ಮಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ನಾರಾಯಣ ಗುರು, ಕುವೆಂಪು, ಬಾಬಾ ಸಾಹೇಬ್ ಅಂಬೆಡ್ಕರ್, ಕಯ್ಯಾರ ಕಿಂಜ್ಞಣ್ಣ ರೈ ಮುಂತಾದ ಖ್ಯಾತನಾಮರನ್ನು ಅವಮಾನಿಸಿದ, ಸಾಮಾಜಿಕ ಜಾಲತಾಣದಲ್ಲಿ ಮಹಾನ್ ಚೇತನಗಳು, ಸಾಹಿತಿ ಬರಹಗಾರರನ್ನು ಹೀನವಾಗಿ ನಿಂದಿಸುವ ರೋಹಿತ್ ಚಕ್ರತೀರ್ಥನಿಗೆ ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯ ಸೇವಾಂಜಲಿ ಟ್ರಸ್ಟ್ ಸಹಯೋಗದಲ್ಲಿ ನಾಗರಿಕ ಸನ್ಮಾನ ಏರ್ಪಡಿಸಿರುವುದು, ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿ ವಿ ಕುಲಪತಿ ಯಡಪಡಿತ್ತಾಯರು ವಹಿಸಿರುವುದಕ್ಕೆ ‘ದೇಶಪ್ರೇಮಿ ಸಂಘಟನೆಗಳ ಒಕ್ಕೂಟ’ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ, ಕಾರ್ಯಕ್ರಮ ರದ್ದತಿಗೆ ಆಗ್ರಹಿಸಿದೆ. ನಜೂನ್ 25 ರಂದು ಸಮಾನ ಮನಸ್ಕ ಸಂಘಟನೆಗಳು, ನಾಗರಿಕರ ಸಹಯೋಗದೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ.
ನಾಡಿನ ಇತಿಹಾಸವನ್ನು ವಿಕೃತವಾಗಿ ತಿರುಚಲು, ಶ್ರೇಣೀಕೃತ ಜಾತಿ ಶ್ರೇಷ್ಟತೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಿರುವ ರೋಹಿತ್ ಚಕ್ರತೀರ್ಥ ವಿರುದ್ದ ಕರ್ನಾಟಕದ ಉದ್ದಗಲಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಾರಾಯಣ ಗುರು, ಕಯ್ಯಾರ ಕಿಜ್ಞಂಣ್ಣ ರೈಗಳ ಮಹತ್ವವನ್ನು ಪಠ್ಯಪುಸ್ತಕದಲ್ಲಿ ಗೌಣಗೊಳಿಸಲು ಯತ್ನಿಸಿರುವುದು ಕರಾವಳಿ ಜಿಲ್ಲೆಗಳಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲಡೆ ಪ್ರತಿಭಟನೆಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಮಂಗಳೂರಿನಲ್ಲಿ ಚಕ್ರತೀರ್ಥ ಗೆ ನಾಗರಿಕ ಸನ್ಮಾನ ಏರ್ಪಡಿಸಿರುವುದು, ಕಾರ್ಯಕ್ರಮದ ಅದ್ಯಕ್ಷತೆಯನ್ನು ವಿಶ್ವ ವಿದ್ಯಾನಿಲಯದ ಕುಲಪತಿಗಳು ವಹಿಸುತ್ತಿರುವುದು ವಿದ್ಯಾವಂತರ ನಗರ ಮಂಗಳೂರಿನ ನಾಗರಿಕರು ತಲೆ ತಗ್ಗಿಸುವಂತೆ ಮಾಡಿದೆ. ವಿ ವಿ ಯ ಕುಲಪತಿಗಳಾದ ಯಡಪಡಿತ್ತಾಯರು ನಾರಾಯಣ ಗುರು, ಕುವೆಂಪು, ಅಂಬೇಡ್ಕರ್ ವಿರೋಧಿಯಾಗಿರುವ ಚಕ್ರತೀರ್ಥ ರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು, ನಾಗರಿಕ ಸನ್ಮಾನವನ್ನು ಆಯೋಜಕರು ರದ್ದುಗೊಳಿಸಬೇಕು ಎಂದು ಇಂದು ನಗರದ ವಿಕಾಸ ಕಚೇರಿಯಲ್ಲಿ ನಡೆದ ‘ದೇಶಪ್ರೇಮಿ ಸಂಘಟನೆಗಳ ಒಕ್ಕೂಟ’ದ ತುರ್ತು ಸಭೆಯಲ್ಲಿ ಆಗ್ರಹಿಸಲಾಯಿತು. ಕಾರ್ಯಕ್ರಮ ರದ್ದುಗೊಳಿಸಲು ಒತ್ತಾಯಿಸಿ ನಾಳೆ (ಜೂನ್ 25) ಸಂಜೆ 4 :30 ಕ್ಕೆ ಸಿಟಿ ಸೆಂಟರ್ ಮಾಲ್ ಸಮೀಪ ಸಮಾನ ಮನಸ್ಕ ಸಂಘಟನೆಗಳು, ನಾಗರಿಕರು ಒಟ್ಟು ಸೇರಿ ಅಲ್ಲಿಂದ ಕಾರ್ಯಕ್ರಮ ನಡೆಯುವ ಡೊಂಗರಕೇರಿ ಕೆನರಾ ಹೈಸ್ಕೂಲ್ ಗೆ ಮೆರವಣಿಗೆಯಲ್ಲಿ ತೆರಳಲು ನಿರ್ಧರಿಸಲಾಯಿತು. ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಲು ಸಭೆ ಮನವಿ ಮಾಡಿತು. ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಿಂಡಿಕೇಟ್ ಸದಸ್ಯ ಎಮ್ ಜಿ ಹೆಗ್ಡೆ, ದಲಿತ ನಾಯಕ ಎಂ ದೇವದಾಸ್, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸಿಪಿಐಎಂ ಮುಖಂಡರಾದ ಯಾದವ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಸಾಲ್ಯಾನ್, ಸಿಐಟಿಯು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಸಮರ್ಥ್ ಭಟ್, ಕಾರ್ಪೊರೇಟರ್ ಲತೀಫ್ ಕಂದಕ್, ಡಿವೈಎಫ್ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಯುವ ಕಾಂಗ್ರೆಸ್ ನ ಇಸ್ಮಾಯಿಲ್, ಫಯಾಜ್ ಜೆಡಿಎಸ್ ಮುಂದಾಳುಗಳಾದ ಸುಮತಿ ಎಸ್ ಹೆಗ್ಡೆ, ಅಲ್ತಾಫ್ ತುಂಬೆ ಸಭೆಯಲ್ಲಿ ಹಾಜರಿದ್ದರು.