ಮೈಸೂರು: ‘ನನಗೆ ಮೈಸೂರಿನ ಜನರು ಸಾಕಷ್ಟು ಪ್ರೀತಿ ತೋರಿಸಿದ್ದಾರೆ. ಮಗಳಂತೆ ನೋಡಿಕೊಂಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ ಅವರು, ‘ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಒಳ್ಳೆಯ ಕೆಲಸ ಮಾಡುವಾಗ, ಕೋವಿಡ್ ಸಂಖ್ಯೆ ನಿಯಂತ್ರಣಕ್ಕೆ ಬರೋವಾಗ, ಜನರಿಂದ ಒಳ್ಳೆಯ ಸ್ಪಂದನೆ ಸಿಗೋವಾಗ, ತಾಲೂಕು ಮಟ್ಟದಲ್ಲಿ ಒಳ್ಳೆಯ ಕೆಲಸ ಆಗೋವಾಗ ಇಂತಹ ಸಮಯದಲ್ಲೇ ವರ್ಗಾವಣೆ ಆಗಿದೆ’ ಎಂದರು.
‘ಹತಾಶೆ ಹಾಗೂ ಅಭದ್ರತೆಯಿಂದ ವರ್ತಿಸಿದ ಶಿಲ್ಪಾನಾಗ್ ಅವರ ಬಗ್ಗೆ ನನಗೆ ಅನುಕಂಪವಿದೆ. ಅಧಿಕಾರಿಯನ್ನು ವರ್ಗಾವಣೆ ಮಾಡಿ ಗುರಿ ಸಾಧಿಸಿದ್ದೇನೆ ಅಂದುಕೊಳ್ಳುವುದು ತುಂಬಾ ತಪ್ಪು. ಜಿಲ್ಲೆಯಲ್ಲಿ ಏನು ನಡೆದಿದೆ, ಏಕಾಗಿ ನಡೆದಿದೆ ಎಂಬುದು ಈಗ ಸಾರ್ವಜನಿಕರಿಗೆ ಗೊತ್ತಾಗಿದೆ. ಯಾವುದೇ ಜಿಲ್ಲೆಯಲ್ಲಿ ಈ ರೀತಿ ಘಟನೆಗಳು ಸಂಭವಿಸಿದರೆ ವ್ಯವಸ್ಥೆ ನಿಭಾಯಿಸಿಕೊಂಡು ಹೋಗುವುದು ಕಷ್ಟ’ ಎಂದು ಹೇಳಿದರು.
ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ನಡೆದಿರುವ ಬೆಳವಣಿಗೆಗಳು ನಡೆಯಬಾರದಿತ್ತು, ಯಾವ ಜಿಲ್ಲೆಯಲ್ಲಿಯೂ, ಸಂಸ್ಥೆಯಲ್ಲಿ ನಡೆದರೂ ಕಾರ್ಯನಿಭಾಯಿಸುವುದು ಕಷ್ಟವಾಗುತ್ತದೆ, ಆದರೆ ನನಗೆ ಶಿಲ್ಪಾ ನಾಗ್ ಅವರ ಹತಾಶೆ, ಅಭದ್ರತೆ ಬಗ್ಗೆ ಅನುಕಂಪವಿದೆ ಎಂದು ರೋಹಿಣಿ ಸಿಂಧೂರಿ ಪ್ರತಿಕ್ರಿಸಿದರು.
‘ನಾನು ಇಲ್ಲಿಗೆ ಬಂದ ಎಂಟು ತಿಂಗಳಲ್ಲಿ ಏಳು ತಿಂಗಳು ಹೇಗಿತ್ತು, ಏಳು ತಿಂಗಳು ಹೇಗಿತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ನಾನು ಜಾಸ್ತಿ ಮಾತಾಡಲ್ಲ, ಎಲ್ಲರನ್ನೂ ಕರೆದು ನಾಟಕವಾಡುವುದು, ರಾಜೀನಾಮೆ ವಾಪಸ್ ಪಡೆಯುವುದು. ಈ ರೀತಿ ಮಾಡಿದರೆ ಹೇಗೆ? ಇದನ್ನು ಶಿಲ್ಪಾನಾಗ್ ಅವರು ಅವಲೋಕನ ಮಾಡಿಕೊಳ್ಳಬೇಕಿತ್ತು. ಯಾರನ್ನೋ ನಾಲ್ಕು ಮಂದಿ ಬೆಂಬಲಿಗರನ್ನು ಕಟ್ಟಿಕೊಂಡು, ಅವರ ಮಾತನ್ನು ಕೇಳಿ ನಾನು ಕೆಲಸ ಮಾಡುವುದಿಲ್ಲ. ಯಾವುದೇ ವ್ಯವಸ್ಥೆಯಲ್ಲಿ ಅದು ಒಳ್ಳೆಯ ಬೆಳವಣಿಗೆಯೂ ಅಲ್ಲ’ ಎಂದರು.
ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿಯಾಗಿ ಶುಭ ಕೋರಿದರು. ‘ಕೋವಿಡ್ ಸಂಬಂಧಿಸಿದಂತೆ ನಡೆದಿರುವ ಕೆಲಸಗಳು ಮತ್ತು ಅವುಗಳ ಮಾಹಿತಿ ನೀಡಿದ್ದೇನೆ. ವಸ್ತುಸ್ಥಿತಿ ತಿಳಿಸಿದ್ದೇನೆ ಎಂದು ರೋಹಿಣಿ ಸಿಂಧೂರಿ ತಿಳಿಸಿದರು.
ಇತ್ತೀಚಿಗೆ ಸರ್ಕಾರವು ರೋಹಿಣಿ ಸಿಂಧೂರಿಯವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ಹಾಗೂ ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆ ಮಾಡಿದೆ.