ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಕಾಂಗ್ರೆಸ್ ನ ಹಿರಿಯ ನಾಯಕ ಆರ್ ವಿ ದೇಶಪಾಂಡೆಯವರಿಗೆ ನೀಡಲಾಯಿತು. ಅತ್ಯುತ್ತಮ ಶಾಸಕ ಪ್ರಶಸ್ತಿ ಕಳೆದ ವರ್ಷದಿಂದ ಆರಂಭಗೊಂಡಿದೆ. ಶಿಕಾರಿಪುರ ಕ್ಷೇತ್ರದ ಶಾಸಕ ಬಿ ಎಸ್ ಯಡಿಯೂರಪ್ಪ ಅವರು ಮೊದಲ ಪ್ರಶಸ್ತಿಗೆ ಭಾಜನರಾಗಿದ್ದರು.
ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು ಶಾಸಕ ಆರ್.ವಿ.ದೇಶಪಾಂಡೆಗೆ ಇಂದು ಪ್ರಶಸ್ತಿ ಪ್ರದಾನ ಮಾಡಿದರು. 75 ವರ್ಷ ವಯಸ್ಸಿನ ಹಿರಿಯ ನಾಯಕ ದೇಶಪಾಂಡೆ ಅವರು ಇದುವರೆಗೂ 9 ಬಾರಿ ಅಸೆಂಬ್ಲಿ ಚುನಾವಣೆ ಎದುರಿಸಿದ್ದಾರೆ. ದೇಶಪಾಂಡೆ ಅವರು ತಮ್ಮ ಹುಟ್ಟೂರಾದ ಹಳಿಯಾಳ ಅಸೆಂಬ್ಲಿ ಕ್ಷೇತ್ರವನ್ನು ಕಾಂಗ್ರೆಸ್ ವತಿಯಿಂದ ಪ್ರತಿನಿಧಿಸಿದ್ದಾರೆ.
ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನದ ಬಳಿಕ ಸದನದಲ್ಲಿ ದೇಶಪಾಂಡೆಗೆ ಅಭಿನಂದನಾ ಮಾತು ಸಲ್ಲಿಸಲಾಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿನ ವೇಳೆ ದೇಶಪಾಂಡೆ ಬರ್ತ್ ಸರ್ಟಿಫಿಕೇಟ್ ಬಗ್ಗೆಯೇ ಅನುಮಾನ ಇದೆ, ರಾಹುಲ್ ಗಾಂಧಿ ಕೂಡಾ ದೇಶಪಾಂಡೆ ಅವರಿಗೆ ನಿಜಕ್ಕೂ 75 ವರ್ಷ ಆಗಿದ್ಯಾ? ಅಂತಾ ಕೇಳಿದ್ದರು ಎಂದು ಕೃಷ್ಣ ಬೈರೇಗೌಡ ಹೇಳಿದರು. ದೇಶಪಾಂಡೆ ವಯಸ್ಸಿನ ಬಗ್ಗೆ ತನಿಖೆ ಆಗಲಿ, ಬೇಕಾದರೆ ಸದನ ಸಮಿತಿ ರಚನೆ ಮಾಡಿ ಎಂದು ಸಿದ್ದರಾಮಯ್ಯ ಕಿಚಾಯಿಸಿದರು. ನಮ್ಮಪ್ಪ ಹೊಲ ಉಳುವಾಗ ದೇಶಪಾಂಡೆ ಅಪ್ಪ ಲಾಯರ್ ಆಗಿದ್ದರು ಎಂದು ಹೇಳುತ್ತಿದ್ದರು ಎಂದೂ ಸಿದ್ದರಾಮಯ್ಯ ಸೇರಿಸಿದರು.
ಇದನ್ನೂ ಓದಿ : ಕೋವಿಡ್ ನೆಪ : ‘ಸರ್ಕಾರದಿಂದ ವೃದ್ಧಾಪ್ಯ, ವಿಧವೆ, ಅಂಗವಿಕಲ ವೇತನ ಸ್ಥಗಿತ’ – ದೇಶಪಾಂಡೆ ಆರೋಪ
ಈ ವೇಳೆ ಮಧ್ಯ ಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ ನೀವು (ಸಿದ್ದರಾಮಯ್ಯ) ಬಹಳ ಫಾಸ್ಟ್! ದೇಶಪಾಂಡೆ ಅವರನ್ನು ಓವರ್ ಟೇಕ್ ಮಾಡಿ ಸಿಎಂ ಆಗಿಬಿಟ್ರಿ ಎಂದು ಕಿಚಾಯಿಸಿದರು.
ಈಗಾಗಲೇ ಚುನಾವಣೆಯಿಂದ ನಿವೃತ್ತನಾಗುವ ಬಗ್ಗೆ ಹಲವು ಬಾರಿ ದೇಶಪಾಂಡೆ ಹೇಳಿದ್ದರು ಎಂದರು ಸಿದ್ದರಾಮಯ್ಯ. ಸಿದ್ದರಾಮಯ್ಯ ಹೇಳಿದ್ದು ನಿಜ ಎಂದು ದೇಶಪಾಂಡೆ ತಲೆದೂಗಿದರು. ನಾನು (ಸಿದ್ದರಾಮಯ್ಯ) ಇನ್ನೊಂದು ಚುನಾವಣೆಗೆ ಸ್ಫರ್ಧಿಸಿ, ನಿವೃತ್ತಿ ಆಗಬೇಕು ಅಂತಿದ್ದೀನಿ. ನನ್ನ ಜೊತೆ ದೇಶಪಾಂಡೆ ಇರಬೇಕು, ಇನ್ನೊಂದು ಚುನಾವಣೆಗೆ ಸ್ಫರ್ಧೆ ಮಾಡಿ ನೀನು ನಿವೃತ್ತನಾಗಿಬಿಡು ಎಂದು ದೇಶಪಾಂಡೆ ಅವರನ್ನುದ್ದೇಶಿಸಿ ಸಿದ್ದರಾಮಯ್ಯ ಹೇಳಿದರು.
1947 ಮಾರ್ಚ್ 16ರಂದು ಜನಿಸಿದ ದೇಶಪಾಂಡೆ ಅವರು ಬಿಎ, ಎಲ್ಎಲ್ಬಿ ವ್ಯಾಸಂಗ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ವಜನಿಕ ಸೇವೆಗೆ ಅಂಕಿತರಾದ ದೇಶಪಾಂಡೆ ಅವರು ಜನತಾಪರಿವಾರದೊಂದಿಗೆ ವಿಧಾನಸಭೆ ಪ್ರವೇಶಿಸಿದರು. ಎಸ್ ಎಂ ಕೃಷ್ಣ ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಅತ್ಯಂತ ದೀರ್ಘಾವಧಿಗೆ 13 ವರ್ಷ ಕಾಲ ಕೈಗಾರಿಕಾ ಸಚಿವರಾಗಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ