ನವದೆಹಲಿ: ರಷ್ಯಾದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸವಿದೆ ಎಂದು ಕರೆಸಿಕೊಂಡಿದ್ದ ಕನಿಷ್ಠ 12 ಭಾರತೀಯರಿಗೆ ಉದ್ಯೋಗ ನೀಡುವ ಕಂಪೆನಿಗಳು ಮೋಸ ಮಾಡಿದ್ದು, ಅವರನ್ನು ರಷ್ಯಾ – ಉಕ್ರೇನ್ ಯುದ್ಧಕ್ಕೆ ‘ಸೇನಾ ಭದ್ರತಾ ಸಹಾಯಕರಾಗಿ’ ಕೆಲಸ ಮಾಡಲು ಕಳುಹಿಸಲಾಗಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ (ಎಂಪಿ) ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ. ಕನಿಷ್ಠ ಮೂರು ಭಾರತೀಯರು ಇದರಲ್ಲಿ ಇದ್ದು, ಒಬ್ಬರು ತನ್ನೊಂದಿಗೆ ಮಾತನಾಡಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.
ಹೀಗೆ ಮೋಸದಿಂದ ರಷ್ಯಾಗೆ ತೆರಳಿದವರಲ್ಲಿ ತೆಲಂಗಾಣದ ಇಬ್ಬರು, ಕರ್ನಾಟಕದ ಗುಲ್ಬರ್ಗಾದ ಮೂವರು, ಗುಜರಾತ್‌ನ ಒಬ್ಬರು, ಉತ್ತರ ಪ್ರದೇಶದ ಒಬ್ಬರು ಮತ್ತು ಕಾಶ್ಮೀರದ ಇಬ್ಬರು ಸೇರಿದ್ದಾರೆ ಎಂದು ಓವೈಸಿ ಹೇಳಿದ್ದು, ತಕ್ಷಣವೆ ಕೇಂದ್ರ ಸರ್ಕಾರದ ಇದರಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಮೋದಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿಪಕ್ಷದ ನಾಯಕರನ್ನು ಬೆದರಿಸಿ ಎನ್‌ಡಿಎ ಸೇರುವಂತೆ ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಆರೋಪ
ಕನಿಷ್ಠ ಮೂವರು ಭಾರತೀಯರು ರಷ್ಯಾ-ಉಕ್ರೇನ್ ಗಡಿಯಲ್ಲಿ ರಷ್ಯನ್ನರ ಜೊತೆ ಹೋರಾಡಲು ಒತ್ತಾಯಿಸಲ್ಪಟ್ಟರು, ಅವರನ್ನು ಏಜೆಂಟ್‌ನಿಂದ ಬಂಧಿಸಲಾಯಿತು ಮತ್ತು ಅಲ್ಲಿಗೆ “ಸೇನಾ ಭದ್ರತಾ ಸಹಾಯಕರಾಗಿ” ಕೆಲಸ ಮಾಡಲು ಕಳುಹಿಸಲಾಗಿದೆ ಎಂದು ಸಂತ್ರಸ್ತರಲ್ಲಿ ಒಬ್ಬರು ದಿ ಹಿಂದೂಗೆ ತಿಳಿಸಿದ್ದಾರೆ.
ನವೆಂಬರ್ 2023 ರಿಂದ, ರಷ್ಯಾ-ಉಕ್ರೇನ್ ಗಡಿಯುದ್ದಕ್ಕೂ ಮರಿಯುಪೋಲ್, ಖಾರ್ಕಿವ್, ಡೊನೆಟ್ಸ್ಕ್, ರೋಸ್ಟೊವ್-ಆನ್-ಡಾನ್‌ನಲ್ಲಿ ಸುಮಾರು 18 ಭಾರತೀಯರು ಸಿಕ್ಕಿಹಾಕಿಕೊಂಡಿದ್ದು, ಅದರಲ್ಲಿ ಒಬ್ಬ ಭಾರತೀಯ ಸಾವನ್ನಪ್ಪಿದ್ದಾರೆ ಎಂದು ಏಜೆಂಟರೊಬ್ಬರು ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಹೇಳಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಫೆಬ್ರವರಿ 24, 2022 ರಿಂದ ಯುದ್ಧ ನಡೆಯುತ್ತವೆ.
2022 ರಲ್ಲಿ ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳ ವಿರುದ್ಧ ಹೋರಾಡಲು ರಚಿಸಲಾದ ಇಂಟರ್‌ನ್ಯಾಶನಲ್ ಲೀಜನ್‌ಗೆ ಸೇರಲು ಕೆಲವು ಭಾರತೀಯರು ಸ್ವಯಂಪ್ರೇರಿತರಾಗಿ ತಯಾರಾಗಿದ್ದರೂ, ಯುದ್ಧದಲ್ಲಿ ರಷ್ಯಾ ಪರವಾಗಿ ಭಾರತೀಯರು ಭಾಗವಹಿಸಿದ್ದು ಇದುವೆ ಮೊದಲ ಬಾರಿಗೆ ವರದಿಯಾಗಿದೆ.
ಇದನ್ನೂ ಓದಿ: ಸೋನಿಯಾ ಗಾಂಧಿ ಸೇರಿದಂತೆ 41 ಅಭ್ಯರ್ಥಿಗಳು ರಾಜ್ಯಸಭಾ ಸಂಸದರಾಗಿ ಅವಿರೋಧ ಆಯ್ಕೆ
ಸಂತ್ರಸ್ತರದಲ್ಲಿ ಉತ್ತರ ಪ್ರದೇಶ, ಗುಜರಾತ್, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರು ಇದ್ದಾರ ಎಂದು ದಿ ಹಿಂದೂ ವರದಿ ಮಾಡಿದ್ದು, ಅವರ ಹೆಸರುಗಳನ್ನು ಅದು ಬಹಿರಂಗಪಡಿಸಿಲ್ಲ.
ಸಂತ್ರಸ್ತರಲ್ಲಿ ಒಬ್ಬರಾದ ಉತ್ತರ ಪ್ರದೇಶದ 20 ವರ್ಷದ ಯುವಕನ ಜೊತೆಗೆ ದಿ ಹಿಂದೂ ಮಾತನಾಡಿದ್ದು, ಅವರೊಂದಿಗೆ ಮೂವರಿಗೆ “ರಷ್ಯಾದ ಸೈನ್ಯ”ವು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ನಿರ್ವಹಿಸುವ ಮೂಲಭೂತ ತರಬೇತಿಯನ್ನು ನೀಡಿದೆ ಎಂದು ವರದಿ ಹೇಳಿದೆ. ರೋಸ್ಟೋವ್-ಆನ್-ಡಾನ್‌ಗೆ ಅವರನ್ನು ನಿಯೋಜಿಸಲಾಗಿದ್ದು, ಜನವರಿ ವೇಳೆ ರಷ್ಯಾ-ಉಕ್ರೇನ್ ಗಡಿಯುದ್ದಕ್ಕೂ ಅವರು ಗುಂಡುಗಳನ್ನು ಎದುರಿಸಿ ಬಂದೂಕು ಹಿಡಿದು ಯುದ್ಧ ಮಾಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
“ನಾವು ನವೆಂಬರ್ 2023 ರಲ್ಲಿ ಇಲ್ಲಿಗೆ ಬಂದಿದ್ದು, ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಒಪ್ಪಂದವು ನಮ್ಮನ್ನು ಸೈನ್ಯದ ಭದ್ರತಾ ಸಹಾಯಕರಾಗಿ ನೇಮಿಸಿಕೊಳ್ಳುತ್ತಿದೆ ಎಂದು ಹೇಳಿತ್ತು. ನಮ್ಮನ್ನು ಯುದ್ಧಭೂಮಿಗೆ ಕಳುಹಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಲಾಗಿತ್ತು. ತಿಂಗಳಿಗೆ ₹1.95 ಲಕ್ಷ ಸಂಬಳ ಮತ್ತು ₹50,000 ಹೆಚ್ಚುವರಿ ಬೋನಸ್ ನೀಡುವುದಾಗಿ ಭರವಸೆ ನೀಡಲಾಗಿತ್ತು. ಎರಡು ತಿಂಗಳಿಗೆ ₹ 50 ಸಾವಿರ ಬೋನಸ್ ಹೊರತು ಪಡಿಸಿ ಯಾವುದೇ ಹಣ ಬಂದಿಲ್ಲ” ಎಂದು ದಿ ಹಿಂದೂ ಜೊತೆಗೆ ಮಾತನಾಡುತ್ತಾ ಸಂತ್ರಸ್ತರೊಬ್ಬರು ಹೇಳಿದ್ದಾರೆ.
“ಬಾಬಾ ವ್ಲಾಗ್ಸ್” ಶೀರ್ಷಿಕೆಯ ಯು ಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿರುವ ಏಜೆಂಟ್ – ಫೈಸಲ್ ಖಾನ್ ಅವರ ಸಹಾಯದಿಂದ ತಾನು ರಷ್ಯಾಕ್ಕೆ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶದ ಫೈಸಲ್ ಖಾನ್ ಅವರ ಮೂಲಕ ಸಂಪರ್ಕಕ್ಕೆ ಬಂದ ಇಬ್ಬರು ಭಾರತೀಯ ಏಜೆಂಟ್‌ಗಳಿಂದ ನವೆಂಬರ್ 12 ರಂದು ನಮ್ಮನ್ನು ರಷ್ಯಾದಲ್ಲಿ ಸ್ವೀಕರಿಸಲಾಯಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್ತಿನಲ್ಲೂ ಅಂಗೀಕಾರಗೊಂಡ ಕನ್ನಡ ಭಾಷಾ ಮಸೂದೆ
“ನವೆಂಬರ್ 13 ರಂದು, ನಮ್ಮನ್ನು ಶಿಬಿರಕ್ಕೆ ಸೇರಿಸಲಾಯಿತು ಮತ್ತು ಮಾಸ್ಕೋದಿಂದ ಸುಮಾರು ಎರಡೂವರೆ ಗಂಟೆಗಳ ದೂರದಲ್ಲಿರುವ ನಿರ್ಜನ ಸ್ಥಳಕ್ಕೆ ಕರೆದೊಯ್ಯಲಾಯಿತು. ಈ ವೇಳೆ ನಾವು ಭಾರತೀಯ ಏಜೆಂಟರನ್ನು ಸಂಪರ್ಕಿಸಿದ್ದೆವು, ಅವರು ನಮಗೆ ಸಹಾಯಕರಾಗಿ ಪೋಸ್ಟ್ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಈ ವೇಳೆ ನಾವು ಡೇರೆಗಳಲ್ಲಿ ವಾಸಿಸುತ್ತಿದ್ದೆವು ಮತ್ತು ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು ತರಬೇತಿ ಪಡೆದಿದ್ದೇವೆ. ಜನವರಿ 4 ರಂದು, ನಮ್ಮನ್ನು ಡೊನೆಟ್ಸ್ಕ್ ಯುದ್ಧ ಭೂಮಿಗೆ ಕಳುಹಿಸಲಾಯಿತು” ಎಂದು ಅವರು ಹೇಳಿದ್ದಾರೆ.
“ಅವರು ಯುದ್ಧ ಮಾಡಲು ಬಲವಂತ ಮಾಡಿದಾಗ, ನಾವು ಅಲ್ಲಿಂದ ತಪ್ಪಿಸಿಕೊಂಡಿದ್ದೆವು. ಆದರೆ ನನ್ನನ್ನು ಹಿಡಿದು ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಒಂದು ಕಟ್ಟಡದಿಂದ ಇನ್ನೊಂದಕ್ಕೆ ಸರಕುಗಳನ್ನು ಸಾಗಿಸಲು ಅವರು ನನ್ನನ್ನು ಕೇಳಿದರು. ನಾವು ಸುಲಭವಾಗಿ ಗುರಿಯಾಗದಂತೆ ಐದು ಮೀಟರ್ ಅಂತರವನ್ನು ಕಾಯ್ದುಕೊಳ್ಳಲು ಕಮಾಂಡರ್ ನಮಗೆ ಹೇಳಿದರು. ಈ ಸಣ್ಣ ನಡಿಗೆಯಲ್ಲಿ, ನಾವು 7-8 ಬಾರಿ ಗುಂಡುಗಳನ್ನು ಎದುರಿಸಿದ್ದೇವೆ, ನನ್ನ ಜೊತೆಗಿದ್ದ ಸ್ಥಳೀಯರೊಬ್ಬರು ಕೊಲ್ಲಲ್ಪಟ್ಟರು. ಅದಾಗ್ಯೂ, ಜನವರಿ 22 ರಂದು, ನಾನು ಅಲ್ಲಿಂದ ಪಲಾಯನ ಮಾಡುವಲ್ಲಿ ಯಶಸ್ವಿಯಾದೆ. ಫ್ರಾಸ್ಬೈಟ್ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದೆ” ಎಂದು ಸಂತ್ರಸ್ತ ಹೇಳಿದ್ದಾರೆ.
“ಹಲವು ದಿನಗಳಿಂದ ನಮಗೆ ಫೋನ್ ಸಿಕ್ಕಿರಲಿಲ್ಲ. ಯುದ್ಧ ವಲಯದಿಂದ ತಪ್ಪಿಸಿಕೊಂಡ ನಂತರ ಕುಟುಂಬವನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದೆವು. ಅದಾಗ್ಯೂ, ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಪದೇ ಪದೇ ಮನವಿ ಮಾಡಿದ್ದರೂ ನಮ್ಮ ಕಡೆ ಅವರು ಗಮನ ಹರಿಸಿಲ್ಲ. ಈ ವೇಳೆ ನಾನು ಹಲವಾರು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದೇನೆ. ನನ್ನ ಬಳಿ ಸರಿಯಾದ ದಾಖಲೆಗಳಿಲ್ಲ ಮತ್ತು ಹಣವಿಲ್ಲ, ಸರ್ಕಾರ ನಮಗೆ ಸಹಾಯ ಮಾಡುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಫೆಬ್ರವರಿ 27, 28ರಂದು ನಗರದ ಕೆಲವೆಡೆ ನೀರು ಸ್ಥಗಿತ; ಪಟ್ಟಿ ಇಲ್ಲಿದೆ
‘ಜೀವ ಬೆದರಿಕೆ’
ರಷ್ಯಾದಲ್ಲಿ ಸಂತ್ರಸ್ತರನ್ನು ಸ್ವೀಕರಿಸಿದ ಏಜೆಂಟರೊಬ್ಬರು ದಿ ಹಿಂದೂ ಜೊತೆಗೆ ಮಾತನಾಡಿದ್ದು, “ಎಲ್ಲರೂ ಭಾರತದ ವಿವಿಧ ಭಾಗಗಳ ಯುವಕರಾಗಿದ್ದು, ಸರ್ಕಾರವು ಕ್ರಮ ಕೈಗೊಳ್ಳದಿದ್ದರೆ ಅವರ ಜೀವಕ್ಕೆ ಗಂಭೀರ ಅಪಾಯವಿದೆ” ಎಂದು ಹೇಳಿದ್ದಾರೆ.
“ಸೇನಾ ಸಹಾಯಕರಾಗಿ ಕೆಲಸ ಮಾಡಲು ಅವರಿಗೆ ಅವಕಾಶ ನೀಡಲಾಯಿತು. ಒಪ್ಪಂದದ ಪ್ರಕಾರ ಅವರಿಗೆ ಮೂರು ತಿಂಗಳ ಕಾಲ ಮೂಲಭೂತ ತರಬೇತಿಯನ್ನು ನೀಡಲಾಗುವುದು ಮತ್ತು ನಂತರ ಮಾನಸಿಕ ಮೌಲ್ಯಮಾಪನ ಮತ್ತು ಇತರ ಪರೀಕ್ಷೆಗಳನ್ನು ಮಾಡಲಾಗುತ್ತದೆ ಮತ್ತು ಅವರು ಅಡುಗೆ ಸಹಾಯಕರಾಗಿ ಅಥವಾ ಇನ್ನಾವುದೇ ಉದ್ಯೋಗದಲ್ಲಿ ಮುಂದುವರಿಯಲು ಬಯಸಿದರೆ ಇಚ್ಛೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಆದರೆ ಒಂದು ತಿಂಗಳ ನಂತರ, ಅವರ ಪಾಸ್‌ಪೋರ್ಟ್‌ಗಳನ್ನು ಕಸಿದುಕೊಳ್ಳಲಾಯಿತು ಮತ್ತು ಅವರನ್ನು ರಷ್ಯಾದ ಪರವಾಗಿ ಯುದ್ಧ ಮಾಡಲು ಒತ್ತಾಯಿಸಲಾಯಿತು. ಬೇರೆ ದೇಶಗಳ ಜನರು ಸಹ ಇಲ್ಲಿ ಸಿಲುಕಿಕೊಂಡಿದ್ದಾರೆ” ಎಂದು ಏಜೆಂಟ್ ಹೇಳಿದ್ದಾರೆ.
ರಷ್ಯಾದಲ್ಲಿ ಭಾರತೀಯ ಕಾರ್ಮಿಕರ ಈ ನಿರ್ದಿಷ್ಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ವಿದೇಶಾಂಗ ಸಚಿವಾಲಯ ನಿರಾಕರಿಸಿದೆ. ಭಾರತೀಯ ರಾಯಭಾರ ಕಚೇರಿಯು ತಾವು ಸ್ವೀಕರಿಸಿದ ಎಲ್ಲಾ ದೂರುಗಳನ್ನು ಅನುಸರಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಇವನ್ನೂ ಓದಿ: ಬ್ರಿಟಿಷರಿಗೆ ಸಹಾಯ ಮಾಡಿದ್ದ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರ ಆಗಲು ಹೇಗೆ ಸಾಧ್ಯ?