ಬೆಂಗಳೂರು : ಆನವಟ್ಟಿಯಲ್ಲಿ “ಜತೆಗಿರುವನು ಚಂದಿರ” ನಾಟಕ ಪ್ರದರ್ಶನ ತಡೆಗೆ ಸಮುದಾಯ ಕರ್ನಾಟಕ ಸಂಘಟನೆ ಖಂಡನೆ ವ್ಯಕ್ತಪಡಿಸಿದೆ. ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದು ಸಂವಿಧಾನ ವಿರೋಧಿ ಕೃತ್ಯ ಎಂದು ಸಂಘಟನೆ ಆರೋಪಿಸಿದೆ.
ಈ ಕುರಿತು ಸಮುದಾಯ ಸಂಘಟನೆಯ ರಾಜ್ಯಾಧ್ಯಕ್ಷ ಅಚ್ಯುತ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ದೇವೇಂದ್ರಗೌಡ ಪ್ರತಿಕ್ರಿಯೆ ನೀಡಿದ್ದು, ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ಜಯಂತ ಕಾಯ್ಕಿಣಿಯವರ “ಜತೆಗಿರುವನು ಚಂದಿರ” ನಾಟಕ ಪ್ರದರ್ಶನ ಭಜರಂಗ ದಳ ಮತ್ತು ಆರ್.ಎಸ್.ಎಸ್. ಕಾರ್ಯಕರ್ತರ ಒತ್ತಾಯದಿಂದಾಗಿ ಮಧ್ಯದಲ್ಲಿಯೇ ನಿಲ್ಲಿಸಬೇಕಾಯಿತು ಎಂದು ವರದಿಯಾಗಿದೆ. ಕೋಮು ಸಾಮರಸ್ಯ ಮತ್ತು ,ದೇಶದ ಐಕ್ಯತೆಯನ್ನು ಸಾರುವ ನಾಟಕವಿದು.
ಇದರಲ್ಲಿ ಮುಸ್ಲಿಂ ಸಮುದಾಯದ ಪಾತ್ರಗಳಿದ್ದವು ಎನ್ನುವುದನ್ನು ಮುಂದೆ ಮಾಡಿ ಆಕ್ಷೇಪಣೆ ಮಾಡಿ ಪ್ರದರ್ಶನ ಕ್ಕೆ ತಡೆಯೊಡ್ಡಲಾಗಿದೆ. ಇದು ಕೇವಲ ಒಂದು ನಾಟಕದ ಮೇಲೆ ಅಥವಾ ಪ್ರದರ್ಶನ ಕ್ಕೆ ಒಡ್ಡಿದ ತಡೆ ಅಲ್ಲ. ಬದಲಿಗೆ ದೇಶಾದ್ಯಂತ ಜನಸಮುದಾಯಗಳ ನಡುವೆ ಧರ್ಮ, ಜಾತಿ, ಭಾಷೆಗಳ ಹೆಸರಿನಲ್ಲಿ ಕ್ಷೋಭೆಯನ್ನುಂಟು ಮಾಡುವ ಕೆಲಸಗಳ ಮುಂದುವರೆದ ಭಾಗವಾಗಿದೆ.
ಕೋಮುಧೃವೀಕರಣದ ಮೂಲಕ ರಾಜಕೀಯ ಅಧಿಕಾರವನ್ನು ನಿರಂತರಗೊಳಿಸುವ ಹುನ್ನಾರ ಸ್ಪಷ್ಟವಾಗಿದೆ. ದ್ವೇಷ ಬಿತ್ತಿ ಜನರ ಐಕ್ಯತೆಯನ್ನು ಛಿದ್ರಗೊಳಿಸುವ ಬದಲು ವಿವೇಕ, ಪ್ರೀತಿ ಮತ್ತು ಪರಸ್ಪರ ವಿಶ್ವಾಸ ಮೂಡಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟನ್ನು ತರುವ ಕೆಲಸ ಇವತ್ತಿನ ತುರ್ತು. ಈ ಹಿನ್ನೆಲೆಯಲ್ಲಿ ಆನವಟ್ಟಿಯ ಭಜರಂಗದಳ ಮತ್ತು ಆರ್.ಎಸ್.ಎಸ್. ನ ದೇಶ ಒಡೆಯುವ ಧೋರಣೆಯನ್ನು ಸಮುದಾಯ ಕರ್ನಾಟಕವು ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಸಂವಿಧಾನದ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯ ದ ರಕ್ಷಣೆಗೆ ಮುಂದಾಗಬೇಕು. ನಾಟಕ ಪ್ರದರ್ಶನ ಕ್ಕೆ ಅಡ್ಡಿ ಒಡ್ಡಿದ ಸಂವಿಧಾನ ವಿರೋಧೀ ಕೃತ್ಯ ಎಸಗಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಪ್ರಗತಿ ನೆಲೆಗೊಳ್ಳುವಂತೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.