ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳೇ BBMP Budget 2025-26 ಅನ್ನು ಸತತ 5ನೇ ಬಾರಿಗೆ ಮಂಡನೆ ಮಾಡಿದ್ದು, ಹಾಲಿ ಬಜೆಟ್‌ನಲ್ಲಿ 19.927 ಕೋಟಿ ರೂ.ಗಳ ಬೃಹತ್ ಯೋಜನೆಗಳನ್ನು ಘೋಷಿಸಲಾಗಿದೆ.
ರಾಜ್ಯ ಸರ್ಕಾರದ ಗ್ರೇಟರ್ ಬೆಂಗಳೂರು ರಚನೆಗೂ ಮುನ್ನ ಮಂಡಿಸುತ್ತಿರುವ ಬಿಬಿಎಂಪಿಯ ಕೊನೆಯ ಬಜೆಟ್ ಮಂಡನೆ ಇದಾಗಿದ್ದು, ಬಜೆಟ್ ಗೆ ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್‌ಗೆ ಅನುಮೋದನೆ ನೀಡಿದರು.
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮಕ್ಷಮದಲ್ಲಿ ಪುರಭವನದಲ್ಲಿಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್‌ಕುಮಾರ್ ಬಿಬಿಎಂಪಿ ಬಜೆಟ್ ಮಂಡಿಸಿದರು.
ಪಾಲಿಕೆ ಇತಿಹಾಸದಲ್ಲೇ ಇದಿ ಅತ್ಯಂತ ಬೃಹತ್ ಗಾತ್ರದ ಬಜೆಟ್ ಇದಾಗಿದ್ದು, ಈ ಬಾರಿ 19,900 ಕೋಟಿ ಮೊತ್ತದ ಬಜೆಟ್ ಮಂಡಿಸಿದೆ. ಇದುವರೆಗೆ ಪಾಲಿಕೆ 12 ರಿಂದ 13 ಸಾವಿರ ಕೋಟಿ ವರೆಗೆ ಬಜೆಟ್ ಮಂಡಿಸಿದ್ದು, ಇದೇ ಮೊದಲ ಬಾರಿಗೆ 20 ಸಾವಿರ ಕೋಟಿ ಆಸುಪಾಸಿನ ಬಜೆಟ್ ಮಂಡಿಸಿದೆ. 19,92,708 ಕೋಟಿ ಗಾತ್ರದ ಬಜೆಟ್ ಗೆ ಆಡಳಿತಗಾರ ಉಮಾಶಂಕರ್ ಅನುಮೋದನೆ ನೀಡಿದ್ದಾರೆ. ಇದರಲ್ಲಿ ಶೇಕಡಾ 62 ರಷ್ಟು ಹಣವನ್ನು ಬೆಂಗಳೂರು ಅಭಿವೃದ್ಧಿಗೆ ಮೀಸಲಿಡಲಾಗಿದೆ.
ಇದನ್ನೂ ಓದಿ: ಬಗರ್ ಹುಕುಂ: ನಿರೀಕ್ಷೆಯ ಮಟ್ಟ ತಲುಪಿಲ್ಲ – ಕೃಷ್ಣ ಬೈರೇಗೌಡ
ಬ್ರ್ಯಾಂಡ್ ಬೆಂಗಳೂರು
ಡಿಸಿಎಂ ಡಿಕೆಶಿವಕುಮಾರ್ ಕನಸಿನ ಯೋಜನೆ ಬ್ರ್ಯಾಂಡ್ ಬೆಂಗಳೂರಿಗೆ ಪೂರಕವಾದ ಬಿಬಿಎಂಪಿ ಬಜೆಟ್ ಮಂಡಿಸಿದೆ ಎನ್ನುವ ಮಾತು ಕೇಳಿ ಬಂದಿದೆ. ಬಿಬಿಎಂಪಿ ಬಜೆಟ್ನ ಶೇಕಡಾ 65% ರಷ್ಟು ಹಣವನ್ನ ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಮೀಸಲಿರಿಸಿದ್ದಾರೆ. ಪಾಲಿಕೆ ಬಜೆಟ್ ಅನ್ವಯ ಬರೋಬ್ಬರಿ 12,952 ಕೋಟಿ ಮೊತ್ತ ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಸೀಮಿತವಾಗಿದೆ.
ಕಟ್ಟುವೆವು ನಾವು ಹೊಸ ನಾಡೊಂದನ್ನು ಎಂಬ ಗೋಪಾಲಕೃಷ್ಣ ಅಡಿಗ ಅವರ ಕವಿವಾಣಿಯನ್ನು ಪ್ರಸ್ತಾಪಿಸಿದ ಹರೀಶ್‌ಕುಮಾರ್ ಅವರು, ಬ್ರ್ಯಾಂಡ್ ಬೆಂಗಳೂರು ದೃಷ್ಟಿಕೋನಕ್ಕೆ ಅನುಗುಣವಾಗಿ ನಗರವನ್ನು ಆಧುನಿಕ ನಗರವನ್ನಾಗಿ ಪರಿವರ್ತಿಸುವ ಘೋಷಣೆ ಮಾಡಿದರು. ಸುಗಮ ಸಂಚಾರ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಟೆಕ್ ಬೆಂಗಳೂರು, ಶಿಕ್ಷಣ ಬೆಂಗಳೂರು, ಆರೋಗ್ಯಕರ ಬೆಂಗಳೂರು, ರೋಮಾಂಚಕ ಬೆಂಗಳೂರು ಮತ್ತು ನೀರಿನ ಭದ್ರತೆ ಬೆಂಗಳೂರು ಎಂಬ 8 ವಿಭಾಗಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ 1790 ಕೋಟಿ ರೂ.ಗಳ ಅನುದಾನವನ್ನು ನಗರದ ಅಭಿವೃದ್ದಿಗೆ ಸದ್ಬಳಕೆ ಮಾಡಲಾಗುತ್ತಿದೆ ಎಂದರು.
ಕಳೆದ ಸಾರಿ ದೇಶದಲ್ಲೇ ಅತಿಹೆಚ್ಚು ತೆರಿಗೆ ಸಂಗ್ರಹ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಬಿಎಂಪಿಯಲ್ಲಿ ಪ್ರಸಕ್ತ ಸಾಲಿನಲ್ಲೂ 5716 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ ಎಂದರು. ನಾಗರಿಕರ ತೆರಿಗೆ ಪಾವತಿಗೆ ಅನುಕೂಲವಾಗುವಂತೆ ಒಟಿಎಸ್ ಪದ್ಧತಿಯನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಆಸ್ತಿಗಳಿಂದ 1277 ಕೋಟಿ ರೂ.ಗಳ ಅತಿಹೆಚ್ಚು ತೆರಿಗೆ ಸಂಗ್ರಹ ಮಾಡಲಾಗಿದೆ.
ಈ ಬಾರಿ 4,900 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇಡೀ ದೇಶದಲ್ಲೇ ಎರಡನೇ ಅತಿ ಹೆಚ್ಚಿನ ತೆರಿಗೆ ಸಂಗ್ರಹಿಸಿದ ಹೆಗ್ಗಳಿಕೆ ಬಿಬಿಎಂಪಿ ಪಾತ್ರವಾಗಿದೆ. ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ತೃತೀಯ ಲಿಂಗಿ ಸಮುದಾಯಕ್ಕೆ ಎಲೆಕ್ಟ್ರಾನಿಕ್ ವಾಹನ ಖರೀದಿಗೆ ಪಾಲಿಕೆ ಧನಸಹಾಯ ನೀಡಲಿದ್ದು. ಇದಕ್ಕೆ ಪಾಲಿಕೆ ಬಜೆಟ್ ನಲ್ಲಿ 10 ಕೋಟಿ ಮೀಸಲಿಸಿದೆ.
ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕೆ 10 ಕೋಟಿ, ಸುರಂಗ ಮಾರ್ಗಕ್ಕೆ 42 ಸಾವಿರ ಕೋಟಿ. ಎಲಿವೇಟೆಡ್ ಕಾರಿಡಾರ್ ಹಾಗೂ ಗ್ರೇಡ ಸಪರೇಟರ್ ಗಳ ನಿರ್ಮಾಣಕ್ಕೆ 13,200 ಕೋಟಿ ಹಾಗೂ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ 9 ಸಾವಿರ ಕೋಟಿ, ರಾಜಕಾಲುವೆ ಹಾಗೂ ಸಂಪರ್ಕ ರಸ್ತೆಗೆ 3 ಸಾವಿರ ಕೋಟಿ, ರಸ್ತೆ ವೈಟ್ ಟಾಪಿಂಗ್ ಕಾಮಗಾರಿಗೆ 6 ಸಾವಿರ ಕೋಟಿ, ಸ್ಕೈಡೆಕ್ ನಿರ್ಮಾಣ 400 ಕೋಟಿ ಮೀಸಲಿಡಲಾಗಿದೆ. ತಾಯಿ, ಮಗು ಆರೈಕೆ ಹಾಗೂ ರಕ್ಷಣೆಗೆ ಬಿಬಿಎಂಪಿಯಿಂದ Save Mom ಯೋಜನೆ ಜಾರಿ. ಪ್ರಾಯೋಗಿಕವಾಗಿ ಎರಡು ಆಸ್ಪತ್ರೆಯಲ್ಲಿ 200 ತಾಯಂದಿರ ಆರೈಕೆ, 24*7 ಗರ್ಭಿಣಿ ಆರೈಕೆಗೆ ನಗರದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಬೀದಿ ನಾಯಿಗಳ ಆರೈಕೆ ಹಾಗೂ ಚಿಕಿತ್ಸೆಗೆ ಈ ಸಾಲಿನಲ್ಲಿ 60 ಕೋಟಿ ಮೀಸಲಿಡಲಾಗಿದೆ.
16 ಶಾಲೆಗಳ ಕಟ್ಟಡ ಮರು ನಿರ್ಮಾಣ
ನಗರದ ಆಯ್ದ 16 ಶಾಲೆಗಳ ಕಟ್ಟಡ ಮರು ನಿರ್ಮಾಣ 60 ಶಾಲೆಗಳ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ ರೂಂ ಆಗಿ ಪರಿವರ್ತನೆ ಮಾಡಲಿದ್ದಾರೆ. ಮಳೆ ಅವಾಂತರ ತಡೆಯಲು ರಾಜಕಾಲುವೆ, ಕೆರೆ ಬದಿಯ ಪ್ರದೇಶದಲ್ಲಿ ನೆರೆ ತಡೆಗೆ ಕ್ರಮ. ಈ ಕಾಮಗಾರಿಗೆ 247 ಕೋಟಿ ಮೀಸಲು. ಬೆಂಗಳೂರಿನ ಸೌಂದರ್ಯೀಕರಣಕ್ಕೆ ಕೋಟಿ ಕೋಟಿ ಮೀಸಲಿಡಲಾಗಿದೆ. ಅಲಂಕಾರಿಕ ದೀಪಗಳ ಅಳವಡಿಕೆಗೆ 50 ಕೋಟಿ, ಜಂಕ್ಷನ್ ಸುಧಾರಣೆಗೆ 25 ಕೋಟಿ, ಸ್ಕೈಡೆಕ್ ನಿರ್ಮಾಣಕ್ಕೆ ಆರಂಭಿಕವಾಗಿ 50 ಕೋಟಿ. ಸಾರ್ವಜನಿಕ ಸ್ಥಳಗಳ ಸೌಂದರ್ಯೀಕರಣಕ್ಕೆ 25 ಕೋಟಿ ಮೀಸಲಿಡಲಾಗಿದೆ. ಬೆಂಗಳೂರನ್ನು ಅಂದಗಾಣಿಸಲು ಬರೋಬ್ಬರಿ 200 ಕೋಟಿ ನಿಗದಿ ಮಾಡಿದ್ದಾರೆ.
ಕೃತಕಬುದ್ಧಿಮತ್ತೆ ಬಳಕೆ:
ನಗರದಲ್ಲಿ ಡಿಜಿಟಲ್ ಇ-ಖಾತಾ ವ್ಯವಸ್ಥೆ ಜಾರಿಗೆ ತರಲಾಗಿದ್ದು, ನಾಗರಿಕರು ಯಾವುದೇ ಸಮಯದಲ್ಲಾದರೂ ಆನ್‌ಲೈನ್ ಮೂಲಕ ಇ-ಖಾತಾ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಇ-ಖಾತಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿರುವುದರಿಂದ ಸ್ವಯಂಚಾಲಿತ ಖಾತಾ ವರ್ಗಾವಣೆಗೆ ಸಹಕಾರಿಯಾಗುತ್ತದೆ. ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಮೂಲಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರನ್ನು ಪತ್ತೆಹಚ್ಚುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರೊಂದಿಗೆ ಆಸ್ತಿ ತೆರಿಗೆ ಜಾಲದಿಂದ ಹೊರಗುಳಿದಿರುವ ಲಕ್ಷಾಂತರ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ವರ್ಷಕ್ಕೆ ಒಂದು ಸಾವಿರ ಕೋಟಿ ರೂ.ಗಳ ಆದಾಯ ಕ್ರೋಡೀಕರಣಕ್ಕೆ ಗಮನಹರಿಸಲಾಗಿದೆ.
ಪ್ರತ್ಯೇಕ ಸರ್ವೇ ವಿಭಾಗ
ನಗರದಲ್ಲಿರುವ 20 ಲಕ್ಷ ಖಾಸಗಿ ಹಾಗೂ 6819 ಪಾಲಿಕೆ ಸ್ವತ್ತುಗಳ ದಾಖಲೆ ನಿರ್ವಹಣೆಗೆ ಪ್ರತ್ಯೇ ಸರ್ವೇ ವಿಭಾಗ ಸ್ಥಾಪಿಸಿ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ನಗರದ 7000ಕ್ಕೂ ಹೆಚ್ಚು ಸ್ವಂತ ಆಸ್ತಿಗಳ ಸಮೀಕ್ಷೆ ನಡೆಸಿ ಡಿಜಿಟಲೀಕರಣಗೊಳಿಸುವ ಮೂಲಕ ಪಾಲಿಕೆ ಆಸ್ತಿಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅವಧಿ ಮುಗಿದಿರುವ ಪಾಲಿಕೆ ಆಸ್ತಿಗಳ ಗುತ್ತಿಗೆ ನವೀಕರಣ ಮಾಡಿ ಮಾರ್ಗಸೂಚಿ ಬಾಡಿಗೆ ಆಧಾರದ ಮೇಲೆ ಮರುಗುತ್ತಿಗೆ ನೀಡುವ ಮೂಲಕ 210 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ.
ತುರ್ತು ಆರೈಕೆಗಾಗಿ 26 ಬಿಎಲ್‌ಎಸ್ ಆಯಂಬುಲೆನ್ಸ್ ಸೇವೆ
ಬ್ರಾಂಡ್ ಬೆಂಗಳೂರು, ಆರೋಗ್ಯಕರ ಬೆಂಗಳೂರು ಎಲ್ಲರಿಗೂ ಆರೋಗ್ಯ ಅಭಿಯಾನದಡಿ ಬಿಬಿಎಂಪಿ ಆರೋಗ್ಯ ಸೇವೆಗೆ ವಿಶೇಷ ಒತ್ತು ನೀಡಿದ್ದು, ಹೆಚ್ಚುತ್ತಿರುವ ಹೃದಯಸ್ತಂಭನ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತುರ್ತು ಆರೈಕೆಗಾಗಿ 26 ಬಿಎಲ್‌ಎಸ್ ಆಯಂಬುಲೆನ್ಸ್ ಸೇವೆಯನ್ನು ಒದಗಿಸಲಿದೆ.
ಗರ್ಭಿಣಿಯರ ಮತ್ತು ನವಜಾತ ಶಿಶುಗಳ ಸಮಗ್ರ ಸಮರ್ಪಕ ನಿರಂತರ ಆರೈಕೆಗಾಗಿ ನೂತನವಾದ ಎಐ ತಂತ್ರಜ್ಞಾನದೊಂದಿಗೆ ಸೇವ್ ಮಾಮ್ ಎಂಬ ತಾಯಿ-ಮಕ್ಕಳ ಆರೈಕೆ ವೇದಿಕೆಯನ್ನು ಪ್ರಾರಂಭಿಸಲಿದೆ. ವೈಯಕ್ತಿಕ ಹಾಗೂ ನಿರಂತರ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ನಗರಾದ್ಯಂತ ಪ್ರಾಯೋಗಿಕವಾಗಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಯಿ ಮತ್ತು ಮಕ್ಕಳ ಆರೈಕೆ ವೇದಿಕೆಯನ್ನು ಸ್ಥಾಪಿಸಲಾಗಿದೆ. ಪಾಲಿಕೆಯ 300 ಹಾಸಿಗೆಯುಳ್ಳ ಎಂ.ಸಿ.ಲೇಔಟ್‌ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡಲಾಗುತ್ತಿದ್ದು, ಇಲ್ಲಿ ಹೊಸದಾಗಿ ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪನೆಗೆ ಅಂದಾಜು 633 ಕೋಟಿ ರೂ. ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಜಲಸುರಕ್ಷತೆ
ನಗರದ ಕೆರೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ 210 ಕೋಟಿ ರೂ.ಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಗರದ ನೀರಿನ ಕೊರತೆ ಪರಿಹರಿಸಲು ಪಾಲಿಕೆ ಕಟ್ಟಡಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. 2000 ಕೋಟಿ ರೂ.ಗಳ ಅನುದಾನದಲ್ಲಿ ನಗರದ 860 ಕಿ.ಮೀ ಉದ್ದದ ರಾಜಕಾಲುವೆಗಳಿಗೆ 174 ಕಿ.ಮೀ ಉದ್ದದ ತಡೆಗೋಡೆ ನಿರ್ಮಿಸಲಾಗುತ್ತಿದೆ. ಪ್ರವಾಹಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು 247.25 ಕೋಟಿ ರೂ. ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಇದನ್ನೂ ನೋಡಿ: ಮಂಗಳೂರು | ಕುಡಿಯಲು ನೀರು ಕೊಡಿ : ಖಾಲಿ ಕೊಡಗಳೊಂದಿಗೆ ಪಾಲಿಕೆಗೆ ಬರ್ತಿವಿ Janashakthi Media