ಆರ್‌ಎಸ್‌ಎಸ್‌-ಬಿಜೆಪಿ ನಕಲಿ ದೇಶಭಕ್ತರು: ರಾಷ್ಟ್ರಧ್ವಜ, ಸಂವಿಧಾನದ ಬಗ್ಗೆ ಗೌರವವಿಲ್ಲ

ಬೆಂಗಳೂರು: ಭಾರತೀಯ ಜನತಾ ಪಕ್ಷದಲ್ಲಿರುವವರಿಗೆ ಮೊದಲಿನಿಂದಲೂ ರಾಷ್ಟ್ರಧ್ವಜ, ಸಂವಿಧಾನದ ಮೇಲೆ ಗೌರವವಿಲ್ಲ ಎಂದು ಪ್ರಿಯಾಂಕ ಖರ್ಗೆ, ಶರತ್‌ ಬಚ್ಚೆಗೌಡ, ಅನಿಲ್‌ ಚಿಕ್ಕಮಾದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಶ್ವರಪ್ಪ ರಾಜೀನಾಮೆಗಾಗಿ ನಾವು ಧರಣಿ ನಡೆಸುತ್ತಿದ್ದೇವೆ. ಆದರೆ, ಭಗವಾಧ್ವಜ ಬಗ್ಗೆ ನೀಡಿದ ಹೇಳಿಕೆಯನ್ನು ಈಶ್ವರಪ್ಪ ಈಗಲೂ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ಅಸಂವಿಧಾನಿಕ ಹೇಳಿಕೆ. ಅವರ ಹೇಳಿಕೆ ಕುರಿತು ನಮಗೆ ಆಶ್ಚರ್ಯವಿಲ್ಲ. ಏಕೆಂದರೆ ಅವರು ಆರ್‌ಎಸ್‌ಎಸ್‌ ನಿಂದ ತರಬೇತಿ ಪಡೆದವರು. ಇತಿಹಾಸ ಪುಟ ತೆಗೆದು ನೋಡಿದರೆ, ಆರ್‌ ಎಸ್‌ ಎಸ್‌ ನಿಜ ಬಣ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ರಾಷ್ಟ್ರ ವಾದಿ ಎಂದು ಸಾಬೀತುಪಡಿಸಲು ಈಗ ಸುವರ್ಣ ಅವಕಾಶ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತಮ್ಮ ಸಂಪುಟದಿಂದ ಸಚಿವ ಈಶ್ವರಪ್ಪ ಅವರನ್ನು ಉಚ್ಛಾಟಿಸಿ ನಿಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

1930ರಲ್ಲಿ ಆರ್‌ ಎಸ್‌ ಎಸ್‌ ಮುಖ್ಯಸ್ಥ ಹೆಗ್ಡೇವಾರ್‌ ತ್ರಿವರ್ಣ ಧ್ವಜ ಹಾರಿಸಬಾರದೆಂದು ಹೇಳಿದ್ದರು. ಆರ್‌ ಎಸ್‌ ಎಸ್‌ ಶಾಖೆಯಲ್ಲಿ ಭಗವಾಧ್ವಜ ಹಾರಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ. 1947ರಲ್ಲಿ ಆರ್‌ಎಸ್‌ಎಸ್‌ ಪತ್ರಿಕೆಯಲ್ಲಿ ರಾಷ್ಟ್ರಧ್ವಜ ಕೆಟ್ಟದಿದೆ, ಈ ತ್ರಿವರ್ಣ ಧ್ವಜ ದುಷ್ಟ ಪರಿಣಾಮ ಬೀರುತ್ತೆ. ಆಪತ್ತು ಬರುತ್ತೆ ಎಂದು ಬರೆದಿದ್ದಾರೆ ಎಂದು ವಿವರಿಸಿದರು.

ಆರ್‌.ಎಸ್‌.ಎಸ್‌.ನ ನಾಥೂರಾಮ್‌ ಗೋಡ್ಸೆ ಗಾಂಧಿಯನ್ನು ಕೊಂದಿದ್ದಾರೆ. ಅಂದು ಗೃಹ ಮಂತ್ರಿ ಪಟೇಲ್‌ ಅವರು ಆರ್‌ಎಸ್‌ಎಸ್‌ ನಿಷೇಧ ಮಾಡಿದ್ದರು. ತದನಂತರ ಕೆಲವರ್ಷಗಳ ಬಳಿಕ ಷರತ್ತು ಬದ್ಧವಾಗಿ ನಿಷೇಧವನ್ನು ವಾಪಸ್ಸು ಪಡೆಯಲಾಗುತ್ತದೆ.

ಬಿಜೆಪಿಯವರಿಗೆ ರಾಷ್ಟ್ರ ಧ್ವಜದ ಬಗ್ಗೆ ವಕ್ರ ದೃಷ್ಟಿ ಏಕೆ? ಪದೇ ಪದೇ ರಾಷ್ಟ್ರಧ್ವಜ ಹಾಗೂ ಸಂವಿಧಾನಕ್ಕೆ ಬಿಜೆಪಿ ಏಕೆ ಅವಮಾನ ಮಾಡುತ್ತಿದೆ? ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಭಾಗಿಯಾಗಿಲ್ಲ. ಅದಕ್ಕೆ ಅವರಿಗೆ ಗೌರವವಿಲ್ಲ. ರಾಷ್ಟ್ರ ಧ್ವಜದ ಬಗ್ಗೆ ಪೂರ್ವಿಕರ ತ್ಯಾಗ ಬದಲಿದಾನದ ಬಗ್ಗೆ ಬಿಜೆಪಿಗೆ ಅರಿವಿಲ್ಲ ಎಂದು ಹೇಳಿದರು.

ಆರ್‌ಎಸ್‌ಎಸ್‌ ನವರು 52 ವರ್ಷ ಬಳಿಕ ರಾಷ್ಟ್ರ ಧ್ವಜ ಹಾರಿಸಿದರು. ಅವರು 2002ರ ನಂತರ ರಾಷ್ಟ್ರ ಧ್ವಜ ಹಾರಿಸುವ ಪ್ರಕ್ರಿಕೆಯಲ್ಲಿ ತೊಡಗಿದರು. ಇಷ್ಟೊಂದು ವರ್ಷ ಏಕೆ ಬೇಕಿತ್ತು. ರಾಷ್ಟ್ರಧ್ವಜ ಹಾರಿಸಲು? ರಾಷ್ಟ್ರಧ್ವಜ ಬಗ್ಗೆ ಅವರಿಗೆ ನಂಬಿಕೆಯಿಲ್ಲ. ಆರ್‌ ಎಸ್‌ ಎಸ್‌ನ ಯಾರೊಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಯಾರೊಬ್ಬರೂ ಸ್ವತಂತ್ರ ಹೋರಾಟದಲ್ಲಿ ಸತ್ತಿಲ್ಲ.

ಬಿಜೆಪಿ ದೇಶಭಕ್ತಿ ಚುನಾವಣೆಗೆ ಮಾತ್ರ ಸೀಮಿತ ಎಂದು ವಾಗ್ದಾಳಿ ನಡೆಸಿದ ಅವರು, ದೇಶಕ್ಕೆ ಆರ್‌ಎಸ್‌ಎಸ್‌, ಬಿಜೆಪಿ ಕೊಡುಗೆ ಏನೂ ಇಲ್ಲ. ಹೀಗಾಗಿ ನಮಗೆ ಸಂವಿಧಾನ ಬೇಡ ಮನುಸ್ಮೃತಿಯೇ ಬೇಕು ಎಂದು ಸ್ವಾತಂತ್ರ್ಯ ನಂತರ ಆರ್‍ಎಸ್‍ಎಸ್ 120 ಬಾರಿ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಿತ್ತು ಎಂದು ಪ್ರತಿಪಾದಿಸಿದರು.

ಸಂವಿಧಾನ ಉಳಿವು ರಾಷ್ಟ್ರದ ಗೌರವದ ಆದ್ಯತೆಯ ವಿಷಯವಾಗಿದೆ. ಹೀಗಾಗಿ ನಮ್ಮ ನಾವು ಹೋರಾಟ ಅಹೋರಾತ್ರಿ ಮುಂದುವರೆಯಲಿದೆ. ಈಶ್ವರಪ್ಪನವರ ಹೇಳಿಕೆ ವಿರುದ್ಧ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೇಳಿದ್ದೇವೆ. ಅದನ್ನು ತಿರಸ್ಕರಿಸಿದ ಬಳಿಕವೇ ನಾವು ಸದನದ ಬಾವಿಗೆ ಇಳಿದು ಧರಣಿ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *