ರೂಪಾಯಿ ಮೌಲ್ಯ ಏಕೆ ಇಳಿಯುತ್ತಲೇ ಇದೆ?

ಡಾ. ಸಿ.ಪಿ. ಚಂದ್ರಶೇಖರ್ ಮತ್ತು ಪ್ರೊ.ಜಯತಿ ಘೋಷ್

ಜೂನ್ 29ರಂದು ಡಾಲರಿಗೆ ಎದುರಾಗಿ ರೂಪಾಯಿ ಮೌಲ್ಯ 79.03ಕ್ಕೆ ಕುಸಿದು ಹೊಸ ದಾಖಲೆಯನ್ನು ನಿರ್ಮಿಸಿತ್ತು. ಜುಲೈ 5ರಂದು ಅದು 79.30 ಕ್ಕೆ ಇಳಿದು ಆ ದಾಖಲೆಯನ್ನೂ ಮುರಿದಿದೆ. ಈ ಇಳಿಕೆ ಸದ್ಯಕ್ಕೆ ನಿಲ್ಲುವುದಿಲ್ಲ. ಪ್ರಸಕ್ಯ ಹಣಕಾಸು ವರ್ಷದ 3ನೇ ತ್ರೈಮಾಸಿಕದ ಕೊನೆಯಲ್ಲಿ ಇದು 82 ಕ್ಕೆ ಕುಸಿಯಬಹುದು ಎಂದೂ ಹೇಳಲಾಗುತ್ತಿದೆ.

ಇದು ತಾತ್ಕಾಲಿಕ ಕುಸಿತ ಅಲ್ಲ ಎನ್ನುತ್ತಾರೆ ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಡಾ. ಸಿ.ಪಿ. ಚಂದ್ರಶೇಖರ್ ಮತ್ತು ಪ್ರೊ.ಜಯತಿ ಘೋಷ್ . ಕಳೆದ ಮೂರು ವರ್ಷಗಳಲ್ಲಿ ಮೂರು ಬಾರಿ ಇಂತಹ ಕುಸಿತಗಳು ಉಂಟಾಗಿವೆ. ಮತ್ತು ಈ ಕುಸಿತಗಳು ದೇಶ ಈಗ ಅನುಭವಿಸುತ್ತಿರುವ ಹಣದುಬ್ಬರದ ಸಂಕಟದಲ್ಲೂ ಪಾತ್ರವಹಿಸಿವೆ ಎಂದೂ ಅವರು ಹೇಳುತ್ತಾರೆ.

ಏಕೆ ರೂಪಾಯಿ ಮೌಲ್ಯದ ಈ ಸತತ ಇಳಿಕೆ?

ಈ ಲೇಖನದಲ್ಲಿ ಅವರು ವಿಶ್ಲೇಷಿಸಿದ್ದಾರೆ. (ಮೂಲ: ಬಿಸಿನೆಸ್ ಲೈನ್‌, ಜೂನ್ 27, 2022)

ಜೂನ್ ತಿಂಗಳ ದ್ವಿತೀಯಾರ್ಧದಲ್ಲಿ ರೂಪಾಯಿ ಮೌಲ್ಯವು  ಒಂದು ಅಮೆರಿಕನ್ ಡಾಲರಿಗೆ 78 ಕ್ಕಿಂತಲೂ ಕೆಳಗಿಳಿಯುವ ದಾಖಲೆಗಳನ್ನು ನಿರ್ಮಿಸುತ್ತಿದೆ. ಆದರೆ ಈ ಸಂಗತಿ  ರೂಪಾಯಿ ಮೌಲ್ಯ ಒಂದು ದೀರ್ಘ ಅವಧಿಯಿಂದ ಕೆಳಗಿಳಿಯುತ್ತಿದೆ ಎಂಬ ಸಂಗತಿಯನ್ನು ನಾವು ಗುರುತಿಸದಂತೆ ಮಾಡಬಾರದು..

ಉದಾಹರಣೆಗೆ, ನಾವು ಕಳೆದ ಮೂರು ವರ್ಷಗಳನ್ನು ಪರಿಗಣಿಸಿದರೆ, ಒಂದು ಡಾಲರಿಗೆ ರೂಪಾಯಿಯ ಮೌಲ್ಯ ಜುಲೈ ಅಂತ್ಯದಲ್ಲಿ ರೂ.68.9 ಇದ್ದದ್ದು ಆಗಸ್ಟ್ ಅಂತ್ಯದ ವೇಳೆಗೆ ರೂ.72ಕ್ಕೆ ಇಳಿಯಿತು. ಅದು ಕೊವಿಡ್-19 ಸಾಂಕ್ರಾಮಿಕದ ಮುಂಚೆಯೇ. ಸಾಂಕ್ರಾಮಿಕ ಆವರಿಸಿ ಅದರೊಂದಿಗೆ ಆರ್ಥಿಕ ಚಟುವಟಿಕೆಗಳು ಹಠಾತ್ ನಿಲುಗಡೆಗೊಂಡ ಅವಧಿಯಲ್ಲಿ, ಫೆಬ್ರವರಿ 2020ರಲ್ಲಿ ಡಾಲರ್‌ಗೆ ಸರಾಸರಿ ಮಾಸಿಕ ರೂಪಾಯಿ ಮೌಲ್ಯ 72.2 ರಿಂದ ಅದೇ ವರ್ಷ ಮಾರ್ಚ್ ನಲ್ಲಿ 75.4 ಕ್ಕೆ ಮತ್ತೆ ಕುಸಿಯಿತು

ಇತ್ತೀಚೆಗೆ ಜನವರಿ 2022ರಲ್ಲಿ ಡಾಲರಿಗೆ 75 ರೂ.ಇದ್ದದ್ದು, ಮೇ ನಲ್ಲಿ 77.7ಕ್ಕಿಳಿಯಿತು. ಇವುಗಳಲ್ಲಿ ಪ್ರತಿಯೊಂದು ಕುಸಿತದ ಪ್ರಸಂಗದ ನಂತರ ರೂಪಾಯಿ ಮೌಲ್ಯ ಆ ಕುಸಿತದ ನೆರೆಹೊರೆಯಲ್ಲೇ ಮುಂದುವರೆಯಿತು. ಅದರ ನಂತರ ಇನ್ನಷ್ಟು ಅವನತಿಯನ್ನು ಕಾಣುತ್ತಿದೆ.

ರೂಪಾಯಿಯಲ್ಲಿನ ಈ ಕುಸಿತಗಳು, ನಿರೀಕ್ಷೆಯಂತೆ, ಬಹು ಅಂಶಗಳಿಂದ ಪ್ರಭಾವಿತವಾಗಿವೆ. ಪ್ರತಿಯೊಂದು ಬಾರಿ ಮೌಲ್ಯ ಇಳಿಕೆಯಾದಾಗಲೂ ಅದಕ್ಕೆ ಕಾರಣವಾದ ಚಾಲಕ ಅಂಶಗಳ ಪ್ರಾಮುಖ್ಯತೆ ಹೆಚ್ಚು-ಕಡಿಮೆಯಾಗುತ್ತ ಬಂದಿದೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ಪಾವತಿ ಬಾಕಿ(ಬ್ಯಾಲನ್ಸ್ ಆಫ್ ಪೇಮೆಂಟ್ಸ್)ಯಲ್ಲಿ ವ್ಯಾಪಾರ ಮತ್ತು ಚಾಲ್ತಿ ಖಾತೆಗಳಲ್ಲಿನ ದೌರ್ಬಲ್ಯಗಳು. ಇವುಗಳ ಕೊರತೆಯ ಪ್ರಮಾಣ ಹೆಚ್ಚುತ್ತಿರುವುದು ಕಂಡು ಬಂದಿದೆ. ಭಾರತದ ಸಂದರ್ಭದಲ್ಲಿ ವ್ಯಾಪಾರ ಕೊರತೆಯ ಗಾತ್ರದ ಮೇಲೆ ಪ್ರಭಾವ ಬೀರುವ ಎರಡು ಅಂಶಗಳೆಂದರೆ ತೈಲ ಮತ್ತು ಚಿನ್ನದ ಆಮದುಗಳು. ವಿಶೇಷವಾಗಿ ತೈಲ ಆಮದು. ಆದರೆ, ಕುತೂಹಲಕಾರಿ ಸಂಗತಿಯೆಂದರೆ ಕಳೆದ ಮೂರು ವರ್ಷಗಳಲ್ಲಿ ರೂಪಾಯಿಯ ಮೌಲ್ಯ ಇಳಿಕೆಯ ಮೂರು ಪ್ರಸಂಗಗಳಲ್ಲಿ ಮೊದಲ ಎರಡರಲ್ಲಿ ಏರುತ್ತಿರುವ ತೈಲ ಬೆಲೆಗಳು ವ್ಯಾಪಾರ ಕೊರತೆಯ ಮೇಲೆ ಯಾವುದೇ ಒತ್ತಡ ಉಂಟುಮಾಡಿದ್ದು ಕಂಡು ಬರಲಿಲ್ಲ. ಉದಾಹರಣೆಗೆ, ಆಗಸ್ಟ್ 2019ರಲ್ಲಿ ಭಾರತ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ದೈನಂದಿನ ಬೆಲೆಗಳ ಸರಾಸರಿಯು ಬ್ಯಾರಲ್‌ಗೆ 59.35 ಡಾಲರುಗಳಿಗೆ ಕುಸಿಯಿತು. ಅದರ ಹಿಂದಿನ ತಿಂಗಳಲ್ಲಿ ಅದು 63.63 ಡಾಲರ್ ಮತ್ತು ಏಪ್ರಿಲ್ 2019 ರಲ್ಲಿ 71 ಡಾಲರ್ ಇತ್ತು. ಅದೇ ರೀತಿ, ತೈಲ ಬೆಲೆಗಳು ಕೊವಿಡ್-19 ಸಾಂಕ್ರಾಮಿಕವು ಮೊದಲು ಅಪ್ಪಳಿಸಿದಾಗ ಐತಿಹಾಸಿಕ ಕೆಳಮಟ್ಟಗಳಿಗೆ ಕುಸಿದವು.. ಇತ್ತೀಚಿನ ತಿಂಗಳುಗಳಲ್ಲಿ, ರೂಪಾಯಿ ಬೆಲೆ ಕುಸಿತದ ಮೂರನೇ ಪ್ರಸಂಗದಲ್ಲಷ್ಟೇ, ತೈಲಬೆಲೆಗಳು ಏರುತ್ತಿರುವುದು.

ತೈಲ ಬೆಲೆಗಳು ಕೆಳಮಟ್ಟದಲ್ಲೇ ಇದ್ದಾಗ, ರೂಪಾಯಿ ಕುಸಿತದ ಮೊದಲ ಎರಡು ಪ್ರಸಂಗಗಳಲ್ಲಿ ವ್ಯಾಪಾರ ಸಮತೋಲನ ಕೊರತೆಯಲ್ಲಿದ್ದರೂ ಕೊರತೆಯ ಗರಿಷ್ಠ ಮೌಲ್ಯ ಒಂದು ತ್ರೈಮಾಸಿಕದಲ್ಲಿ ಸುಮಾರು 15 ಶತಕೋಟಿ ಡಾಲರ್ ಮಾತ್ರ. ತೀರಾ ಇತ್ತೀಚೆನ ತ್ರೈಮಾಸಿಕದಲ್ಲಷ್ಟೇ ಅದು 25 ಶತಕೋಟಿ ಡಾಲರಿಗೆ ಏರಿತು, ಇದು ರೂಪಾಯಿ ಮೇಲೆ ಹಾಕಿದ ಒತ್ತಡ ಗಣನೀಯ. ಈ ಒತ್ತಡ ಉಕ್ರೇನ್ ಅತಿಕ್ರಮಣದ ನಂತರ ರಷ್ಯಾದಿಂದ ರಿಯಾಯಿತಿ ಬೆಲೆಗಳಲ್ಲಿ ತೈಲ ಖರೀದಿಯಿಂದ ಭಾರತಕ್ಕೆ ಪ್ರಯೋಜನವಾಗಿದ್ದರೂ ಸಹ ಉಂಟಾಗಿದೆ. ಭಾರತದ ತೈಲ ಸಂಸ್ಕರಣಾಗಾರಗಳು ಮೇ 2022 ರಲ್ಲಿ ಸುಮಾರು 25 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲ ಪಡೆದಿವೆ. ಇದು ಅವುಗಳ ತೈಲ ಆಮದಿನ ಶೇಕಡಾ 16 ಕ್ಕಿಂತಲೂ ಹೆಚ್ಚು. ಒಟ್ಟಾರೆಯಾಗಿ, 2021 ರಲ್ಲಿ ಮತ್ತು 2022 ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಸಮುದ್ರದ ಮೂಲಕ ತೈಲ ಆಮದುಗಳ 1% ಮಾತ್ರ ರಷ್ಯಾದಿಂದ ಬಂದಿದ್ದರೆ, ಎಪ್ರಿಲ್ 2022ರಲ್ಲಿ ಅದು 5% ದಷ್ಟಾಯಿತು.

ಈ ಎಲ್ಲಾ ಮೂರು ಪ್ರಸಂಗಗಳಲ್ಲಿ ದೇಶದಿಂದ ಬಂಡವಾಳದ ಹೊರಹರಿವು ರೂಪಾಯಿ ಮೌಲ್ಯ ಇಳಿಕೆಯ ಸಾಮಾನ್ಯ ಚಾಲಕ ಅಂಶವಾಗಿತ್ತು. ಆಗಸ್ಟ್ 2019 ರಲ್ಲಿ ರೂಪಾಯಿ ಮೌಲ್ಯವು ಇಳಿದದ್ದು ಮುಖ್ಯವಾಗಿ ವಿದೇಶಿ ಹೂಡಿಕೆದಾರರ ನಿರ್ಗಮನದಿಂದಾಗಿ, ಬಂಡವಾಳದ ಹೊರಹರಿವಿನ ನಂತರ ನಿವ್ವಳ ಹೂಡಿಕೆಗಳಲ್ಲಿ ಇಳಿಕೆಯಾಯಿತು. ಜೂನ್ 2019 ರಲ್ಲಿ, ನಿವ್ವಳ ಪೋಟ್ಫೋðಲಿಯೊ ಹೂಡಿಕೆಯು ತೀವ್ರವಾಗಿ ಕೆಳಗಿಳಿಯಿತು. ಮತ್ತು ನಂತರ ಮುಂದಿನ ಎರಡು ತಿಂಗಳುಗಳಲ್ಲಿ ಋಣಾತ್ಮಕವಾಗಿ ತಿರುಗಿತು. ತರುವಾಯ, ಸೆಪ್ಟೆಂಬರ್‌ನಲ್ಲಿ ನಿವ್ವಳ ಪೋರ್ಟ್ಫೋಲಿಯೊ ಹೂಡಿಕೆಯು ಸ್ವಲ್ಪ ಧನಾತ್ಮಕವಾಗಿ ತಿರುಗಿದಾಗ, ರೂಪಾಯಿ ಕೂಡ ಸ್ಥಿರವಾಯಿತು, ತುಸು ಮೌಲ ಏರಿಕೆಯೂ ಆಯಿತು. ಇದೇ ರೀತಿ, ಮಾರ್ಚ್ 2020 gಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ, ಸಾಂಕ್ರಾಮಿಕವು ಸೃಷ್ಟಿಸಿದ ಅನಿಶ್ಚಿತತೆ 13.7 ಶತಕೋಟಿ ಡಾಲರುಗಳ ನಿವ್ವಳ ಬಂಡವಾಳ ಹೊರಹರಿವಿಗೆ ಕಾರಣವಾಯಿತು. ಮುಂದಿನ ತ್ರೈಮಾಸಿಕದಲ್ಲಿ 64.2 ಡಾಲರಿನಷ್ಟು ಮಾತ್ರ ಒಳಹರಿವು ಕಂಡು ಬಂತು. ತರುವಾಯ, ಅಭಿವೃದ್ಧಿ ಹೊಂದಿದ ದೇಶಗಳ ಕೇಂದ್ರ ಬ್ಯಾಂಕುಗಳು ತಮ್ಮ ಹಣ ಹರಿವು ಧೋರಣೆಯನ್ನು ಸುಗಮಗೊಳಿಸಿದಾಗ ಮಾತ್ರ ಒಳಹರಿವು ಸೆಪ್ಟೆಂಬರ್ ಮತ್ತು ಡಿಸೆಂಬರ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕಗಳಲ್ಲಿ ಅನುಕ್ರಮವಾಗಿ 7 ಶತಕೋಟಿ ಮತ್ತು 21.2 ಶತಕೋಟಿ ಡಾಲರಿಗೆ ಏರಿತು.

ಅಂತಿಮವಾಗಿ, ಇತ್ತೀಚಿನ ತಿಂಗಳುಗಳಲ್ಲಿ, ಜಾಗತಿಕ ಅನಿಶ್ಚಿತತೆ ಮತ್ತು, ಜಾಗತಿಕ ಮತ್ತು ಯುಎಸ್ ನ ಬಡ್ಡಿದರಗಳಲ್ಲಿ ಹಣದುಬ್ಬರ-ಪ್ರೇರಿತ ಏರಿಕೆಗಳಾಗಬಹುದು ಎಂಬ ನಿರೀಕ್ಷೆಗಳಿಂದ ಬಂಡವಾಳ ಮತ್ತೆ ದೇಶದಿಂದ ಹೊರಕ್ಕೆ ಹರಿಯಲಾರಂಭಿಸಿದೆ. 2022 ರಲ್ಲಿ ಜೂನ್ 16 ರವರೆಗೆ, ಭಾರತೀಯ ಬಾಂಡ್ ಮತ್ತು ಇಕ್ವಿಟಿ ಮಾರುಕಟ್ಟೆಗಳಿಂದ ನಿವ್ವಳ ಹೊರಹರಿವು 26.9 ಶತಕೋಟಿ ಡಾಲರುಗಳು. ಭಾರತದ ಹಣಕಾಸು ಮಾರುಕಟ್ಟೆಗಳಲ್ಲಿ ಸದಾ ತಿರುಗಾಟದಲ್ಲಿರುವ ವಿದೇಶಿ ಹೂಡಿಕೆಗಳ ಶೇಖರಣೆಯಾಗಿದ್ದು, ಅನಿಶ್ಚಿತತೆಯ ಅವಧಿಯಲ್ಲಿ ಅವುಗಳು ದೇಶಬಿಟ್ಟು ಹೊರಕ್ಕೆ ಹರಿದು ಹೋಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ರೂಪಾಯಿ ಮೌಲ್ಯದಲ್ಲಿ ತೀವ್ರ ಏರಿಕೆಗಳಿಗೆ ಕಾರಣವಾಗಿದೆ ಎಂಬುದು ಸ್ಪಷ್ಟ.

ಭಾರತೀಯ ರಿಝರ್ವ್ ಬ್ಯಾಂಕ್(ಆರ್‌ಬಿಐ) ಬಳಿ ದೊಡ್ಡ ವಿದೇಶಿ ವಿನಿಮಯ ಮೀಸಲು ಇರುವುದರಿಂದಾಗಿ ಅದು ತನ್ನ ಬಹಿರಂಗ ಮಾರುಕಟ್ಟೆ ಮಧ್ಯಪ್ರವೇಶದ ಮೂಲಕ ರೂಪಾಯಿಯ ಮೌಲ್ಯದ ಈ ಅವನತಿಯನ್ನು ಮುಕ್ತವಾಗಿ ಸ್ಥಗಿತಗೊಳಿಸಬಹುದಿತ್ತು ಎಂದು ಕಾಣುತ್ತದೆ. ವಾಸ್ತವವಾಗಿ, ಬಂಡವಾಳದ ಹೊರಹರಿವಿನ ಹೊರತಾಗಿಯೂ, ಅದರ ವಿದೇಶಿ ಮೀಸಲು ಆಸ್ತಿಗಳು 2019 ರ ಕೊನೆಯ ತ್ರೈಮಾಸಿಕದಿಂದ ಬಹುತೇಕ ಎಲ್ಲಾ ತ್ರೈಮಾಸಿಕಗಳಲ್ಲಿ (ಮಾರ್ಚ್ 2021 ಮತ್ತು ಮಾರ್ಚ್ 2022 ಕ್ಕೆ ಕೊನೆಗೊಂಡ ಎರಡು ತ್ರೈಮಾಸಿಕಗಳನ್ನು ಬಿಟ್ಟು) ಇಳಿಯುವ ಬದಲು ಹೆಚ್ಚಾಗಿವೆ. ವಿದೇಶಿ ಡಾಲರ್ ಸೊತ್ತುಗಳ ಮಾರಾಟ ರೂಪಾಯಿಯನ್ನು ಬಲಪಡಿಸಲು ಮತ್ತು ಡಾಲರಿನ ಎದುರು ಅದರ ಮೌಲ್ಯದಲ್ಲಿನ ಇಳಿಕೆಯನ್ನು ನಿಲ್ಲಿಸಲು ಅಥವಾ ಮಿತಗೊಳಿಸಲು ಸಹಾಯ ಮಾಡಬಹುದಾಗಿತ್ತು. ಆದರೆ, ಜನವರಿ 2020 ರ ನಂತರ ಕೆಲವು ತಿಂಗಳುಗಳಲ್ಲಿ ಮಾತ್ರವೇ ಆರ್‌ಬಿಐ ಡಾಲರ್‌ಗಳ ನಿವ್ವಳ ಮಾರಾಟಗಾರನಾಗಿತ್ತು.

ಇದು ರೂಪಾಯಿ ಮೌಲ್ಯದಲ್ಲಿ ಸವಕಳಿಯಾಗಲು ಬಿಡುವ ಮೂಲಕ ಭಾರತದ ರಫ್ತುಗಳ ಸ್ಪರ್ಧಾತ್ಮಕತೆಯನ್ನು ಉತ್ತಮಗೊಳಿಸಲು ಮತ್ತು ಆಮದುಗಳನ್ನು ರೂಪಾಯಿ ದೃಷ್ಟಿಯಲ್ಲಿ ದುಬಾರಿಗೊಳಿಸಲು, ಆಮೂಲಕ ವ್ಯಾಪಾರ ಕೊರತೆಯನ್ನು ಇಳಿಸಲು ಆರ್‌ಬಿಐ ಮಾಡಿದ ಒಂದು ಪ್ರಯತ್ನ ಎಂದು ಅರ್ಥೈಸಬಹುದೇನೋ. ಆದರೆ ಈ ಲೇಖನದಲ್ಲಿ ಚರ್ಚಿಸಿದಂತೆ ರೂಪಾಯಿಯ ಮೌಲ್ಯದಲ್ಲಿ ದೀರ್ಘಾವಧಿಯ ಸವಕಳಿಯ ಹೊರತಾಗಿಯೂ ವ್ಯಾಪಾರ ಖಾತೆಯು ದುರ್ಬಲವಾಗಿಯೇ ಉಳಿದಿದೆ. ವಾಸ್ತವವಾಗಿ, ಇತ್ತೀಚಿನ ಸುತ್ತಿನ ರೂಪಾಯಿ ಮೌಲ್ಯದ ಇಳಿಕೆಯ ಸಮಯದಲ್ಲಿ, ರಫ್ತು ಸ್ವಲ್ಪಮಟ್ಟಿಗೆ ಉತ್ತಮಗೊಂಡಿದ್ದರೂ ಸಹ ಆಮದುಗಳಿಗೆ ತೆರಬೇಕಾದ ಮೊತ್ತ ತುಂಬಾ ತೀವ್ರವಾಗಿ ಏರಿತು, ಇದರ ಪರಿಣಾಮವಾಗಿ ವ್ಯಾಪಾರ ಕೊರತೆಯು ಗಮನಾರ್ಹವಾಗಿ ಹೆಚ್ಚಾಯಿತು.

ಈ ನಡುವೆ, ರೂಪಾಯಿ ಮೌಲದಲ್ಲಿ ಇಳಿಕೆಯು ಭಾರತೀಯ ಅರ್ಥವ್ಯವಸ್ಥೆಯೊಳಗೆ, ಹಣದುಬ್ಬರದ ಒತ್ತಡಗಳಿಗೆ ತನ್ನ ಪಾಲನ್ನೂ ಸೇರಿಸುತ್ತಿದೆ.

ರೂಪಾಯಿ ಮೌಲ್ಯದ ಸವಕಳಿಯಿಂದ ವ್ಯಾಪಾರ ಕೊರತೆಯ ಪ್ರಮಾಣ ಇಳಿಯುವ ಬದಲು ಕೊರತೆಯ ಹೆಚ್ಚಳದಿಂದಾಗಿಯೇ ರೂಪಾಯಿ ಮೌಲ್ಯದಲ್ಲಿ ಸವಕಳಿ ಉಂಟಾಗುತ್ತಿರುವಂತೆ ಕಾಣುತ್ತದೆ. ವ್ಯಾಪಾರ ಕೊರತೆಯ ಸಮಸ್ಯೆಯನ್ನು ನಿಭಾಯಿಸಲು ಬೇರೆ ಕ್ರಮಗಳು ಅಗತ್ಯ ಎಂಬುದು ಸ್ಪಷ್ಟವಾಗಿದೆ. ಈ ನಡುವೆ ಆರ್‌ಬಿಐ ರೂಪಾಯಿ ಮೌಲ್ಯದ ಏರಿಕೆಗಳಿಗೆ ಕಾರಣವಾಗುತ್ತಿರುವ ಚಂಚಲ ಬಂಡವಾಳದ ಹರಿವುಗಳನ್ನು ವಿತಗೊಳಿಸುವ ಕಾರ್ಯತಂತ್ರಗಳನ್ನು ಕೂಡ ಪರಿಶೀಲಿಸಬೇಕಾಗಿದೆ.

ಎಲ್ಲವೂ ಏರುತ್ತಿವೆ, ಒಂದು ಮಾತ್ರ ಇಳಿಯುತ್ತಿದೆ.

“ಒಳ್ಳೇ ಗ್ರಾಫ್! ಏನದು?” “ರೂಪಾಯಿ ಮೌಲ್ಯ..”
ವ್ಯಂಗ್ಯಚಿತ್ರ: ಅಲೋಕ್ ನಿರಂತರ್

Donate Janashakthi Media

Leave a Reply

Your email address will not be published. Required fields are marked *