ರಾಜರಾಜೇಶ್ವರಿ ವಿಧಾನಸಭೆ: ಸಚಿವ ಮುನಿರತ್ನ ವಿರುದ್ಧ `ನೊಂದ ಗುತ್ತಿಗೆದಾರರು ಪ್ರಾಯೋಜಿಸುವʼ ಭಿತ್ತಿಚಿತ್ರ ಅಭಿಯಾನ

ಬೆಂಗಳೂರು: ರಾಜ್ಯ ಬಿಜೆಪಿ ಆಡಳಿತದ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕೆಲವು ತಿಂಗಳ ಹಿಂದೆ ಭಾರೀ ಸದ್ದು ಮಾಡಿದ್ದ ‘ಪೇಸಿಎಂ’ ಕ್ಯೂಆರ್ ಕೋಡ್ ಭಿತ್ತಿಚಿತ್ರ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಇದೀಗ ರಾಜರಾಜೇಶ್ವರಿ ನಗರ  ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ತೋಟಗಾರಿಕೆ ಸಚಿವ ಹಾಗೂ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ಭಿತ್ತಿಚಿತ್ರಗಳನ್ನು ಅಳವಡಿಸಲಾಗಿದೆ.

ರಾತ್ರೋ ರಾತ್ರಿ ಸಚಿವ ಮುನಿರತ್ನ ಅವರನ್ನು ಪ್ರಶ್ನೆ ಮಾಡಿ ಭಿತ್ತಿಚಿತ್ರಗಳನ್ನು ಅಳವಡಿಸಲಾಗಿದೆ. ‘ನೊಂದ ಗುತ್ತಿಗೆದಾರರು ಪ್ರಾಯೋಜಿಸುವ Guess & Win Contest, ಆರ್ ಆರ್ ನಗರಕ್ಕೆ ಮಂಜೂರಾಗಿದ್ದ 10 ಸಾವಿರ ಕೋಟಿ ರೂಪಾಯಿ ಎಲ್ಲಿ ಹೋಯ್ತು? 2013ರಿಂದ ಇಲ್ಲಿಯವರೆಗೆ 10 ಸಾವಿರ ಕೋಟಿ ರೂ.ಗಳನ್ನು ಶಾಸಕ ಮುನಿರತ್ನಂ ನಾಯ್ಡು ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ ರಸ್ತೆ, ಪಾರ್ಕ್, ಕೆರೆಗೆ ವಿನಿಯಯೋಗಿಸಿರುವುದು 2 ರಿಂದ 3 ಸಾವಿರ ಕೋಟಿ ರೂಪಾಯಿ. ಉಳಿದ ಹಣ ಎಲ್ಲಿ ಹೋಯ್ತು? ಊಹಿಸಿ. ಈಗಲೇ 8447704040 ಈ ನಂಬರ್ ಗೆ ಕಾಲ್ ಮಾಡಿ ತಿಳಿಸಿ’ ಎಂದು ಬರೆಯಲಾಗಿದೆ.

ಮುನಿರತ್ನ ಅವರ ಕಚೇರಿ, ರಾಜಾರಾಜೇಶ್ವರಿ ನಗರ ಪ್ರವೇಶ ದ್ವಾರ, ಬಸ್ ನಿಲ್ದಾಣಗಳಲ್ಲಿ ಭಿತ್ತಿಚಿತ್ರಗಳು ಕಾಣಿಸಿಕೊಂಡಿವೆ.

ಈ ನಡುವೆ ರಾಜರಾಜೇಶ್ವರಿ ನಗರದಲ್ಲಿ ಅನಧಿಕೃತವಾಗಿ ಸುಮಾರು 1.30 ಲಕ್ಷ ಮತಗಳ ಸೇರ್ಪಡೆಯಾಗಿದ್ದು, 75 ಸಾವಿರ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಈ ವಿಚಾರವಾಗಿ ಸಂಸದ ಡಿಕೆ ಸುರೇಶ್ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಕ್ಷೇತ್ರದ ಶಾಸಕರು ಇದಕ್ಕೆ ಕಾರಣ ಎಂದೂ ಆರೋಪ ಮಾಡಲಾಗಿತ್ತು. ಈ ಆರೋಪವನ್ನು ಸಚಿವ ಮುನಿರತ್ನ ನಿರಾಕರಣೆ ಮಾಡಿದ್ದು, ಇದರ ಬೆಳವಣಿಗೆಗಳ ನಡುವೆ ದಿಢೀರ್‌ ಎಂದು ಮುನಿರತ್ನ ಅವರನ್ನು ಪ್ರಶ್ನಿಸುವ ರೀತಿಯಲ್ಲಿ ಭಿತ್ತಿಚಿತ್ರಗಳು ಕಾಣಿಸಿಕೊಂಡಿವೆ.

ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೇಸಿಎಂ ಭಿತ್ತಿಚಿತ್ರಗಳನ್ನು ರಾತ್ರೋ ರಾತ್ರಿ ಹಾಕುವ ಮೂಲಕ 40% ಕಮಿಷನ್ ವಿರುದ್ಧವಾಗಿ ಕಾಂಗ್ರೆಸ್ ಅಭಿಯಾನ ನಡೆಸಿತ್ತು. ಇದೀಗ ಮುನಿರತ್ನ ವಿರುದ್ಧ ಡಿಕೆ ಸುರೇಶ್ ಆರೋಪದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Donate Janashakthi Media

Leave a Reply

Your email address will not be published. Required fields are marked *