ತಿರುವನಂತಪುರಂ: ಕೇರಳ ರಾಜ್ಯದ ವಿವಿದೆಡೆಗಳಲ್ಲಿ ಇತ್ತೀಚಿನ ಧಾರಾಕಾರ ಮಳೆ ಮತ್ತು ಭಾರೀ ಭೂಕುಸಿತದ ಪರಿಣಾಮವಾಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಸಂಕಷ್ಟಕ್ಕೆ ಒಳಗಾದ ಜನತೆಯ ನೆರವಿಗೆ ಧಾವಿಸಿರುವ ಕೇರಳದ ಎಡರಂಗ ಸರ್ಕಾರವು ಪ್ರವಾಹದಿಂದ ಪ್ರಾಣ ಕಳೆದುಕೊಂಡ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಮತ್ತು ಮಳೆ ಸಂಬಂಧಿತ ಅನಾಹುತಗಳಲ್ಲಿ ಅವರ ಮನೆ ಮತ್ತು ಭೂಮಿ ಕಳೆದುಕೊಂಡವರಿಗೆ 10 ಲಕ್ಷ ರೂಪಾಯಿಗಳ ಪರಿಹಾರವನ್ನು ಸರ್ಕಾರ ಘೋಷಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕೇರಳದಲ್ಲಿ ಇತ್ತೀಚಿನ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ಹಾನಿ ಸಂಭವಿಸಿತು. ಮೃತರ ಕುಟುಂಬಸ್ಥರಿಗೆ ರಾಜ್ಯ ವಿಕೋಪ ನಿಧಿಯಿಂದ 4 ಲಕ್ಷ ರೂ., ಉಳಿದ 1 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಟ್ಟು ರೂ.5 ಲಕ್ಷ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಇದನ್ನು ಓದಿ: ಭಾರೀ ಮಳೆ-ಭೂಕುಸಿತ: ಕೇರಳ ಮುಖ್ಯಮಂತ್ರಿ ಪಿಣರಾಯಿ ಜತೆ ಪ್ರಧಾನಿ ಮೋದಿ ಮಾತುಕತೆ
ಅಲ್ಲದೆ, ಅಕ್ಟೋಬರ್ 11ರಂದು ಭಯೋತ್ಪಾದಕರೊಂದಿಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ವೈಶಾಖ್ ಎಚ್ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ಕಿರಿಯ ಆಯೋಗದ ಅಧಿಕಾರಿ ಸೇರಿದಂತೆ ಐವರು ಸೇನಾ ಸಿಬ್ಬಂದಿಗಳಲ್ಲಿ ವೈಶಾಖ್ ಕೂಡ ಸೇರಿದ್ದಾರೆ.
ಅಲ್ಲದೆ, ಸೋಮವಾರ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಇಬ್ಬರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಒಂದು ಕುಟುಂಬಕ್ಕೆ ʻಕುಟುಂಬ ಯೋಜನೆʼಯಡಿ ಮನೆ ನೀಡಲು ನಿರ್ಧರಿಸಲಾಗಿದೆ.
ಇದನ್ನು ಓದಿ: ಭೂ ರಹಿತರಿಗೆ ಭೂಮಿ-ವಸತಿ ನೀಡಲು ಕೇರಳ ಎಡರಂಗ ಸರ್ಕಾರ ನಿರ್ಧಾರ
ಪ್ರವಾಹ ವಿಪತ್ತಿನಿಂದಾಗಿ ಮನೆ ಮತ್ತು ಭೂಮಿ ಕಳೆದುಕೊಂಡವರಿಗೆ ಆರ್ಥಿಕ ನೆರವು ನೀಡುವ ಸಂಬಂಧ, ಹಾನಿಗೊಳಪಟ್ಟ ಗ್ರಾಮಗಳ ಪಟ್ಟಿಯನ್ನು ಶೀಘ್ರದಲ್ಲಿಯೇ ಸಿದ್ಧಪಡಿಸಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎಸ್‌ಡಿಎಂಎ) ಕೇರಳ ಎಡರಂಗ ಸರ್ಕಾರ ಸೂಚಿಸಿದೆ.
ವಿಪತ್ತುಗಳ ತೀವ್ರತೆ ಮತ್ತು ಅಲ್ಲಿನ ಜನರು ಎದುರಿಸುತ್ತಿರುವ ತೊಂದರೆಗಳ ಆಧಾರದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲು ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ವಿಪತ್ತುಗಳಲ್ಲಿ ಶೇ.15ಕ್ಕಿಂತ ಹೆಚ್ಚು ಹಾನಿಗೊಳಗಾದ ಮನೆಗಳಲ್ಲಿ ವಾಸಿಸುವ ಕುಟುಂಬಗಳನ್ನು ವಿಪತ್ತು ಪೀಡಿತ ಕುಟುಂಬ ಎಂದು ಪರಿಗಣಿಸಲಾಗುವುದು ಎಂದು ಹೇಳಿದರು.
2019 ರ ನೈಸರ್ಗಿಕ ವಿಕೋಪದ ಸಮಯದಲ್ಲಿ ಅಳವಡಿಸಿಕೊಂಡ ವಿಧಾನವನ್ನು ಈಗ ಮುಂದುವರಿಸಲಾಗುವುದು, ಮನೆಗಳು ಮತ್ತು ಭೂಮಿ ಭಾಗಶಃ ಅಥವಾ ಸಂಪೂರ್ಣವಾಗಿ ಹಾನಿಗೊಳಗಾದ ಜನತೆಯ ನೆರವಿಗೆ ಸರ್ಕಾರ ಮುಂದಾಗಲಿದೆ ಎಂದು ಅವರು ಹೇಳಿದರು.
ಅದೇ ರೀತಿಯಲ್ಲಿ ಆಗಸ್ಟ್ 2018, 2019 ಮತ್ತು 2021ರ ಪ್ರವಾಹದಲ್ಲಿ ದಾಖಲೆಗಳು ನಾಶವಾಗಿದ್ದು, ಅಂತಹ ದಾಖಲೆಪತ್ರಗಳ ಮರು ಸಿದ್ದಪಡಿಸಿಕೊಳ್ಳಲು ತಗಲು ವೆಚ್ಚಗಳಾದ ಮುದ್ರಾಂಕ ಶುಲ್ಕ ಮತ್ತು ಇತರೆ ಶುಲ್ಕವನ್ನು ವಿನಾಯಿತಿ ನೀಡುವ ಆದೇಶವನ್ನು ಒಂದು ವರ್ಷಗಳಿಗೆ ವಿಸ್ತರಿಸಲು ಕೇರಳ ಎಡರಂಗ ಸರ್ಕಾರ ನಿರ್ಧರಿಸಿದೆ.