ಮೈಸೂರು: ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ದಾಖಲಾಗಿರುವ 5 ದೂರುಗಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಮುಂದೆ ಶಾಸಕ ಸಾ ರಾ ಮಹೇಶ್ ಸುಮಾರು 1,200 ಪುಟಗಳ ದಾಖಲೆ ಸಲ್ಲಿಸಿದ್ದಾರೆ.
ಶಾಸಕ ಸಾ ರಾ ಮಹೇಶ್ 5 ದೂರುಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಖುದ್ದು ವಿಚಾರಣೆಗೆ ಹಾಜರಾದರು.
ರೋಹಿಣಿ ಸಿಂಧೂರಿ ವಿರುದ್ಧ ಹೆಚ್ಚಿನ ಬೆಲೆಗೆ ಬಟ್ಟೆ ಬ್ಯಾಗ್ ಖರೀದಿ, ಪಾರಂಪರಿಕ ಕಟ್ಟಡದಲ್ಲಿ ಕಾನೂನು ಉಲ್ಲಂಘಿಸಿ ಈಜುಕೊಳ ನಿರ್ಮಾಣ, ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಗಳ ಸಾವಿನ ಲೆಕ್ಕಾಚಾರದಲ್ಲಿ ಲೋಪ, ಚಾಮರಾಜನಗರ ಆಮ್ಲಜನಕ ದುರಂತ ಹಾಗೂ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿದಂತೆ ಐದು ದೂರುಗಳು ದಾಖಲಾಗಿವೆ. ಪ್ರಕರಣದ ತನಿಖಾಧಿಕಾರಿಗಳಾದ ರವಿಶಂಕರ್ ಅವರಿಗೆ 1,200 ಪುಟಗಳ ದಾಖಲೆಗಳನ್ನು ಸಲ್ಲಿಸಲಾಗಿದೆ.
ರೋಹಿಣಿ ಸಿಂಧೂರಿ ಅಮಾನತು ಮಾಡಿ
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸಾ ರಾ ಮಹೇಶ್, 30 ದಿನಗಳಲ್ಲಿ ವಿಚಾರಣೆ ಪ್ರಕ್ರಿಯೆ ಮುಗಿಯಲಿದೆ. ಈ ಐದು ಪ್ರಕರಣಗಳಲ್ಲಿ ನನ್ನ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಿದ್ದೇನೆ. ನಾನು ಯಾವುದೇ ದುರುದ್ದೇಶದಿಂದ ಈ ಆರೋಪ ಮಾಡುತ್ತಿಲ್ಲ. ಪ್ರಕರಣದ ಬಗ್ಗೆ ಎಲ್ಲವನ್ನು ದಾಖಲೆ ಸಮೇತ ನೀಡಿದ್ದೇನೆ. ತನಿಖೆಯ ಮೇಲೆ ವಿಶ್ವಾಸವಿದೆ. ರೋಹಿಣಿ ಸಿಂಧೂರಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ನಿಂದ ಸಾವನ್ನಪ್ಪಿದ್ದ ಸಾವಿನ ಸಂಖ್ಯೆಯ ತಪ್ಪು ಮಾಹಿತಿಯ ದೂರಿಗೆ ಸಂಬಂಧಿಸಿ, ಮೇ ತಿಂಗಳಲ್ಲಿ ಹಿಂದೆ 269 ಮಂದಿ ಸಾವನ್ನಪ್ಪಿದ್ದಾರೆಂದು ತಪ್ಪು ಮಾಹಿತಿ ನೀಡಿದ್ದರು. ಆದರೆ, ಈಗ ಅಧಿಕಾರಿಗಳು 1324 ಮಂದಿ ಸಾವನ್ನಪ್ಪಿರುವ ಬಗ್ಗೆ ದಾಖಲೆ ನೀಡಿದ್ದಾರೆ. ಹೀಗಾಗಿ ಸಂಪೂರ್ಣ ದೂರಿನ ಬಗ್ಗೆ ಅಂದಾಜು 1200 ಪುಟಗಳ ವರದಿ ನೀಡಿದ್ದೇನೆ.
14 ದಿನಗಳಲ್ಲಿ ಸಂಪೂರ್ಣ ವರದಿ ನೀಡುವಂತೆ ಆದೇಶ ಆಗಿದೆ. ಹೀಗಾಗಿ ಆಗ ಸತ್ಯಸತ್ಯಾತೆ ಹೊರ ಬರಲಿದೆ. ಅಂದಿನ ಜಿಲ್ಲಾಧಿಕಾರಿಯವರು ಭೂ ಮಾಫಿಯಾ ಒತ್ತಡದಿಂದ ವರ್ಗಾವಣೆ ಆಗಿಲ್ಲ. ಕೊರೊನಾದಲ್ಲಿ ಸರಿಯಾಗಿ ಕೆಲಸ ನಿರ್ವಹಿಸದೆ ಇರುವುದರಿಂದಾಗಿ ವರ್ಗಾವಣೆ ಆಗಿದ್ದಾರೆ ಎಂದರು.