ಬೆಂಗಳೂರು: ಆಧುನಿಕ ಮಹಿಳೆಯರು ಒಬ್ಬರೇ ಜೀವನ ನಡೆಸಲು ಬಯಸುತ್ತಾರೆ ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದ ಆರೋಗ್ಯ ಸಚಿವ ಡಾ.ಸುಧಾಕರ್ ಕೆ. ಅವರಿಗೆ ಪ್ರತಿಕ್ರಿಯಿಸಿರುವ ಶಾಸಕಿ ಅಂಜಲಿ ನಿಂಬಾಳ್ಕರ್ ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕಿ ಅಂಜಲಿ ನಿಂಬಾಳ್ಕರ್ ʻಡಾ.ಸುಧಾಕರ್ಗೆ ಕೌನ್ಸೆಲಿಂಗ್ ಅಗತ್ಯವಿದೆ. ಇಂತಹ ವ್ಯಕ್ತಿಗಳಿಗೆ ವಿಶ್ವ ಮಾನಸಿಕ ಆರೋಗ್ಯ ದಿನದಂದು ಆಪ್ತ ಸಮಾಲೋಚನೆಯ ಅವಶ್ಯಕತೆ ಇದೆ. ಆಧುನಿಕ ಮಹಿಳೆ ತನಗೆ ಇಷ್ಟ ಬಂದಂತೆ ಜೀವಿಸಲಿ. ಇದನ್ನ ಬೇರೆಯವರು ನಿರ್ಧರಿಸೋದಲ್ಲ ಆಕೆಯೇ ನಿರ್ಧರಿಸಬೇಕು. ಮದುವೆಯಾದ ಬಳಿಕ ಏಕಾಂಗಿಯಾಗಿ ಜೀವಿಸುವ ಅವರ ನಾಯಕ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏನಾದರೂ ಪ್ರತಿಕ್ರಿಯೆ ಇದೆಯಾ? ಎಂದು ಟ್ವೀಟ್ ಮಾಡಿದ್ದಾರೆ.
ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವೀಟ್ ಅಲ್ಲದೆ, ಸಚಿವ ಸುಧಾಕರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸಚಿವ ಸುಧಾಕರ್ ಹೇಳಿಕೆಗೆ ಕಾಂಗ್ರೆಸ್ ಸಹ ಪ್ರಶ್ನೆ ಮಾಡಿದ್ದು, ಸುಧಾಕರ್ ಅವರೇ, ಮದುವೆಯಾದರೂ ‘ಸಿಂಗಲ್’ ಆಗಿರುವ ಮೋದಿಯವರ ಬಗ್ಗೆಯೂ ಹೀಗೆ ಹೇಳುವ ಧೈರ್ಯವಿದೆಯೇ? ಎಂದು ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಮಹಿಳೆಯರ ಬದುಕನ್ನ ನಿರ್ಧರಿಸುವ, ಅವರ ಆಯ್ಕೆಯನ್ನು ನಿಯಂತ್ರಿಸುವ, ಅವರ ಸ್ವತಂತ್ರ ಪ್ರಶ್ನಿಸುವ ಬಿಜೆಪಿಗೂ ತಾಲಿಬಾನ್‌ಗೂ ವ್ಯತ್ಯಾಸವಿಲ್ಲ ಎಂದಿದೆ.
ಮಹಿಳೆಯರ ಬಗ್ಗೆ ಸಚಿವ ಸುಧಾಕರ್ ಆಡಿದ ಮಾತು ಮಹಿಳಾ ಸ್ವಾತಂತ್ರವನ್ನು ಅಣಕಿಸುವಂತಿದೆ, ಸಚಿವ ಸುಧಾಕರ್ ಅವರೇ, ಮಹಿಳೆಯರ ಬದುಕಿನ ಆಯ್ಕೆಯನ್ನು ನಿರ್ಧರಿಸಲು ನೀವು ಯಾರು? ಪುರುಷ ಯಜಮಾನಿಕೆಯನ್ನು ಮುಂದುವರೆಸುವ ಹವಣಿಕೆ ನಿಮಗೇಕೆ? ಮನುವಾದವನ್ನು ನಂಬಿದ ಬಿಜೆಪಿಯ ಮಹಿಳಾ ವಿರೋಧಿ ಕುತಂತ್ರಗಳು ಅವರ ಮಾತುಗಳಲ್ಲಿಯೇ ವ್ಯಕ್ತವಾಗುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಸಚಿವ ಸುಧಾಕರ್ ಹೇಳಿದ್ದೇನು?
ಆಧುನಿಕ ಮಹಿಳೆಯರು ಒಬ್ಬರೇ ಜೀವನ ನಡೆಸಲು ಬಯಸುತ್ತಾರೆ. ವಿವಾಹವಾದರೂ ಮಕ್ಕಳಿಗೆ ಜನ್ಮ ನೀಡಲು ಇಷ್ಟ ಪಡುತ್ತಿಲ್ಲ. ಬದಲಾಗಿ ಬಾಡಿಗೆ ತಾಯ್ತನವನ್ನು ಅನುಸರಿಸುತ್ತಿದ್ದಾರೆ ಎಂದು ಭಾನುವಾರ ಹೊಸೂರು ರಸ್ತೆಯಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ಆಯೋಜಿಸಿದ್ದ 25ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದರು.