ಆರೆಸ್ಸೆಸ್‌ನ ನಿಜ ಆಶಯ ಬಯಲಾಗಿದೆ- ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಭಾರತೀಯ ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದುಹಾಕಲು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಮಾಡಿರುವ ಪ್ರಸ್ತಾಪವನ್ನು ಸಿಪಿಐ(ಎಂ) ಬಲವಾಗಿ ಖಂಡಿಸಿದೆ. ಈ ಪ್ರಸ್ತಾಪವು ಸಂವಿಧಾನವನ್ನು ಬುಡಮೇಲು ಮಾಡುವ ಆರ್‌ಎಸ್‌ಎಸ್‌ನ ದೀರ್ಘಕಾಲದ ಉದ್ದೇಶವನ್ನು ಮತ್ತು ತನ್ನ ಹಿಂದುತ್ವ ಯೋಜನೆಯನ್ನು ಈಡೇರಿಸುವ ಸಲುವಾಗಿ ಭಾರತವನ್ನು ಒಂದು ‘ಹಿಂದೂ ರಾಷ್ಟ್ರ’ವಾಗಿ ಪರಿವರ್ತಿಸುವ ಅದರ ಆಶಯವನ್ನು ಬಯಲಿಗೆ ತಂದಿದೆ ಎಂದು ಅದು ಹೇಳಿದೆ.

ಭಾರತೀಯ ಸಂವಿಧಾನವು ನಮ್ಮ ಐತಿಹಾಸಿಕ ವಸಾಹತುಶಾಹಿ-ವಿರೋಧಿ ಸ್ವಾತಂತ್ರ‍್ಯ ಹೋರಾಟದ ವಿವಿಧ ಧಾರೆಗಳಿಂದ ಬಂದ ಅಸಂಖ್ಯಾತ ಸ್ವಾತಂತ್ರ‍್ಯ ಹೋರಾಟಗಾರರ ಆಕಾಂಕ್ಷೆಗಳನ್ನು ಸಾಕಾರಗೊಳಿಸುತ್ತದೆ. ‘ಸಮಾಜವಾದ’ ಮತ್ತು ‘ಜಾತ್ಯತೀತತೆ’ಯನ್ನು ಪೀಠಿಕೆಯಲ್ಲಿ ಸೇರಿಸುವುದು ಸ್ವೇಚ್ಛಾಚಾರದ ಸೇರ್ಪಡೆಯಲ್ಲ; ಇದು ಮಹಾನ್ ಶಹೀದ್ ಭಗತ್ ಸಿಂಗ್ ಮತ್ತು ಅವರ ಒಡನಾಡಿಗಳಂತಹ ಸ್ವಾತಂತ್ರ‍್ಯ ಹೋರಾಟಗಾರರು ಯಾವ ಮೂಲ ಮೌಲ್ಯಗಳಿಗಾಗಿ ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದರೋ ಅದನ್ನು ಪ್ರತಿಬಿಂಬಿಸುತ್ತದೆ. ಅವರ ಆದರ್ಶಗಳು ಸಂವಿಧಾನದ ಪ್ರತಿಯೊಂದು ನಿಬಂಧನೆಯಲ್ಲಿ ಹಾಸುಹೊಕ್ಕಾಗಿವೆ ಮತ್ತು ಈ ಪದಗಳ ಸೇರ್ಪಡೆ ಆ ಪರಂಪರೆಯನ್ನು ದೃಢಪಡಿಸುತ್ತದೆಯಷ್ಟೇ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಇದನ್ನೂ  ಓದಿ : ದೇವನಹಳ್ಳಿ| ಭೂಸ್ವಾಧೀನ ವಿರೋಧಿಸಿ ‘ಸಂಯುಕ್ತ ಹೋರಾಟ’ದಿಂದ ‘ದೇವನಹಳ್ಳಿ ಚಲೋ’ಗೆ ಕರೆ

ಸ್ವಾತಂತ್ರ‍್ಯ ಚಳವಳಿಯಲ್ಲಿ ಯಾವುದೇ ಪಾತ್ರ ವಹಿಸದ ಆರ್‌ಎಸ್‌ಎಸ್ ಈಗ ಈ ಮೂಲಾಧಾರ ತತ್ವಗಳನ್ನು ತೆಗೆದುಹಾಕಬೇಕೆಂದು ಪ್ರತಿಪಾದಿಸುವುದು ಪರಮ ಬೂಟಾಟಿಕೆಯಾಗಿದೆ. ನಮ್ಮ ಹುತಾತ್ಮರು ಎತ್ತಿ ಹಿಡಿದ ಮೌಲ್ಯಗಳನ್ನು ಅದು ಸಹಿಸುವುದಿಲ್ಲ ಎಂಬುದು ಅದರ ಪ್ರತಿಗಾಮಿ, ಜನವಿರೋಧಿ ಮತ್ತು ವಿಭಜಕ ಸಿದ್ಧಾಂತವನ್ನು ಇದು ಬಯಲಿಗೆಳೆಯುತ್ತದೆ ಎಂದು ಮುಂದುವರೆದು ಹೇಳಿದೆ.

ನಮ್ಮ ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾದ ಮೂಲ ಮೌಲ್ಯಗಳನ್ನು ಬದಲಾಯಿಸುವ ಯಾವುದೇ ಪ್ರಯತ್ನವನ್ನು ಸಿಪಿಐ(ಎಂ) ದೃಢವಾಗಿ ವಿರೋಧಿಸುತ್ತದೆ ಎಂದಿರುವ ಪೊಲಿಟ್‌ಬ್ಯುರೊ, ಜನರು ಜಾಗರೂಕರಾಗಿರಬೇಕು ಮತ್ತು ಆರ್‌ಎಸ್‌ಎಸ್ ಮತ್ತು ಅದರ ಪೋಷಣೆಯಲ್ಲಿರುವ ಬಿಜೆಪಿಯ ಇಂತಹ ಎಲ್ಲಾ ಪ್ರಯತ್ನಗಳನ್ನು ದೃಢನಿಶ್ಚಯದಿಂದ ವಿರೋಧಿಸಬೇಕು ಎಂದು ಮನವಿ ಮಾಡಿದೆ.

ಇದನ್ನೂ ನೋಡಿ : ಸಮಾಜವಾದ, ಸೆಕ್ಯುಲರಿಸಂ ಅಂದರೆ ಆರೆಸ್ಸೆಸ್ ಗೆ ಅಸಹನೆ ಯಾಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *