ಪಾಠ ಮಾಡೋದ್‌ ಬಿಟ್ಟು , ಆರ್‌ಎಸ್‌ಎಸ್ ಲಾಠಿ ಹಿಡಿದ ಪ್ರಾಧ್ಯಾಪಕರು!

ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಮೂವರು ಸಹಾಯಕ ಪ್ರಾಧ್ಯಾಪಕರು ಗಣವೇಷಧಾರಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ದ ಲಾಠಿ ಹಿಡಿದು ವಿಶ್ವವಿದ್ಯಾಲಯದ ಆವರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.

ಕೇಂದ್ರೀಯ ವಿವಿಯಲ್ಲಿ ಅತ್ಯಂತ ನಿರ್ಭಯದಿಂದ ಸರಕಾರಿ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಒಕ್ಕೊರಲಿ ದನಿ ಎದ್ದಿದ್ದು, ಪ್ರಾಧ್ಯಾಪಕ ಇಂತಹ ನಡವಳಿಕೆಯನ್ನು ಖಂಡಿಸುತ್ತಿದ್ದಾರೆ.

ಇದನ್ನು ಓದಿ: ಕನ್ನಡದ ‘ಆರ್‌ಎಸ್‌ಎಸ್‌: ಆಳ ಮತ್ತು ಅಗಲ’ ಪುಸ್ತಕ ಐದು ಭಾಷೆಗೆ ಅನುವಾದ

ವಿದ್ಯಾರ್ಥಿಯೊಬ್ಬ ಸಹಾಯಕ ಪ್ರಾಧ್ಯಾಪಕರುಗಳಾದ ಸಾರ್ವಜನಿಕ ಆಡಳಿತ ವಿಭಾಗದ ಡಾ.ಅಲೋಕ್ ಕುಮಾರ್ ಗೌರವ್‌, ಮನಃಶಾಸ್ತ್ರ ವಿಭಾಗದ ಡಾ.ವಿಜಯೇಂದ್ರ ಪಾಂಡೆ ಮತ್ತು ಜೀವ ವಿಜ್ಞಾನ ವಿಭಾಗದ ಡಾ.ರಾಕೇಶ್ ಕುಮಾರ್ ಅವರೊಂದಿಗೆ ಮೊಬೈಲ್‌ ನಲ್ಲಿ ಫೋಟೋ ಹಿಡಿದುಕೊಂಡಿರುವ ಛಾಯಾಚಿತ್ರ ವೈರಲ್‌ ಆಗುತ್ತಿದ್ದಂತೆ ಸಹಾಯಕ ಪ್ರಾಧ್ಯಾಪಕರು ಆರ್‌ಎಸ್‌ಎಸ್‌ ಶಿಬಿರದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ವಿಶ್ವವಿದ್ಯಾಲಯದ ಆವರಣದಲ್ಲಿಯೇ ಆರ್‌ಎಸ್‌ಎಸ್‌ ಪಥಸಂಚಲನ ನಡೆದಿದ್ದು, ಈ ಸಂದರ್ಭದಲ್ಲಿ ಛಾಯಾಚಿತ್ರವನ್ನು ತೆಗೆಯಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಯುಕೆ ಅಧಿಕಾರಿಯೊಬ್ಬರು, ‘ವಿಶ್ವವಿದ್ಯಾಲಯದ ಗಮನಕ್ಕೆಬಾರದೆ ಬೋಧನೆ ಮತ್ತು ಸಂಶೋಧನೆಗಳು ಹೊರತುಪಡಿಸಿ ಇನ್ಯಾವುದೇ ಚಟುವಟಿಕೆಗಳಲ್ಲಿ ಬೋಧಕ ವರ್ಗವು ತೊಡಗಬಾರದು ಮತ್ತು ವಿಶ್ವವಿದ್ಯಾಲಯದ ನೌಕರರು ಯಾವ ಸಂಘಟನೆಯಿಂದಿಗೂ ಗುರುತಿಸಿಕೊಳ್ಳಬಾರದು ಎಂಬ ನಿಯಮವಿದೆ’ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಇದನ್ನು ಓದಿ: ಸಮಾಜ ಮುಂದಕ್ಕೆ ಚಲಿಸುತ್ತಿದ್ದರೆ ನಮ್ಮನ್ನು ಹಿಂದಕ್ಕೆ ಕೊಂಡೊಯ್ಯುವ ಆರ್‌ಎಸ್‌ಎಸ್‌

‘ಇಲ್ಲಿನ ಅಧ್ಯಾಪಕರು ಬೋಧನೆಗೆ ಮಾತ್ರ ಸೀಮಿತರಾಗಬೇಕು. ಬೇರೆ ಚಟುವಟಿಕೆ ನಡೆಸಬಾರದು. ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಆರ್‌ಎಸ್‌ಎಸ್‌ ಗಣವೇಷಧಾರಿಗಳಾಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲಿಸುವೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಸವರಾಜ ಡೋಣುರ ತಿಳಿಸಿದ್ದಾರೆ.

ವಿವಿ ನಿಯಮದ ಪ್ರಕಾರ ಸಂಘ-ಸಂಸ್ಥೆಗಳಲ್ಲಿ ಭಾಗಿಯಾಗುವಂತಿಲ್ಲ

ಅಖಿಲ ಭಾರತ ಜನವಾದಿ ಮಹಿಳಾ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ ನೀಲಾ ಅವರು ಪ್ರತಿಕ್ರಿಯೆ ನೀಡಿದ್ದು, ಕೇಂದ್ರೀಯ ವಿಶ್ವವಿದ್ಯಾಲಯದ ಆರ್‌ಎಸ್‌ಎಸ್‌ ಪ್ರಣೀತ ಉಪಕುಲಸಚಿವರ ಪೂರ್ಣ ಬೆಂಬಲದೊಂದಿಗೆ ಅಲ್ಲಿನ ಸಿಬ್ಬಂದಿಗಳು ಅನಾವರಣವಾಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಮೂವರು ಸಹಾಯಕ ಪ್ರಾಧ್ಯಾಪಕರು ಆರ್‌ಎಸ್‌ಎಸ್‌ ಸಂಘದ ಗಣವೇಶಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ವಿವಿ ನಿಯಮದ ಪ್ರಕಾರ ಯಾವುದೇ ಸಂಘ-ಸಂಸ್ಥೆಗಳಲ್ಲಿ ಸದಸ್ಯರು ಭಾಗವಹಿಸಬಾರದೆಂದು ನಿಯಮವಿದ್ದರೂ ಸಹ ಆರ್‌ಎಸ್‌ಎಸ್‌ ಶಾಖಾ ಶಿಬಿರದಲ್ಲಿ ಭಾಗಿಯಾಗಿರುವುದನ್ನು ಖಂಡಿಸುವೆ ಎಂದಿದ್ದಾರೆ.

ಇದಕ್ಕೆ ಪೂರ್ಣ ಕುಮ್ಮಕ್ಕು ವಿಸಿಯವರದ್ದಾಗಿದೆ. ಆರ್‌ಎಸ್‌ಎಸ್ ನಿಷೇಧಗೊಂಡ ಸಂಘಟನೆಯಲ್ಲ ಎಂಬುದು ಸ್ವತಃ ವಿಸಿಯವರ ಉವಾಚವಾಗಿದೆ. ಹಾಗಾದರೆ ಆರ್ ಎಸ್ ಎಸ್ ಶಾಖೆಗಳನ್ನು ತೆರೆದು ನಡೆಸುವಲ್ಲಿ ವಿವಿ ಆಡಳಿತವೇ ಆಸಕ್ತಿ ಹೊಂದಿದೆ ಎಂಬುದು ರುಜುವಾದಂತೆ. ಒಂದು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಸಾಂವಿಧಾನಿಕ ಮೌಲ್ಯಕ್ಕನುಸರಿಸಿ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕೆ ಹೊರತು ಮತೀಯ ನೆಲೆಗಟ್ಟಿನ ಚಿಂತನೆಗಳನ್ನಲ್ಲ. ಈ ಹಿಂದೆಯೂ ಈ ಕೇಂದ್ರೀಯ ವಿವಿಯೊಳಗೆ ಕೋಮು ಚಟಿವಟಿಕೆ ನಡೆಸುತ್ತಿರುವುದಕ್ಕೆ ವಿರೋಧ ಎದುರಿಸಿತ್ತು.

ಇದನ್ನು ಓದಿ: ಆರ್‌ಎಸ್‌ಎಸ್‌ ಕುರಿತಂತೆ ಇರುವ ನನ್ನ ತಕರಾರು ಅಧ್ಯಾತ್ಮಿಕವಾದುದು: ಸ್ವಾಮಿ ಅಗ್ನಿವೇಶ್

ವಿವಿಯಲ್ಲಿ ಸಂಶೋಧನಾತ್ಮಕ, ಶೈಕ್ಷಣಿಕ ಚಟುವಟಿಕೆ ಕುಸಿದು ಹೋಗುತ್ತಿದ್ದು, ಪ್ರಶ್ನಿಸುವ ವಿದ್ಯಾರ್ಥಿಗಳನ್ನು ಮೂಲೆಗುಂಪು ಮಾಡುವ ಅಥವ ಅವರನ್ನು ಪೋಲಿಸ್ ಮೂಲಕ ಹಣಿಯುವ ಷಡ್ಯಂತ್ರ ಮಾಡಲಾಗುತ್ತಿದೆ. ಒಟ್ಟಾರೆ ವಿವಿಯಲ್ಲಿ ಮನುಸ್ಮೃತಿ ಜಾರಿಗೊಳಿಸುವ ಹುನ್ನಾರುಗಳು ಹುರಿಗೊಳ್ಳುತ್ತಿರುವುದು ಸ್ಪಷ್ಟವಾಗಿದೆ ಮತ್ತು ವಿವಿಯು ನಮ್ಮ ನಾಡಿನ ಸೌಹಾರ್ದ ಪರಂಪರೆಯನ್ನು ನಾಶ ಮಾಡುವ ಷಡ್ಯಂತ್ರಕ್ಕೆ ಕೈ ಹಾಕಿದೆ.  ಇದನ್ನು ತೀವ್ರವಾಗಿ ಪ್ರತಿರೋಧಿಸಲೇಬೇಕೆಂದು ನೀಲಾ ಅವರು ತಿಳಿಸಿದ್ದಾರೆ.

ಮೂವರು ಪ್ರಾದ್ಯಾಪಕರುಗಳು ವಿವಿಯ ಸರಕಾರಿ ನಿಯಮ ಉಲ್ಲಂಘನೆ ಮಾಡಿರುವುದರಿಂದ ಕೂಡಲೆ ಅವರನ್ನು ಅಮಾನತ್ತು ಮಾಡಬೇಕೆಂದು ಎಂದು ಅವರು ಆಗ್ರಹಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *