ಪಾಶ್ಚಿಮಾತ್ಯ ದೇಶಗಳ ಹೆಚ್ಚುತ್ತಿರುವ ಮಿಲಿಟರೀ ವೆಚ್ಚಗಳು ಅವುಗಳ ಭದ್ರತೆಗೆ ಯಾವುದೇ ಮೂಲದಿಂದ ಮಿಲಿಟರಿ ಬೆದರಿಕೆ ಎದುರಾದ ಕಾರಣದಿಂದ ಉಂಟಾದುದಲ್ಲ. ಅದು ಉಂಟಾಗಿರುವುದು ಸಾಮ್ರಾಜ್ಯಶಾಹಿಯು ಗ್ರಹಿಸುವ ಬೆದರಿಕೆಯು ಅಸಲಿಗೆ ರಾಜಕೀಯ ಅರ್ಥವ್ಯವಸ್ಥೆಗೆ ಸಂಬಂಧಿಸಿದ್ದರಿಂದಲೇ ವಿನಃ ಅದು ಬಹಳಷ್ಟು ಪ್ರಚಾರ ಮಾಡುತ್ತಿರುವ ರಷ್ಯಾದ ಬೆದರಿಕೆಗೆ ಸಂಬಂಧಿಸಿದ್ದಲ್ಲ. ಅದನ್ನು ನಿಗ್ರಹಿಸುವ ಸಲುವಾಗಿ ಸಾಮ್ರಾಜ್ಯಶಾಹಿಯ ಪ್ರಾಬಲ್ಯಕ್ಕೆ ಬೆದರಿಕೆಯೊಡ್ಡುವ ಸರ್ಕಾರಗಳನ್ನು ಹೊಂದಿರುವ ದೇಶಗಳ ವಿರುದ್ಧ ದಾಳಿ ಮಾಡುವ ಮೂಲಕ ವಿಶ್ವಾದ್ಯಂತ ಆಳ್ವಿಕೆ ಬದಲಾವಣೆಗಳನ್ನು ತರುವ ಅಗತ್ಯವು ಇತ್ತೀಚೆಗೆ ಅದಕ್ಕೆ ಹೆಚ್ಚು ತುರ್ತಿನದಾಗಿ ಪರಿಣಮಿಸಿದೆ.ಇಲ್ಲವಾದರೆ, ಅದುಹೆಚ್ಚು ಹೆಚ್ಚು ಉಲ್ಬಣಗೊಳ್ಳುವ ಸಾಧ್ಯತೆಯಿರುವ ಸನ್ನಿವೇಶದಲ್ಲಿ ಸಾಮ್ರಾಜ್ಯಶಾಹಿಯು ಸಿಲುಕಿಕೊಂಡಿದೆ. ಇದೆಲ್ಲವೂ ಮೂರನೆಯ ಜಗತ್ತಿನಲ್ಲಿ ಹೆಚ್ಚಲಿರುವ ಸಂಕಷ್ಟಗಳ ಒಂದು ಮುನ್ಸೂಚನೆಯೂ ಆಗಿದೆ.
-ಪ್ರೊ.ಪ್ರಭಾತ್ಪಟ್ನಾಯಕ್
-ಅನು:ಕೆ.ಎಂ.ನಾಗರಾಜ್
ದಿ ಹೇಗ್‌ನಲ್ಲಿ ಈ ವರ್ಷದ ಜೂನ್‌ನಲ್ಲಿ ಜರುಗಿದ ನಾಟೊ (NATO – ಉತ್ತರ ಅಟ್ಲಾಂಟಿಕ್ ದೇಶಗಳ ಮಿಲಿಟರಿ ಕೂಟ) ಶೃಂಗಸಭೆಯಲ್ಲಿ, ನಾಟೊದ ಎಲ್ಲ ಸದಸ್ಯ ದೇಶಗಳೂ ತಮ್ಮ ಮಿಲಿಟರಿ ವೆಚ್ಚಗಳನ್ನು 2035ರ ವೇಳೆಗೆ ತಮ್ಮ ಜಿಡಿಪಿಯ ಶೇ. 5ರ ಮಟ್ಟಕ್ಕೆ ಏರಿಕೆ ಮಾಡಲು ಒಪ್ಪಿಕೊಂಡಿವೆ. 2024ರಲ್ಲಿ ಈ ಮಿಲಿಟರಿ ವೆಚ್ಚಗಳ ಪ್ರಮಾಣವು ಅಮೆರಿಕದಲ್ಲಿ ಆ ದೇಶದ ಜಿಡಿಪಿಯ ಶೇ. 3.5ರಷ್ಟಿತ್ತು ಮತ್ತು ಯುರೋಪಿಯನ್ ಒಕ್ಕೂಟದಲ್ಲಿ ಆಯಾಯದೇಶಗಳಶೇ. 1.9ರಷ್ಟಿತ್ತು. ಅಂದರೆ, ವಿಶೇಷವಾಗಿ ಯುರೋಪಿಯನ್ ಒಕ್ಕೂಟದಲ್ಲಿ ಮಿಲಿಟರಿ ವೆಚ್ಚಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಬೇಕಾಗುತ್ತದೆ.
ಅದೇ ರೀತಿಯಲ್ಲಿ, ಯುದ್ದಾನಂತರ ಶಾಂತಿ ನೀತಿಗೆ ಬದ್ಧವಾಗಿದ್ದ ಮತ್ತು ತನ್ನ ಮಿಲಿಟರಿ ವೆಚ್ಚವನ್ನು ಜಿಡಿಪಿಯ ಶೇ. 1ರ ಮಟ್ಟಕ್ಕೆ ಮಿತಿಗೊಳಿಸಿಕೊಂಡಿದ್ದ ಜಪಾನ್, ಈ ಪ್ರಮಾಣವನ್ನು ಕ್ರಮೇಣ ಏರಿಕೆ ಮಾಡಿಕೊಳ್ಳಲಿದೆ: ಪ್ರಸ್ತುತ ಅದು ತನ್ನ ಜಿಡಿಪಿಯ ಶೇ. 1.8ರಷ್ಟನ್ನು ಖರ್ಚು ಮಾಡುತ್ತದೆ. ಆದರೆ, ಅದರ ಹೊಸ ಪ್ರಧಾನಿ ಸನೇ ತಕೈಚಿ ಅವರು ಅಧಿಕಾರ ವಹಿಸಿಕೊಂಡ ನಂತರ ಮಾಡಿದ ತಮ್ಮ ಮೊದಲ ಭಾಷಣದಲ್ಲಿ, ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ, ಅಂದರೆ ಮಾರ್ಚ್ 2026ರ ವೇಳೆಗೆ ಈ ಅನುಪಾತವನ್ನು ಶೇ. 2ಕ್ಕೆ ಏರಿಸುವ ಉದ್ದೇಶವನ್ನು ಘೋಷಿಸಿದ್ದಾರೆ. ಈ ರೀತಿಯಲ್ಲಿ, ಎಲ್ಲ ಸಾಮ್ರಾಜ್ಯಶಾಹಿ ದೇಶಗಳಲ್ಲೂ ಮಿಲಿಟರೀಕರಣವು ಗಣನೀಯ ವೇಗದಲ್ಲಿ ಏರಿಕೆಯಾಗುತ್ತಿರುವುದನ್ನು ನಾವು ಕಾಣುತ್ತೇವೆ. ಇದೊಂದು ಹೊಸ ವಿದ್ಯಮಾನವೇ ಸರಿ.
ಇದನ್ನೂ ಓದಿ: ಕೆಂಪು ಕೋಟೆ ಬಳಿ ಕಾರು ಸ್ಫೋಟ: ಬೆಂಗಳೂರು ಹೈ ಅಲರ್ಟ್!
ಏರಿಕೆಯಾಗುತ್ತಿರುವ ಈ ಮಿಲಿಟರೀಕರಣವನ್ನು ಸಮರ್ಥಿಸಿಕೊಳ್ಳಲು ಎಲ್ಲ ರೀತಿಯ ಬೆದರಿಕೆಗಳ, ವಿಶೇಷವಾಗಿ ರಷ್ಯಾದ ಬೆದರಿಕೆಯ, ಮೊರೆ ಇಡಲಾಗಿದೆ. ಸಾಮ್ರಾಜ್ಯಶಾಹಿ ಪ್ರಚಾರ ಯಂತ್ರವು ರಷ್ಯಾದ ವಿಸ್ತರಣಾವಾದದ ಒಂದು ಭೂತವನ್ನು ಸೃಷ್ಟಿಸುವಲ್ಲಿ ಮತ್ತು ಉಕ್ರೇನ್ ಮೇಲಿನ ಆಕ್ರಮಣವು ಅದರ ಮೊದಲನೆಯ ಹೆಜ್ಜೆ ಎಂದು ಬಿಂಬಿಸುವಲ್ಲಿ ಸಕ್ರಿಯವಾಗಿ ತೊಡಗಿದೆ. ಸೋವಿಯತ್ ಒಕ್ಕೂಟದ ವಿಸರ್ಜನೆಯ ಸಮಯದಲ್ಲಿ ಅದರ ಅಂದಿನ ಅಧ್ಯಕ್ಷ ಮಿಖಾಯಿಲ್ ಗೋರ್ಬಚೋವ್ ಅವರಿಗೆ ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಆಡಳಿತವು ನೀಡಿದ್ದ ಭರವಸೆಗೆ ತದ್ವಿರುದ್ಧವಾಗಿ, ರಷ್ಯಾದ ಗಡಿ ಸುತ್ತಮುತ್ತ ಇರುವ ದೇಶಗಳನ್ನು ನಾಟೋಗೆ ಸೇರಿಸಿಕೊಳ್ಳಲು ಮತ್ತು ರಷ್ಯಾವನ್ನು ವಾಸ್ತವಿಕವಾಗಿ ಸುತ್ತುವರಿಯುವ ಮಟ್ಟಿಗೆ ಸದಸ್ಯತ್ವವನ್ನು ವಿಸ್ತರಿಸಿದ್ದು ನಾಟೋ ಎಂಬುದು ಒಂದು ವಾಶ್ತವಾಂಶ.
ಈ ರೀತಿಯಲ್ಲಿ ವಿಸ್ತರಣೆಯಾಗುತ್ತಿದ್ದ ನಾಟೋ, ಉಕ್ರೇನ್ಅನ್ನು ತನ್ನ ಮಿಲಿಟರಿ ಕೂಟದೊಳಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿದಾಗ ಮಾತ್ರವೇ ರಷ್ಯಾ ತನ್ನ ವಿರೋಧವನ್ನು ವ್ಯಕ್ತಪಡಿಸಿತು. ಉಕ್ರೇನ್ ಮತ್ತು ರಷ್ಯಾದ ನಡುವೆ ಏರ್ಪಟ್ಟ ಮಿನ್ಸ್ಕ್ ಒಪ್ಪಂದವು ಉಕ್ರೇನ್ ಮೇಲಿನ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ತಪ್ಪಿಸುತ್ತಿತ್ತು. ಆದರೆ, ಈ ಒಪ್ಪಂದವನ್ನು ಪಾಶ್ಚ್ಯಾತ್ಯ ದೇಶಗಳು ತಮ್ಮ ಉದ್ದೇಶಪೂರ್ವಕ ಹಸ್ತಕ್ಷೇಪದ ಮೂಲಕ ವಿಫಲಗೊಳಿಸಿದವು. ಈ ಒಪ್ಪಂದವನ್ನು ತೊರೆಯುವಂತೆ ಉಕ್ರೇನಿನ ಮನವೊಲಿಸಲು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಸ್ವತಃ ಉಕ್ರೇನಿಗೆ ಹೋಗಿದ್ದರು. ಈ ಎಲ್ಲ ಸಂಗತಿಗಳೂ ನಾಟೋ ಮಾತ್ರವೇ ನಿಜವಾದ ವಿಸ್ತರಣಾವಾದಿ ಎಂಬುದನ್ನು ನಿಸ್ಸಂದಿಗ್ಧವಾಗಿ ತೋರಿಸುತ್ತವೆ. ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ದೇಶಗಳು ತಮ್ಮ ಮಿಲಿಟರೀಕರಣವನ್ನು ಸಮರ್ಥಿಸಿಕೊಳ್ಳಲು ರಷ್ಯಾದ ಭೂತವನ್ನು ಬಳಸಿಕೊಳ್ಳುತ್ತಿವೆ.
ರಷ್ಯಾ-ವಿರೋಧಿ ಪ್ರಚಾರದ ತೀವ್ರತೆ ಯುರೋಪಿನಲ್ಲಿ ಎಷ್ಟರಮಟ್ಟಿಗೆ ಇದೆಯೆಂದರೆ, ಅದರ ಹುನ್ನಾರವನ್ನು ಎತ್ತಿ ತೋರಿಸುವ ಯಾರನ್ನಾದರೂ ರಷ್ಯಾದ ಏಜೆಂಟ್ ಎಂದೂ ಮತ್ತು ಪುಟಿನ್ ಚೇಲಾ ಎಂದೂ ಕರೆಯಲಾಗುತ್ತದೆ: ಜರ್ಮನಿಯ ‘ಡಿ ಲಿಂಕೆ’ ಪಕ್ಷದಿಂದ ಹೊರಬಂದು ತನ್ನದೇ ಒಂದು ಪ್ರತ್ಯೇಕ ಎಡ ಪಕ್ಷವನ್ನು ರಚಿಸಿಕೊಂಡಿರುವ ನಾಯಕಿ ಸಹ್ರಾ ವಾಗೆನ್‌ಕ್ನೆಕ್ಟ್ ಅವರನ್ನು ರಷ್ಯಾದ ಬೆದರಿಕೆಯ ಪೊಳ್ಳುತನವನ್ನು ಎತ್ತಿ ತೋರಿಸಿದ್ದಕ್ಕಾಗಿ ಮತ್ತು ಯುರೋಪಿನ ಭದ್ರತೆಯನ್ನು ಖಾತ್ರಿಪಡಿಸುವ ಸಾಧನವಾಗಿ ರಷ್ಯಾದೊಂದಿಗೆ ಸಹಕರಿಸಬೇಕು ಎಂದು ವಾದಿಸಿದ್ದಕ್ಕಾಗಿ ಜರ್ಮನ್ ಮಾಧ್ಯಮಗಳು ತರಾಟೆಗೆ ತೆಗೆದುಕೊಂಡಿವೆ.
ಯುರೋಪಿಯನ್ನರ ಆರ್ಥಿಕ ಆತ್ಮಘಾತಕ ಕೃತ್ಯ
ರಷ್ಯಾದ ಬಗ್ಗೆ ಯುರೋಪಿಯನ್ನರಿಗೆ ಸಾಕಷ್ಟು ಅನುಮಾನವಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ರಷ್ಯಾದ ಮೇಲೆ ಪಾಶ್ಚ್ಯಾತ್ಯ ಶಕ್ತಿಗಳು ಹೇರಿದ ಏಕಪಕ್ಷೀಯ ನಿರ್ಬಂಧಗಳು, ಯುರೋಪ್ ಈ ಹಿಂದೆ ಅವಲಂಬಿಸಿದ್ದ ರಷ್ಯಾದ ಇಂಧನ ಆಮದುಗಳಿಗೆ ಬದಲಾಗಿ ಹೆಚ್ಚು ದುಬಾರಿಯಾದ ಅಮೆರಿಕದ ಇಂಧನವನ್ನು ಕೊಳ್ಳಬೇಕಾದ ಬಲವಂತವೂ ಆಗಿಬಿಟ್ಟಿದೆ. ಆದರೆ, ಈ ನಿರ್ಬಂಧಗಳು ಜರ್ಮನಿಯಲ್ಲಿ ಮತ್ತು ಇತರೆಡೆಗಳಲ್ಲಿ ಜೀವನ ವೆಚ್ಚಗಳ ಏರಿಕೆಗೆ ಕಾರಣವಾಗಿವೆ ಮತ್ತು ಅದರಿಂದಾಗಿ ಕಾರ್ಮಿಕ ವರ್ಗಕ್ಕೆ ಹೆಚ್ಚಿನ ಸಂಕಷ್ಟಗಳು ಎದುರಾಗಿವೆ.

ಉತ್ಪಾದನಾ ವೆಚ್ಚಗಳು ಏರಿಕೆಯಾಗಿರುವುದರಿಂದ ಜರ್ಮನಿಯಲ್ಲಿ ತಯಾರಿಸಿದ ಸರಕುಗಳು ಸ್ಪರ್ಧಾತ್ಮಕವಲ್ಲದಂತಾಗಿವೆ. ಹಾಗಾಗಿ ಜರ್ಮನಿಯಲ್ಲಿ ಬಂಡವಾಳ ಹೂಡಿಕೆಯು ಕುಂಠಿತಗೊಳ್ಳುತ್ತದೆ ಮತ್ತು ಅಲ್ಲಿ “ಅಪ-ಕೈಗಾರಿಕೀಕರಣ” ಪ್ರಕ್ರಿಯೆ ಆರಂಭವಾಗಲು ಕಾರಣವಾಗುತ್ತದೆ. ಹಾಗಾಗಿ, ತನ್ನ ಇಂಧನ ಮಾರುಕಟ್ಟೆಯನ್ನು ಭದ್ರಪಡಿಸಿಕೊಳ್ಳುವ ಗುರಿ ಹೊಂದಿರುವ ಅಮೆರಿಕವು ಯುರೋಪಿನ ಮೇಲೆ ಒತ್ತಡ ಹೇರುತ್ತಿದೆ ಎಂಬುದು ಎಲ್ಲರಿಗೂ ಅರ್ಥವಾಗುವ ವಿಷಯವೇ. ಆದರೂ ಸಹ, ಈ ಏಕಪಕ್ಷೀಯ ನಿರ್ಬಂಧಗಳ ವಿಷಯದಲ್ಲಿ, ತನ್ನ ಸ್ವಂತ ಹಿತಾಸಕ್ತಿಗಳನ್ನು ಬಲಿಕೊಟ್ಟು ಅಮೆರಿಕದ ಮುಂದೆ ಯುರೋಪ್ ಶರಣಾಗುತ್ತಿರುವ ಅಂಶವು ದಿಗ್ಭ್ರಮೆಗೊಳಿಸುವಂತಿದೆ.
ಈ ವಿದ್ಯಮಾನದ ಬಗ್ಗೆ ನೀಡಬಹುದಾದ ಒಂದು ವಿವರಣೆಯೆಂದರೆ, ಅದು ಯುರೋಪಿನ ಪ್ರಸ್ತುತ ನಾಯಕತ್ವದ ಸ್ವರೂಪವೇ. ಈ ನಾಯಕರುಗಳ ಪೈಕಿ ಬಹಳಷ್ಟು ಮಂದಿಯು ಉದ್ದಿಮೆಯೊಂದಿಗೆ, ವಿಶೇಷವಾಗಿ ಅಮೇರಿಕದ ಉದ್ದಿಮೆಗಳೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ: ಉದಾಹರಣೆಗೆ ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಕಂಪನಿಯಾದ ಬ್ಲ್ಯಾಕ್ ರಾಕ್‌ನ ಜರ್ಮನ್ ಅಂಗಸಂಸ್ಥೆಯ ಮೇಲ್ವಿಚಾರಣಾ ಮಂಡಳಿಯ ಅಧ್ಯಕ್ಷರಾಗಿದ್ದರು. ಸಾಂದರ್ಭಿಕವಾಗಿ ಹೇಳುವುದಾದರೆ, ಫ್ರಾನ್ಸಿನ ಚಾರ್ಲ್ಸ್ ಡಿ ಗಾಲ್ ಮತ್ತು ಜರ್ಮನಿಯ ವಿಲ್ಲಿ ಬ್ರಾಂಡ್ಟ್ ಅವರಂಥಹ ಹಿಂದಿನ ನಾಯಕರುಗಳು ತಮ್ಮ ದೇಶದ ಹಿತಾಸಕ್ತಿಗಳ ವಿಷಯದಲ್ಲಿ ಅಮೆರಿಕದ ವಿರುದ್ಧ ಸೆಟೆದು ನಿಲ್ಲುತ್ತಿದ್ದರು. ಆದರೆ, ಪ್ರಸ್ತುತ ಯುರೋಪಿಯನ್ ನಾಯಕತ್ವವು ಅಮೆರಿಕದ ಹಿತಾಸಕ್ತಿಗಳಿಗೆ ಎದುರಾಗಿ “ಯುರೋಪಿಯನ್ ಹಿತಾಸಕ್ತಿಗಳನ್ನು” ಬೆಂಬಲಿಸುತ್ತದೆ ಎಂದು ನಿರೀಕ್ಷಿಸಲಾಗದು.
ಈ ಅಂಶವು ನಗಣ್ಯವಲ್ಲದಿದ್ದರೂ, ಸ್ಪಷ್ಟವಾಗಿ ಕಾಣುವ ಯುರೋಪಿನ ಈ ಆರ್ಥಿಕ ಆತ್ಮಘಾತಕ ಕೃತ್ಯವನ್ನು ವಿವರಿಸಲು ಅದು ಮಾತ್ರವೇ ಸಾಕಾಗುವುದಿಲ್ಲ. ಉಕ್ರೇನ್‌ನೊಂದಿಗಿನ ಯುದ್ಧವು ಒಂದು ವೇಳೆ ದೀರ್ಘಸಮಯದವರೆಗೆಎಳೆದುಕೊಂಡು ಹೋದರೆ, ರಷ್ಯಾದಲ್ಲಿ ನಾಯಕತ್ವ ಬದಲಾಗುತ್ತದೆ ಎಂದು ಯುರೋಪಿನ ನಾಯಕರು ನಂಬುತ್ತಾರೆ ಮತ್ತು ಅದನ್ನು ಆಯೋಜಿಸುತ್ತಾರೆ ಕೂಡ ಎಂಬುದನ್ನು ಭಾವಿಸಿಕೊಳ್ಳುವುದು ಕಷ್ಟವೇನಲ್ಲ. ಯುರೋಪಿನ ನಾಯಕರ ಈ ಕನಸು ಒಂದು ವೇಳೆ ನನಸಾದರೆ, ರಷ್ಯಾದ ಅಗಾಧ ನೈಸರ್ಗಿಕ ಸಂಪನ್ಮೂಲಗಳನ್ನು ಬಾಚಿಕೊಳ್ಳುವ ಅನಿಯಂತ್ರಿತ ಅವಕಾಶವನ್ನು ಯುರೋಪ್ ಮತ್ತು ಯುಎಸ್ ಪಡೆಯುತ್ತವೆ. ಆದರೆ, ರಷ್ಯಾ ಈಗ ಚೀನಾ ಮತ್ತು ಇರಾನ್ ಸೇರಿದಂತೆ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯನ್ನು ವಿರೋಧಿಸುವ ಮತ್ತು ಅದರ ಪ್ರಾಬಲ್ಯವನ್ನು ಪ್ರಶ್ನಿಸುವ ಸಾಮರ್ಥ್ಯವನ್ನು ಹೊಂದಿರುವ ದೇಶಗಳ ಗುಂಪಿನ ಒಂದು ಭಾಗವಾಗಿದೆ. ಆದ್ದರಿಂದ, ರಷ್ಯಾದಲ್ಲಾಗುವ ಆಳ್ವಿಕೆಯ ಬದಲಾವಣೆಯು ಸಾಮ್ರಾಜ್ಯಶಾಹಿಯ ಮೇಲಿನ ವಿರೋಧವನ್ನು ಬಹಳವಾಗಿ ತಗ್ಗಿಸುತ್ತದೆ.
ಆಳ್ವಿಕೆ ಬದಲಾವಣೆಯ ಹಸ್ತ ಕ್ಷೇಪಗಳಿಗೆ ನೆಪ

ಮಿಲಿಟರಿ ಹಸ್ತಕ್ಷೇಪದ ಮೂಲಕ ವೆನೆಜುವೆಲಾದಲ್ಲಿ ಆಳ್ವಿಕೆ ಬದಲಾವಣೆಯನ್ನು ತರಲು ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಪ್ರಯತ್ನವೂ ಅಷ್ಟೇ ಗಮನಾರ್ಹವಾಗಿದೆ. ಅದಕ್ಕಾಗಿ, ಹ್ಯೂಗೋ ಚಾವೆಜ್ ಅವರ ಉತ್ತರಾಧಿಕಾರಿಯೂ ಮತ್ತು ಬೊಲಿವೇರಿಯನ್ ಕ್ರಾಂತಿಯ ಪ್ರತಿನಿಧಿಯೂ ಆಗಿರುವ ವೆನೆಜುವೆಲಾದ ಎಡಪಂಥೀಯ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಒಬ್ಬ “ಮಾದಕ ವಸ್ತು-ಭಯೋತ್ಪಾದಕ” ಮತ್ತು ಮಾದಕವಸ್ತು ಸಂಘಟನೆಯ ಮುಖ್ಯಸ್ಥ ಎಂದು ದೂಷಿಸುವ ಮೂಲಕ ಒಂದು ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ಅಪರೂಪದ ಭೂ ಖನಿಜಗಳೂ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳಿಂದ ವೆನೆಜುವೆಲಾ ಸಮೃದ್ಧವಾಗಿದೆ ಮತ್ತು ಸಾಮ್ರಾಜ್ಯಶಾಹಿಗೆ ಸಂಭಾವ್ಯ ಬೆದರಿಕೆಯೊಡ್ಡುವ ಸಾಮ್ರಾಜ್ಯಶಾಹಿ-ವಿರೋಧಿ ದೇಶಗಳ ಒಂದು ಗುಂಪಿನ ಭಾಗವಾಗಿದೆ. ಆದ್ದರಿಂದ, ವೆನೆಜುವೆಲಾದಲ್ಲಿ ಆಳ್ವಿಕೆ ಬದಲಾವಣೆಯು ಸಾಮ್ರಾಜ್ಯಶಾಹಿಗೆ ದುಪ್ಪಟ್ಟು ಪ್ರಯೋಜನಕಾರಿಯಾಗುತ್ತದೆ.
ಆಳ್ವಿಕೆ ಬದಲಾವಣೆಗಾಗಿ ಡೊನಾಲ್ಡ್ ಟ್ರಂಪ್ ಹೊಂದಿರುವ ಯೋಜನೆಗಳು ವೆನೆಜುವೆಲಾದ ಆಚೆಗೂ ವಿಸ್ತರಿಸಿವೆ ಎಂದು ತೋರುತ್ತದೆ. ಪುನಃ ಅವರು ಯಾವ ಪುರಾವೆಯೂ ಇಲ್ಲದೆ ಕೊಲಂಬಿಯಾದ ಎಡಪಂಥೀಯ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರನ್ನು ಒಬ್ಬ “ಮಾದಕವಸ್ತು ನಾಯಕ” ಎಂದು ಕರೆದಿದ್ದಾರೆ. ಇದು ಅಲ್ಲಿ ಆಳ್ವಿಕೆ ಬದಲಾವಣೆ ಪ್ರಯತ್ನದ ಒಂದು ಮುನ್ಸೂಚನೆಯೂ ಹೌದು. ಈ ಪ್ರಯತ್ನದಲ್ಲಿ ಟ್ರಂಪ್ ಒಂದು ವೇಳೆ ಯಶಸ್ವಿಯಾದರೆ, ಕ್ಯೂಬಾ ಸೇರಿದಂತೆ ಲ್ಯಾಟಿನ್ ಅಮೆರಿಕಾ ಖಂಡದ ಹಲವಾರು ದೇಶಗಳಲ್ಲಿ ಆಳ್ವಿಕೆ ಬದಲಾವಣೆಗಳನ್ನು ಉಂಟುಮಾಡುವುದಕ್ಕಾಗಿ ಒಂದು ಬಹು ದೊಡ್ಡ ಬಲೆಯನ್ನು ಬೀಸುವಷ್ಟು ಧೈರ್ಯ ಅವರಲ್ಲಿ ಮೊಳೆಯುತ್ತದೆ.
ಸಾಮ್ರಾಜ್ಯಶಾಹಿ ದೇಶಗಳ ಹೆಚ್ಚುತ್ತಿರುವ ಮಿಲಿಟರೀಕರಣವು ಅವುಗಳ ಭದ್ರತೆಗೆ ಯಾವುದೇ ಮೂಲದಿಂದ ಬೆದರಿಕೆ ಎದುರಾದ ಕಾರಣದಿಂದ ಉಂಟಾದುದಲ್ಲ. ಈಮಿಲಿಟರೀಕರಣವು ಸಾಮ್ರಾಜ್ಯಶಾಹಿಯ ಪ್ರಾಬಲ್ಯಕ್ಕೆ ಬೆದರಿಕೆಯೊಡ್ಡುವ ಸರ್ಕಾರಗಳನ್ನು ಹೊಂದಿರುವ ದೇಶಗಳ ವಿರುದ್ಧ ದಾಳಿ ಮಾಡುವ ಮೂಲಕ ವಿಶ್ವಾದ್ಯಂತ ಆಳ್ವಿಕೆ ಬದಲಾವಣೆಗಳನ್ನು ತರುವ ಬಯಕೆಯಿಂದ ಉಂಟಾಗಿದೆ. ಈ ಬಯಕೆ ಉಂಟಾಗಿರುವುದು ಏಕೆಂದರೆ, ಸಾಮ್ರಾಜ್ಯಶಾಹಿಯು ಗ್ರಹಿಸುವ ಬೆದರಿಕೆಯು ಅಸಲಿಗೆ ರಾಜಕೀಯ ಅರ್ಥವ್ಯವಸ್ಥೆಗೆ ಸಂಬಂಧಿಸಿದೆಯೇ ವಿನಃ ಅದು ಮಿಲಿಟರಿ ಉದ್ದೇಶಗಳಿಗೆ ಸಂಬಂಧಿಸಿದ್ದಲ್ಲ. ರಾಜಕೀಯ ಅರ್ಥವ್ಯವಸ್ಥೆಗೆ ಸಂಬಂಧಿಸಿದ ಈ ಬೆದರಿಕೆಯನ್ನು ನಿಗ್ರಹಿಸುವ ಸಲುವಾಗಿ ಆಳ್ವಿಕೆಗಳನ್ನು ಬದಲಾವಣೆ ಮಾಡುವ ಅಗತ್ಯವು ಇತ್ತೀಚೆಗೆ ಒಂದು ಹೆಚ್ಚು ತುರ್ತಿನದಾಗಿ ಪರಿಣಮಿಸಿದೆ. ಈ ಅಗತ್ಯವನ್ನು ತುರ್ತಾಗಿ ಈಗ ನಿಭಾಯಿಸದಿದ್ದರೆ, ಅದು ಹೆಚ್ಚು ಹೆಚ್ಚು ಉಲ್ಬಣಗೊಳ್ಳುವ ಸಾಧ್ಯತೆಯಿರುವ ಸನ್ನಿವೇಶದಲ್ಲಿ ಸಾಮ್ರಾಜ್ಯಶಾಹಿಯು ಸಿಲುಕಿಕೊಂಡಿದೆ.
ಸಾಮ್ರಾಜ್ಯಶಾಹಿಯ ಪರಿಸ್ಥಿತಿ
ಸಾಮ್ರಾಜ್ಯಶಾಹಿಗೆ ಈ ಪರಿಸ್ಥಿತಿ ಎದುರಾಗಿದೆ ಏಕೆಂದರೆ, ನವ-ಉದಾರವಾದಿ ಬಂಡವಾಳಶಾಹಿಯು ಮುಂದಿನ ದಾರಿಗಾಣದ ಒಂದು ಅಂತಿಮ ಹಂತವನ್ನು ತಲುಪಿದೆ. ಜಾಗತಿಕ ಅರ್ಥವ್ಯವಸ್ಥೆಯು ಸ್ಥಗಿತಗೊಂಡಿರುವ ಅಂಶವು ಈ ದಾರಿಗಾಣದ ಪರಿಸ್ಥಿತಿಯ ಅಭಿವ್ಯಕ್ತಿಯಾಗಿದೆ. ಈ ಸ್ಥಗಿತತೆಯಿಂದ ಅರ್ಥವ್ಯವಸ್ಥೆಯು ಹೊರಬರುವುದು ನವ-ಉದಾರವಾದಿ ಬಂಡವಾಳಶಾಹಿಯ ಚೌಕಟ್ಟಿನ ಪರಿಧಿಯೊಳಗೆ ಸಾಧ್ಯವಿಲ್ಲ. ಎರಡನೇ ಮಹಾಯುದ್ಧದ ನಂತರ, ಜಾಗತಿಕ ಅರ್ಥವ್ಯವಸ್ಥೆಯ ದಶಕ-ನಿಧಾನಗತಿಯ ಬೆಳವಣಿಗೆಯ ದರವನ್ನು 2012-21ರ ದಶಕದಲ್ಲಿ ಕಂಡಿದೆ. ಈ ನಿಧಾನಗತಿಯ ಬೆಳವಣಿಗೆಯ ದರವು ಅಮೆರಿಕದ ಅರ್ಥವ್ಯವಸ್ಥೆಯ ಪ್ರಸ್ತುತ ಗುಣಲಕ್ಷಣಗಳನ್ನು ನಿರೂಪಿಸುವ ಕೃತಕ ಬುದ್ಧಿಮತ್ತೆ (AI) ಗುಳ್ಳೆ ಒಡೆದಾಗ ಇನ್ನಷ್ಟು ನಿಧಾನಗೊಳ್ಳುತ್ತದೆ. ಇದು ಸಂಭವಿಸಿದಾಗ, ಕಾರ್ಮಿಕರನ್ನು ಸ್ಥಳಾಂತರಿಸುವ ಕೃತಕ ಬುದ್ಧಿಮತ್ತೆಯ ಪರಿಚಯದಿಂದಲೇ ಉಂಟಾದ ನಿರುದ್ಯೋಗದಿಂದ ಗುಳ್ಳೆ ಒಡೆದ ನಂತರ ಅಧಿಕವಾಗಿ ಉಂಟಾಗುವ ನಿರುದ್ಯೋಗವು ಮತ್ತಷ್ಟು ಉಲ್ಬಣಗೊಳ್ಳುತ್ತದೆ.
ನಿರುದ್ಯೋಗದ ಈ ಪರಿಯ ಏರಿಕೆಯಿಂದ ಮೂರನೇ ಜಗತ್ತಿಗೆ ನಿರ್ದಿಷ್ಟವಾಗಿ ಹೊಡೆತ ಬೀಳುತ್ತದೆ. ಅದರ ಜೊತೆಗೆ, ಈ ಏರಿಕೆಗೆ ಪ್ರತಿಕ್ರಿಯೆಯಾಗಿ “ನಿನ್ನ ನೆರೆಯವರು ಹಾಳಾಗಲಿ” ಎನ್ನುವ ರೀತಿಯಲ್ಲಿ ಅಮೆರಿಕದ ನಿರುದ್ಯೋಗದ ಏರಿಕೆಯ ಕಾರಣದಿಂದ ಉಂಟಾದ ಡೊನಾಲ್ಡ್ ಟ್ರಂಪ್ ಅವರ ಸುಂಕದ ಆಕ್ರಮಣವು ಮೂರನೇ ಜಗತ್ತಿನ ಅರ್ಥವ್ಯವಸ್ಥೆಗಳಿಗೆ ನಿರ್ದಿಷ್ಟವಾಗಿ ಹಾನಿಕಾರಕವಾಗಿರುತ್ತದೆ. ಮುಂದುವರಿದ ಬಂಡವಾಳಶಾಹಿ ಅರ್ಥವ್ಯವಸ್ಥೆಗಳು ಅಮೆರಿಕದೊಂದಿಗೆ ಪರಸ್ಪರರಿಗೆ-ಹೊಂದಿಕೆಯಾಗುವ ರೀತಿಯ ಸುಂಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತವೆ. ಆದರೆ, ಮೂರನೇ ಜಗತ್ತು ತನ್ನ ರಫ್ತುಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಅಧಿಕಗೊಳಿಸಿದ ಸುಂಕಗಳನ್ನು ಎದುರಿಸಬೇಕಾಗುತ್ತದೆ ಮತ್ತು ಅಮೆರಿಕದಿಂದ ಮಾಡಿಕೊಳ್ಳುವ ಆಮದುಗಳ ಮೇಲೆ ವಿಧಿಸುವ ಸುಂಕಗಳನ್ನು ಇಳಿಕೆ ಮಾಡಬೇಕಾಗುತ್ತದೆ.
ಮೂರನೆಯ ಜಗತ್ತಿಗೆ ಸಂಕಷ್ಟಗಳ ಮುನ್ಸೂಚನೆ
ಇದೆಲ್ಲವೂ ಮೂರನೆಯ ಜಗತ್ತಿನಲ್ಲಿ ಹೆಚ್ಚಲಿರುವ ಸಂಕಷ್ಟಗಳ ಒಂದು ಮುನ್ಸೂಚನೆಯೇ. ಆದ್ದರಿಂದ, ಪ್ರಬಲ ಸಾಮ್ರಾಜ್ಯಶಾಹಿ ದೇಶಗಳೊಂದಿಗೆ ಈಗ ಹೊಂದಿರುವ ಏರ್ಪಾಟುಗಳ ಬದಲಾಗಿ ಪರ್ಯಾಯ ಆರ್ಥಿಕ ಏರ್ಪಾಟುಗಳತ್ತ ಸಾಗುವಂತೆ ಕೆಳಗಿನಿಂದದುಡಿಯುವ ಜನತೆಯಿಂದ ಬಲವಾದ ಒತ್ತಡಗಳು ಬರುತ್ತಿವೆ. ಬ್ರಿಕ್ಸ್‌ನಂತಹ ಗುಂಪುಗಳು ಸಾಮ್ರಾಜ್ಯಶಾಹಿ-ವಿರೋಧದ ನಿರ್ದಿಷ್ಟ ನಿಲುವುಗಳನ್ನು ಈ ವರೆಗೂ ಗಮನಾರ್ಹ ಮಟ್ಟಿದಲ್ಲಿ ಹೊಂದಿಲ್ಲದಿರಬಹುದು. ಆದರೆ, ಅಂತಹ ಒಂದು ಪಾತ್ರವನ್ನು, ಮುಂಬರುವ ದಿನಗಳಲ್ಲಿ ಮೂರನೆಯ ಜಗತ್ತಿನಲ್ಲಿ ತೀವ್ರಗೊಂಡ ಸಂಕಷ್ಟಗಳು ಜನರ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಬದ್ಧವಾಗಿರುವ ಸರ್ಕಾರಗಳನ್ನು ಅಧಿಕಾರಕ್ಕೆ ತಂದರೆ, ಅವು ವಹಿಸಿಕೊಳ್ಳಬಹುದು.
ಈ ಸನ್ನಿವೇಶದಲ್ಲಿ ಸಾಮ್ರಾಜ್ಯಶಾಹಿ ಕಾರ್ಯತಂತ್ರವು ಮೂರು ಆಯಾಮಗಳನ್ನು ಹೊಂದಿದೆ: ಮೊದಲನೆಯದು, ಎಲ್ಲೆಡೆಯೂ, ವಿಶೇಷವಾಗಿ ಮೂರನೆಯ ಜಗತ್ತಿನ ದೇಶಗಳಲ್ಲಿ ನವ-ಫ್ಯಾಸಿಸ್ಟ್ ಆಳ್ವಿಕೆಯ ಆರೋಹಣವನ್ನು ಪ್ರೋತ್ಸಾಹಿಸುವುದು; ಎರಡನೆಯದು, ಸಾಮ್ರಾಜ್ಯಶಾಹಿ ಪ್ರಭಾವದಿಂದ ಹೊರಗುಳಿದ ದೇಶಗಳಲ್ಲಿ ಹೊರಹೊಮ್ಮುವ ಪರ್ಯಾಯ ಗುಂಪುಗಳ ರಚನೆಯನ್ನು ದುರ್ಬಲಗೊಳಿಸಲು ಅಥವಾ ಹಾಳುಗೆಡವಲು ನವ-ಫ್ಯಾಸಿಸ್ಟ್ ಆಳ್ವಿಕೆಯನ್ನು ಬಳಸುವುದು (ಮೋದಿ ಸರ್ಕಾರದ ಮೇಲೆ ಟ್ರಂಪ್ ಆಡಳಿತವು ಬೀರುತ್ತಿರುವ ಪ್ರಸ್ತುತ ಒತ್ತಡವು ಇದನ್ನು ಸಾಧಿಸುವ ಗುರಿ ಹೊಂದಿದೆ); ಮತ್ತು, ಮೂರನೆಯದು, ಮೂರನೆಯ ಜಗತ್ತಿನ ದೇಶಗಳನ್ನು “ಗಿರಾಕಿ ಪ್ರಭುತ್ವ”ದ ಸ್ಥಿತಿಗೆ ಇಳಿಸುವ ಇತರ ವಿಧಾನಗಳು ವಿಫಲವಾದಲ್ಲೆಲ್ಲಾ ಆಳ್ವಿಕೆ ಬದಲಾವಣೆಗಳನ್ನು ಜಾರಿಗೆ ತರಲು ಮಿಲಿಟರಿ ಹಸ್ತಕ್ಷೇಪವನ್ನು ಬಳಸುವುದು.
ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ನವ-ಉದಾರವಾದಿ ಬಂಡವಾಳಶಾಹಿಯ ಚೌಕಟ್ಟಿನೊಳಗೇ ಪರಿಹರಿಸಿಕೊಳ್ಳಲಾಗದ ಈ ನವ-ಉದಾರವಾದಿ ಬಂಡವಾಳಶಾಹಿ ಬಿಕ್ಕಟ್ಟಿನಿಂದಾಗಿ ಒಂದು ಮೂಲೆಗೆ ತಳ್ಳಲ್ಪಟ್ಟಿರುವ ಸಾಮ್ರಾಜ್ಯಶಾಹಿಯು,ಮೂರನೇ ಜಗತ್ತನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಿಲಿಟರಿ ಬಲವನ್ನು ಬಳಸಲು ಪ್ರಸ್ತುತ ಯೋಜಿಸುತ್ತಿರುವ ಸನ್ನಿವೇಶವು ಇದಾಗಿದೆ.
ಇದನ್ನೂ ನೋಡಿ: ಬಿಹಾರ ಚುನಾವಣೆ | ಭರಪೂರ ಭರವಸೆ -ಬದಲಾವಣೆಯತ್ತ ಮತದಾರರ ಒಲವು Janashakthi Media | Bihar Election 2025
