‘ರಾಜದಂಡ’ ಆರೆಸ್ಸೆಸ್ – ಬಿಜೆಪಿಯ ಕಟ್ಟುಕಥೆ ಮತ್ತು ಮಧ್ಯಸ್ಥಿಕೆ

ಲೇಖಕರು; ಕೆ.ಬಾಲಕೃಷ್ಣನ್, ಅನು;ಸಿ. ಸಿದ್ದಯ್ಯ

ನೂತನ ಸಂಸತ್ ಕಟ್ಟಡವನ್ನು ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ದೇಶದ ಮೊದಲ ಮಹಿಳಾ ಪ್ರಜೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಒಂದು ಗೌರವಕ್ಕಾಗಿಯಾದರೂ ಈ ಸಮಾರಂಭದಲ್ಲಿ ಆಹ್ವಾನ ಮಾಡಲಾಗಿಲ್ಲ. ‘ನಾನೇ ರಾಜ, ನಾನೇ ಮಂತ್ರಿ’ ಎಂಬ ನಿರಂಕುಶ ಧೋರಣೆಯೊಂದಿಗೆ ಮೋದಿ ಅವರೇ ಹೊಸ ಸಂಸತ್ತಿನ ಉದ್ಘಾಟನೆಯನ್ನು ಮೂಲಕ ಮಾಡುತ್ತಾರೆ.

ಭಾರತದ ಸಂವಿಧಾನದ 76 ನೇ ವಿಧಿಯು ಸಂಸತ್ತಿನ ಸ್ಪೀಕರ್ ರಾಷ್ಟ್ರಪತಿ ಎಂದು ದೃಢಪಡಿಸುತ್ತದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಈ ವಿಷಯದಲ್ಲಿ ರಾಷ್ಟ್ರಪತಿಗಳ ಗೌರವಾನ್ವಿತ ಸ್ಥಾನಕ್ಕೆ ಅವಮಾನ ಮಾಡಿದೆ. ಇದರ ವಿರುದ್ಧ 19 ವಿರೋಧ ಪಕ್ಷಗಳು ಜಂಟಿಯಾಗಿ ಸಂಸತ್ತಿನ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿವೆ.

ರಾಜಪ್ರಭುತ್ವದ ಒಂದು ಅವಶೇಷ : ಇದಲ್ಲದೆ, ರಾಜಪ್ರಭುತ್ವದ ಅವಧಿಯ ಎಲ್ಲಾ ಅವಶೇಷಗಳನ್ನು ಈ ಸಮಾರಂಭದ ಮೂಲಕ ಪ್ರಸ್ತುತಪಡಿಸುತ್ತ, ಕೇಂದ್ರ ಬಿಜೆಪಿ ಆಡಳಿತಗಾರರು ಪ್ರಜಾಪ್ರಭುತ್ವದ ತತ್ವಗಳನ್ನು ರಾಜಪ್ರಭುತ್ವದ ಯುಗದತ್ತ ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ. ನೂತನ ಸಂಸತ್ ಭವನದಲ್ಲಿ ಸ್ಪೀಕರ್ ಸ್ಥಾನದ ಬಳಿ ರಾಜದಂಡವನ್ನು ಸ್ಥಾಪಿಸುವ ಕ್ರಮವು ಅದರ ಭಾಗವಾಗಿದೆ.

ಚೋಳರ ಸಂಪ್ರದಾಯದ ಆಧಾರದ ಮೇಲೆ, ತಮಿಳುನಾಡಿನ ತಿರುವಾವದುತುರೈ ಮಠದ(ಅಥೀನಂ) ಪರವಾಗಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ನೀಡಲಾದ ರಾಜದಂಡವನ್ನು ದೇಶವು ಸ್ವತಂತ್ರವಾದಾಗ ಸಂಸತ್ತಿನಲ್ಲಿ ಇರಿಸಲಾಗುವುದು ಎಂದು ಘೋಷಿಸಲಾಗಿದೆ. ಅಸಂಖ್ಯಾತ ಜನರ ಜ್ವಲಂತ ಸಮಸ್ಯೆಗಳನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಅಮಿತ್ ಶಾ ಮತ್ತು ಬಿಜೆಪಿ ಈ ರಾಜದಂಡದ ವಿಚಾರವನ್ನು ತೇಲಿಬಿಟ್ಟಿದೆ. ವಾಸ್ತವವಾಗಿ, ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ಹಸ್ತಾಂತರದ ಸಂಕೇತವಾಗಿ ರಾಜದಂಡವನ್ನು ಪ್ರಧಾನಿ ನೆಹರೂಗೆ ಹಸ್ತಾಂತರಿಸಲಾಯಿತು, ಭಾರತೀಯ ಸಂಪ್ರದಾಯದಲ್ಲಿ, ಒಬ್ಬ ರಾಜನಿಂದ ಇನ್ನೊಬ್ಬರಿಗೆ ಅಧಿಕಾರದ ವರ್ಗಾವಣೆಯ ಸಂಕೇತವಾಗಿ ಅಂತಹ ರಾಜದಂಡವನ್ನು ಕೊಡುವುದು ವಾಡಿಕೆ, ಚೋಳ ಸಂಪ್ರದಾಯದಂತೆ ತಿರುವವಡುತುರೈ ಅಥೀನಂ ಪರವಾಗಿ ಜವಾಹರಲಾಲ್ ನೆಹರೂ ಅವರಿಗೆ ನೀಡಲಾಯಿತು, ಅಂತಹ ರಾಜದಂಡವನ್ನು ರಕ್ಷಿಸಲ್ಪಟ್ಟಿತ್ತು, ಪ್ರಸ್ತುತ ಇದನ್ನು ನೂತನ ಸಂಸತ್ತಿನಲ್ಲಿ ಇರಿಸಲಾಗುತ್ತದೆ ಎಂದು ಬಿಜೆಪಿ ಕಥೆಗಳನ್ನು ಕಟ್ಟತೊಡಗಿದೆ. ಇಂತಹ ಕಥೆಗಳನ್ನು ಮಾಧ್ಯಮಗಳು ಹೆಚ್ಚು ಪ್ರಚಾರ ಮಾಡಿವೆ.

ಅವರ ವಾದದ ಪ್ರಕಾರವೂ ಈಗ ರಾಜಪ್ರಭುತ್ವವಿಲ್ಲ; ಒಬ್ಬ ರಾಜನಿಂದ ಮತ್ತೊಬ್ಬ ರಾಜನಿಗೆ ಆಡಳಿತ ವರ್ಗಾವಣೆಯೂ ಈಗಿಲ್ಲ. ರಾಜನ ಪಟ್ಟಾಭಿಷೇಕವೂ ಇಲ್ಲ. ಮೇಲಾಗಿ, ಜವಾಹರಲಾಲ್ ನೆಹರೂ ಅವರಿಗೆ ರಾಜದಂಡವನ್ನು ಆಡಳಿತದ ಬದಲಾವಣೆಯ ಸಂಕೇತವಾಗಿ ನೀಡಲಾಯಿತು ಎಂದು ಭಾವಿಸಿದರೂ, ಅದು ದೊಡ್ಡ ಹೋರಾಟಗಳ ಪರಿಣಾಮವಾಗಿ ಬ್ರಿಟಿಷ್ ಸಾಮ್ರಾಜ್ಯದಿಂದ ಭಾರತೀಯ ಜನರ ಕೈಗೆ ವರ್ಗಾವಣೆಯಾಗಿದೆ. ಆದರೆ ಈಗ ಆ ಶ್ರೇಷ್ಠ ಭಾರತೀಯ ಗಣರಾಜ್ಯ ನಡೆಯುತ್ತಿದೆ; ಬೇರೆ ಬೇರೆ ಪಕ್ಷಗಳು ಅಧಿಕಾರಕ್ಕೆ ಬರಬಹುದು; ಅಂದರೆ ಇಲ್ಲಿನ ಆಡಳಿತ ಪಕ್ಷಗಳು ಬದಲಾಗುತ್ತವೆ, ಆದರೆ ಭಾರತ ಗಣರಾಜ್ಯದ ಆಡಳಿತ ಬದಲಾಗುವುದಿಲ್ಲ. ಹೀಗಾಗಿ ಈಗ ರಾಜದಂಡ ಕೊಡುವ ಮಾತೇ ಇಲ್ಲ. ಇದಲ್ಲದೆ, ಸಂಸತ್ತಿನಲ್ಲಿ ಇಡಲಾಗುವುದು ಎಂದು ಹೇಳಲಾದ ರಾಜದಂಡದ ಬಗ್ಗೆ ಬಿಜೆಪಿ ಆಡಳಿತಗಾರರು ತಿರುಚುತ್ತಿರುವ ಪುರಾಣಗಳು ಸಂಪೂರ್ಣವಾಗಿ ಸುಳ್ಳು.

ರಾಜ್ಯಪಾಲರು ಬರೆದ ಕಥೆಯೇ? : ಭಾರತದ 75 ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಆಗಸ್ಟ್ 2022 ರಲ್ಲಿ ತಿರುವಾವಡುತುರೈ ಅಥೀನಮ್, “ಅಧಿಕಾರದ ರಾಜದಂಡ, ಭಾರತೀಯ ಸ್ವಾತಂತ್ರ್ಯ” ಎಂಬ ಒಂದು ಕಿರುಪುಸ್ತಕವನ್ನು ಪ್ರಕಟಿಸಿದೆ. 1947ರಲ್ಲಿ ತಿರುವಾವಡುತುರೈ ಅಥೀನಮ್ ಪರವಾಗಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ರಾಜದಂಡವನ್ನು ಹೇಗೆ ಅರ್ಪಿಸಲಾಯಿತು ಎಂಬುದನ್ನು ಪುಸ್ತಕವು ವಿವರಿಸುತ್ತದೆ: “ಭಾರತದ ಕೊನೆಯ ಗವರ್ನರ್ ಆಗಿದ್ದ ಲಾರ್ಡ್ ಮೌಂಟ್‌ ಬ್ಯಾಟನ್, ನೆಹರು ಅವರನ್ನು ಕರೆದು ನಾವು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಲಿದ್ದೇವೆ ಎಂದು ಹೇಗೆ ಸಂಕೇತಿಸಬೇಕೆಂದು ಕೇಳಿದರು, ಗೊಂದಲಕ್ಕೊಳಗಾದ ನೆಹರೂ, ಇದಕ್ಕೆ ತಕ್ಷಣ ಉತ್ತರಿಸಲಿಲ್ಲ. ಆಗ ಹಿರಿಯರಾದ ರಾಜಾಜಿಯ ಬಳಿಗೆ ಬಂದು, ಈ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿದರು. ಕೂಡಲೇ ರಾಜಾಜಿ, ‘ಚಿಂತೆ ಮಾಡಬೇಡಿ, ತಮಿಳುನಾಡಿನಲ್ಲಿ ರಾಜರು ತಮ್ಮ ಆಡಳಿತವನ್ನು ಬದಲಾಯಿಸಿದಾಗ, ರಾಜಗುರುವಾದವರು ಹೊಸ ರಾಜನಿಗೆ ರಾಜದಂಡವನ್ನು ಕೊಟ್ಟು ಆಶೀರ್ವದಿಸುತ್ತಾರೆ; ಅದೇ ರೀತಿ ನಾವೂ ಕೂಡ ಒಬ್ಬ ಗುರುಗಳ ಮೂಲಕ ರಾಜದಂಡ ಪಡೆದು ಆಡಳಿತ ಬದಲಾವಣೆ ಮಾಡಬಹುದು’ ಎಂದು ಹೇಳಿದರು. ಆ ಸಮಯದಲ್ಲಿ, ರಾಜಾಜಿ ಅವರು ಭಾರತದ ಶೈವ ಮಠಗಳಲ್ಲಿ ಒಂದಾದ ತಿರುವಾವಡುತುರೈ ಅಥೀನ ಮಠದ 20 ನೇ ಗುರುಮಕ ಸನ್ನಿಧಾನವಾಗಿ ಆಶೀರ್ವದಿಸಲ್ಪಟ್ಟ ಶ್ರೀ ಅಂಬಲವನ ದೇಶಿಕ ಮೂರ್ತಿಯನ್ನು (1937-1951) ಸಂಪರ್ಕಿಸಿ, ಆಡಳಿತ ಬದಲಾವಣೆಗೆ ಪುಣ್ಯ ಕರ್ಮಗಳನ್ನು ನೆರವೇರಿಸಿ ಎಂದು ವಿನಮ್ರವಾಗಿ ವಿನಂತಿಸಿದರು ಎಂದು ಹೇಳಲಾಗಿದೆ. ಇದನ್ನು ಅನುಸರಿಸಿ, ಚೆನ್ನೈನ ಪ್ರಸಿದ್ಧ ಉಮ್ಮಿಡಿ ಬಂಗಾರು ಚೆಟ್ಟಿಯಾರ್ ಆಭರಣ ಮಳಿಗೆಯಲ್ಲಿ ಚಿನ್ನದ ರಾಜದಂಡವನ್ನು ತಯಾರಿಸಲಾಯಿತು, ಅದರ ಮೇಲೆ ಗೂಳಿಯ (ನಂದಿ) ಶೈವ ಚಿಹ್ನೆಯನ್ನು ಕೂರಿಸಲಾಯಿತು, ರಾಜಾಜಿಯವರ ಏರ್ಪಾಡಿನ ಮೇರೆಗೆ ಒಂದು ಗುಂಪು ಖಾಸಗಿ ವಿಮಾನದಲ್ಲಿ ಹೊರಟಿತು, ಸ್ವಾತಂತ್ರ್ಯದ ಸಂದರ್ಭದಲ್ಲಿ ರಾಜಾಜಿ ಡಾ.ರಾಜೇಂದ್ರ ಪ್ರಸಾದ್ ಅವರ ಉಪಸ್ಥಿತಿಯಲ್ಲಿ, ಪಂಡಿತ್ ಜವಾಹರಲಾಲ್ ನೆಹರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಉನ್ನತ ಅಧಿಕಾರಿಗಳು ಎಲ್ಲರೂ ಸುತ್ತುವರೆದರು, 14 ಆಗಸ್ಟ್ 1947 ರಾತ್ರಿ 11.45 ಕ್ಕೆ, ಲಾರ್ಡ್ ಮೌಂಟ್ ಬ್ಯಾಟನ್ ಅವರಿಗೆ ಚಿನ್ನದ ರಾಜದಂಡವನ್ನು ನೀಡಿದರು ಮತ್ತು ಅದರ ಮೇಲೆ ಪವಿತ್ರ ನೀರನ್ನು ಸಿಂಪಡಿಸಿದರು, ಭಗವಂತನ ನಾಮವನ್ನು ಜಪಿಸಿದರು ಮತ್ತು ಅದನ್ನು ಪಂಡಿತ್ ಜವಾಹರಲಾಲ್ ನೆಹರು ಅವರಿಗೆ ಹಸ್ತಾಂತರಿಸಿದರು, ಅವರು ಸರ್ಕಾರದ ಜವಾಬ್ದಾರಿಯನ್ನು ವಹಿಸಿಕೊಂಡರು.

ಆದರೆ ಇದು ಸಂಪೂರ್ಣ ಕಥೆಯಾಗಿದೆ. ಆರೆಸ್ಸೆಸ್ ಬಿಜೆಪಿಯಿಂದ ಈ ಮಿಥ್ಯೆಯನ್ನು ಸೃಷ್ಟಿಸಲಾಗಿದೆ ಎಂದು ಶಂಕಿಸಲಾಗಿದೆ. ಏಕೆಂದರೆ ಅದೇ ಪುಸ್ತಕದ ಏಳನೇ ಪುಟದಲ್ಲಿ “ಏಪ್ರಿಲ್ 19, 2022 ರಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ತಿರುವಾವಡುತುರೈ ಅಥೀನಂ ಪ್ರಧಾನ ಮಠಕ್ಕೆ ಬಂದು ಶ್ರೀ ಶ್ರೀ 24 ನೇ ಗುರುಮಕ ಸನ್ನಿಧಾನಂ ಅವರನ್ನು ಭೇಟಿಯಾಗಿ ಸ್ವಾತಂತ್ರ್ಯ ರಾಜದಂಡದ ಬಗ್ಗೆ ವಿಚಾರಿಸಿದರು” ಎಂದು ಉಲ್ಲೇಖಿಸಲಾಗಿದೆ. ರಾಜ್ಯಪಾಲ ರವಿ ಬಂದು, ರಾಜದಂಡದ ಬಗ್ಗೆ ಏನನ್ನು ಹೇಳಬೇಕೆಂದಿದ್ದರೋ ಅದನ್ನೇ ಪುಸ್ತಕವಾಗಿ ಪ್ರಕಟಿಸಿದರು ಎಂದು ಭಾವಿಸಲು ಅವಕಾಶವಿದೆ. ಯಾಕೆಂದರೆ, ಅದನ್ನೇ ಈಗ ಅಮಿತ್ ಶಾ ಮತ್ತು ಆರ್ ಎಸ್ ಎಸ್ ಬಿಜೆಪಿ ಮುಖವಾಣಿಗಳು ಹಬ್ಬಿಸುತ್ತಿವೆ.

ಮೌಂಟ್ ಬ್ಯಾಟನ್ ಎಲ್ಲಿದ್ದರು? : ಅವರ ಪ್ರಕಾರ, ಅಂತಹ ಘಟನೆಗಳು ಆಗಸ್ಟ್ 14, 1947 ರಂದು ನಿಜವಾಗಿ ನಡೆದ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ. ತಿರುವಾವಡುತುರೈ ಅಥೀನಾ ಅವರು ಪ್ರಕಟಿಸಿರುವ ಪುಸ್ತಕದಲ್ಲಿಯೂ ಮೇಲಿನ ದೃಶ್ಯಗಳಂತೆ ಛಾಯಾಚಿತ್ರವಿಲ್ಲ. ಹೆಚ್ಚಿನ ಧಾರ್ಮಿಕ ಸುದ್ದಿ ಅಥವಾ ಪತ್ರಿಕಾ ವರದಿಗಳಿಲ್ಲ. ಹಾಗೇನಾದರೂ ಇದ್ದರೆ, ಅದೇ ಪ್ರಮುಖ ಸುದ್ದಿಯಾಗಿ ಬಿತ್ತರವಾಗುತ್ತಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಐತಿಹಾಸಿಕ ದಾಖಲೆಗಳಲ್ಲಿ, ಅಥೀನದಿಂದ ಬಂದ ಜನರು ನೆಹರೂಗೆ ರಾಜದಂಡವನ್ನು ಹಸ್ತಾಂತರಿಸುವ ಛಾಯಾಚಿತ್ರಗಳನ್ನು ಒಳಗೊಂಡಿವೆ, ಆದರೆ ಮೌಂಟ್ ಬ್ಯಾಟನ್ ಗೆ ಯಾರೂ ರಾಜದಂಡವನ್ನು ಹಸ್ತಾಂತರಿಸಲಿಲ್ಲ. ಆ ದಿನ ಮೌಂಟ್‌ ಬ್ಯಾಟನ್ ನಿಜವಾಗಿ ಎಲ್ಲಿದ್ದರು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿ.ಪಿ.ಮೆನನ್ ಅವರ “ದಿ ಟ್ರಾನ್ಸ್ಫರ್ ಆಫ್ ಪವರ್ ಇನ್ ಇಂಡಿಯಾ” ಪುಸ್ತಕವು ಅಧಿಕಾರದ ವರ್ಗಾವಣೆಯ ಕ್ಷಣಗಳ ಬಗ್ಗೆ ವಿವರವಾಗಿ ಹೇಳುತ್ತದೆ.

10 ಜುಲೈ 1947 ರಂದು ಪಾಕಿಸ್ತಾನ ಮತ್ತು ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕಾದಾಗ ವೈಸರಾಯ್ ಮೌಂಟ್‌ಬ್ಯಾಟನ್‌ರ ಅಜೆಂಡಾ 14-15 ಆಗಸ್ಟ್‌ನಲ್ಲಿ ನಿರ್ಧರಿಸಲಾಯಿತು. ಬ್ರಿಟನ್ನಿನ ಸುಂದರ್ಲಾಂಡ್ ವಿಶ್ವವಿದ್ಯಾನಿಲಯ (University of Sunderland) ದಲ್ಲಿ ಇರಿಸಲಾಗಿರುವ ಲಾರ್ಡ್ ಮೌಂಟ್ ಬ್ಯಾಟನ್ ಅವರ ಸಂಬಂಧಿತ ದಾಖಲೆಗಳ ಪ್ರಕಾರ, ಅವರು ಆಗಸ್ಟ್ 14 ರಂದು ಬೆಳಿಗ್ಗೆ 8 ಗಂಟೆಗೆ ದೆಹಲಿಯಿಂದ ಹೊರಟು 11.30 ಕ್ಕೆ ಕರಾಚಿ ತಲುಪಿದರು; ಪಾಕಿಸ್ತಾನದ ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಮುಗಿಸಿ ಅಲ್ಲಿಂದ ಮಧ್ಯಾಹ್ನ 3.30ಕ್ಕೆ ಹೊರಟು ರಾತ್ರಿ 7.00 ಗಂಟೆಗೆ ದೆಹಲಿ ತಲುಪಿದರು. ಅದಾದ ನಂತರ ಆಗಸ್ಟ್ 15 ರಂದು ಬೆಳಗ್ಗೆ 10 ಗಂಟೆಗೆ ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಅವರ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11.45ಕ್ಕೆ ರಾಜದಂಡವನ್ನು ತೆಗೆದುಕೊಂಡು ಹೋಗಿ ಪುಣ್ಯಜಲವನ್ನು ಸಿಂಪಡಿಸಿ ನೆಹರೂ ಅವರಿಗೆ ನೀಡಿದ ಐತಿಹಾಸಿಕ ದಾಖಲೆಗಳಿಲ್ಲ. ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ಹಸ್ತಾಂತರದ ಏಕೈಕ ನಿಜವಾದ ಸಂಕೇತವೆಂದರೆ ಮಧ್ಯರಾತ್ರಿಯಲ್ಲಿ ಬ್ರಿಟಿಷ್ ಯೂನಿಯನ್ ಜ್ಯಾಕ್ ಧ್ವಜವನ್ನು ಇಳಿಸುವುದು ಮತ್ತು ಭಾರತೀಯ ತ್ರಿವರ್ಣ ಧ್ವಜವನ್ನು ಏರಿಸುವುದು, ನಂತರ ದೇಶದೆಲ್ಲೆಡೆ ಜನರ ಸಡಗರ, ಸಂಭ್ರಮ ಸಡಗರದಿಂದ ಆಚರಿಸಲಾಯಿತು.

‘ಸಮಯ’ ಕುರಿತು ವ್ಯಾಖ್ಯಾನ : ಅಥೀನಮ್ ಮಠದ ಸದಸ್ಯರು ನೆಹರೂ ಅವರನ್ನು ಭೇಟಿಯಾಗಿ ರಾಜದಂಡ ನೀಡಿ ಗೌರವ ಸೂಚಿಸಿದ್ದು ಸರ್ಕಾರದ ಅಧಿಕೃತ ಆಡಳಿತ ಬದಲಾವಣೆಯ ಅಜೆಂಡಾ ಅಲ್ಲ. ಅದಕ್ಕೂ ಆಡಳಿತ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ಇದು ನೆಹರೂ ಅವರ ಮನೆಯಲ್ಲಿ ನಡೆದ ಸೌಜನ್ಯದ ಕಾರ್ಯಕ್ರಮವಾಗಿತ್ತು. ಈ ನಿಟ್ಟಿನಲ್ಲಿ, ಆಗಸ್ಟ್ 25, 1947 – ನ್ಯೂಯಾರ್ಕ್‌ನಿಂದ ಪ್ರಕಟವಾದ ಟೈಮ್ ಮ್ಯಾಗಜೀನ್ ಈ ಕೆಳಗಿನಂತೆ ವಿವರಿಸುತ್ತದೆ: “ದಕ್ಷಿಣ ಭಾರತದ ತಂಜಾವೂರಿನಲ್ಲಿರುವ ಮಠದ ಮುಖ್ಯಸ್ಥರಾದ ಶ್ರೀ ಅಂಬಲವನ ದೇಶಿಕರ ಇಬ್ಬರು ರಾಯಭಾರಿಗಳು ಆಗಮಿಸಿದ್ದರು. ಭಾರತದ ಮೊದಲ ನಿಜವಾದ ರಾಷ್ಟ್ರದ ಮುಖ್ಯಸ್ಥರಾದ ಜವಾಹರಲಾಲ್ ನೆಹರು ಅವರು ಪ್ರಾಚೀನ ಕಾಲದ ಭಾರತೀಯ ರಾಜರಂತೆ ಹಿಂದೂ ಸಂತರಿಂದ ಅಧಿಕಾರದ ಸಂಕೇತವನ್ನು ಪಡೆಯಬೇಕೆಂದು ಅಂಬಲವನ ದೇಶಿಕರು ಭಾವಿಸಿದರು. ಆ ದೂತರೊಂದಿಗೆ ನಾದಸ್ವರ ವಿದ್ವಾನ್ (ಡಿ.ಕೆ. ರಾಜರತ್ನಂ ಪಿಳ್ಳೆ) ಕೂಡ ಬಂದರು. ಅವರು ಆಗಸ್ಟ್ 14 ರ ಸಂಜೆ ಹಳೆಯ ಬೋರ್ಡ್ ಕಾರಿನಲ್ಲಿ ನೆಹರೂ ಅವರ ಮನೆಯ ಕಡೆಗೆ ಮೆರವಣಿಗೆಯಲ್ಲಿ ಹೊರಟರು. ಹಾಗೆ ಹೋಗುವಾಗ 100 ಅಡಿಗೊಮ್ಮೆ ನಿಲ್ಲಿಸಿ ಸುಮಾರು 15 ನಿಮಿಷಗಳ ಕಾಲ ನಾದಸ್ವರ ಮೊಳಗಿಸಿದರು. ಇನ್ನೊಬ್ಬರು ದೊಡ್ಡ ಬೆಳ್ಳಿಯ ತಟ್ಟೆಯನ್ನು ಹೊತ್ತಿದ್ದರು. ಆ ಬೆಳ್ಳಿಯ ತಟ್ಟೆಯಲ್ಲಿ ಜರಿಯುಳ್ಳ ಪೀತಾಂಬರವಿತ್ತು.

ಕೊನೆಗೆ ನೆಹರೂ ಅವರ ಮನೆ ತಲುಪಿದ ನಾದಸ್ವರ ವಿದ್ವಾನ್ ನಾದಸ್ವರ ಪಠಿಸಲು ಆರಂಭಿಸಿದರು. ಇನ್ನು ಕೆಲವರು ನೆಹರೂ ಅವರ ಕರೆಗಾಗಿ ಕಾಯುತ್ತಿದ್ದರು. ನಂತರ ಅವರು ಮನೆಯೊಳಗೆ ಪ್ರವೇಶಿಸಿದರು. ಆಗ ಜಿಂಕೆಯ ಕೂದಲುಗಳಿಂದ ಮಾಡಿದ ಬೀಸಣಿಗೆಯಿಂದ ಅವರಿಗೆ ಬೀಸಿದರು. ಒಬ್ಬ ಸನ್ಯಾಸಿಯು 5 ಅಡಿ ಎತ್ತರದ ಚಿನ್ನದ ಲೇಪಿತ 2 ಇಂಚಿನ, ಭಾರವಾದ ರಾಜದಂಡವನ್ನು ಹಿಡಿದಿದ್ದನು. ಯಾರೋ ನೆಹರೂ ಅವರ ತಲೆಗೆ ತಂಜಾವೂರಿನ ಪವಿತ್ರ ಜಲವನ್ನು ಎರಚಿದರು. ನೆಹರೂ ಅವರ ಹಣೆಗೆ ವಿಭೂತಿ ಬಳಿದರು. ಅವರು ನೆಹರೂ ಅವರಿಗೆ ಪೀಠದಲ್ಲಿ ಸುತ್ತಿದ ರಾಜದಂಡವನ್ನು ನೀಡಿದರು. ಅಂದು ಬೆಳಗ್ಗೆ ನಟರಾಜನಿಗೆ ಮಾಡಿಟ್ಟಿದ್ದ ಪ್ರಸಾದವನ್ನೂ ಆತನಿಗೆ ಕೊಟ್ಟು ವಿಮಾನದಲ್ಲಿ ತರಲಾಯಿತು” ಎಂದು ಟೈಮ್ ವರದಿ ಮಾಡಿದೆ. ನೆಹರೂಗೆ ರಾಜದಂಡ ಹಸ್ತಾಂತರಕ್ಕೆ ಸಂಬಂಧಿಸಿದ ಅತ್ಯಂತ ನಿಖರವಾದ ಘಟನೆಗಳನ್ನು ವಿವರಿಸುವ ಐತಿಹಾಸಿಕ ವರದಿ ಇದು. ಇದಕ್ಕೆ ವ್ಯತಿರಿಕ್ತವಾಗಿ ಈಗ ಆರೆಸ್ಸೆಸ್-ಬಿಜೆಪಿಯವರು ಬಿಚ್ಚಿಟ್ಟಿರುವುದು ಒಂದು ಕಟ್ಟುಕಥೆ.

ಸಂವಿಧಾನವೇ ಅಧಿಕೃತವಾಗಿದೆ :ಭಾರತದಲ್ಲಿ ರಾಜಪ್ರಭುತ್ವ ರದ್ದಾಗಿದೆ. ಜನರ ಚಳುವಳಿಯಿಂದ ವಸಾಹತುಶಾಹಿ ಆಡಳಿತವೂ ಉರುಳಿದೆ. 75 ವರ್ಷಗಳ ಕಾಲ ಗಣರಾಜ್ಯವಾಗಿದೆ. ಭಾರತೀಯ ಪ್ರಜಾಪ್ರಭುತ್ವ ಆಡಳಿತದಲ್ಲಿ ಯಾವುದೇ ವ್ಯಕ್ತಿಯ ರಾಜದಂಡಕ್ಕೆ ಸ್ಥಾನವಿಲ್ಲ. ಗಣರಾಜ್ಯವು ಅನುಮೋದಿಸಿದ ಸಂವಿಧಾನವು ಸಂಸತ್ತಿನ ಮಧ್ಯಭಾಗದಲ್ಲಿ ಇಡಬೇಕೇ ವಿನಃ ರಾಜರು ಮತ್ತು ಪುರೋಹಿತರನ್ನು ಪವಿತ್ರಗೊಳಿಸುವ ರಾಜದಂಡವಲ್ಲ.

Donate Janashakthi Media

Leave a Reply

Your email address will not be published. Required fields are marked *