಕ್ರಮದ ಬಗ್ಗೆ ತನಿಖೆಯನ್ನೂ ನಡೆಸದೇ ಹಗರಣಗಳನ್ನೇ ಮುಚ್ಚಿ ಹಾಕಿಸಿದ್ದೀರಿ ಎಂದು ಗುಡುಗಿದರು.
ಸಿಎಂ ಆರೋಪಕ್ಕೆ ಆಕ್ರೋಶಗೊಂಡ ಸಿದ್ದರಾಮಯ್ಯ, ನಮ್ಮ ಕಾಲದಲ್ಲಿ ಅಕ್ರಮ ನಡೆದಿದ್ದರೆ ಆಗ ವಿಪಕ್ಷದಲ್ಲಿದ್ದ ನೀವು ಏನು ಮಾಡುತ್ತಿದ್ದಿರಿ ? ಅಕ್ರಮ ನಡೆದಿದ್ದರೆ ನೀವು ಸುಮ್ಮನಿರುತ್ತಿದ್ದಿರೇ ? ಈಗ ನಿಮ್ಮ ಅವಧಿಯಲ್ಲಿಯೂ ಅಕ್ರಮ ನಡೆದಿತ್ತು ಎಂದು ಆರೋಪಿಸುತ್ತಾ ಹಗರಣದ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಿರಾ ? ಎಲ್ಲಾ ಅಕ್ರಮಗಳ ಬಗ್ಗೆಯೂ ನ್ಯಾಯಾಂಗ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಸಿಎಂ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿನ ಜಟಾಪಟಿ ನಡುವೆ ಸಚಿವರು, ಶಾಸಕರು ಸೈಲೆಂಟ್ ಆಗಿಯೇ ಕುಳಿತು ವೀಕ್ಷಿಸಿದ್ದು ಅಚ್ಚರಿಗೆ ಕಾರಣವಾಯಿತು. ಕೊನೆಗೆ ಸ್ಪೀಕರ್ ಕಾಗೇರಿ ಸರಕಾರದಿಂದ ಇದಕ್ಕೆ ಯಾರೂ ಉತ್ತರಿಸೋರೋ ಎಂದಾಗಲು ಸಚಿವರು ಮೌನವಾಗಿದ್ದರು. ಸಚಿವರು ಮೌನವಾಗಿದ್ದನ್ನು ಗಮನಿಸಿದ ಕಾಂಗ್ರೆಸ್ ಶಾಸಕರು ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕೆಲ ಹೊತ್ತಿನ ಬಳಿಕ ಸಚಿವ ಡಾ.ಸುಧಾಕಾರ ಸರಕಾರದ ನಡೆಯನ್ನು ಸಮರ್ಥಿಸಿಕೊಂಡರು. ನಮ್ಮ ಸರಕಾರ ಇದ್ದದ್ದಕ್ಕೆ 67 ಜನರನ್ನು ಬಂಧಿಸಿದ್ದೇವೆ. ಕಾಂಗ್ರೆಸ್ ಸರಕಾರ ಇದ್ದಿದ್ದರೆ ಇವರಿಗೆ ಆರ್ಡರ್ ಕೊಟ್ಟು, ಇವರುಗಳು ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದರು ಎಂದು ಕುಟುಕಿದರು.
ಇದೇ ವೇಳೆ ಮತ್ತೆ ಮಾತು ಆರಂಭಿಸಿದ ಸಿದ್ದರಾಮಯ್ಯ, ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ಆಗಲಿ ಎಂದು ಪಟ್ಟು ಹಿಡಿದರು.
ಇದುವರೆಗೆ ನಡೆದಿರುವ ಬಿಟ್ ಕಾಯಿನ್ ಹಗರಣ, ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ, ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ, 40% ಕಮಿಷನ್ ಹಗರಣ, ಕೆಪಿಟಿಸಿಎಲ್ ನೇಮಕಾತಿ ಅಕ್ರಮ ಇವೆಲ್ಲವನ್ನೂ ತನಿಖೆ ಮಾಡಿಸಲಿ.
ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೂ ತನಿಖೆಯಾಗಲಿ, 2006 ರಿಂದ 2022 ರ ವರೆಗೆ ಯಾವೆಲ್ಲ ಸರ್ಕಾರಗಳ ಅವಧಿಯಲ್ಲಿ ನೇಮಕಾತಿಗಳು ನಡೆದಿವೆ, ಭ್ರಷ್ಟಾಚಾರ, ಅಕ್ರಮಗಳು ನಡೆದಿವೆ ಅವೆಲ್ಲವನ್ನೂ ನ್ಯಾಯಾಂಗ ತನಿಖೆ ಮಾಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು.
ನಿಯಮ 69 ರ ಅಡಿಯಲ್ಲಿ ಈ ಚರ್ಚೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಘೊಷಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸದನವನ್ನು ಬುಧವಾರಕ್ಕೆ ಮುಂದೂಡಿದರು.