ವೇತನ ಅಸಮಾನತೆ ಹೆಚ್ಚಳ ಮತ್ತು ಛಿದ್ರವಾಗುತ್ತಿರುವ ಕಾರ್ಮಿಕ ವರ್ಗ ಐಎಲ್‌ಒ ವರದಿ ಬಹಿರಂಗ

ಕಳೆದ ಎರಡು ವರ್ಷಗಳಲ್ಲಿ ಕಾರ್ಮಿಕರ ವೇತನದಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದ್ದರೂ, ಕಾರ್ಮಿಕರ ವೇತನದಲ್ಲಿನ ಅಸಮಾನತೆಗಳು ಹೆಚ್ಚುತ್ತಲೇ ಇವೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ಇತ್ತೀಚಿನ ವರದಿಯು ಬಹಿರಂಗಪಡಿಸಿದೆ. ಬಂಡವಾಳದ ಕೇಂದ್ರೀಕರಣ ಹೆಚ್ಚುತ್ತಿದೆ. ಸಂಪತ್ತಿನ ಕ್ರೋಢೀಕರಣವೂ ಹೆಚ್ಚುತ್ತಿದೆ. ಮತ್ತೊಂದಡೆ, ಕಾರ್ಮಿಕರ ಪಾಲು ಕಡಿಮೆಯಾಗುತ್ತಲೇ ಇದೆ. ಕಾರ್ಮಿಕರು ಹಲವು ವಿಧಗಳಲ್ಲಿ ವಿಭಜನೆಗೊಳ್ಳುತ್ತಾರೆ. ಛಿದ್ರಗೊಂಡ ಕಾರ್ಮಿಕ ವರ್ಗದ ಒಂದು ವಿಭಾಗವನ್ನು ಇನ್ನೊಂದು ವಿಭಾಗದ ವಿರುದ್ಧ ಎತ್ತಿಕಟ್ಟುವ ಮೂಲಕ, ಅಧಿಕೃತ ಮತ್ತು ಅನಧಿಕೃತ ನಿಯಂತ್ರಣ ವಿಧಾನಗಳನ್ನು ಬಳಸಿಕೊಂಡು ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ಬಂಡವಾಳಶಾಹಿಗಳು ಸಮರ್ಥರಾಗಿರುತ್ತಾರೆ. ಅಗ್ಗದ ಬೆಲೆಗೆ ಶ್ರಮ ಲಭ್ಯವಿರುವಲ್ಲೆಲ್ಲಾ ಮತ್ತು ಮೂರನೇ ಜಗತ್ತಿನ ದೇಶಗಳಲ್ಲಿ ಕಾರ್ಮಿಕರ ಶ್ರಮವನ್ನು ಅವರು ಶೋಷಿಸುತ್ತಿದ್ದಾರೆ.
-ಸಂಜಯ್ ರಾಯ್ ((ಕನ್ನಡಕ್ಕೆ; ಸಿಚಿ))

ಕರೋನಾ ಸಾಂಕ್ರಾಮಿಕದ ಪ್ರಭಾವದಿಂದಾಗಿ ಕಾರ್ಮಿಕರ ವೇತನ ಕುಸಿದಿದೆ. ಅಂದಿನ ಪರಿಸ್ಥಿತಿಗೆ ಹೋಲಿಸಿದರೆ ಇತ್ತೀಚೆಗೆ ಸ್ವಲ್ಪ ಬದಲಾವಣೆ ಕಂಡುಬಂದಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಾರ್ಮಿಕರ ನೈಜ ವೇತನದಲ್ಲಿ ಸ್ವಲ್ಪ ಬೆಳವಣಿಗೆ ಕಂಡುಬಂದಿದೆ, ಆದರೆ, ಕಳೆದ ಎರಡು ವರ್ಷಗಳಲ್ಲಿ ಕಾರ್ಮಿಕರ ವೇತನದಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದ್ದರೂ, ಅವರ ವೇತನದಲ್ಲಿನ ಅಸಮಾನತೆಗಳು ಮಾತ್ರ ಹೆಚ್ಚುತ್ತಲೇ ಇವೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ಇತ್ತೀಚಿನ ವರದಿಯು ಬಹಿರಂಗಪಡಿಸಿದೆ. ಪ್ರಪಂಚದಾದ್ಯಂತ ವೇತನಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ಇತ್ತೀಚೆಗೆ ಐಎಲ್ಒ ಬಿಡುಗಡೆ ಮಾಡಿದ ಜಾಗತಿಕ ವೇತನ ವರದಿಯು (Global Wage Report) ಬಹಿರಂಗಪಡಿಸಿದೆ.

ಅಗ್ಗದ ಕಾರ್ಮಿಕ ಶ್ರಮ ದೊರಕುವಲ್ಲಿ ಹೂಡಿಕೆ

ಜಾಗತೀಕರಣದ ಪರಿಣಾಮವಾಗಿ, ಜಗತ್ತಿನಲ್ಲಿ ಎಲ್ಲಿಗೆ ಬೇಕಾಗಿದೆಯೋ ಅಲ್ಲಿಗೆ ಚಲಿಸುವ ಶಕ್ತಿ ಬಂಡವಾಳಕ್ಕಿದೆ. ಆದರೆ ಅದೇ ರೀತಿಯ ಸ್ವಾತಂತ್ರ್ಯ ಕಾರ್ಮಿಕ ವರ್ಗಕ್ಕೆ ಇಲ್ಲ. ಆದ್ದರಿಂದಲೇ, ಎಲ್ಲಿ ಕಾರ್ಮಿಕರ ಶ್ರಮವು ಅಗ್ಗವಾಗಿ ದೊರಕುತ್ತದೆಯೋ ಅಲ್ಲಿಗೆ ಹೋಗಿ, ಅಲ್ಲಿನ ಅಗ್ಗದ ಕಾರ್ಮಿಕ ಶ್ರಮವನ್ನು ಬಳಸಿಕೊಳ್ಳಲು ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ಸರಕುಗಳ ಉತ್ಪಾದನೆಯನ್ನು ಒಂದೇ ಸ್ಥಳದಲ್ಲಿ ಕೇಂದ್ರೀಕರಿಸುವ ಬದಲು, ಅದನ್ನು ಹಲವು ಭಾಗಗಳನ್ನಾಗಿ ವಿಂಗಡಿಸಿ, ಯಾವ ಉತ್ಪಾದನಾ ಅನುಕ್ರಮದಲ್ಲಾದರೂ ಸರಿ, ಕಾರ್ಮಿಕರ ಪಾತ್ರವು ಹೆಚ್ಚು ಅಗತ್ಯವಿರುವ ಭಾಗಗಳನ್ನು ಕಾರ್ಮಿಕರು ಅಗ್ಗವಾಗಿ ದೊರೆಯುವ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವುದು ಜಾಗತೀಕರಣದ ಒಂದು ಅವಿಭಾಜ್ಯ ಅಂಗವಾಗಿದೆ.

ಕೇಂದ್ರೀಕೃತ ಮೇಲ್ವಿಚಾರಣೆಯಲ್ಲಿ ಉತ್ಪಾದನಾ ಜಾಲಗಳ ನಿರ್ವಹಣೆ

ಇಂದು ಮುಕ್ತ ಮಾರುಕಟ್ಟೆ ಅಸ್ತಿತ್ವದಲ್ಲಿದೆ ಎಂದು ಭಾವಿಸುವುದಕ್ಕಿಂತ ದೊಡ್ಡ ಭ್ರಮೆ ಇನ್ನೊಂದಿಲ್ಲ. ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಇಂದು ಜಾಗತಿಕ ಬಹುರಾಷ್ಟ್ರೀಯ ಸಂಸ್ಥೆಗಳು ತಮ್ಮ ಉತ್ಪಾದನಾ ಜಾಲಗಳನ್ನು ಹೆಚ್ಚು ಕೇಂದ್ರೀಕೃತ ಮೇಲ್ವಿಚಾರಣೆಯಲ್ಲಿ ನಿರ್ವಹಿಸುತ್ತವೆ. ತಾವು ತಯಾರಿಸುವ ಸರಕುಗಳಿಗೆ ಬೇಕಾದ ಕಚ್ಚಾವಸ್ತುಗಳು ಮತ್ತು ಬಿಡಿಭಾಗಗಳನ್ನು ಪೂರೈಸುವ ಪೂರೈಕೆದಾರರ ನಡುವೆ ಸ್ಪರ್ಧೆ ಸೃಷ್ಟಿಸುತ್ತಾರೆ. ಅವುಗಳನ್ನು ಅತಿ ಕಡಿಮೆ ಬೆಲೆಗೆ ಯಾರು ಪೂರೈಸುತ್ತಾರೋ ಅವರೇ ಆ ಪೂರೈಕೆ ಒಪ್ಪಂದಗಳನ್ನು ಗೆಲ್ಲುತ್ತಾರೆ. ಇದರ ಪರಿಣಾಮವಾಗಿ, ಪೂರೈಕೆದಾರರು ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಕಡಿಮೆ ವೇತನದಲ್ಲಿ ದುಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ರೀತಿ ಮಾಡುವುದರಿಂದ ಕಾರ್ಮಿಕರ ಪ್ರತಿರೋಧ ಬರುವುದು ಸಹಜ. ಆದರೆ, ಅಂತಹ ಪ್ರತಿರೋಧ ಬಾರದಂತಿರಲು ಕಾರ್ಮಿಕರ ಹಕ್ಕುಗಳನ್ನು ತುಳಿಯುತ್ತಾರೆ. ಕಾರ್ಮಿಕ ಮಾರುಕಟ್ಟೆಯ ಕಡಿಮೆ ವೇತನ ಸಿಗುವ ಕ್ಷೇತ್ರಗಳಲ್ಲಿ ಮಹಿಳಾ ಕಾರ್ಮಿಕರ ಶೇಕಡಾವಾರು ಪ್ರಮಾಣ ಹೆಚ್ಚುತ್ತಿದೆ. ವೇತನ ನೀಡುವ ವ್ಯವಸ್ಥೆಯೂ ಜಾರಿಗೆ ಬಾರದೇ ಇರುವುದರಿಂದ ಗುಂಪುಗುತ್ತಿಗೆ (ಇಷ್ಟು ಕೆಲಸಕ್ಕೆ ಇಷ್ಟು ಹಣ ಕೊಡುತ್ತೇವೆ, ಎಷ್ಟು ಜನರು ಮತ್ತು ಎಷ್ಟು ಸಮಯ ಕೆಲಸ ಮಾಡಿದರು ಎಂದು ಉದ್ಯೋಗದಾತರು ಮಾಡಿಕೊಂಡ ಒಪ್ಪಂದಗಳು) ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಹೆಚ್ಚುತ್ತಿದೆ.

ಇದನ್ನೂ ಓದಿ : “ಪ್ರತಿ ಪೀಳಿಗೆಯೂ ತನ್ನದೇ ಆದ ತುರ್ತು ಪರಿಸ್ಥಿತಿಯನ್ನು ಎದುರಿಸಲೇಬೇಕೆ?”: ಪ್ರಬೀರ್ ಪುರಕಾಯಸ್ತ

ಕಾರ್ಮಿಕರ ವೇತನದಲ್ಲಿ ಹೆಚ್ಚುತ್ತಿರುವ ಅಸಮಾನತೆ

ಈ ಮೇಲೆ ಹೇಳಿದ ಪದ್ದತಿಗಳಿಂದಾಗಿ ಒಂದು ಕಡೆ ಕಾರ್ಮಿಕರ ವೇತನದಲ್ಲಿ ಅಸಮಾನತೆಗಳು ಹೆಚ್ಚುತ್ತಿವೆ. ಮತ್ತೊಂದೆಡೆ, ಆ ಕಾರ್ಮಿಕರು ಹಲವು ವಿಧಗಳಲ್ಲಿ ವಿಭಜನೆಗೊಳ್ಳುತ್ತಾರೆ. ಆದರೆ ಬಂಡವಾಳದ ಕೇಂದ್ರೀಕರಣ ಮಾತ್ರ ಹೆಚ್ಚುತ್ತಿದೆ. ಸಂಪತ್ತಿನ ಕ್ರೋಢೀಕರಣವೂ ಹೆಚ್ಚುತ್ತಿದೆ. ವಿಭಜನೆಗೊಂಡ ಕಾರ್ಮಿಕ ವರ್ಗದ ಒಂದು ವಿಭಾಗವನ್ನು ಇನ್ನೊಂದು ವಿಭಾಗದ ವಿರುದ್ಧ ಎತ್ತಿಕಟ್ಟುವ ಮೂಲಕ, ಅಧಿಕೃತ ಮತ್ತು ಅನಧಿಕೃತ ನಿಯಂತ್ರಣ ವಿಧಾನಗಳನ್ನು ಬಳಸಿಕೊಂಡು ಬಂಡವಾಳಶಾಹಿಗಳು ಮಾತ್ರ ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ಸಮರ್ಥರಾಗಿರುತ್ತಾರೆ

2023 ರವರೆಗೆ ನೈಜ ವೇತನಗಳು ಹಣದುಬ್ಬರದಿಂದಾಗಿ ತೀವ್ರವಾಗಿ ಕುಸಿಯಿತು. ಆದರೆ 2023 ರ ನಂತರ, ಹಣದುಬ್ಬರ ಕಡಿಮೆಯಾದಂತೆ ಅವರು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡರು. ಆದರೆ, ಈ ಪರಿಸ್ಥಿತಿ ಪ್ರಪಂಚದಾದ್ಯಂತ ಒಂದೇ ರೀತಿಯಲ್ಲಿ ಇಲ್ಲ. ಐಎಲ್ಒ ಅಧ್ಯಯನ ಮಾಡಿದ 160 ದೇಶಗಳಲ್ಲಿ, 96 ದೇಶಗಳು ಹಣದುಬ್ಬರದಿಂದ ಉಂಟಾದ ನೈಜ ವೇತನದಲ್ಲಿನ ನಷ್ಟವನ್ನು ಸಂಪೂರ್ಣವಾಗಿ ಬದಲಾಯಿಸಲಿಲ್ಲ. ಪರಿಣಾಮವಾಗಿ, ಸಂಪತ್ತು ಹೆಚ್ಚಿದ್ದರೂ ಅದರಲ್ಲಿ ಕಾರ್ಮಿಕರ ಪಾಲು ಕಡಿಮೆಯಾಗುತ್ತಲೇ ಇದೆ. ಜಿಡಿಪಿಯಲ್ಲಿ ಬೆಳವಣಿಗೆಯ ಹೊರತಾಗಿಯೂ, ಅದರಲ್ಲಿ ಕಾರ್ಮಿಕರ ಪಾಲು ಕುಸಿಯುತ್ತಲೇ ಇದೆ. ಶ್ರೀಮಂತ ರಾಷ್ಟ್ರಗಳನ್ನು ಗಮನಿಸಿದರೆ, ಕಳೆದ 25 ವರ್ಷಗಳಲ್ಲಿ ಅಲ್ಲಿನ ಕಾರ್ಮಿಕರ ಉತ್ಪಾದಕತೆ ಶೇ. 29ರಷ್ಟು ಹೆಚ್ಚಿದೆ, ಆದರೆ ಅವರ ನೈಜ ವೇತನ ಶೇ. 15ರಷ್ಟು ಮಾತ್ರ ಹೆಚ್ಚಿದೆ. ಎರಡನೇ ಮಹಾಯುದ್ಧ ಮುಗಿದ ನಂತರದ ಅವಧಿಯಲ್ಲಿ, ಉದ್ಯೋಗದಾತರ ಲಾಭದ ಪಾಲು ಮತ್ತು ಕಾರ್ಮಿಕರ ವೇತನದ ಪಾಲು ದಶಕಗಳವರೆಗೆ ಬದಲಾಗದೆ ಸ್ಥಿರವಾಗಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಕಾರ್ಮಿಕರ ಪಾಲು ಕಡಿಮೆಯಾಗುತ್ತಲೇ ಇದೆ.

ತೀವ್ರ ಮಟ್ಟದ ಶೋಷಣೆಗೆ ಒಳಗಾಗುತ್ತಿರುವ ಅಸಂಘಟಿತ ಕಾರ್ಮಿಕರು

ಕಳೆದ ಎರಡು ವರ್ಷಗಳಲ್ಲಿ ಕಾರ್ಮಿಕರ ನೈಜ ವೇತನದಲ್ಲಿ ಒಟ್ಟಾರೆ ಹೆಚ್ಚಳ ಕಂಡುಬಂದಿದ್ದರೂ, ಆ ವೇತನಗಳಲ್ಲಿನ ಅಸಮಾನತೆ ಮಾತ್ರ ಹೆಚ್ಚುತ್ತಿದೆ. ಪ್ರಸ್ತುತ ನವ ಉದಾರವಾದಿ ಯುಗದಲ್ಲಿ ವೇತನವನ್ನು ನಿರ್ಧರಿಸುವುದೆಂದರೆ ಒಂದು ರಾಜಕೀಯ ಪ್ರಕ್ರಿಯೆಯಾಗಿ ಬದಲಾಗುತ್ತಿದೆ. ಪರಿಣಾಮವಾಗಿ, ಅಸಂಘಟಿತ ಕಾರ್ಮಿಕರು ತೀವ್ರ ಮಟ್ಟದ ಶೋಷಣೆಗೆ ಒಳಗಾಗುತ್ತಿದ್ದಾರೆ. ಸರ್ಕಾರದಿಂದಾಗಲೀ, ಕಾನೂನಿನಿಂದಾಗಲೀ ಅವರಿಗೆ ಯಾವುದೇ ರಕ್ಷಣೆ ಸಿಗುವುದಿಲ್ಲ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಅಸಮಾನತೆ ಹೆಚ್ಚಾಗಿದೆ. ಅಸಂಘಟಿತ ವಲಯವು ಆ ದೇಶಗಳಲ್ಲಿ ಹೆಚ್ಚು ಬೆಳೆದಿರುವುದು ಇದಕ್ಕೆ ಕಾರಣ. ಕಡಿಮೆ ಆದಾಯದ ದೇಶಗಳಲ್ಲಿ, ಅಸಂಘಟಿತ ಕಾರ್ಮಿಕರು ಶೇಕಡಾ 90 ರವರೆಗೂ ಇದ್ದಾರೆ. ಮಧ್ಯಮ ಆದಾಯದ ದೇಶಗಳಲ್ಲಿ ಶೇಕಡಾ 49 ರಿಂದ 75 ರವರೆಗೆ ಇದ್ದಾರೆ. ಹೆಚ್ಚಿನ ವೇತನ ಮಟ್ಟವನ್ನು ಹೊಂದಿರುವ ದೇಶಗಳು ಕಡಿಮೆ ವೇತನ ಅಸಮಾನತೆಯನ್ನು ಹೊಂದಿರುವುದು ನಮಗೆ ಕಂಡುಬರುತ್ತದೆ. ತೃತೀಯ ಜಗತ್ತಿನ ರಾಷ್ಟ್ರಗಳ ಬಹುಪಾಲು ಅಸಂಘಟಿತ ಕಾರ್ಮಿಕರನ್ನು ಶೋಷಿಸುವ ಮೂಲಕ ಅವರ ಶ್ರಮವನ್ನು ಲೂಟಿ ಮಾಡಿ, ಅವರು ಸಂಗ್ರಹಿಸಿದ ಸಂಪತ್ತನ್ನು ಶ್ರೀಮಂತ ರಾಷ್ಟ್ರಗಳು ಸ್ಥಳಾಂತರಿಸಲಾಗುತ್ತಿವೆ.

ಪ್ರಪಂಚಕ್ಕೆ ಒಂದೇ ಆಧಾರದ ಮೇಲೆ ವೇತನದ ಹೋಲಿಕೆ

ಐಎಲ್ಒ ವರದಿಯು ಪ್ರಪಂಚದಾದ್ಯಂತ ಆಚರಣೆಯಲ್ಲಿರುವ ವೇತನದ ಮಟ್ಟವನ್ನು ಪರಿಶೀಲಿಸಿದೆ. ಇದು ಡಾಲರ್‌ ನ ಕೊಳ್ಳುವ ಶಕ್ತಿಯು (Dollar Purchasing Power Parity- PPP) ಪ್ರಪಂಚದಲ್ಲಿ ಎಲ್ಲಿಯಾದರೂ ಒಂದೇ ಆಗಿರುತ್ತದೆ ಎಂಬ ಆಧಾರದ ಮೇಲೆ ವೇತನವನ್ನು ಹೋಲಿಸುತ್ತದೆ. ಹಾಗೆ ನೋಡಿದಾಗ, ಕಡಿಮೆ ಆದಾಯವಿರುವ ಮೂರನೇ ಜಗತ್ತಿನ ದೇಶಗಳಲ್ಲಿ ವೇತನವು 201 ಡಾಲರ್‌ ಇದೆ. ಅದೇ ಮಧ್ಯಮ ಆದಾಯದ ದೇಶಗಳಲ್ಲಿ, ಅದು 630 ಡಾಲರ್‌ ಗಳಿವೆ. ಇನ್ನೂ ಹೆಚ್ಚಿನ ಆದಾಯದ ದೇಶಗಳಲ್ಲಿ, ವೇತನವು 3333 ಡಾಲರ್‌ಗಳಿವೆ.

ಇದರ ಆಧಾರದ ಮೇಲೆ ನೋಡಿದರೆ, ಕಡಿಮೆ ಆದಾಯದ ದೇಶಗಳಲ್ಲಿ ಕಾರ್ಮಿಕನ ಕೊಳ್ಳುವ ಶಕ್ತಿಯು ಮಧ್ಯಮ-ಆದಾಯದ ದೇಶಗಳ ಕಾರ್ಮಿಕನಿಗೆ ಹೋಲಿಸಿದರೆ ಮೂರನೇ ಒಂದು ಭಾಗ ಮಾತ್ರವೇ ಇದೆ. ಹೆಚ್ಚಿನ ಆದಾಯದ ದೇಶಗಳ ಕಾರ್ಮಿಕನಿಗೆ ಹೋಲಿಸಿದರೆ, ಅದು ಕೇವಲ 16 ನೇ ಒಂದು ಭಾಗ ಮಾತ್ರವೇ ಇದೆ! ಎಲ್ಲಿ ಕಾರ್ಮಿಕ ಶ್ರಮ ಚೌಕಾಸಿಯಾಗಿ ದೊರಕುತ್ತದೋ ಅಲ್ಲಿ ಮುಕ್ತವಾಗಿ ಬಂಡವಾಳ ಹರಿಯುತ್ತದೆ ಎಂಬ ಸತ್ಯ ಈ ವಾಸ್ತವತೆಯಿಂದ ಮತ್ತೊಮ್ಮೆ ಸ್ಪಷ್ಟವಾಗುತ್ತದೆ.  ತಾವು ಯಾವ ದೇಶಗಳಿಗೆ ಸೇರಿದವರಾಗಿದ್ದರೂ, ಅದನ್ನೆಲ್ಲ ಲೆಕ್ಕಿಸದೆ ಪ್ರಪಂಚದಾದ್ಯಂತದ ಎಲ್ಲಾ ಶ್ರೀಮಂತರು ಒಟ್ಟಿಗೆ ಸೇರುತ್ತಾರೆ. ಅಗ್ಗದ ಬೆಲೆಗೆ ಶ್ರಮ ಲಭ್ಯವಿರುವಲ್ಲೆಲ್ಲಾ, ಅವರು ಮೂರನೇ ಜಗತ್ತಿನ ದೇಶಗಳಲ್ಲಿ ಕಾರ್ಮಿಕರ ಶ್ರಮವನ್ನು ಶೋಷಿಸುತ್ತಿದ್ದಾರೆ.

ವೇತನದಲ್ಲಿನ ಚಾಲ್ತಿಯಲ್ಲಿರುವ ಅಸಮಾನತೆಯನ್ನು ಐಎಲ್ಒ ವರದಿಯು ಪರಿಶೀಲಿಸಿತು. ಜಾಗತಿಕವಾಗಿ ನೋಡಿದಾಗ, 2006 ರಲ್ಲಿ ನಿಜವಾದ ವೇತನವು ತಿಂಗಳಿಗೆ 525 ಡಾಲರ್‌ ಇದ್ದರೆ, ಅದು 2021 ರ ವೇಳೆಗೆ ಅದು 825 ಡಾಲರ್‌ ಗೆ ಏರಿತು ಎಂದು ವರದಿಯು ಹೇಳುತ್ತದೆ. ಆದರೆ, ಇದು ಇಡೀ ಜಗತ್ತಿಗೆ ಲೆಕ್ಕಹಾಕಿದ ಅಂಕಿ ಅಂಶ ಮಾತ್ರ. ವಾಸ್ತವವಾಗಿ, ಆಯಾ ದೇಶಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದಾಗ, ವೇತನಗಳಲ್ಲಿನ ಅಸಮಾನತೆಗಳು ಗಮನಾರ್ಹವಾಗಿ ಹೆಚ್ಚುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. ಈ ಅಸಮಾನತೆಗಳು ಶ್ರೀಮಂತ ದೇಶಗಳಲ್ಲಿ ಶೇಕಡಾ 35 ರಷ್ಟು ಕಡಿಮೆಯಾಗಿದೆ. ಅದೇ ಮೂರನೇ ಜಗತ್ತಿನ ದೇಶಗಳಲ್ಲಿ, ಕೇವಲ ಶೇಕಡಾ 11 ರಷ್ಟು ಕಡಿಮೆಯಾಗಿದೆ.

ಹೊಸ ತಂತ್ರಜ್ಞಾನದ ಪರಿಣಾಮಗಳು?

ಹೊಸ ತಂತ್ರಜ್ಞಾನವನ್ನು ಮುಂದಿನ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಪರಿಚಯಿಸಲಾಗುವುದು. ಇದರಿಂದ ಉತ್ಪಾದನೆಯಲ್ಲಿ ಮಾನವ ಶ್ರಮದ ಬಳಕೆಯ ಅಗತ್ಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ವಿಶೇಷ ಕೌಶಲ್ಯ ಹೊಂದಿರುವ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗುತ್ತದೆ. ಈ ವಿಶೇಷ ಕೌಶಲ್ಯವನ್ನು ಹೊಂದಬೇಕೆಂದರೆ ಅದಕ್ಕೆ ಅಗತ್ಯವಾದ ಶಿಕ್ಷಣ ಮತ್ತು ಪರಿಣತಿಯನ್ನು ಪಡೆಯಲು ಶಕ್ತರಾಗಿರಬೇಕು. ಶಿಕ್ಷಣ ಖಾಸಗೀಕರಣಗೊಂಡ ನಂತರ, ಆರ್ಥಿಕ ಸಾಮರ್ಥ್ಯವಿರುವ ಕೆಲವರು ಮಾತ್ರ ಈ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಉಳಿದ ಬಹುಪಾಲು ಜನರು ಈ ಹೊಸ ತಂತ್ರಜ್ಞಾನದಿಂದ ಹೊರಗುಳಿಯುತ್ತಾರೆ. ಅವರೆಲ್ಲರೂ ವೇತನದ ವಿಷಯದಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಯುತ್ತಾರೆ.

ವೇತನ ಅಸಮಾನತೆಗಳ ಜೊತೆಗೆ ಲಿಂಗ ಅಸಮಾನತೆಗಳು ಹೆಚ್ಚಾಗುತ್ತವೆ

ಆಧುನಿಕ ತಂತ್ರಜ್ಞಾನ ಮತ್ತು ರೋಬೋಟ್‌ ಗಳ ಬಳಕೆಯ ಹೊರತಾಗಿಯೂ, ಮೇಲ್ವಿಚಾರಣಾ ಕಾರ್ಯಗಳು, ಆರೈಕೆಗೆ ಸಂಬಂಧಿಸಿದ ಕೆಲಸಗಳು (ಶುಶ್ರೂಷೆಯ ಆರೈಕೆ, ವೈದ್ಯಕೀಯ ಆರೈಕೆ, ಇತ್ಯಾದಿ) ಮತ್ತು ಮನೆಕೆಲಸಗಳನ್ನು ನಿರ್ವಹಿಸಲು ಮಾನವ ಸಂಪನ್ಮೂಲಗಳು ಇನ್ನೂ ಅಗತ್ಯವಿದೆ. ಆದ್ದರಿಂದ ಈ ವಲಯಗಳಲ್ಲಿ ಅತ್ಯಂತ ಕಡಿಮೆ ಕೂಲಿಯಲ್ಲಿ ಕೆಲಸ ಮಾಡಲು ಸಾಧ್ಯವಿರುವ ಮಹಿಳಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಸ ತಂತ್ರಜ್ಞಾನದ ಪರಿಚಯದ ಪರಿಣಾಮವಾಗಿ, ಕೆಲವರು ವೇತನ ಶ್ರೇಣಿಯಲ್ಲಿ ಉನ್ನತ ಸ್ಥಾನವನ್ನು ತಲುಪಿದರೆ, ಬಹುಪಾಲು ಜನರು, ವಿಶೇಷವಾಗಿ ಮಹಿಳೆಯರು, ಕೆಳಮಟ್ಟಕ್ಕೆ ಇಳಿಯುತ್ತಾರೆ. ಇದರಿಂದಾಗಿ ವೇತನ ಅಸಮಾನತೆಗಳ ಜೊತೆಗೆ ಲಿಂಗ ಅಸಮಾನತೆಗಳು ಹೆಚ್ಚಾಗುತ್ತವೆ.

ಒಟ್ಟಾರೆ ನೈಜ ವೇತನ ಏರಿಕೆಯಾಗಿದೆ ಎಂದು ಐಎಲ್ ಒ ವರದಿ ಹೇಳುತ್ತಿದ್ದರೂ, ವೇತನ ಅಸಮಾನತೆ ವೇಗವಾಗಿ ಬೆಳೆಯುತ್ತಿದೆ ಎಂಬುದು ವಾಸ್ತವವಾಗಿದೆ. ಬಂಡವಾಳ ಎಷ್ಟು ಹೆಚ್ಚಾಗಿ ಒಂದೇ ಕಡೆ ಎಷ್ಟು ವೇಗವಾಗಿ ಕೇಂದ್ರೀಕೃತವಾಗುತ್ತದೆಯೋ, ಅಷ್ಟೇ ವೇಗವಾಗಿ ವೇತನಗಳ ಅಸಮಾನತೆ ಬೆಳೆಯುತ್ತಾ ಹೋಗುತ್ತದೆ. ಅದರೊಂದಿಗೆ, ಕಾರ್ಮಿಕರ ವಿಘಟನೆಯೂ ಹೆಚ್ಚುತ್ತಿದೆ. ಕಾರ್ಮಿಕ ಶಕ್ತಿ ಮೇಲೆ ಮತ್ತು ಉತ್ಪಾದನೆಯ ಕ್ರಮದ ಮೇಲೆ ಬಂಡವಾಳದ ರಾಜಕೀಯ ಪ್ರಾಬಲ್ಯದಿಂದಾಗಿ ಇದು ಸಾಧ್ಯವಾಗಿದೆ. ಈ ಬಂಡವಾಳದ ಪ್ರಾಬಲ್ಯವನ್ನು ಎದುರಿಸಲು ಮತ್ತು ಬೆಳೆಯುತ್ತಿರುವ ಅಸಮಾನತೆಯಿಂದ ಹೊರಬರಲು ಪರಿಹಾರವೆಂದರೆ ಛಿದ್ರಗೊಂಡ ಕಾರ್ಮಿಕ ವರ್ಗದ ನಡುವೆ ಸಾಮೂಹಿಕ ವರ್ಗ ಪ್ರಜ್ಞೆಯನ್ನು ನಿರ್ಮಿಸುವ ರಾಜಕೀಯ ಪ್ರಕ್ರಿಯೆಯನ್ನು ವೇಗಗೊಳಿಸುವುದು.

ಇದನ್ನೂ ನೊಡಿ : ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ | ಅಕ್ಷರಕ್ಕಾಗಿ ಸಂಭ್ರಮಿಸುವ ವಾತಾವರಣ: ಅನುಪಮಾJanashakthi Media

Donate Janashakthi Media

Leave a Reply

Your email address will not be published. Required fields are marked *