ನವದೆಹಲಿ: ಯುದ್ಧದ ಪರಿಸ್ಥಿಯನ್ನು ಎದುರಿಸುತ್ತಿರುವ ಉಕ್ರೇನ್ ದೇಶದ ಹಲವು ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಯೇ ಪ್ರಮುಖ ಆದ್ಯತೆಯಾಗಿದೆ ಎಂದಿರುವ ಕೇಂದ್ರ ಸರ್ಕಾರವು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ದೇಶಕ್ಕೆ ವಾಪಸ್ಸು ಕರೆತರಲು ಎಲ್ಲಾ ರೀತಿಯ ಮಾರ್ಗಗಳನ್ನು ಅನುಸರಿಸುತ್ತಿದೆ.
ಭಾರತವು ಉಕ್ರೇನ್ನಿಂದ ಈವರೆಗೆ ಸುಮಾರು ಎರಡು ಸಾವಿರ ನಾಗರಿಕರನ್ನು ಸ್ಥಳಾಂತರಿಸಿದೆ. ಇದರಲ್ಲಿ ಒಂದು ಸಾವಿರ ಮಂದಿಯನ್ನು ಹಂಗೇರಿ ಮತ್ತು ರೊಮೇನಿಯಾದಿಂದ ಚಾರ್ಟರ್ಡ್ ವಿಮಾನಗಳಲ್ಲಿ ಮನೆಗೆ ಕರೆತರಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾಗರಿಕರ ಭದ್ರತಾ ಹಿತಾಸಕ್ತಿಗಳನ್ನು ಅರಿತುಕೊಳ್ಳಲು ಮತ್ತು ಉಕ್ರೇನ್ನಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಅಲ್ಲಿಂದ ಭಾರತೀಯರನ್ನು ಹೊರಗೆ ಕರೆದೊಯ್ಯುವಂತೆ ವಿನಂತಿ ಮಾಡಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ.
ಭಾರತೀಯರನ್ನು ಉಕ್ರೇನ್ನಿಂದ ಸ್ಥಳಾಂತರಿಸುವ ವಿಚಾರವಾಗಿ ಭಾರತ ಸರ್ಕಾರದ ಅಧಿಕಾರಿಗಳು ಜಿನೀವಾದಲ್ಲಿರುವ ಅಂತಾರಾಷ್ಟ್ರೀಯ ರೆಡ್ಕ್ರಾಸ್ ಸಮಿತಿ(ಐಸಿಆರ್ಸಿ)ಯನ್ನು ಸಂಪರ್ಕಿಸಿದ್ದಾರೆ.
ರಷ್ಯಾ-ಉಕ್ರೇನ್ ಜೊತೆ ಮಾತುಕತೆ
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಬಗ್ಗೆ ರಷ್ಯಾ ಮತ್ತು ಉಕ್ರೇನ್ನ ರಾಯಭಾರಿಗಳ ಜೊತೆ ಪ್ರತ್ಯೇಕವಾಗಿ ಮಾತನಾಡಲಾಗಿದೆ ಎನ್ನಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಸಚಿವರ ನೇರ ಮೇಲ್ವಿಚಾರಣೆಯಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಉಕ್ರೇನ್ನಲ್ಲಿರುವ ನಾಗರಿಕರ ಸುರಕ್ಷತೆ, ಭದ್ರತೆ ಮತ್ತು ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.
ಈ ಸಂಬಂಧಿತ ಬೆಳವಣಿಗೆಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮೊಲ್ಡೋವಿಯನ್ ವಿದೇಶಾಂಗ ಸಚಿವ ನಿಕು ಪೊಪೆಸ್ಕು ಅವರೊಂದಿಗೆ ಮಾತನಾಡಿದ್ದಾರೆ. ಉಕ್ರೇನ್-ಮೊಲ್ಡೊವಾ ಗಡಿಯಲ್ಲಿ ಭಾರತೀಯರ ಪ್ರವೇಶವನ್ನು ಸುಲಭಗೊಳಿಸಲು ಬೆಂಬಲವನ್ನು ಕೋರಿರುವುದಾಗಿಯೂ ಶ್ರಿಂಗ್ಲಾ ವಿವರಿಸಿದ್ದಾರೆ.