ಜನವರಿ 10 ರಿಂದ ದೇಶದಾತ್ಯಂತ RSS & BJP ವಿರುದ್ಧ ಮನೆ ಮನೆ ಭೇಟಿ ಮತ್ತು ಕರಪತ್ರ ವಿತರಣೆ – ಎಸ್‌ಕೆಎಂ

ನವದೆಹಲಿ: ಐತಿಹಾಸಿಕ ರೈತ ಹೋರಾಟಕ್ಕೆ ನಾಯಕತ್ವ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ), ಕನಿಷ್ಠ ಬೆಂಬಲ ಬಲೆ, ಸಾಲ ಮನ್ನಾ, ವಿದ್ಯುಚ್ಛಕ್ತಿ ಮಸೂದೆ ಸೇರಿದಂತೆ ಇತ್ಯಾದಿ ವಿಚಾರಗಳ ಮೇಲೆ ಹೋರಾಟಗಳನ್ನು ತೀವ್ರಗೊಳಿಸಲು ಗುರುವಾರ ತೀರ್ಮಾನಿಸಿದೆ. 2024 ರ ಜನವರಿ 10 ರಿಂದ 20 ರವರೆಗೆ ಆರೆಸ್ಸೆಸ್‌ ಮತ್ತು ಬಿಜೆಪಿಯ ಕಾರ್ಪೊರೇಟ್ ಸರ್ಕಾರವನ್ನು ಎದುರಿಸಲು ಮನೆ-ಮನೆ ಭೇಟಿ ಮತ್ತು ಕರಪತ್ರಗಳ ವಿತರಣೆಯ ಮೂಲಕ ಬೃಹತ್ ಜನ ಜಾಗರಣ ಅಭಿಯಾನವನ್ನು ನಡೆಸುವುದಾಗಿ ಅದು ಹೇಳಿದ್ದು, ಜೊತೆಗೆ ಗಣರಾಜ್ಯೋತ್ಸವ ದಿನದಂದು ದೇಶದ 500 ಜಿಲ್ಲೆಗಳಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸುವುದಾಗಿ ಎಸ್‌ಕೆಎಂ ತಿಳಿಸಿದೆ.

ಅಭಿಯಾನ  ಸಂಯುಕ್ತ ಕಿಸಾನ್ ಮೋರ್ಚಾದ ಅಖಿಲ ಭಾರತ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, 2024 ರಲ್ಲಿ ರೈತರು ಮತ್ತು ರೈತ ಕಾರ್ಮಿಕರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ 2024 ರಲ್ಲಿ ಹೋರಾಟವನ್ನು ತೀವ್ರಗೊಳಿಸಲು ಅದು ಕರೆ ನೀಡಿದೆ. ಕನಿಷ್ಠ ಬೆಂಬಲ ಬೆಲೆ(MSP@C2+50%) ಎಲ್ಲಾ ಬೆಳೆಗಳಿಗೆ ಮತ್ತು ಸಂಗ್ರಹಕ್ಕೆ ನೀಡುವಂತೆ ಮತ್ತು ಸಾಲ ಮನ್ನಾ ಮೂಲಕ ಸಾಲದ ಬಲೆಯಿಂದ ರೈತರ ಮುಕ್ತಿಗಾಗಿ ಹೋರಾಟ ತೀವ್ರಗೊಳ್ಳಬೇಕು ಎಂದು ಅದು ಹೇಳಿದೆ.

ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ : ಕಲ್ಲಡ್ಕ ಪ್ರಭಾಕರ್ ಭಟ್‌ನನ್ನು ಬಂಧಿಸಲ್ಲವೆಂದ ಸರ್ಕಾರ

ದೇಶದ 30.40 ಕೋಟಿ ಕುಟುಂಬಗಳಲ್ಲಿ ಕನಿಷ್ಠ 40% ರಷ್ಟು ಕುಟುಂಬಗಳನ್ನು ಒಳಗೊಳ್ಳುವ ಗುರಿಯನ್ನು ಈ ಅಭಿಯಾನ ಹೊಂದಿದ್ದು, ಇದಕ್ಕಾಗಿ ಸಿದ್ಧವಾಗಲು ರಾಜ್ಯ ಮಟ್ಟದ ಸಮನ್ವಯ ಸಮಿತಿಗಳು ತಕ್ಷಣವೇ ಸಭೆ ಸೇರುತ್ತವೆ ಎಂದು ಹೇಳಿದೆ. ವಿದ್ಯುತ್ ಖಾಸಗೀಕರಣವನ್ನು ನಿಲ್ಲಿಸುವುದು, ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ (ಲಖಿಂಪುರ ಖೇರಿ ರೈತರ ಹತ್ಯಾಕಾಂಡದ ಹಿಂದಿನ ಪ್ರಮುಖ ಪಿತೂರಿಗಾರ) ಅವರನ್ನು ವಜಾಗೊಳಿಸುವುದು ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಎಸ್‌ಕೆಎಂ ಇಟ್ಟಿದೆ.

ದೇಶದ 20 ರಾಜ್ಯಗಳಲ್ಲಿನ ಎಸ್‌ಕೆಎಂ ರಾಜ್ಯ ಘಟಕಗಳು 2024 ರ ಜನವರಿ 10 ರಿಂದ 20 ರವರೆಗೆ ಭಾರತದಾದ್ಯಂತ ಮನೆ-ಮನೆ ಭೇಟಿ ಮತ್ತು ಕರಪತ್ರಗಳ ವಿತರಣೆಯ ಮೂಲಕ ಬೃಹತ್ ಜನ ಜಾಗರಣ ಅಭಿಯಾನವನ್ನು ನಡೆಸುತ್ತವೆ ಎಂದು ರೈತ ಸಂಘಟನೆ ಹೇಳಿದೆ. “ದೊಡ್ಡ ಪ್ರಮಾಣದ ನಿರುದ್ಯೋಗ, ಅನಿಯಂತ್ರಿತ ಬೆಲೆ ಏರಿಕೆ, ಬಡತನ, ಸಾಲಬಾಧೆ ಮತ್ತು ಕಡಿವಾಣವಿಲ್ಲದ ವಲಸೆ, ರೈತರು, ಕಾರ್ಮಿಕರು ಮತ್ತು ಜನರ ಹಿತಾಸಕ್ತಿಗೆ ಹಾನಿಕರವಾದ ಬಿಜೆಪಿ ನೇತೃತ್ವದ ಮೋದಿ ಸರ್ಕಾರದ ಕಾರ್ಪೊರೇಟ್ ಪರ ಆರ್ಥಿಕ ನೀತಿಗಳನ್ನು ಬಹಿರಂಗಪಡಿಸುವುದು ಈ ಬೃಹತ್ ಅಭಿಯಾನದ ಗುರಿಯಾಗಿದೆ” ಎಂದು ಎಸ್‌ಕೆಎಂ ಹೇಳಿದೆ.

ಜಿಡಿಪಿ ದರವನ್ನು ಅವಲಂಬಿಸಿರುವ ಕಾರ್ಪೊರೇಟ್ ರಾಜ್ ಆಧಾರಿತ ಅಭಿವೃದ್ಧಿಯ ಮೋದಿ ಸರ್ಕಾರದ ನಿರೂಪಣೆಯ ವಿರುದ್ಧ ತಲಾ ಆದಾಯದಲ್ಲಿನ ಕುಸಿತ, ಬೆಳೆಯುತ್ತಿರುವ ಆದಾಯದ ಅಸಮಾನತೆ ಮತ್ತು ರೈತರಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನದ ನಿರಾಕರಣೆ ಬಗ್ಗೆ ಅಭಿಯಾನವು ಜಾಗೃತಿ ಮೂಡಿಸಲಿದೆ. ಆರೆಸ್ಸೆಸ್-ಬಿಜೆಪಿ ಆಡಳಿತದ ಆಶ್ರಯದಲ್ಲಿ ಕಾರ್ಪೊರೇಟ್ ಶೋಷಣೆಯ ವಿರುದ್ಧ ಮುಂಬರುವ ಜಂಟಿ ಮತ್ತು ಸಂಘಟಿತ ಹೋರಾಟದಗಳಲ್ಲಿ ರೈತ ಮತ್ತು ಕಾರ್ಮಿಕರು ಮನೆ ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ಹಂಚುತ್ತಾರೆ ಮತ್ತು ಈ ಅಭಿಯಾನದಲ್ಲಿ ಜನರ ಬೃಹತ್ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಎಸ್‌ಕೆಎಂ ಹೇಳಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ – ರಾಹುಲ್ ಗಾಂಧಿ

ಇಷ್ಟೆ ಅಲ್ಲದೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲಾ ಮಟ್ಟದಲ್ಲಿ 2024 ರ ಗಣರಾಜ್ಯೋತ್ಸವದ ಜನವರಿ 26 ರಂದು ಟ್ರ್ಯಾಕ್ಟರ್ ಪರೇಡ್ ಅನ್ನು ಎಸ್‌ಕೆಎಂ ನಡೆಸಲಿದ್ದು, ಕನಿಷ್ಠ 500 ಜಿಲ್ಲೆಗಳಲ್ಲಿ ಮೆರವಣಿಗೆ ನಡೆಸುವ ನಿರೀಕ್ಷೆಯಿದೆ. ಅಧೀಕೃತ ಗಣರಾಜ್ಯೋತ್ಸವ ಪರೇಡ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರೈತರಿಗೆ ಎಸ್‌ಕೆಎಂ ಮನವಿ ಮಾಡಿದ್ದು, ಈ ಔಪಚಾರಿಕ ಮೆರವಣಿಗೆಯ ಮುಕ್ತಾಯದ ನಂತರ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ ಎಂದು ಅದು ಹೇಳಿದೆ.

ಟ್ರ್ಯಾಕ್ಟರ್ ಪರೇಡ್‌ನಲ್ಲಿ ಭಾಗವಹಿಸುವ ರೈತರು ಸಂಘ ಸಂಸ್ಥೆಗಳ ಧ್ವಜಗಳೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸಲಿದ್ದು, ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಪ್ರಭುತ್ವ, ಫೆಡರಲಿಸಂ, ಜಾತ್ಯತೀತತೆ ಮತ್ತು ಸಮಾಜವಾದದ ತತ್ವಗಳನ್ನು ರಕ್ಷಿಸಲು ರೈತರು ಪ್ರತಿಜ್ಞೆ ಮಾಡಲಿದ್ದಾರೆ. ಟ್ರ್ಯಾಕ್ಟರ್‌ಗಳ ಜೊತೆಗೆ ಇತರ ವಾಹನಗಳು ಮತ್ತು ಮೋಟಾರು ಬೈಕ್‌ಗಳು ಸಹ ಮೆರವಣಿಗೆಯಲ್ಲಿ ಸೇರುತ್ತವೆ ಎಂದು ಎಸ್‌ಕೆಎಂ ಹೇಳಿದೆ.

“ಕೋಮುವಾದ ಮತ್ತು ಜಾತಿವಾದಿ ಧ್ರುವೀಕರಣದ ಮೂಲಕ ಜನರನ್ನು ಶೋಷಿಸುವ ಮತ್ತು ವಿಭಜಿಸುವ ಕಾರ್ಪೊರೇಟ್ ಕೋಮುವಾದವನ್ನು ಸೋಲಿಸುವ ಸಂಕಲ್ಪವನ್ನು ಮಾಡಲು ಜನ ಜಾಗರಣ ಅಭಿಯಾನ ಮತ್ತು ಟ್ರ್ಯಾಕ್ಟರ್ ಮೆರವಣಿಗೆಯನ್ನು ಯಶಸ್ವಿಗೊಳಿಸಿ” ಎಂದು ಎಸ್‌ಕೆಎಂ ಭಾರತದಾದ್ಯಂತ ರೈತರಿಗೆ ಕರೆ ನೀಡಿದ್ದು, ಕೇಂದ್ರ ಸರಕಾರ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದೆ.

ವಿಡಿಯೊ ನೋಡಿ: ತೀವ್ರಗೊಂಡ ಕರವೇ ಕನ್ನಡ ನಾಮಫಲಕ ಹೋರಾಟ Janashakthi Media

Donate Janashakthi Media

Leave a Reply

Your email address will not be published. Required fields are marked *