ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ – ಜೆಎಮ್ಎಸ್ ಕಳವಳ

ಬೆಂಗಳೂರು: ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ವರದಿಯಾಗುತ್ತಿರುವ ಹಿಂಸೆ, ದೌರ್ಜನ್ಯ ಗಳು ಕಳವಳಕಾರಿಯಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನಿಯೋಗ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಮಹಿಳಾ

ಇತ್ತೀಚಿಗೆ ವೈಯಾಲಿ ಕಾವಲ್ ಪೋಲೀಸ್ ಸರಹದ್ದಿನಲ್ಲಿ,ಮನೆಯೊಂದರಲ್ಲಿ ಮಹಿಳೆಯ ದೇಹವನ್ನು ತುಂಡು ತುಂಡು ಮಾಡಿ ಫ್ರಿಜ್ ನಲ್ಲಿ ಇಡಲಾಗಿದೆ ಎಂಬ ವರದಿಯು ನಮ್ಮನ್ನು ಬೆಚ್ಚಿ ಬೀಳಿಸಿದೆ. ಈ ಮೊದಲು ದೇಶದ ದೆಹಲಿಯಲ್ಲಿ ನಡೆದ ಇಂಥಹುದೇ ಘಟನೆಯೀಗ ನಮ್ಮದೇ ನಗರದಲ್ಲಿ ನಡೆದಿದೆ.

ಅಪ್ರಾಪ್ತರೂ ಸೇರಿದಂತೆ ಮಹಿಳೆಯರ ವಿರುದ್ಧದ ಅತ್ಯಾಚಾರ, ದೌರ್ಜನ್ಯ, ಮಾನಭಂಗ, ಮತ್ತು ಇತರ ಹಲವು ರೀತಿಯ ಹಿಂಸೆಗಳನ್ನೂ ಇತರ ಪೆಟ್ಟಿ ಪ್ರಕರಣಗಳಂತೆ ಪರಿಗಣಿಸುವ ಪೃವೃತ್ತಿ ಸಮಾಜ ಮತ್ತು ಸರಕಾರಗಳಲ್ಲಿ ಬೆಳೆದಿದೆ. ಮಹಿಳೆಯರನ್ನು ಸರಕಿನಂತೆ ಪರಿಗಣಿಸುವ, ಭೋಗವಸ್ತುವಾಗಿಯೇ ನೋಡುವ ಮನೋಭಾವ ಸಮಾಜದಲ್ಲಿ ಇರುವಂತೆಯೇ ಅಧಿಕಾರದ ಕೇಂದ್ರದಲ್ಲಿಯೂ ಇರುವುದರಿಂದಲೆ ಮಹಿಳೆಯರ ಘನತೆಯ ಬದುಕಿನ ಸಾಂವಿಧಾನಿಕ ಹಕ್ಕುಗಳನ್ನು ಉಳಿಸುವ ಕೆಲಸ ಹಿಂದೆ ಬೀಳುತ್ತಿದೆ.

ಇದನ್ನೂ ಓದಿ: ಎರಡು ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡಿದ​ ಜಾರ್ಖಂಡ್ ಸರ್ಕಾರ

ವೈಯ್ಯಾಲಿ ಕಾವಲಿನಲ್ಲಿ ಕೃತ್ಯ ನಡೆದು ಸಾಕಷ್ಟು ದಿನಗಳು ಕಳೆದಿವೆ. ಇದುವರೆಗೂ ಅಪರಾಧಿ ಯಾರೆಂದು ನಿಖರವಾಗಿಲ್ಲ. ಮಾಧ್ಯಮಗಳಲ್ಲಿ ವರದಿಯಾದಂತೆ ಹಲವರ ಬೆರಳಚ್ಚುಗಳ ಗುರುತು ಸಿಕ್ಕಿದೆ! ಎಂದರೆ ಇದೊಂದು ಗುಂಪು ಕೃತ್ಯವಾಗಿರಬಹುದು ಎಂಬ ಅನುಮಾನ ಯಾರಿಗಾದರೂ ಮೂಡುತ್ತದೆ. ಇಂದಿನ ವರದಿಗಳ ಪ್ರಕಾರ ಆರೋಪಿಯು ಒರಿಸ್ಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ವರದಿಯಾಗಿದೆ. ಇದೂ ಕೂಡಾ ಆತಂಕಕಾರಿ ಬೆಳವಣಿಗೆಯೇ ಎಂದು ನಾವು ಭಾವಿಸುತ್ತೇವೆ. ಅದೇ ವೇಳೆಗೆ, ಅರೋಪಿ ಮೃತನಾದನೆಂದ ಮಾತ್ರಕ್ಕೆ ಕೃತ್ಯ ಅಲಕ್ಷ್ಯಕ್ಕೆ ಒಳಗಾಗಬಾರದು.

ಸಮಾಜವೊಂದು ವಿಕೃತ ಸ್ವರೂಪಕ್ಕೆ ಒಳಗಾಗುತ್ತಿರುವುದನ್ನು ಗಮನಿಸಿ ಇದೊಂದು ಘಟನೆಯಾಗಿ ನೋಡದೆ ಕ್ರೌರ್ಯದ ಸ್ವರೂಪಗಳಾಗಿ ನೋಡಿ ಅವುಗಳ ನಿಯಂತ್ರಣ ಮತ್ತು ನಿರ್ಮೂಲನದತ್ತ ಚಲಿಸಲು ಯೋಜನೆಗಳನ್ನು ರೂಪಿಸಬೇಕು. ಮಹಿಳೆಯರ ವಿರುದ್ಧದ ಹಲವು ಸ್ವರೂಪದ ಕ್ರೌರ್ಯಗಳನ್ನು ಸಹಜವೆಂಬಂತೆ ಸಮಾಜ ಸ್ವೀಕರಿಸುತ್ತಿದೆ. ಹಸುಗೂಸಿನಿಂದ ಹಿಡಿದು ವೃದ್ಧೆಯರ ಮೇಲೂ ಅತ್ಯಾಚಾರ, ದೌರ್ಜನ್ಯ ಗಳು ನಡೆಯುತ್ತಿವೆ.

ಪ್ರೀತಿ ಮಾಡಿದರೆ ಕುಟುಂಬದ ಮರ್ಯಾದೆಗೆ ಕೇಡು ಎಂದು ಪೋಷಕರಿಂದಲೇ ಕೊಲೆ, ಪ್ರೀತಿ ನಿರಾಕರಿಸಿದರೆ ಅವನಿಂದ ಕೊಲೆ, ಇವು ಪ್ರತಿ ದಿನದ ಸುದ್ದಿಗಳು.

ರಾಜ್ಯ ಸರ್ಕಾರ ಕೂಡಾ ಇವುಗಳತ್ತ ಗಂಭೀರ ಗಮನ ಕೊಡದಿರುವುದು ಅಪರಾಧಿಗಳಿಗೆ ಬಲ ನೀಡಿದಂತಾಗಿದೆ. ಅಪರಾಧ ತಡೆಯಲು ಅಗತ್ಯವಾದ ತಕ್ಷಣದ ಮತ್ತು ದೂರಗಾಮಿ ನೆಲೆಯ ಗುರಿ ನಿರ್ದೇಶಿತ ಕ್ರಮಗಳಿಗಿಂತ ಹೆಚ್ಚು ಸಾಂಕೇತಿಕ ನೆಲೆಯ ಪ್ರಯತ್ನಗಳು ಕಾಣುತ್ತಿದ್ದು ಅವು ಹೆಚ್ಚು ಪ್ರಯೋಜ‌ನಕಾರಿಯಾಗುತ್ತಿಲ್ಲ.
ಘಟಿಸಿದ ಅಪರಾಧ ಪತ್ತೆಗೆ ಸಹಾಯವಾಗಲು ಸಿ.ಸಿ‌. ಕ್ಯಾಮರಾಗಳನ್ನು ಅಳವಡಿಸುವ, ಮೇಲ್ಪದರದ ಸಮಾಲೋಚನಾ ಸಭೆಗಳು ಅಲ್ಪ ಸ್ವಲ್ಪ ಸಹಾಯಕವಾಗಬಹುದೇ ಹೊರತೂ ಅಪರಾಧ ತಡೆಯಲು ಗಂಭೀರ ಪ್ರಯತ್ನಗಳ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ.

ಈ ನಿಟ್ಟಿನಲ್ಲಿ ಹಿಂಸೆ,ದೌರ್ಜನ್ಯ ಗಳ‌ ಬಗ್ಗೆ ಪೋಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ ದೌರ್ಜನ್ಯಗಳ ನಿಯಂತ್ರಣಕ್ಕೆ ಮುಂದಾಗಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.

ಅಪರಾಧಗಳು ನಡೆದಾಗ ಕಠಿಣ ಕ್ರಮ ತೆಗೆದು ಕೊಳ್ಳುವುದರೊಂದಿಗೇ, ದೀರ್ಘ ಕಾಲೀನ ಕ್ರಮಗಳೊಂದಿಗೆ ಮಹಿಳೆಯರ ಸುರಕ್ಷತೆಯನ್ನು ಖಾತ್ರಿ ಮಾಡುವ ಸಮಗ್ರ ಕ್ರಮಗಳಿಗೆ ಸರ್ಕಾರ ಮುಂದಾಗಬೇಕು. ಆಗ ಮಾತ್ರ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸಾಧ್ಯವಾಗುತ್ತದೆ.

ಈ ನಿಟ್ಟಿನಲ್ಲಿ ಗಂಭೀರ ಕ್ರಮಗಳಿಗೆ ಬೆಂಗಳೂರು ನಗರ ಪೋಲೀಸ್ ಮುಂದಾಗಬೇಕು. ನಗರದ ಸಿಲಿಕಾನ್ ಸಿಟಿ ಖ್ಯಾತಿ ಕ್ರೈಮ್ ಸಿಟಿ ಎಂದು ಮಾರ್ಪಾಡಾಗದಂತೆ ಎಚ್ಚರ ವಹಿಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಒತ್ತಾಯಿಸಿ ಸಹಾಯಕ ಪೋಲಿಸ್ ಕಮೀಷನರ್ ಮಾನ್ಯ ಸತೀಶ್ ಕುಮಾರ್ ರವರಿಗೆ ಆಗ್ರಹ ಪತ್ರವನ್ನು ನೀಡಲಾಯಿತು.

ಈ ನಿಯೋಗದಲ್ಲಿ ಗೌರಮ್ಮ. ಲೀಲಾವತಿ. ಶಾರದ. ಸುನಂದ. ಶ್ರೀಮತಿ. ಪುಷ್ಪ ಇದ್ದರು.

ಇದನ್ನೂ ನೋಡಿ: ಬಿಜೆಪಿ – ಜೆಡಿಎಸ್‌ ಸಂಚು, ಒಳಸಂಚು, ರಾಜಭವನ ದುರುಪಯೋಗ – ಇದ್ಯಾವುದಕ್ಕೂ ನಾನು ಹೆದರುವವನಲ್ಲ – ಸಿದ್ದರಾಮಯ್ಯ

Donate Janashakthi Media

Leave a Reply

Your email address will not be published. Required fields are marked *