ಜಾತಿವಾದಿ ವ್ಯವಸ್ಥೆಯ ಸಂಚಿನಿಂದ ಹತ್ಯೆಯಾದ ರೋಹಿತ್ ವೇಮುಲ ಅಗಲಿದ ದಿನವಿಂದು

ಜನವರಿ 17 ಪ್ರತಿಭಾವಂತ ರೋಹಿತ್ ವೆಮುಲಾ ಮತೀಯವಾದಿಗಳ ಕೃತ್ಯಕ್ಕೆ ಬಲಿಯಾಗಿ ಶೈಕ್ಷಣಿಕ ಹತ್ಯೆಯಾದ ಕರಾಳ ದಿನ.
ಜೀವಗಳನ್ನು ಉಳಿಸಬೇಕು ರಕ್ಷಿಸಬೇಕು ಶೋಷಣಾ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಂಶೋಧನೆ ನಡೆಸಿದ್ದ ಮಹಾನ್ ನಕ್ಷತ್ರ. ರೋಹಿತ್ ವೆಮೆಲಾ ಇಗ ನಮ್ಮ ಜೊತೆ ಇಲ್ಲದಿದ್ದರೂ ಸಾವಿರಾರು ರೋಹಿತ್ ವೆಮುಲಾರನ್ನು ಚಳುವಳಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹುಟ್ಟಿ ಹಾಕಿದ ಸ್ಪೂರ್ತಿಯ ಚಿಲುಮೆ.
ಜನವರಿ 17ನ್ನು ಸಾಮಾಜಿಕ ರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳ ಮೇಲೆ ಕೇಸರಿ ಕರಣ ನಡೆಸುತ್ತಿರುವ ದಾಳಿಯಿಂದಾಗಿ ಸಮಾಜಿಕ ನ್ಯಾಯ ಕುಸಿಯುತ್ತಿದೆ. ಜಾತಿ, ತಾರತಮ್ಯ ನಿಲ್ಲಿಸಲು, ಸಮಾಜಿಕ ನ್ಯಾಯದ ಮೂಲಕ ಶಿಕ್ಷಣ ಎಲ್ಲರಿಗೂ ಸಿಗಬೇಕು ಹಾಗೂ ಕ್ಯಾಂಪಸ್ ಡೆಮಾಕ್ರಸಿ ಉಳಿಯಬೇಕು ಅದಕ್ಕಾಗಿ ರೋಹಿತ್ ವೆಮುಲಾ ಕಾಯ್ದೆಯನ್ನು ಜಾರಿಗೆ ತರಲು ಸರಕಾರ ಮುಂದಾಗಬೇಕು ಎಂದು ಜನಪರ ಚಳುವಳಿಗಳು ಹೋರಾಟವನ್ನು ನಡೆಸುತ್ತಿವೆ. ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾಯ್ದೆಯನ್ನು ರಚಿಸಬೇಕಿದೆ.

ರೋಹಿತ್ ವೇಮುಲನ ಅಂತಿಮ‌ ಪತ್ರ
________

ಇದೋ ಕೊನೆಯದಾಗಿ ಒಂದು ಸಲ, ಜೈ ಭೀಮ್
_________
ಶುಭ ಮುಂಜಾನೆ..
ಈ ಪತ್ರವನ್ನು ನೀವು ಓದುವಾಗ ನಾನಿರುವುದಿಲ್ಲ. ಕೋಪ ಮಾಡಿಕೊಳ್ಳಬೇಡಿ. ನನಗೆ ಗೊತ್ತು, ನಿಮ್ಮಲ್ಲಿ ಹಲವರು ನಿಜಕ್ಕೂ ನನ್ನ ಬಗ್ಗೆ ಕಾಳಜಿ ತೋರಿದಿರಿ, ಪ್ರೀತಿಸಿದಿರಿ ಮತ್ತು ಚೆಂದ ನೋಡಿಕೊಂಡಿರಿ. ಯಾರ ಮೇಲೂ ನನಗೆ ದೂರುಗಳಿಲ್ಲ. ಯಾವಾಗಲೂ ನನಗೆ ನನ್ನೊಂದಿಗೇ ಸಮಸ್ಯೆಯಿತ್ತು. ನನ್ನ ದೇಹ ಮತ್ತು ಆತ್ಮದ ನಡುವಿನ ಕಂದಕ ದೊಡ್ಡದಾಗುತ್ತಿರುವ ಭಾವನೆ ಮತ್ತು ನಾನು ರಾಕ್ಷಸನಾಗಿಬಿಟ್ಟಿದ್ದೇನೆ.

ಒಬ್ಬ ಬರಹಗಾರನಾಗಬೇಕೆಂಬುದು ನನ್ನ ಎಂದಿನ ಬಯಕೆಯಾಗಿತ್ತು. ಕಾರ್ಲ್ ಸಗಾನ್‌ನಂತೆ, ವಿಜ್ಞಾನದ ಬರಹಗಾರನಾಗಬಯಸಿದ್ದೆ. ಕೊನೆಗೆ, ಇದೊಂದು ಪತ್ರವನ್ನಷ್ಟೇ ನನ್ನಿಂದ ಬರೆಯಲಾಗುತ್ತಿರುವುದು.

ವಿಜ್ಞಾನ, ನಕ್ಷತ್ರ, ಪ್ರಕೃತಿಯನ್ನು ಪ್ರೀತಿಸಿದೆ; ಆದರೆ ಪ್ರಕೃತಿಯಿಂದ ಮನುಷ್ಯರು ದೂರವಾಗಿ ಬಹಳ ಕಾಲವಾಯಿತು ಎಂಬುದನ್ನು ಅರಿಯದೆ ಮನುಷ್ಯರನ್ನು ಪ್ರೀತಿಸಿದೆ. ನಮ್ಮ ಭಾವನೆಗಳೆಲ್ಲ ಸೆಕೆಂಡ್ ಹ್ಯಾಂಡು. ಪ್ರೀತಿಯನ್ನಿಲ್ಲಿ ಕೃತಕವಾಗಿ ಕಟ್ಟಲಾಗಿದೆ. ನಂಬಿಕೆಗಳಿಗೆ ಬಣ್ಣ ಬಳಿಯಲಾಗಿದೆ. ನಮ್ಮ ಸ್ವಂತಿಕೆಗೆ ಇಲ್ಲಿ ಬೆಲೆ ಬರುವುದೇ ಕೃತಕ ಕಲೆಯಿಂದ, ನೋವುಣ್ಣದೆ ಪ್ರೀತಿಸುವುದು ನಿಜಕ್ಕೂ ಕಷ್ಟಕರವಾಗಿಬಿಟ್ಟಿದೆ.

ಅದು ಅಧ್ಯಯನ ಕ್ಷೇತ್ರದಲ್ಲಿರಲಿ, ಬೀದಿಗಳಲ್ಲಿರಲಿ, ರಾಜಕೀಯದಲ್ಲಿರಲಿ, ಸಾವಿನಲ್ಲೇ ಇರಲಿ ಅಥವಾ ಬದುಕಿನಲ್ಲೇ ಇರಲಿ; ಮನುಷ್ಯನ ಮೌಲ್ಯ ಎಂಬುದು ಅವನ ತತ್‌ಕ್ಷಣದ ಅಸ್ಮಿತೆ ಮತ್ತು ಸಮೀಪದ ಯಾವುದೋ ಒಂದು ಸಾಧ್ಯತೆಯ ಮಟ್ಟಕ್ಕಷ್ಟೇ ಇಳಿದುಬಿಟ್ಟಿದೆ. ಒಂದು ವೋಟಿಗೆ, ಒಂದು ಸಂಖ್ಯೆಗೆ, ಒಂದು ವಸ್ತುವಿಗೆ ಅಷ್ಟೆ. ಮನುಷ್ಯನನ್ನು ಅವನ ಮನಸ್ಸಿನ ಮೂಲಕ ಎಂದೂ ಪರಿಗಣಿಸಲಿಲ್ಲ. ನಭೋಮಂಡಲದ ನಕ್ಷತ್ರಗಳ ಧೂಳಿನಿಂದ ಮಾಡಲ್ಪಟ್ಟ ಅತ್ಯದ್ಭುತ ವಸ್ತುವಿನಂತೆ ಎಂದೂ ಅವನನ್ನು ಗುರುತಿಸಲಿಲ್ಲ.

ಈ ರೀತಿಯ ಪತ್ರವನ್ನು ಮೊದಲ ಬಾರಿಗೆ ಬರೆಯುತ್ತಿದ್ದೇನೆ. ಇದು ಅಂತಿಮ ಪತ್ರದ ಮೊದಲ ಯತ್ನ. ಏನಾದರೂ ತಪ್ಪಾಗಿ ಬರೆದಿದ್ದರೆ ಮನ್ನಿಸಿ.

ಬಹುಶಃ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ತಪ್ಪಿದೆ. ಪ್ರೀತಿ, ನೋವು, ಬದುಕು, ಸಾವು ಇವನ್ನೆಲ್ಲಾ ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ಆತುರವೇನಿರಲಿಲ್ಲ. ನಾನು ಓಡುತ್ತಲೇ ಇದ್ದೆ. ಬದುಕು ಪ್ರಾರಂಭಿಸುವ ಹತಾಶೆಯಿಂದ ಓಡುತ್ತಿದ್ದೆ. ಕೆಲವರಿಗೆ ಬದುಕೇ ಒಂದು ಶಾಪ. ನನ್ನ ಹುಟ್ಟೇ ನನಗೆ ಮಾರಾಣಾಂತಿಕ ಅಪಘಾತ. ನನ್ನ ಬಾಲ್ಯದ ಏಕಾಂಗಿತನದಿಂದ ನಾನೆಂದೂ ಚೇತರಿಸಿಕೊಳ್ಳಲಾರೆ. ನನ್ನ ಗತದಿಂದ ಬಂದ ಪಾಪಿ ಕೂಸು ನಾನು.

ಈ ಕ್ಷಣದಲ್ಲಿ ನನಗೆ ನೋವಾಗುತ್ತಿಲ್ಲ. ದುಃಖವಾಗುತ್ತಿಲ್ಲ; ಖಾಲಿ ಖಾಲಿ ಅನಿಸುತ್ತಿದೆ. ನನ್ನ ಬಗ್ಗೆ ನನಗೇ ಕಾಳಜಿಯಿಲ್ಲದಾಗಿದೆ. ಇದು ಅಸಹ್ಯ. ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ.

ಜನರು ನನ್ನನ್ನು ಹೇಡಿಯೆಂದು ಜರಿಯಬಹುದು. ನಾನು ಹೋದ ಮೇಲೆ ಸ್ವಾರ್ಥಿ, ಮೂರ್ಖ ಎನ್ನಬಹುದು. ಅದರ ಬಗ್ಗೆಯೇನೂ ಚಿಂತೆಯಿಲ್ಲ. ಪುನರ್ ಜನ್ಮದ ಕತೆಗಳಲ್ಲಿ, ಭೂತ, ಪಿಶಾಚಿಗಳಿರುವುದರಲ್ಲಿ ನನಗೆ ನಂಬಿಕೆಯಿಲ್ಲ. ಏನಾದರೂ ನಂಬುವುದಿದ್ದರೆ ಅದು ನಾನು ತಾರೆಗಳವರೆಗೆ ಪ್ರಯಾಣಿಸಬಲ್ಲೆನೆಂಬುದನ್ನು ಮಾತ್ರ ಮತ್ತು ಇತರೆ ಪ್ರಪಂಚಗಳ ಬಗ್ಗೆ ತಿಳಿದುಕೊಳ್ಳಬಲ್ಲೆ ಎಂಬುದನ್ನು ಮಾತ್ರವೇ.

ಈ ಪತ್ರ ಓದುತ್ತಿರುವ ನೀವು ನನಗೇನಾದರೂ ಮಾಡಬಹುದಾದರೆ, ಕಳೆದ ಏಳು ತಿಂಗಳಿನ ಫೆಲೋಶಿಪ್ ಹಣ ಒಂದು ಲಕ್ಷದ ಎಪ್ಪತ್ತೈದು ಸಾವಿರ ರುಪಾಯಿ ಇನ್ನೂ ಬರಬೇಕಿದೆ. ಅದು ನನ್ನ ಕುಟುಂಬದವರಿಗೆ ತಲುಪುವುಂತೆ ಮಾಡಿ. ರಾಮ್‌ಜಿಗೆ ನಲವತ್ತು ಸಾವಿರದಷ್ಟು ಕೊಡಬೇಕಿದೆ. ಅವನದ್ಯಾವತ್ತೂ ವಾಪಸ್ಸು ಕೇಳಿಲ್ಲ. ದಯವಿಟ್ಟು ನನಗೆ ಬರುವ ಹಣದಲ್ಲಿ ಅವನ ಹಣವನ್ನು ಕೊಟ್ಟುಬಿಡಿ.

ನನ್ನ ಅಂತ್ಯಕ್ರಿಯೆ ಶಾಂತವಾಗಿ, ಸುಗಮವಾಗಿ ನಡೆಯಲಿ, ಹೀಗ ಕಾಣಿಸಿಕೊಂಡು ಹಾಗೆ ಮರೆಯಾಗಿಬಿಟ್ಟ ಎನ್ನುವಂತೆ ವರ್ತಿಸಿ. ನನಗಾಗಿ ಕಣ್ಣೀರಿಡ ಬೇಡಿ. ಜೀವಂತವಾಗಿದ್ದಾಗ ಇರುವುದಕ್ಕಿಂತಲೂ ಸತ್ತಮೇಲೆಯೇ ನಾನು
ಖುಷಿಯಾಗಿರುತ್ತೇನೆ ಎನ್ನುವುದು ಗೊತ್ತಿರಲಿ.

“ಮಬ್ಬುಗತ್ತಲೆಯಿಂದ ತಾರೆಗಳೆಡೆಗೆ”

ಉಮಾ ಅಣ್ಣ, ಈ ಕೆಲಸಕ್ಕೆ ನಿಮ್ಮ ರೂಮನ್ನು ಉಪಯೋಗಿಸಿದ್ದಕ್ಕೆ ಕ್ಷಮೆ ಇರಲಿ.

ನಿರಾಸೆ ಮೂಡಿಸಿದ್ದಕ್ಕೆ ‘ASA’ ಕುಟುಂಬದ (Ambedkar Students Association) ಕ್ಷಮೆ ಕೋರುತ್ತೇನೆ. ನೀವೆಲ್ಲರೂ ನನ್ನನ್ನು ತುಂಬಾ ಪ್ರೀತಿಸಿದಿರಿ. ನಿಮ್ಮೆಲ್ಲರ ಉಜ್ವಲ ಭವಿಷ್ಯಕ್ಕೆ ಹಾರೈಸುತ್ತಿದ್ದೇನೆ.

ಇದೋ ಕೊನೆಯದಾಗಿ ಒಂದು ಸಲ,

ಜೈ ಭೀಮ್,

ಫಾರ್ಮಾಲಿಟಿಗಳನ್ನು ಬರೆಯುವುದನ್ನು ಮರೆತುಬಿಟ್ಟೆ, ನನ್ನ ಸಾವಿಗೆ ಯಾರೂ ಹೊಣೆಗಾರರಲ್ಲ. ಯಾರೂ ನನ್ನನ್ನು ತಮ್ಮ ಕೃತ್ಯಗಳಿಂದಾಗಲೀ, ಮಾತಿನಿಂದಾಗಲೀ ಇದಕ್ಕೆ ಉತ್ತೇಜಿಸಲಿಲ್ಲ.

ಇದು ನನ್ನ ನಿರ್ಧಾರ ಮತ್ತು ಇದಕ್ಕೆ ನಾನೊಬ್ಬನೇ ಜವಾಬ್ದಾರ. ನಾನು ಹೋದ ಮೇಲೆ ಈ ವಿಷಯವಾಗಿ ನನ್ನ ಸ್ನೇಹಿತರಿಗೆ ಮತ್ತು ಶತ್ರುಗಳಿಗೆ ತೊಂದರೆ ಕೊಡಬೇಡಿ.

– ರೋಹಿತ್ ವೇಮುಲ

Donate Janashakthi Media

Leave a Reply

Your email address will not be published. Required fields are marked *