ಬೆಂಗಳೂರು : ಪಠ್ಯ ಅನುಮತಿ ನಿರಾಕರಣೆಯ ನಂತರವೂ, ಪಠ್ಯಪುಸ್ತಕದಲ್ಲಿ ಬಳಸಿಕೊಂಡಿರುವ ಪದ್ಯಕ್ಕೆ ಪಠ್ಯ ಪುಸ್ತಕ ಸಂಘ ಕಳುಹಿಸಿರುವ ರಾಯಧನ ಹಣವನ್ನು ಸಾಹಿತಿ ರೂಪಾ ಹಾಸನ ಹಿಂದಿರುಗಿಸಿದ್ದಾರೆ.
ಪಠ್ಯ ಪುಸ್ತಕ ಸಂಘದ ಆಡಳಿತ ಸಹಾಕರಿಗೆ ಪತ್ರವನ್ನು ಬರೆದಿರುವ ಅವರ ಸರಕಾರ ಹಾಗೂ ಪಠ್ಯ ಪುಸ್ತಕ ಸಂಘದ ನಡೆಯನ್ನು ಖಂಡಿಸಿದ್ದಾರೆ. ಪತ್ರದ ಸಾರಾಂಶ ಈ ಕೆಳಗಿನಂತಿದೆ.
ಮಾನ್ಯರೇ,
“ನನ್ನ ನಿರಾಕರಣೆಯ ನಂತರವೂ ಪಠ್ಯಪುಸ್ತಕದಲ್ಲಿ ಬಳಸಿಕೊಂಡಿರುವ ಪದ್ಯಕ್ಕೆ, ತಾವು ಕಳಿಸಿರುವ ರಾಯಧನದ
ಬ್ಯಾಂಕ್ ಹುಂಡಿ ಸಂಖ್ಯೆ:466378 ಈ ಪತ್ರದ ಜೊತೆಗೆ ಹಿಂದಿರುಗಿಸುತ್ತಿದ್ದೇನೆ.
ಸರ್ಕಾರದಿಂದ ಅಧಿಕೃತವಾಗಿ ನೇಮಿಸಲ್ಪಟ್ಟ “ಪಠ್ಯಪುಸ್ತಕ ಪರಿಷ್ಕರಣೆ ಹಾಗೂ ಪುನರ್ ರಚನಾ ಸಮಿತಿ 2017-18ರ
ಅಪೇಕ್ಷೆಯಂತೆ, ಪಠ್ಯಪುಸ್ತಕಕ್ಕೆ ನನ್ನ ಪದ್ಯವನ್ನು ಅಳವಡಿಸಿಕೊಳ್ಳಲು ಈ ಹಿಂದೆ ಅನುಮತಿಯನ್ನು ನೀಡಿದ್ದೆ. ಆದರೆ ಇದೇ 2022-23ನೇ ಸಾಲಿನಲ್ಲಿ ಪಠ್ಯ ಪುಸ್ತಕಗಳ “ಪುನರ್ ಪರಿಶೀಲನೆಗೆ ಸರ್ಕಾರದಿಂದ ಅನುಮತಿ ಪಡೆದ ಸಮಿತಿಯು, ತನ್ನ ವ್ಯಾಪ್ತಿ ಮೀರಿ, ನಮ್ಮ “ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005″ರ ನೀತಿ ನಿಯಮಗಳನ್ನು ಗಾಳಿಗೆ ತೂರಿ, ದುರುದ್ದೇಶದಿಂದ ಹಲವು ತಿದ್ದುಪಡಿ, ಗೊಂದಲ ಪೂರಿತ/ಅನವಶ್ಯಕ ಮಾರ್ಪಾಡುಗಳನ್ನು ಮಾಡಿರುವುದಕ್ಕೆ ನನ್ನ ವಿರೋಧವಿದೆ. ಪ್ರತಿರೋಧದ ಉದ್ದೇಶದಿಂದ ನನ್ನ ಪದ್ಯ ಬೋಧನೆಗೆ ಹಿಂದಿನ ಸಮಿತಿಗೆ ನೀಡಿದ್ದ ಅನುಮತಿಯನ್ನು ಈ ಸಂದರ್ಭದಲ್ಲಿ ಹಿಂಪಡೆದು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೆ.
ಮತ್ತೆ ಕರ್ನಾಟಕ ಪಠ್ಯ ಪುಸ್ತಕ ಸಂಘ[ರಿ]ದ ವ್ಯವಸ್ಥಾಪಕ ನಿರ್ದೇಶಕರು ಪದ್ಯ ಅಳವಡಿಕೆಗೆ ಮರುಒಪ್ಪಿಗೆಯನ್ನು ಕೇಳಿದಾಗಲೂ
ಸ್ಪಷ್ಟವಾಗಿ ಅದನ್ನು ನಿರಾಕರಿಸಿ ಪತ್ರ ಬರೆದಿದ್ದೆ. ಆದರೂ ಮತ್ತೆ ಪದ್ಯವನ್ನು ಬೋಧನೆಯಲ್ಲಿ ಮುಂದುವರಿಸಿದ ಸುತ್ತೋಲೆ
ಹೊರಡಿಸಿದಾಗ- ‘ನನ್ನ ನಿರಂತರ ಪ್ರತಿರೋಧ, ನಿರಾಕರಣೆಯ ನಂತರವೂ ಸರ್ಕಾರ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡು ನನ್ನ ಪದ್ಯವನ್ನು ಪಠ್ಯದಲ್ಲಿ ಮುಂದುವರೆಸಿರುವುದು ಖಂಡನೀಯ, ಈ ನಡೆ ಜುಗುಪ್ಸೆ ಮೂಡಿಸಿದೆಯೆಂದೂ’ ಪತ್ರಿಕಾ ಹೇಳಿಕೆ ನೀಡಿದ್ದೆ. ಆದರೆ ಇಷ್ಟೆಲ್ಲಾ ನಿರಾಕರಣೆಯ ನಂತರವೂ ಈಗ ಮತ್ತೆ ನನ್ನ ಪದ್ಯವನ್ನು ಪಠ್ಯದಲ್ಲಿ ಅಳವಡಿಸಿಕೊಂಡಿರುವುದಕ್ಕೆ ರಾಯಧನವಾಗಿ, 9.11.2022ರ ದಿನಾಂಕದ, 1500/-ಗಳ ಬ್ಯಾಂಕ್ ಹುಂಡಿ ಸಂಖ್ಯೆ:466378 ಕಳಿಸಿರುತ್ತೀರಿ. ಪಠ್ಯಕ್ಕೆ ನನ್ನ ಒಪ್ಪಿಗೆ ಇಲ್ಲದೇ ಕವಿತೆಯನ್ನು ಬಳಸಿಕೊಂಡಿರುವ ಸರ್ಕಾರದ ಈ ಕ್ರಮ ಅತ್ಯಂತ ಅನೈತಿಕವೂ, ಸರ್ವಾಧಿಕಾರಿ ಧೋರಣೆಯದ್ದಾಗಿದ್ದು, ಈ ನಡೆಯನ್ನು ಖಂಡಿಸುತ್ತಾ ತಾವು ಕಳಿಸಿದ ರಾಯಧನ ರೂಪದ ಈ ಬ್ಯಾಂಕ್ ಹುಂಡಿಯನ್ನು ವಾಪಸ್ ತಮಗೆ ಕಳಿಸುತ್ತಿದ್ದೇನೆ.
ಎಂದು ಪತ್ರದಲ್ಲಿ ಬರೆದಿದ್ದಾರೆ.